ಕಲ್ಚೆರ್ಪೆ ಡಂಪಿಂಗ್ ಯಾರ್ಡ್; ಊರೆಲ್ಲ ಕಸಿವಿಸಿ
Team Udayavani, Apr 18, 2018, 12:18 PM IST
ಸುಳ್ಯ : ಸ್ವಚ್ಛ ನಗರದ ಕನಸು ಬಿತ್ತಿರುವ ನಗರ ಪಂಚಾಯತ್ ಕಸ, ತ್ಯಾಜ್ಯ ವಿಲೇವಾರಿಯಲ್ಲಿ ಮಾತ್ರ ಫೇಲ್ ಆಗಿದೆ. ಅದಕ್ಕೆ ಉದಾಹರಣೆ, ನಗರದ ಕಸವೆಲ್ಲ ಸಂಗ್ರಹಗೊಳ್ಳುತ್ತಿರುವ ಕಲ್ಚರ್ಪೆ ಡಂಪಿಂಗ್ ಯಾರ್ಡ್ ಅವ್ಯವಸ್ಥೆ. ಗುಡ್ಡ ಆಕಾರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ಕರಗದೆ, ಊರೆಲ್ಲ ಗಬ್ಬುನಾತ ಬೀರುತ್ತಿದೆ. ಜೀವನದಿ ಪಯಸ್ವಿನಿ ಒಡಲಿಗೆ ಸೇರಿ ರೋಗ ಭೀತಿ ಮೂಡಿಸಿದೆ.
ತ್ಯಾಜ್ಯ ವಿಲೇವಾರಿ
2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,500 ಎಂದಿದ್ದರೂ ಈಗಿನ ಲೆಕ್ಕಾಚಾರದಲ್ಲಿ 25 ಸಾವಿರ ದಾಟಬಹುದು. 4,500ಕ್ಕೂ ಮಿಕ್ಕಿ ಮನೆಗಳು, 3,500ಕ್ಕೂ ಮಿಕ್ಕಿ ವಾಣಿಜ್ಯ ಕಟ್ಟಡಗಳು ಇಲ್ಲಿವೆ. ಹದಿನೆಂಟು ವಾರ್ಡ್‌ಗಳಲ್ಲಿ ಪ್ರತಿದಿನ ಎರಡು ಮಿನಿ ಟಿಪ್ಪರ್ ಬಳಸಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಇದೆ.
ದಿನಂಪ್ರತಿ ಸಂಗ್ರಹಗೊಳ್ಳುವ ತ್ಯಾಜ್ಯದ ಪ್ರಮಾಣ 3 ಟನ್‌ಗಿಂತಲೂ ಅಧಿಕ. ಇದಕ್ಕೆ ನಗರ ಪಂಚಾಯತ್ ತಿಂಗಳಿಗೆ 1.5 ಲಕ್ಷ ರೂ. ವ್ಯಯಿಸುತ್ತಿದೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಸನಿಹದ, ನಗರದಿಂದ 8 ಕಿ.ಮೀ. ದೂರದ ಕಲ್ಚಪೆìಯಲ್ಲಿ ತ್ಯಾಜ್ಯ ಡಂಪ್ ಮಾಡಲಾಗುತ್ತಿದೆ. ಈ ತ್ಯಾಜ್ಯದ ಸಂಗ್ರಹ, ವಿಲೇವಾರಿ ನಗರ ಪಂಚಾಯತ್ ಸುಪರ್ದಿಗೆ ಸೇರಿದೆ.
