ಅಮೋಘನ ಅಮೋಘ ಸಾಧನೆ
ಇಸ್ರೋದ ಯುವಿಕಾ-2019ಕ್ಕೆ ಪುತ್ತೂರಿನ ಬಾಲಕ
Team Udayavani, May 4, 2019, 6:00 AM IST
ಪುತ್ತೂರು: ಭಾರತೀಯ ಬಾಹ್ಯಾಕಾಶ ಸಂಶೋಧನ ಕೇಂದ್ರ (ಇಸ್ರೋ) ನೀಡುವ ಯುವ ವಿಜ್ಞಾನಿ ತರಬೇತಿ ಕಾರ್ಯಕ್ರಮ ಯುವಿಕಾ-2019ಕ್ಕೆ ಪುತ್ತೂರಿನ ಅಮೋಘ ನಾರಾಯಣ ಆಯ್ಕೆಯಾಗಿದ್ದಾನೆ. ರಾಜ್ಯದಿಂದ ಆಯ್ಕೆಯಾದ ಮೂವರಲ್ಲಿ ಈತ ಒಬ್ಬ.
ಅಮೋಘ ನಾರಾಯಣ ಪುತ್ತೂರಿನ ದರ್ಬೆ ನಿವಾಸಿ, ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪುತ್ತೂರಿನ ವೈದ್ಯ ದಂಪತಿ ಡಾ| ರಾಜಾರಾಮ್ – ಡಾ| ಸುಧಾ ರಾಜಾರಾಮ್ ಪುತ್ರ. ಈತ 7 ರಾಷ್ಟ್ರೀಯ ಮತ್ತು ಒಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು, ಮತ್ತೂಂದು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ಸ್ಕೈಪ್ ಮೂಲಕ ಸಂದರ್ಶನ
ಸಂಶೋಧನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಯುವ ವಿಜ್ಞಾನಿಗಳೆಂದು ಗುರುತಿಸಿ ‘ಯುವಿಕಾ-2019’ ಮೂಲಕ ದೇಶದ 4 ಕೇಂದ್ರಗಳಲ್ಲಿ ತರಬೇತಿ ನೀಡಲಿದೆ ಎಂದು ಇಸ್ರೋ ಪ್ರಕಟಿಸಿತ್ತು.
ಅರ್ಜಿ ಸಲ್ಲಿಸಿದ ಅಮೋಘನನ್ನು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರೇ ಸ್ಕೈಪ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಿದ್ದಾರೆ. ಈ ತರಬೇತಿ ಮೇ 12ರಿಂದ 26ರ ವರೆಗೆ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ ಮತ್ತು ಆಂಧ್ರದ ಶ್ರೀಹರಿಕೋಟಗಳಲ್ಲಿ ತರಬೇತಿ ನಡೆಯಲಿದೆ.
ಸಾಧನೆ ಏನು?
ಇಸ್ರೋ ಸಂಸ್ಥೆ ಅಮೋಘನನ್ನು ಆಯ್ಕೆ ಮಾಡಿರುವುದಕ್ಕೆ ಅವನ ಸಾಧನೆಯೇ ಕಾರಣ. ಅಮೋಘ ಕಳೆದ ಮೇಯಲ್ಲಿ ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಸಾಧನೆಗಾಗಿ ಬ್ರಾಡ್‌ಕಾಮ್ ಮಾಸ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಐರಿಸ್ ರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ಎಎಸ್‌ಎಂ ಮೆಟೀರಿಯಲ್ ಸೈನ್ಸ್ ಅವಾರ್ಡ್ ಮತ್ತು ರಿವೊ ಸಸ್ಟೈನೆಬಲ್ ಡೆವಲಪ್‌ಮೆಂಟ್ ಪ್ರಶಸ್ತಿ ಪಡೆದಿದ್ದಾನೆ. ಫೆಬ್ರವರಿಯಲ್ಲಿ ಹೊಸದಿಲ್ಲಿಯ ಐಐಟಿನಲ್ಲಿ ಮಾನಕ್-2019ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಇನ್‌ಸ್ಪಯರ್ ನ್ಯಾಷನಲ್ ಅವಾರ್ಡ್ ಪಡೆದಿದ್ದಾನೆ. ಅಮೆರಿಕದಲ್ಲಿ ನಡೆಯಲಿರುವ ಜೀನಿಯಸ್ ಒಲಿಂಪಿಯಾಡ್ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವಕ್ಕೆ ಆಯ್ಕೆಯಾಗಿದ್ದಾನೆ.
ಸಂಶೋಧನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಆಸೆ ಇದೆ. ಇಸ್ರೋ ತರಬೇತಿ ಬಾಹ್ಯಾಕಾಶ ಕ್ಷೇತ್ರದ ಮತ್ತು ರಾಕೆಟ್ ಉಡಾವಣೆಯ ಕುರಿತು ತಿಳಿದುಕೊಳ್ಳಲು ಪೂರಕವಾಗಲಿದೆ.
– ಅಮೋಘ ನಾರಾಯಣ ಯುವ ವಿಜ್ಞಾನಿ ವಿದ್ಯಾರ್ಥಿ
-ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.