ಗೇರು ಕೃಷಿಗೆ ವಿಪರೀತ ಚಹಾ ಸೊಳ್ಳೆ ಕಾಟ
ವಾತಾವರಣದಲ್ಲಿ ಏರಿಳಿತ: ಪುತ್ತೂರಿನಲ್ಲಿ ಅಧಿಕ ಬಾಧೆ; ಬೆಳೆಗಾರರು ಹೈರಾಣ
Team Udayavani, Feb 18, 2020, 5:06 AM IST
ಸಾಂದರ್ಭಿಕ ಚಿತ್ರ
ಸುಳ್ಯ: ಹದಿನೈದು ವರ್ಷಗಳಲ್ಲೇ ಗೇರು ಕೃಷಿಗೆ ಅತ್ಯಧಿಕ ಪ್ರಮಾಣದಲ್ಲಿ ಬಾಧಿಸಿರುವ ಚಹಾ ಸೊಳ್ಳೆ ಕಾಟಕ್ಕೆ ಜಿಲ್ಲೆಯಲ್ಲಿ ಶೇ. 50ಕ್ಕೂ ಅಧಿಕ ಫಸಲು ನಷ್ಟ ಉಂಟಾಗಲಿದೆ. ಬಹುತೇಕ ಗೇರು ಮರ, ಗಿಡಗಳಲ್ಲಿ ಹೂ ಕರಟಿ ಹೋಗಿದೆ. ಕೃಷಿಕರ ಪಾಲಿಗೆ ಉಪಬೆಳೆಯಾಗಿ ಆದಾಯ ತಂದುಕೊಡುತ್ತಿದ್ದ ಗೇರು ಕೃಷಿಯನ್ನು ನಂಬಿದವರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಬಂದೊದಗಿದೆ.
ವಾತಾವರಣದ ಏರಿಳಿತ
ವಾತಾವರಣದಲ್ಲಿನ ಬದಲಾವಣೆಯೇ ಕೀಟ ಬಾಧೆ ಹೆಚ್ಚಳಕ್ಕೆ ಕಾರಣ ಎನ್ನುವುದು ಕೃಷಿಕರ ಅಭಿಪ್ರಾಯ. ಚಳಿ, ಮಳೆ, ಬಿಸಿಲು ಇವು ಸಮಯಕ್ಕೆ ಹಾಗೂ ಪ್ರಮಾಣಕ್ಕೆ ತಕ್ಕಂತೆ ಇಲ್ಲದ ಪರಿಣಾಮದಿಂದ ಅದನ್ನೆ ನಂಬಿರುವ ಫಲ ವಸ್ತುವಿನ ಗಿಡ ಮರಗಳಲ್ಲಿನ ಹೂ-ಕಾಯಿ-ಹಣ್ಣಾಗುವ ಸಹಜ ಪ್ರಕ್ರಿಯೆಗೆ ಅಡ್ಡಿ ಉಂಟಾಗಿದೆ. ಈ ಪೈಕಿ ಮಾವು, ಗೇರು ಕೃಷಿಗೆ ಸಾಕಷ್ಟು ತೊಂದರೆ ಕಂಡುಬಂದಿದೆ. ಆರಂಭದಲ್ಲಿ ಚಳಿ, ಅನಂತರ ದಲ್ಲಿ ಸೆಕೆ ವಾತಾವರಣ ಗೇರು ಫಸಲಿಗೆ ಪೂರಕ. ಆದರೆ ಈಗ ಚಳಿ-ಸೆಕೆ-ಮೋಡ ನಡುವಿನ ವ್ಯತ್ಯಾಸ ಹೊಸ ರೋಗ ಸೃಷ್ಟಿಗೆ ಕಾರಣವಾಗುತ್ತಿದೆ.