ನ್ಯಾಯಾಲಯ ಸೂಚನೆ ಪಾಲಿಸಿಲ್ಲ
ಕಲ್ಚರ್ಪೆಯಲ್ಲಿ ಡಂಪಿಂಗ್ ಯಾರ್ಡ್ ಆರಂಭಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳು ನಡೆದವು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವೈಜ್ಞಾನಿಕ ಪದ್ಧತಿಯಲ್ಲಿ ಕಸ ವಿಲೇವಾರಿ ಮಾಡುವುದಾಗಿ ಅಂದಿನ ನಗರ ಪಂಚಾಯತ್ ಆಡಳಿತ ಒಪ್ಪಿಕೊಂಡ ಕಾರಣ ಡಂಪಿಂಗ್ ಯಾರ್ಡ್ ಆರಂಭಕ್ಕೆ ಅನುಮೋದನೆ ಸಿಕ್ಕಿತ್ತು. ಆದರೆ ಹಲವು ವರ್ಷಗಳು ಕಳೆದರೂ ನ್ಯಾಯಾಲಯಕ್ಕೆ ನೀಡಿದ ಭರವಸೆ ಈಡೇರಿಲ್ಲ. ಅವೈಜ್ಞಾನಿಕ ಪದ್ಧತಿಯಲ್ಲೇ ಕಸ ತುಂಬಲಾಗುತ್ತಿದೆ.
ಮರು ಉತ್ಪಾದನೆಯಿಲ್ಲ
ಸಾವಿರಾರು ಟನ್ ಕಸ ರಾಶಿ ಬಿದ್ದಿರುವ ಡಂಪಿಂಗ್ ಯಾರ್ಡ್‌ನಲ್ಲಿ ಇನ್ನು ಕಸ ತುಂಬುವುದು ಅಸಾಧ್ಯ ಎನ್ನುವ ಪರಿಸ್ಥಿತಿಯಿದೆ. ಆದರೂ ಮತ್ತೆ-ಮತ್ತೆ ಒತ್ತಡದಿಂದಲೇ ತುಂಬಿಸಿ ಕೃತಕ ಬೆಟ್ಟ ಸೃಷ್ಟಿ ಮಾಡಲಾಗುತ್ತಿದೆ. ತ್ಯಾಜ್ಯ ಸಂಸ್ಕರಿಸಲು ಯಂತ್ರ ಖರೀದಿಗೆ 60 ಲಕ್ಷ ರೂ. ಮೀಸಲು ಇರಿಸಿದ್ದರೂ ಕಾರ್ಯಗತಗೊಂಡಿಲ್ಲ. ಸಾವಯವ ಗೊಬ್ಬರ ತಯಾರಿಗೆಂದು ಪ್ರತ್ಯೇಕ ಶೆಡ್ ನಿರ್ಮಿಸಿದ್ದರೂ ಅದು ಪಾಳು ಬಿದ್ದಿದೆ. ಇಲ್ಲಿ ಯಾರ್ಡ್ ಗೆ ಬೇಕಾದ ಪೂರಕ ವ್ಯವಸ್ಥೆಯೇ ಇಲ್ಲದಿರುವುದು ಅವ್ಯವಸ್ಥೆಗೆ ಮುಖ್ಯ ಕಾರಣ ವೆನಿಸಿದೆ. ಡಂಪಿಂಗ್ ಯಾರ್ಡ್‌ನಲ್ಲಿ ಹಸಿ ಕಸ, ಒಣ ಕಸ, ತ್ಯಾಜ್ಯ ಎಲ್ಲವೂ ಒಂದೇ ಕಡೆ ರಾಶಿ ಬಿದ್ದಿದೆ. ನಗರದಲ್ಲಿ ಮನೆ, ವಾಣಿಜ್ಯ ಕಟ್ಟಡ ಗಳಿಂದ ಕಸ ಸಂಗ್ರಹಿಸುವ ವಿಧಾನವೇ ಸರಿ ಇಲ್ಲ. ಬಳಕೆದಾರರು ಒಣ ಕಸ, ಹಸಿ ಕಸ ಪ್ರತ್ಯೇಕಿಸಿ ನೀಡಬೇಕು. ಇಲ್ಲದಿದ್ದರೆ, ಸಂಗ್ರಹ ಸಂದರ್ಭ ಪ್ರತ್ಯೇಕಿಸಿ, ಅದನ್ನು ಡಂಪಿಂಗ್ ಯಾರ್ಡ್‌ಗೆ ಕೊಂಡುಹೋಗಬೇಕು. ಈ ಕಾರ್ಯ ಆಗುತ್ತಿಲ್ಲ. ಇದು ಅವೈಜ್ಞಾನಿಕ ವಿಧಾನಕ್ಕೆ ಉದಾಹರಣೆ.
