5 ಎಕ್ರೆಗೂ ಹೆಚ್ಚು ಜಾಗದಲ್ಲಿ ಕೃಷಿ; ದನಕರುಗಳ ಸಾಕಣೆ
ಹೈನುಗಾರಿಕೆ- ಸಾವಯವ ಕೃಷಿಯಲ್ಲಿ ಯಶಕಂಡ ಇರಾ ಕಲ್ಲಾಡಿಯ ಕೃಷಿಕ
Team Udayavani, Dec 19, 2019, 5:30 AM IST
ಹೆಸರು: ನಿಶ್ಚಲ್ ಜಿ. ಶೆಟ್ಟಿ
ಏನು ಕೃಷಿ: ಹೈನುಗಾರಿಕೆ ಮತ್ತು ತೋಟಗಾರಿಕೆ ಬೆಳೆಗಳು
ವಯಸ್ಸು: 47
ಕೃಷಿ ಪ್ರದೇಶ:
5 ಎಕ್ರೆಗೂ ಹೆಚ್ಚು
ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಬಂಟ್ವಾಳ: ಹೈನುಗಾರಿಕೆಯಲ್ಲೇ ಹೆಚ್ಚಿನ ಆಸಕ್ತಿ ತಳೆದು ಸಾವಯವ ಕೃಷಿಯನ್ನೇ ನಂಬಿ ಯಶಸ್ವಿಯಾಗಿರುವ ಈ ಕೃಷಿಕ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಪದವೀಧರರು. ತನ್ನ ಶಿಕ್ಷಣಕ್ಕೆ ತಕ್ಕಂತೆ ಯಾವುದೋ ಉದ್ಯೋಗದಲ್ಲಿದ್ದರೂ ಕೃಷಿ ಕಾಯಕದಲ್ಲಿನ ಇವರ ತುಡಿತ ಇಂದು ಅವರನ್ನು ಪ್ರಗತಿಪರ ಸಾವಯವ ಕೃಷಿಕನ್ನಾಗಿಸಿದೆ. ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕಲ್ಲಾಡಿ ನಿಶ್ಚಲ್ ಜಿ. ಶೆಟ್ಟಿ (47) ಅವರ ಕೃಷಿಯಾನದ ಕಥೆಯಿದು. 2000ನೇ ಇಸವಿಯಲ್ಲಿ ಇವರು ಕೃಷಿ ಕಾರ್ಯದಲ್ಲಿ ತೊಡಗುವ ವೇಳೆಗೆ ಇವರ ಮನೆಯಲ್ಲಿ ದೊಡ್ಡ ಮಟ್ಟದ ಕೃಷಿಯೇನು ಇರಲಿಲ್ಲ. ಒಂದು ದನದ ಮೂಲಕ ಆರಂಭಗೊಂಡ ಇವರ ಹೈನುಗಾರಿಕೆ ಇಂದು ಸುಮಾರು 30 ದನಕರುಗಳನ್ನು ಸಾಕುತ್ತಿದ್ದಾರೆ. ಅಂದರೆ ಸರಾಸರಿ ದಿನಕ್ಕೆ ನೂರು ಲೀಟರ್‌ನಷ್ಟು ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಇವರ ಬಳಿ ಇರುವ ಎಲ್ಲ ದನಕರುಗಳು ಕೂಡ ಅವರ ಮನೆಯಲ್ಲೇ ಬೆಳೆದವುಗಳಾಗಿದ್ದು, ಜೆರ್ಸಿ, ಗೀರ್, ಎಚ್‌ಎಫ್, ಶಾಹಿವಾಲ್, ಜರ್ಮನ್ ಜೆರ್ಸಿ ಸಹಿತ ದೇಸಿ ತಳಿಗಳು ನಿಶ್ಚಲ್ ಅವರ ಬಳಿ ಇದೆ. ಮನೆಯ ಅಡುಗೆಗಾಗಿ ಗೋಬರ್ ಗ್ಯಾಸ್, ಜತೆಗೆ ಅದರ ಫರಿಯನ್ನು ತೋಟಕ್ಕೆ ನೀರಿನ ರೂಪದಲ್ಲಿ ಬಳಸುತ್ತಿದ್ದಾರೆ. ಸುಮಾರು ಶೇ. 75 ತೋಟಕ್ಕೆ ಇದೇ ನೀರು, ಗೊಬ್ಬರವಾಗಿ ಬಳಕೆಯಾಗುತ್ತಿದೆ.
