ಸರಕಾರಗಳ ಕೃಷಿ ವಿರೋಧಿ ನೀತಿ ಖಂಡಿಸಿ ರೈತ ಸಂಘ ಪ್ರತಿಭಟನೆ
Team Udayavani, Nov 16, 2017, 2:43 PM IST
ಪುತ್ತೂರು: ದೇಶದ ಆರ್ಥಿಕ ಬೆನ್ನೆಲುಬು ಆಗಿದ್ದ ರೈತಾಪಿ ಕುಟುಂಬಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಧನಕೀರ್ತಿ ಬಲಿಪ ಹೇಳಿದರು.
ಬುಧವಾರ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ ವಿರೋಧಿ ನೀತಿ ವಿರುದ್ಧ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ವತಿಯಿಂದ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಶೇ. 65ರಷ್ಟು ರೈತಾಪಿ ಕುಟುಂಬಗಳಿದ್ದು, ದೇಶದ ಆರ್ಥಿಕ ಪ್ರಗತಿಗೆ ರೈತರು ವರ್ಗದ ಕೊಡುಗೆ ಅಪಾರವಾದದು. ರಾಜ್ಯ ಸರಕಾರವು ಸಹಕಾರಿ ಬ್ಯಾಂಕ್‌ಗಳಲ್ಲಿನ ರೂ. 50,000 ಹಾಗೂ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿದ್ದರೂ ಎಷ್ಟು ರೈತರಿಗೆ ಈ ಸೌಲಭ್ಯ ಸಿಕ್ಕಿದೆ ಎಂಬ ಮಾಹಿತಿ ಇಲ್ಲ. ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲೇ ಇಲ್ಲ ಎಂದು ಅವರು ಟೀಕಿಸಿದರು.
ಆರ್ಥಿಕ ವ್ಯವಸ್ಥೆ ಕುಸಿದಿದೆ
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಕೇಂದ್ರ ಸರಕಾರಕ್ಕೆ ರೈತರ ಸಾಲ ಮನ್ನಾ ಮಾಡಿ ಎಂದರೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದು ಉತ್ತರ ನೀಡುತ್ತಾರೆ. ಆದರೆ ದೇಶದ ಅಭಿವೃದ್ಧಿಗೆ ಪೂರಕವಾಗಿರುವ ರೈತರ ಅಭಿವೃದ್ಧಿಯಾಗಿದೆಯೇ ಎಂದು ಅವರು ಪ್ರಶ್ನಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳಿಗೆ ಮೋಜು, ಮಸ್ತಿಗಾಗಿ ಹಣವಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಸರಕಾರದ ಬಳಿ ಹಣವಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರನ್ನು ಕಡೆಗಣಿಸುತ್ತಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರು ಅಧಿಕಾರಿಗಳಿಗೆ ಲಂಚ ಕೊಡುವ ಪರಿಸ್ಥಿತಿ ಇದೆ. ಕೇಂದ್ರ ಸರಕಾರ ಕಾರ್ಪೊರೇಟ್ ಕಂಪೆನಿಗಳ ಹಾಗೂ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡುತ್ತದೆ. ಆದರೆ ಇದೇ ನೀತಿ ಕೃಷಿ ವಲಯಕ್ಕೆ ಅನ್ವಯವಾಗದಿರುವುದು ವಿಪರ್ಯಾಸವೇ ಸರಿ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಗೌರವ ಸಲಹೆಗಾರ ಡಾ| ಪಿ.ಕೆ.ಎಸ್. ಭಟ್ ರೈತರ ವಿರುದ್ಧ ಸರಕಾರಗಳ ಧೋರಣೆಯ ವಿರುದ್ಧ ಮಾತನಾಡಿದರು. ಈ ಸಂದರ್ಭ ಹಲವಾರು ರೈತನ ಮುಖಂಡರು ಉಪಸ್ಥಿತರಿದ್ದರು.
ಪೊಲೀಸರ ತಡೆಗೆ ಜಗ್ಗದ ರೈತರು
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘ ಪ್ರತಿಭಟನೆಯಲ್ಲಿ ಆಗ್ರಹಿಸಿತ್ತು. ಅಲ್ಲದೆ ಸಹಾಯಕ ಕಮಿಷನರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಆರಂಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಹೊರಟು ಮುಖ್ಯ ರಸ್ತೆಯಾಗಿ ರೈತರ ಸಂಘದ ರ‍್ಯಾಲಿಯು ಮಿನಿ ವಿಧಾನಸೌಧದ ಬಳಿಗೆ ಆಗಮಿಸಿತು. ಆರಂಭದಲ್ಲಿ ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ಪೊಲೀಸರು ತಡೆಯೊಡ್ಡಿದರು. ಬಗ್ಗದ ರೈತರು ಮಿನಿ ವಿಧಾನಸೌಧದ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
ಸಂಪೂರ್ಣ ಸಾಲ ಮನ್ನಾವಾಗಲಿ
ರೈತ ಸಾಲಗಾರನಾಗಲು ಸರಕಾರಗಳೇ ಕಾರಣ ಎಂದು ಆರೋಪಿಸಿದ ಅವರು, ರೈತ ಸಮುದಾಯ ಸಂಘಟಿತವಾಗುವ ಮೂಲಕ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ರೀತಿಯಲ್ಲಿ ಬೆಲೆ ನಿಗದಿ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೇಳಿ ಬಂದ ಬೇಡಿಕೆಗಳು
ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಘ ಹಾಗೂ ಗ್ರಾಮೀಣ ಬ್ಯಾಂಕ್‌ಗಳ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು.
ಡಾ| ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಮಂಡಿಸಿದ ರೈತರ ಕೃಷಿ ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಸೇರಿಸಿ ರೈತರಿಗೆ ಮಾರುಕಟ್ಟೆ ದರ ಸಿಗುವಂತೆ ಮಸೂದೆ ಜಾರಿಗೊಳಿಸುವುದು.
ಪಡಿತರ ಚೀಟಿ ಆಹಾರ ಪಡೆಯುವ ಗ್ರಾಹಕರ ಹೆಬ್ಬೆರಳು ಗುರುತಿಗಾಗಿ ಸತಾಯಿಸುವುದನ್ನು ಕೂಡಲೇ ಸರಿಪಡಿಸಬೇಕು.
ಕೇವಲ ಭರವಸೆಗಳ ಮೂಲಕ ಕಾಲಹರಣ ಮಾಡುತ್ತಿರುವ ಜನಪ್ರತಿನಿಧಿಗಳು ರೈತರ ಬಹುದಿನಗಳ ಬೇಡಿಕೆ ಕುಮ್ಕಿ ಜಮೀನು ಹಕ್ಕುಪತ್ರವನ್ನು ನೀಡಲು ಕೂಡಲೇ ಆಧ್ಯಾದೇಶ ನೀಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.