ಹೊಸ ಸ್ಥಳ ಹುಡುಕಾಟ
ಅಮರಮುಟ್ನೂರು, ಉಬರಡ್ಕ ಮಿತ್ತೂರು, ಅಜ್ಜಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಡಂಪಿಂಗ್ ಯಾರ್ಡ್‌ಗೆ ಸ್ಥಳ ಹುಡುಕುವ ಪ್ರಯತ್ನ ನ.ಪಂ.ನಿಂದ ನಡೆದಿದ್ದರೂ ಅದಕ್ಕೆ ಆ ಪರಿಸರದ ಜನರು ಆಕ್ಷೇಪ ಸಲ್ಲಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಹೊಸ ಜಾಗ ಗುರುತಿಸುವುದು ಕಷ್ಟ. ಇಲ್ಲಿ ಹೊಸ ಜಾಗ ಹುಡುಕುವ ಬದಲು, ಈಗಿರುವ ಡಂಪಿಂಗ್ ಯಾರ್ಡ್‌ನಲ್ಲಿ ಹಸಿ-ಒಣ ಕಸ ಪ್ರತ್ಯೇಕಿಸಿ, ತ್ಯಾಜ್ಯ ಸಂಸ್ಕರಿಸಬೇಕು. ಮರು ಬಳಕೆಗೆ ಯೋಗ್ಯವಾದ ಗೊಬ್ಬರವನ್ನು ಉತ್ಪಾದಿಸಬೇಕು. ಅದರಿಂದ ಅರ್ಧ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದೆ.
ಪಯಸ್ವಿನಿ ಪಾಲು
ಎತ್ತರ ಪ್ರದೇಶದಲ್ಲಿರುವ ಕಸದ ಕೊಂಪೆಯಿಂದ ಮಳೆಗಾಲದಲ್ಲಿ ತ್ಯಾಜ್ಯ ಹರಿದು ಬಂದು ಪಯಸ್ವಿನಿ ಸೇರುತ್ತಿದೆ. ಈ ಬೇಸಗೆಯಲ್ಲಿ ಮಳೆ ಸುರಿದಿದ್ದು, ಅದಾಗಲೇ ತ್ಯಾಜ್ಯ ಮುಖ್ಯ ರಸ್ತೆ ಮೂಲಕ ಹರಿದು ನದಿಗೆ ಸೇರಿದೆ. ಬೇಸಗೆ ಹೊತ್ತಲ್ಲಿ ದಿನ ಬಳಕೆಗೆ ನದಿ ನೀರನ್ನು ಆಶ್ರಯಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಆತಂಕ ಉಂಟಾಗಿದೆ. ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸುತ್ತಿದ್ದರೂ ನಗರ ಪಂಚಾಯತ್ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಹೊಸ ಜಾಗ ಸಿಕ್ಕಿಲ್ಲ
ಡಂಪಿಂಗ್ ಯಾರ್ಡ್‌ನಲ್ಲಿ ಸಮಸ್ಯೆ ಇರುವುದು ನಿಜ. ಇದರ ಸುಧಾರಣೆಗೆ ನ.ಪಂ. ಆರೋಗ್ಯ ನಿರೀಕ್ಷಕರ ಗಮನಕ್ಕೆ ತರಲಾಗಿದೆ. ಅಲ್ಲಿ ತ್ಯಾಜ್ಯ ಸಂಸ್ಕರಣೆ, ಸಾವಯವ ಗೊಬ್ಬರ ಉತ್ಪಾದನೆಗೆ ಆದ್ಯತೆ ನೀಡುವ ಪ್ರಕ್ರಿಯೆಗೆ ವೇಗ ನೀಡಲಾಗುವುದು. ಹೊಸ ಜಾಗ ಗುರುತಿಸುವ ಪ್ರಯತ್ನ ನಡೆದಿದ್ದರೂ ಸೂಕ್ತ ಸ್ಥಳ ಸಿಕ್ಕಿಲ್ಲ.
– ಗೋಪಾಲ ನಾೖಕ್, ನ.ಪಂ. ಮುಖ್ಯಾಧಿಕಾರಿ, ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.