ವಿವಿಧ ಬೆಳೆಗಳು
ಅಡಿಕೆ, ತೆಂಗು, ತರಕಾರಿ, ಬಾಳೆ, ಕರಿಮೆಣಸು, ಹಲಸು, ಮಾವನ್ನು ಇವರು ಬೆಳೆಸುತ್ತಿದ್ದು, ಪ್ರಮುಖ ವಾಗಿ ಅಡಿಕೆ, ತೆಂಗನ್ನು ಮಾರಾಟದ ಉದ್ದೇಶದಿಂದ ಬೆಳೆಸಿದರೆ, ಉಳಿದಂತೆ ಮನೆ ಬಳಕೆಗಾಗಿಯೇ ವಿವಿಧ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಪ್ರಾರಂಭದಲ್ಲಿ ಇವರಲ್ಲಿ ಬಳಿ ಕೇವಲ 400ರಷ್ಟು ಅಡಿಕೆ ಗಿಡಗಳು, ಭತ್ತದ ಗದ್ದೆ ಇತ್ತು. ಬಳಿಕ ಜಾಗಗಳನ್ನು ಖರೀದಿಸಿದ್ದು, ಪ್ರಸ್ತುತ ಸುಮಾರು 5 ಎಕ್ರೆಯಷ್ಟು ಇವರ ಕೃಷಿ ಜಮೀನು ವಿಸ್ತರಿಸಿಕೊಂಡಿದೆ. ಇವರ ಕೃಷಿ ಸಾಧನೆ ಕಂಡು ವಿವಿಧ ಕೃಷಿ ಅಧಿಕಾರಿಗಳು, ವಿದ್ಯಾರ್ಥಿಗಳು ತೋಟಕ್ಕೆ ಆಗಮಿಸಿ ಅಧ್ಯಯನ ನಡೆಸಿ ದ್ದಾರೆ. ನಿಶ್ಚಲ್ ಅವರು ಹೈನುಗಾರಿಕೆ ಹಾಗೂ ಕೃಷಿಯಲ್ಲಿ ತಲಾ 10 ಲಕ್ಷ ರೂ.ಗಳ ವಾರ್ಷಿಕ ವ್ಯವಹಾರ ನಡೆಸುತ್ತಿದ್ದು, ತಲಾ ಎರಡೂವರೆ ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಆದಾಯಗಳಿಸಿದಂತೆ ಅದನ್ನು ಕೃಷಿ ಕಾರ್ಯಕ್ಕೆ ತೊಡಗಿ ಸುವ ಕಾರ್ಯವನ್ನೂ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಯಂತ್ರೋಪಕರಣ ಬಳಕೆ
ಕೃಷಿಕರೇ ಸ್ಥಾಪಿಸಿರುವ ಪಿಂಗಾರ ರೈತ ಉತ್ಪಾದಕರ ಕಂಪೆನಿ ವಿಟ್ಲದಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ತಂದು ಬಳಕೆ ಮಾಡುತ್ತಿದ್ದು, ಪ್ರಮುಖವಾಗಿ ಹುಲ್ಲು ತೆಗೆಯುವ ಯಂತ್ರ, ಚಾಪ್ ಕಟ್ಟರ್ (ಹುಲ್ಲನ್ನು ಪುಡಿ ಮಾಡುವ ಯಂತ್ರ), ಹಾಲು ಕರೆಯುವ ಯಂತ್ರ, ಗೋಬರ್ ಗ್ಯಾಸ್ ಬಳಸುತ್ತಿದ್ದಾರೆ. ಜತೆಗೆ ಸಾವಯ ವವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಂಚಿಯಲ್ಲಿ ನಮ್ಮ ಮಣ್ಣು ಸಾವಯವ ಕೃಷಿ ಪರಿವಾರವನ್ನು ಮಾಡಿಕೊಂಡು, ವಿಶೇಷವಾಗಿ ಸಾವಯವ ಕೃಷಿಯನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನೀರಿಗಾಗಿ ಕೊಳವೆಬಾವಿಯನ್ನು ಆಶ್ರಯಿಸಿದ್ದು, ಕೃಷಿ ಹೊಂಡಗಳನ್ನು ಮಾಡಿ ನೀರು ಇಂಗುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ.
