ನಕಲಿ ವೆಬ್‌ಸೈಟ್, ಕಸ್ಟಮರ್ ಕೇರ್‌ಗಳ ಅಸಲಿ ಸುಲಿಗೆ!
ಸಹಾಯ, ಬುಕ್ಕಿಂಗ್ ನೆಪದಲ್ಲಿ ವಿದ್ಯಾವಂತರಿಗೆ ಗಾಳ
Team Udayavani, Apr 25, 2023, 7:52 AM IST
ಮಂಗಳೂರು: ಆನ್‌ಲೈನ್, ಡಿಜಿಟಲ್ ಸೇವೆಗಳ ಬಳಕೆ ವ್ಯಾಪಕವಾಗುತ್ತಿರುವ ಜತೆಗೆ ವಿವಿಧ ರೀತಿಯ ಆನ್‌ಲೈನ್ ವಂಚನೆಗಳು ಕೂಡ ಹೆಚ್ಚುತ್ತಿದ್ದು ವಂಚಕರ ಜಾಲ ಭೇದಿಸುವುದು ಸೈಬರ್ ಪೊಲೀಸರಿಗೂ ಸವಾಲಾಗುತ್ತಿದೆ.
ಒಂದೆಡೆ ಅಧಿಕ ಲಾಭದ ಆಸೆಯಿಂದ ಹಣ ಹೂಡಿಕೆ ಮಾಡಿ ಕೆಲವರು ವಂಚನೆಗೊಳಗಾಗುತ್ತಿದ್ದರೆ ಇನ್ನೊಂದೆಡೆ ನಕಲಿ ವೆಬ್‌ಸೈಟ್‌ಗಳು, ನಕಲಿ ಕಸ್ಟಮರ್ ಕೇರ್‌ಗಳು ಹಣ ದೋಚುತ್ತಿವೆ. ಹಣ ಕಳೆದುಕೊಂಡವರಲ್ಲಿ ವಿದ್ಯಾವಂತರ ಸಂಖ್ಯೆಯೇ ಅಧಿಕ. ಮಂಗಳೂರಿನಲ್ಲಿ ಕಳೆದ ಕೇವಲ ಮೂರೂವರೆ ತಿಂಗಳಲ್ಲಿ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ 34 ಎಫ್ಐಆರ್‌ಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ 1.50 ಕೋ.ರೂ.ಗಳಿಗೂ ಅಧಿಕ ಹಣ ವಂಚನೆಯಾಗಿದೆ. ಹಣ ಕಳೆದುಕೊಂಡವರು ಬ್ಯಾಂಕ್, ಸೈಬರ್ ಪೊಲೀಸ್ ಠಾಣೆಗಳಿಗೆ ಅಲೆದಾಡುತ್ತಿರುವುದು ಕಂಡುಬಂದಿದೆ.
ಕಸ್ಟಮರ್ ಕೇರ್, ವೆಬ್‌ಸೈಟ್ ನಕಲಿ
ಬ್ಯಾಂಕ್, ಹೊಟೇಲ್, ಇ-ಕಾಮರ್ಸ್ ಹೀಗೆ ವಿವಿಧ ವ್ಯವಹಾರ ಸಂಸ್ಥೆಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್, ನಕಲಿ ಕಸ್ಟಮರ್ ಕೇರ್ ಸಂಖ್ಯೆಗಳನ್ನು ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹಾಕಲಾಗುತ್ತಿದ್ದು ಇದನ್ನು ಸಂಪರ್ಕಿಸಿದ ಅನೇಕ ಮಂದಿ ಮೋಸ ಹೋಗಿದ್ದಾರೆ. ಮಂಗಳೂರಿನ ವೈದ್ಯರೋರ್ವರು ಮುಂಬಯಿಯಲ್ಲಿ ಹೊಟೇಲ್ ಕೊಠಡಿ ಕಾದಿರಿಸುವುದಕ್ಕಾಗಿ ವೆಬ್‌ಸೈಟ್ ಜಾಲಾಡಿ ಕಸ್ಟಮರ್ ಕೇರ್ ಸಂಖ್ಯೆ ಪಡೆದುಕೊಂಡಿದ್ದರು. ಅವರನ್ನು ಸಂಪರ್ಕಿಸಿದಾಗ ಕೊಠಡಿ ಬುಕ್ಕಿಂಗ್ ಹಣ ಪಾವತಿಗೆ ಗೂಗಲ್ ಪೇ ಸಂಖ್ಯೆ ನೀಡಿದ್ದರು. ವೈದ್ಯರು ಗೂಗಲ್ ಪೇ ಮೂಲಕ 45,000 ರೂ. ಪಾವತಿಸಿದ್ದರು. ಅನಂತರ ಅವರಿಗೆ ಅದು ನಕಲಿ ಕಸ್ಟಮರ್ ಕೇರ್ ಎಂಬುದು ಗೊತ್ತಾಗಿದೆ. ಇನ್ನೋರ್ವರು ಇ-ಕಾಮರ್ಸ್ ಸಂಸ್ಥೆಯೊಂದರಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಆರ್ಡರ್ ಬಂದಿರಲಿಲ್ಲ. ಅನಂತರ ಕಸ್ಟಮರ್ ಕೇರ್ ಸಂಪರ್ಕಿಸಿದ್ದರು. ಅವರು ಹೇಳಿದಂತೆ 60 ಸಾವಿರ ರೂ. ಹಣ ಪಾವತಿಸಿದ್ದರು. ಯಾವುದೇ ವಸು ಪಾರ್ಸೆಲ್ ಕಳುಹಿಸದೆ ಅವರಿಗೆ ವಂಚಿಸಲಾಗಿದೆ.
