ಹಬ್ಬಗಳು ಶುರುವಾದರೂ ಬಸ್‌ಗಳಲ್ಲಿ ನಿರೀಕ್ಷಿತ ಪ್ರಯಾಣಿಕರಿಲ್ಲ!
Team Udayavani, Sep 8, 2021, 8:00 AM IST
ಮಹಾನಗರ: ಇನ್ನೇನು ಹಬ್ಬಗಳ ಸರದಿ ಆರಂಭವಾಗುತ್ತಿದ್ದು, ಈ ಬಾರಿ ಗಣೇಶ ಹಬ್ಬಕ್ಕೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಊರಿಗೆ ಬರಲು ಪ್ರಯಾಣಿಕರಿಂದ ಬೇಡಿಕೆ ಕಡಿಮೆಯಾಗುತ್ತಿದೆ. ಏಕೆಂದರೆ, ಕೊರೊನಾ ಕಾರಣದಿಂದಾಗಿ ಹಲವು ಮಂದಿ ವರ್ಕ್ ಫ್ರಂ ಹೋಂ ಪರಿಕಲ್ಪನೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವುದು ಪ್ರಮುಖ ಕಾರಣ.
ಅದೇ ರೀತಿ, ಈ ಬಾರಿಯ ಗಣೇಶ ಹಬ್ಬ ಶುಕ್ರವಾರ ಬರುವ ಕಾರಣ, ಶನಿವಾರ ಮತ್ತು ರವಿವಾರದಂದು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಹೀಗಿದ್ದಾಗ ಊರಿಗೆ ಬಂದರೆ ಮನೆಯಲ್ಲೇ ಕೂರಬೇಕು ಎಂಬ ಕಾರಣ ದೂರದ ಊರಿನಲ್ಲಿರುವ ಕರಾವಳಿಗರು ತಾವಿದ್ದ ಪ್ರದೇಶದಲ್ಲೇ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಇನ್ನೊಂ ದೆಡೆ, ಕೊರೊನಾ ಆತಂಕ ಹಾಗೂ ಕರ್ಫ್ಯೂ ಮುಂತಾದ ಕಿರಿಕಿರಿ ತಪ್ಪಿಸುವುದಕ್ಕೆ ಬಸ್‌ಗಳ ಬದಲಾಗಿ ತಮ್ಮ ಸ್ವಂತ ವಾಹನಗಳಲ್ಲೇ ಹಬ್ಬಕ್ಕೆ ಊರಿಗೆ ಬಂದು ಹೋಗಲು ತೀರ್ಮಾನಿಸಿದ್ದಾರೆ. ಈ ಎಲ್ಲ ಕಾರಣಗಳಿಗೆ ಪ್ರಯಾಣಿಕರಿಂದ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳಿಗೆ ಈ ಬಾರಿ ಬೇಡಿಕೆ ತುಂಬಾ ಕಡಿಮೆಯಾಗಿದೆ.
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳು ವಂತೆ, “ಕೊರೊನೋತ್ತರದಲ್ಲಿ ಗಣೇಶ ಹಬ್ಬಕ್ಕೆ ಒಂದು ವಾರ ಇರುವಾಗಲೇ ಬಸ್‌ಗಳಲ್ಲಿ ಹೆಚ್ಚಿನ ಮಂದಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದರು. ಆದರೆ, ಈ ಬಾರಿ ಇನ್ನೂ, ಸೀಟು ಭರ್ತಿಯಾಗುವಷ್ಟು ಬುಕ್ಕಿಂಗ್ ಆಗಿಲ್ಲ. ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಈಗಾಗಲೇ ಹೊಸ ಯೋಜನೆ ಘೋಷಿಸಿದೆ. ಅದರಂತೆ, ರಾಜ್ಯ ಮತ್ತು ಅಂತಾರಾಜ್ಯದಲ್ಲಿರುವ 685 ಗಣಕೀಕೃತ ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ. ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ.5ರಷ್ಟು ಮತ್ತು ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದರೆ ಶೇ.10ರಷ್ಟು ರಿಯಾಯಿತಿ ನೀಡಿದೆ’ ಎನ್ನುತ್ತಾರೆ.