ಕರಟಿದ ಹೂ
ಗೇರು ಮರಗಳು ನವೆಂಬರ್‌ನಿಂದ ಎಪ್ರಿಲ್ ತನಕ ಹೂ ಬಿಟ್ಟು ಫಸಲು ಕೊಡುವುದು ಹೆಚ್ಚು. ಡಿಸೆಂಬರ್, ಜನವರಿ ತಿಂಗಳಲ್ಲಿ ಹೂ ಬಿಟ್ಟು ಫಸಲಿಗೆ ಅಣಿಯಾಗುವ ಮರಗಳಲ್ಲಿ ಈ ಬಾರಿ ಫೆಬ್ರವರಿ ಅರ್ಧ ಕಳೆದರೂ ಹೂ, ಕಾಯಿ ಇಲ್ಲ. ಹೆಚ್ಚಿನೆಡೆ ಚಿಗುರು, ಹೂಗಳು ಕರಟಿ ಹೋಗಿವೆ. ಮರಗಳು ಬೆಂಕಿಯ ಕೆನ್ನಾಲಿಗೆಗೆ ಈಡಾದಂತೆ ಕಂಡುಬರುತ್ತಿದೆ. ಚಹಾ ಸೊಳ್ಳೆ ಕಾಟ ಹಳೆಯ ಮರಗಳ ಜತೆಗೆ ಹೊಸ ಗಿಡಗಳನ್ನೂ ಸಮಾನವಾಗಿ ಬಾಧಿಸುತ್ತಿದೆ. ಹೂ ಬಿಟ್ಟು, ಹಣ್ಣು ನೀಡುತ್ತಿದ್ದ ಗೇರು ತೋಟ ಈಗ ಕರಟಿದಂತಾಗಿದೆ.
ಏನಿದು ಚಹಾ ಸೊಳ್ಳೆ?
ಚಹಾ ಸೊಳ್ಳೆ ಕೊಕ್ಕೋ, ಗೇರು, ಹತ್ತಿ, ಚಹಾ ಹೀಗೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟು ಮಾಡುವ ಕೀಟ. ಇದು ಗೇರು ಚಿಗುರು ಅಥವಾ ಹೂವಿನ ಸಸ್ಯರಸವನ್ನು ಹೀರುತ್ತದೆ. ಇದರಿಂದ ಚಿಗುರು ಮತ್ತು ಹೂಗೊಂಚಲುಗಳು ಒಣಗುತ್ತವೆ. ಕೀಟವು ರಸ ಹೀರಿದ ಅಂಗಾಂಶ ನಾಶವಾಗಿ ಕಂದು ಬಣ್ಣದ ಚುಕ್ಕಿಗಳು ಉಂಟಾಗುತ್ತವೆ. ಕಾಯಿ ಕಟ್ಟುವ ಹಂತದಲ್ಲಿ ಈ ಕೀಟದ ಹಾವಳಿ ಕಂಡುಬಂದರೆ, ಗೇರು ಹಣ್ಣಾಗುವ ಮೊದಲೇ ಉದುರುತ್ತದೆ. ಪ್ರತಿ ಬಾರಿ ಔಷಧ ಸಿಂಪಡಣೆಯಿಂದ ನಿಯಂತ್ರಣಕ್ಕೆ ಬರುತ್ತಿದ್ದ ಸೊಳ್ಳೆ ಕಾಟ ಈ ಬಾರಿ ಔಷಧ ಸಿಂಪಡಿಸಿದರೂ ಅದರ ನಿರ್ಮೂಲನೆ ಸಾಧ್ಯವಾಗಿಲ್ಲ.
ಪುತ್ತೂರಿನಲ್ಲಿ ಗರಿಷ್ಠ ಹಾನಿ
ಪುತ್ತೂರು ತಾಲೂಕಿನ ಗೇರು ತೋಟಗಳಲ್ಲಿ ಶೇ. 50ಕ್ಕೂ ಅಧಿಕ ಫಸಲು ನಷ್ಟವಾಗುವ ಸಾಧ್ಯತೆ ಇದೆ. ಸುಳ್ಯದಲ್ಲಿಯೂ ನಷ್ಟ ಹೆಚ್ಚಿದೆ. ಹದಿನೈದು ವರ್ಷಗಳಲ್ಲೇ ಮೊದಲ ಬಾರಿಗೆ ಚಹಾ ಸೊಳ್ಳೆ ಕಾಟ ಇಷ್ಟು ತೀವ್ರವಾಗಿ ಕಾಡಿದೆ ಎನ್ನುತ್ತಾರೆ ಗೇರು ಸಂಶೋಧನ ಕೇಂದ್ರದ ಅಧಿಕಾರಿಗಳು. ಕೆಲವೆಡೆ ಮರವೇ ಹಳದಿ ಬಣ್ಣಕ್ಕೆ ತಿರುಗಿದೆ. ಗೇರು ತೋಟ ಏಲಂ ಪಡೆಯುವವರಿಗೆ ಈ ಬಾರಿ ಲಾಭಕ್ಕಿಂತ ಅಸಲು ಕೈಗೆ ಸಿಗುವ ನಿರೀಕ್ಷೆ ಕೂಡ ಇಲ್ಲ. ಸಣ್ಣ ಪುಟ್ಟ ಕೃಷಿಕರ ಪಾಲಿಗಂತೂ ಕಡಿಮೆ ಖರ್ಚಿನಲ್ಲಿ ಆದಾಯ ತರುತ್ತಿದ್ದ ಗೇರು ಕೈ ಕೊಟ್ಟಿದೆ. ಗೇರು ಕೃಷಿ ಕೇಂದ್ರಗಳಲ್ಲಿನ ವೈಜ್ಞಾನಿಕ ಆಧಾರಿತ ಗೇರು ತೋಟದಲ್ಲೂ ಕೀಟ ಬಾಧೆ ತಪ್ಪಿಲ್ಲ.