ಪ್ರಶಸ್ತಿ-ಸಮ್ಮಾನ
ನಿಶ್ಚಲ್‌ಅವರ ಕೃಷಿ ಸಾಧನೆಗೆ ಕೃಷಿ ಇಲಾಖೆಯ ಆತ್ಮ ಯೋಜನೆಯಿಂದ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ದ.ಕ. ಹಾಲು ಒಕ್ಕೂಟದಿಂದ ಹಸಿರು ಮೇವು ಅಭಿವೃದ್ಧಿ ಪಡಿಸಿದ ಉತ್ತಮ ರೈತ ಪ್ರಶಸ್ತಿ, ಉತ್ತಮ ಹೈನುಗಾರ ಪ್ರಶಸ್ತಿಗಳು ಸಂದಿವೆ. ಜತೆಗೆ ಅವರು ಹಾಲು ಹಾಕುವ ಸೊಸೈಟಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಗಳಿಸುತ್ತಿದ್ದಾರೆ.
ಕೃಷಿ ಪ್ರಾರಂಭ: 2000ನೇ ಇಸವಿ
ವಿಸ್ತಾರ: 5 ಎಕ್ರೆಗೂ ಹೆಚ್ಚು
ದನಕರುಗಳು: ಸುಮಾರು 30
ಆದಾಯ: ಸುಮಾರು 5 ಲಕ್ಷ ರೂ.
ಮೊಬೈಲ್ ಸಂಖ್ಯೆ- 9480293741
ಸಾವಯವದಿಂದ ಆರೋಗ್ಯ
ರೈತರು ಸಾವಯವ ಗೊಬ್ಬರವನ್ನೇ ಬಳಕೆ ಮಾಡಿ ಕೃಷಿ ಮಾಡಿದರೆ ಜನರು ತಿನ್ನುವ ಆಹಾರ ವಿಷಮುಕ್ತವಾಗುವ ಜತೆಗೆ ಭೂಮಿ ಫಲವತ್ತತೆಯೂ ಹೆಚ್ಚುತ್ತದೆ. ಹೀಗಾಗಿ ತಾನು ಶೇ. 100 ಸಾವಯವ ಕೃಷಿ ಮಾಡುವ ರೈತನಾಗಬೇಕೆಂದು ಕೆಲಸ ಮಾಡಿದ್ದೇನೆ. ಜತೆಗೆ ಮನೆಯಲ್ಲೇ ಸಾವಯವ ತರಕಾರಿ ಬೆಳೆದು ಬಳಸುತ್ತೇವೆ. ಜತೆಗೆ ಅಡಿಕೆ ಬೆಳೆಗೆ ಸಾವಯವ ಗೊಬ್ಬರ ಉತ್ತಮವಾಗಿದ್ದು, ಅಡಿಕೆಯ ಗಾತ್ರ, ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂಬುದು ತಾನು ಕಂಡುಕೊಂಡಿರುವ ಸತ್ಯ. ಸಾವಯವ ಬಳಕೆಯಿಂದ ತೋಟದಲ್ಲೇ ಎರೆಹುಳ ಸೃಷ್ಟಿಯಾಗಿ ತಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತದೆ.
-ನಿಶ್ಚಲ್ ಜಿ. ಶೆಟ್ಟಿ, ಸಾವಯವ ಕೃಷಿ ಸಾಧಕರು, ಇರಾ
ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.