ಬ್ಯಾಂಕ್ ಹೆಸರಲ್ಲಿ ವಂಚನೆ
ಬ್ಯಾಂಕ್‌ನವರೆಂದು ಹೇಳಿ ಕರೆ ಮಾಡಿ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಅನಂತರ ಲಿಂಕ್ ಕಳುಹಿಸಿ ಒಟಿಪಿ ಪಡೆದುಕೊಂಡು ವಂಚಿಸುವುದು, ಎನಿ ಡೆಸ್ಕ್ನಂತಹ ಆ್ಯಪ್‌ನ ಲಿಂಕ್ ಕಳುಹಿಸಿ ಆ ಆ್ಯಪ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಸಿ ಮೊಬೈಲನ್ನು ನಿಯಂತ್ರಣಕ್ಕೆ ಪಡೆದು ಒಟಿಪಿ ಪಡೆದು ವಂಚಿಸುವುದು, ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುವುದು, ಗಿಫ್ಟ್ ಬಂದಿದ್ದು ಅದಕ್ಕೆ ತೆರಿಗೆ ಪಾವತಿಸಬೇಕಾಗಿದೆ ಎಂದು ಸಂದೇಶ ಕಳುಹಿಸಿ ವಂಚಿಸುವುದು ಮೊದಲಾದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ.
ಅರೆಕಾಲಿಕ ಉದ್ಯೋಗ; ಪೂರ್ಣಕಾಲಿಕ ವಂಚನೆ!
ಪಾರ್ಟ್ ಟೈಂ ಉದ್ಯೋಗವಿದೆ ಎಂದು ಜಾಹೀರಾತು ನೀಡಿ ಸಂಪರ್ಕಿಸುವಂತೆ ತಿಳಿಸಲಾಗುತ್ತದೆ. ಟೆಲಿಗ್ರಾಂ ಆ್ಯಪ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಲಿಂಕ್ ಕಳುಹಿಸಿ ಹಲವು ಟಾಸ್ಕ್ಗಳನ್ನು ನೀಡಲಾಗುತ್ತದೆ. ಮೊದಲು ಒಂದಷ್ಟು ಮೊತ್ತವನ್ನು ವಾಪಸ್ ನೀಡಲಾಗುತ್ತದೆ. ಅನಂತರ ಯಾವುದೇ ಹಣ ನೀಡದೆ ವಂಚಿಸಲಾಗುತ್ತದೆ. ಜನವರಿಯಿಂದ ಎಪ್ರಿಲ್ 21ರ ವರೆಗೆ ಮಂಗಳೂರಿನಲ್ಲಿ ಇಂತಹ 10 ಕ್ಕೂ ಅಧಿಕ ಪ್ರಕರಣಗಳು ನಡೆದಿವೆ. ಅರೆಕಾಲಿಕ ಉದ್ಯೋಗವೆಂದು ನಂಬಿ ಟಾಸ್ಕ್ಗಳನ್ನು ಮಾಡಿದವರು 50 ಲ.ರೂ.ಗಳಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಓರ್ವರು 15.34 ಲ.ರೂ. ಕಳೆದುಕೊಂಡಿದ್ದಾರೆ.
“ಗೋಲ್ಡನ್ ಅವರ್’ನಲ್ಲಿ ಕಾರ್ಯತತ್ಪರರಾಗಿ
ಯಾವುದೇ ಬ್ಯಾಂಕ್, ಸರಕಾರಿ ಸಂಸ್ಥೆ ಯಾರಿಂದಲೂ ಯಾವುದೇ ಕಾರಣಕ್ಕೂ ಯಾವುದೇ ಸನ್ನಿವೇಶದಲ್ಲಿಯೂ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ, ಒಟಿಪಿ ಕೇಳುವುದಿಲ್ಲ. ಆನ್‌ಲೈನ್ ಮೂಲಕ ಹೊಸ ಹೊಸ ವಿಧಾನಗಳಲ್ಲಿ ವಂಚಿಸಲಾಗುತ್ತಿದ್ದು ಕೆಲವು ಪ್ರಕರಣಗಳನ್ನು ಭೇದಿಸಲಾಗಿದೆ. ಯಾವುದೇ ಕಾರಣಕ್ಕೂ ಒಟಿಪಿಯನ್ನು ಇನ್ನೋರ್ವರಿಗೆ ನೀಡಬಾರದು. ವಂಚನೆಯಾಗಿರುವುದು ಗೊತ್ತಾದ ಕೂಡಲೇ (ಗೋಲ್ಡನ್ ಹವರ್) ಸೈಬರ್ ಸಹಾಯವಾಣಿ 1930ಗೆ ಹಾಗೂ ಸೈಬರ್ ಪೊಲೀಸರಿಗೆ ಮಾಹಿತಿ ನೀಡಬೇಕು ಅಥವಾ ನ್ಯಾಶನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ http://www.cybercrime.gov.in ನಲ್ಲಿ ದೂರು ದಾಖಲಿಸಿದರೆ ಹಣ ವಾಪಸ್ ಪಡೆಯಲು ಸಾಧ್ಯವಿದೆ.
– ಡಾ| ವಿಕ್ರಮ್ ಅಮಟೆ, ಪೊಲೀಸ್ ಅಧೀಕ್ಷಕರು, ದ.ಕ. ಜಿಲ್ಲೆ
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.