ಸಾಮಾನ್ಯವಾಗಿ ಹಬ್ಬಗಳ ಸೀಸನ್ ಸಮಯದಲ್ಲಿ ಕೆಎಸ್ಸಾರ್ಟಿಸಿ ರಾಜ್ಯದಲ್ಲಿ ಸುಮಾರು 2,000 ದಷ್ಟು ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಆದರೆ, ಈ ಬಾರಿ ಕೇವಲ 1,000 ಹೆಚ್ಚುವರಿ ಬಸ್ ವ್ಯವಸ್ಥೆ ಮಾತ್ರ ಕಲ್ಪಿಸಿದೆ. ಅದರಲ್ಲೂ, ಮಂಗಳೂರಿನಿಂದ ಬೆಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸಹಿತ ವಿವಿಧ ಕಡೆಗಳಿಗೆ ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಕಾರ್ಯಾಚರಣೆ ಅನುಮಾನ. ಈಗಿರುವ ಬಸ್‌ಗಳಿಗೆ ಬೇಡಿಕೆ ಕಡಿಮೆ ಇದ್ದು, ಒಂದು ವೇಳೆ ಸೀಟ್‌ಗಳೆಲ್ಲಾ ಭರ್ತಿಯಾದರೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ ಸೇವೆ ಆರಂಭವಾಗುವ ಸಾಧ್ಯತೆ ಇದೆ.
ಹಬ್ಬದ ನೆಪ; ಮಂಗಳೂರಿಗೆ 1,799 ರೂ. :
ಕೊರೊನಾದಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಈ ಸಮಯದಲ್ಲಿಯೂ ಕೆಲವು ಖಾಸಗಿ ಬಸ್‌ನವರು ಮಾತ್ರ ತನ್ನ ಹಳೇ ಪ್ರವೃತ್ತಿ ಮುಂದುವರಿಸಿದ್ದು, ಗಣೇಶ ಹಬ್ಬದ ನೆಪದಲ್ಲಿ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿದ್ದಾರೆ. ಇದು ಹಬ್ಬಕ್ಕೆಂದು ದೂರದ ಊರಿನಿಂದ ಕರಾವಳಿಗೆ ಆಗಮಿಸುತ್ತಿರುವ ಮಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸೆ. 9ರಂದು ಖಾಸಗಿ ಬಸ್‌ಗಳಲ್ಲಿ ಅತೀ ಹೆಚ್ಚಿನ ದರ ಅಂದರೆ 1,799 ರೂ. ಇದೆ. ಅದೇ ರೀತಿ, ಅತೀ ಕಡಿಮೆ ದರವೇ 925 ರೂ. ಇದೆ. ಇನ್ನು ಸೆ. 12ರಂದು ಮಂಗಳೂರಿನಿಂದ ಬೆಂಗಳೂರಿಗೆ ಹೋಗಬೇಕಾದರೆ ಅತೀ ಹೆಚ್ಚು 1,600 ರೂ. ಇದ್ದು, ಕಡಿಮೆ 900 ರೂ. ಇದೆ. ಸಾಮಾನ್ಯ ದಿನಗಳಲ್ಲಿ 600 ರಿಂದ 700 ರೂ. ಇದ್ದ ದರ ಏಕಾಏಕಿ ಏರಿಕೆ ಮಾಡಲಾಗಿದೆ ಎನ್ನುತ್ತಾರೆ ಪ್ರಯಾಣಿಕರು.
ಈ ಬಾರಿ ಗಣೇಶ ಹಬ್ಬಕ್ಕೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಂದ ಮುಂಗಡ ಸೀಟು ಬುಕ್ಕಿಂಗ್‌ಗೆ ಬೇಡಿಕೆ ಕಡಿಮೆ ಇದೆ. ಇದೇ ಕಾರಣಕ್ಕೆ ಈವರೆಗೆ ವಿವಿಧ ಕಡೆಗಳಿಗೆ ಹೆಚ್ಚುವರಿ ಬಸ್ ಆರಂಭಕ್ಕೆ ತೀರ್ಮಾನ ಮಾಡಲಿಲ್ಲ. ಈಗಿರುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ ಕಾರ್ಯಾಚರಿಸುತ್ತೇವೆ.–ಕಮಲ್ ಕುಮಾರ್, ಮಂಗಳೂರು ಕೆಎಸ್ಸಾರ್ಟಿಸಿ ಡಿಟಿಒ
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.