ಧಾರಣೆ ಇರುವಾಗ ಫಸಲು ಇಲ್ಲ
ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹೆಕ್ಟೇರಿಗಿಂತ ಅಧಿಕ ಗೇರು ತೋಟವಿದೆ. 2015ನೇ ಸಾಲಿನಲ್ಲಿ ಕೆ.ಜಿ.ಗೆ 80ರಿಂದ 90 ರೂ.ಗೆ ಖರೀದಿಯಾಗಿದ್ದ ಗೇರುಬೀಜ 2016ನೇ ಸಾಲಿನಲ್ಲಿ ಗರಿಷ್ಠ 120-130 ರೂ., 2017-2019ರಲ್ಲಿ 130-150 ರೂ. ತನಕ ಖರೀದಿಯಾಗಿದೆ. ಇದರಿಂದ ರಬ್ಬರ್, ಅಡಿಕೆಯ ಮಧ್ಯೆ ಗೇರು ಬೆಳೆಗಾರನಿಗೆ ಕಷ್ಟದ ಕಾಲದಲ್ಲಿ ಚೇತರಿಕೆ ನೀಡುತ್ತಿತ್ತು. ಈ ಬಾರಿ ಧಾರಣೆ ಏರಿಕೆ ನಿರೀಕ್ಷೆ ಇತ್ತಾದರೂ ಫಸಲೇ ಇಲ್ಲದ ಸ್ಥಿತಿ ಉಂಟಾಗಿದೆ.
ಚಹಾ ಸೊಳ್ಳೆ ಬಾಧೆ ಹೆಚ್ಚಳ
ಈ ಬಾರಿ ಗೇರು ಕೃಷಿಗೆ ಚಹಾ ಸೊಳ್ಳೆ ಕಾಟ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿದೆ. ಇದಕ್ಕೆ ವಾತಾವರಣದ ಏರಿಳಿತ ಕಾರಣವೋ ಅಥವಾ ಬೇರೆ ಕಾರಣ ಗಳಿವೆಯೋ ಎನ್ನುವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದನ್ನು ಅಧ್ಯಯನದ ಮೂಲಕ ಕಂಡುಕೊಳ್ಳಬೇಕಿದೆ. ಶೇ. 50ರಷ್ಟು ಫಸಲು ನಷ್ಟವಾಗುವ ಲಕ್ಷಣ ಇದೆ.
– ಗಂಗಾಧರ ನಾಯಕ್, ಪ್ರಭಾರ ನಿರ್ದೇಶಕ, ರಾಷ್ಟ್ರೀಯ ಗೇರು ಸಂಶೋಧನ ಕೇಂದ್ರ, ಪುತ್ತೂರು
ಅರ್ಧಕ್ಕಿಂತ ಹೆಚ್ಚು ಫಸಲು ನಷ್ಟ
ವಾತಾವರಣದಲ್ಲಿನ ಏರಿಳಿತದ ಪರಿಣಾಮ ಗೇರು ಕೃಷಿಗೆ ಬಹುವಾಗಿ ತಟ್ಟಿದೆ. ಜತೆಗೆ ಚಹಾ ಸೊಳ್ಳೆ ಕಾಟ ಕೂಡ ಇದೆ. ಫಸಲು ನಷ್ಟಕ್ಕೆ, ಕೀಟ ಬಾಧೆಗೆ ವಾತಾವರಣದಲ್ಲಿನ ವೈಪರೀತ್ಯ ಕಾರಣ. ಕಳೆದ ಬಾರಿಗೆ ಹೋಲಿಸಿದರೆ ಅರ್ಧಕ್ಕಿಂತ ಹೆಚ್ಚು ಫಸಲು ನಷ್ಟ ಉಂಟಾಗಲಿದೆ.
– ಸುಭಾಷ್ ರೈ ಕಡಮಜಲು, ವೈಜ್ಞಾನಿಕ ಪದ್ಧತಿಯ ಗೇರು ಕೃಷಿಕ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guttigar: ಯುವಕನಿಗೆ ಜೀವ ಬೆದರಿಕೆ; ದೂರು ದಾಖಲು
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.