ಫಾಸ್ಟ್ಯಾಗ್ ಆರಂಭ; ಕೆಲವೆಡೆ ವಾಹನ ದಟ್ಟಣೆ
Team Udayavani, Dec 16, 2019, 5:27 AM IST
ಟೋಲ್‌ಗೇಟ್‌ನಲ್ಲಿ ಫಾಸ್ಟ್ಯಾಗ್ ಇಲ್ಲದವರಿಗೆ ಡಬಲ್ ಟೋಲ್ ವಿಧಿಸುವುದನ್ನು ಜ. 15ರ ವರೆಗೆ ಮುಂದೂಡಲಾಗಿದೆ. ಆದರೆ ನಗದು ಪಾವತಿ ಲೇನ್‌ಗಳ ಮಿತಿಯನ್ನು ಕಡಿಮೆಗೊಳಿಸಿದ್ದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಐದು ಟೋಲ್‌ಗಳಲ್ಲಿ ಪ್ರಥಮ ದಿನ ನಗದು ಪಾವತಿ ಲೇನ್‌ನಲ್ಲಿ ಒಂದಷ್ಟು ವಾಹನದಟ್ಟನೆ ಉಂಟಾಗಿ ಸಮಸ್ಯೆಯಾಯಿತು. ಕೆಲವು ಕಡೆ ಫಾಸ್ಟ್ಯಾಗ್ ಲೇನ್‌ನಲ್ಲಿ ಫಾಸ್ಟ್ಯಾಗ್ ಅಳವಡಿಸದ ವಾಹನ ಸವಾರರು ಸಾಗಿದ್ದರಿಂದ ದುಪ್ಪಟ್ಟು ಹಣ ಕಟ್ಟಬೇಕಾಯಿತು. ಕೆಲವೆಡೆ ಫಾಸ್ಟ್ಯಾಗ್ ಮತ್ತು ನಗದು ಸಂಚಾರದ ಮಾರ್ಗಗಳು ಎನ್ನುವ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು ಹಾಗೂ ಸಿಬಂದಿ ವಾಹನ ಸವಾರರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದರು. ಸೋಮವಾರ ವಾಹನಗಳ ಸಂಚಾರ ಹೆಚ್ಚಿರುವ ಕಾರಣ ಟೋಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಂಭವವಿದೆ. ಇದಕ್ಕಾಗಿ ಟೋಲ್ ಸಿಬಂದಿ, ಪೊಲೀಸರು ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ.
ಸಾಸ್ತಾನ: ಹೆಚ್ಚುವರಿ 15 ಸಿಬಂದಿ
ಕೋಟ: ಸಾಸ್ತಾನ ಟೋಲ್‌ನಲ್ಲಿ ರವಿವಾರ ನಗದು ಪಾವತಿ ಲೇನ್‌ನಲ್ಲಿ ವಾಹನದಟ್ಟಣೆ ಅಧಿಕವಾಗಿತ್ತು. ಇಲ್ಲಿ ನಗದು ಪಾವತಿಗೆ 4, ಸ್ಥಳೀಯರಿಗೆ 2 ಫಾಸ್ಟ್ಯಾಗ್ ಗೆ 4 ಲೇನ್‌ಗಳಿದ್ದವು. ವಾಹನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚುವರಿಯಾಗಿ 15 ಸಿಬಂದಿ ನಿಯೋಜಿಸಲಾಗಿತ್ತು. ಸೂಚನೆ ನೀಡಿದರೂ ಫಾಸ್ಟ್ಯಾಗ್ ಲೇನ್‌ನಲ್ಲಿ ಸಂಚರಿಸಿದ ಫಾಸ್ಟಾಗ್ ಅಳವಡಿಸದ ವಾಹನಗಳಿಗೆ ದುಪ್ಪಟ್ಟು ಟೋಲ್ ವಿಧಿಸಲಾಯಿತು. ಈ ಸಂದರ್ಭ ಹಲವು ಮಂದಿ ಟೋಲ್‌ನ ಸಿಬಂದಿ ಜತೆ ಜಟಾಪಟಿ ನಡೆಸಿದ ಘಟನೆಯೂ ನಡೆದಿದೆ. ಸುಮಾರು ಫಾಸ್ಟ್ಯಾಗ್ ನಲ್ಲಿ ಸಂಚರಿಸಿವೆ.ಟೋಲ್‌ನಲ್ಲಿ ವಾಹನದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಿಬಂದಿ ವಾಹನಗಳು ಬರುತ್ತಿದ್ದಂತೆ ನಗದು ಮತ್ತು ಫಾಸ್ಟಾಗ್ ಲೇನ್‌ನಲ್ಲಿ ಹೋಗುವಂತೆ ಸೂಚನೆ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಬ್ರಹ್ಮರಕೂಟ್ಲು: ಸಿಬಂದಿ ಕೈಯಲ್ಲಿ ಸೂಚನಾ ಫಲಕ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ರವಿವಾರ ನಗದು ಪಾವತಿ ಲೇನ್‌ನಲ್ಲಿ ಅಧಿಕ ವಾಹನದಟ್ಟಣೆ ಇತ್ತು. ಫಾಸ್ಟ್ಯಾಗ್ ಮತ್ತು ನಗದು ಪಾವತಿಗೆ ಪ್ರತ್ಯೇಕ ಒಂದೊಂದು ಲೇನ್ ವ್ಯವಸ್ಥೆ ಮಾಡಲಾಗಿತ್ತು. ಫಾಸ್ಟ್ಯಾಗ್ ಲೇನ್‌ನಲ್ಲಿ ಫಾಸ್ಟಾಗ್ ಇಲ್ಲದ ವಾಹನ ಸವಾರರು ಹೋದಾಗ ಅವರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗಿದೆ. ಇದರಿಂದ ಕೆಲವು ವಾಹನ ಚಾಲಕರು ಟೋಲ್ ಸಿಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಇಲ್ಲಿ ಸಿಬಂದಿ ವಾಹನ ಬರುತ್ತಿದ್ದಂತೆ ಸೂಚನಾ ಫಲಕ ತೋರಿಸಿ ಚಾಲಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಇದರಿಂದ ಚಾಲಕರು ಗೊಂದಲಕ್ಕೀಡಾಗುವುದು ತಪ್ಪುತ್ತಿತ್ತು.ಬ್ರಹ್ಮರಕೂಟ್ಲುವಿನಲ್ಲಿ 5 ಹೆಚ್ಚುವರಿ ಸಿಬಂದಿ ನೇಮಿಸಿಕೊಳ್ಳಲಾಗಿತ್ತು ಹಾಗೂ ಸರತಿಯ ಸಾಲಿನಲ್ಲಿ ನಿಲ್ಲುವ ವಾಹನಗಳ ಬಳಿಗೆ ನೇರವಾಗಿ ತೆರಳಿ ಟೋಲ್ ಸಂಗ್ರಹಿಸಲು 4 ಹೆಚ್ಚುವರಿ ಮಿಷನ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು.ನಗದು ಲೇನ್‌ನಲ್ಲಿ ಹೆಚ್ಚಿನ ದಟ್ಟಣೆ ಇತ್ತು. ಸೋಮವಾರ ವಾಹನಗಳ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕಾಗಿ ಸಕಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಟೋಲ್ ಸಿಬಂದಿ ತಿಳಿಸಿದ್ದಾರೆ.
ಹೆಜಮಾಡಿ: ದಟ್ಟಣೆ ಬಳಿಕ ಹೆಚ್ಚುವರಿ ಲೇನ್
ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್‌ನಲ್ಲಿ 3 ಫಾಸ್ಟ್ಯಾಗ್ ಹಾಗೂ 3 ಮುಕ್ತ ಪ್ರವೇಶ ದ್ವಾರಗಳಿದ್ದರೂ ಫಾಸ್ಟ್ಯಾಗ್ ಲೇನ್‌ನಲ್ಲಿ ಸಾಗಿ ಬರುತ್ತಿರುವ ಸಾಧಾರಣ (ಫಾಸ್ಟಾಗ್ ಇಲ್ಲದ)ವಾಹನಗಳಿಂದ ಬೆಳಗ್ಗೆ ಕಿರಿಕಿರಿ ಸಂಭವಿಸಿದೆ. ಆದರೆ ಪೊಲೀಸರ ಸಮಯೋಚಿತ ಕಾರ್ಯನಿರ್ವಹಣೆಯಿಂದ ದಿನವಿಡೀ ವಾಹನ ದಟ್ಟಣೆ ಇಲ್ಲದೇ ಟೋಲ್‌ನಲ್ಲಿ ವಾಹನಗಳು ಸಾಗಿವೆ. ನಗದು ಪಾವತಿ ಲೇನ್‌ನಲ್ಲಿ ವಾಹನಗಳ ಒತ್ತಡ ಹೆಚ್ಚಾದಾಗ ಇನ್ನೊಂದು ನಗದು ಲೇನ್‌ಗೆ ಅವಕಾಶ ಕಲ್ಪಿಸಲಾಯಿತು.
ಫಾಸ್ಟ್ಯಾಗ್ ಇಲ್ಲದ ಸವಾರರು ಫಾಸ್ಟ್ಯಾಗ್ ಲೇನ್‌ನಲ್ಲಿ ಬರುವಾಗ ದುಪ್ಪಟ್ಟು ಸುಂಕವನ್ನು ನಗದು ಮೂಲಕ ನೀಡಬೇಕಿದೆ. ಇದನ್ನರಿಯದ ವಾಹನ ಮಾಲಕ, ಚಾಲಕರು ಟೋಲ್‌ಗೇಟ್‌ನಲ್ಲಿ ಜಗಳ ಕಾಯ್ದ ಸನ್ನಿವೇಶ ಎದುರಾಗಿದೆ.
ತಲಪಾಡಿ: ನಗದು ಲೇನ್‌ನಲ್ಲಿಯೇ ಅಧಿಕ ವಾಹನ
ಉಳ್ಳಾಲ: ಫಾಸ್ಟ್ಯಾಗ್ ಕಡ್ಡಾಯದ ಹಿನ್ನೆಲೆಯಲ್ಲಿ ತಲಪಾಡಿ ಟೋಲ್‌ನಲ್ಲಿ ರವಿವಾರದಿಂದ ಫಾಸ್ಟ್ಯಾಗ್ ಮತ್ತು ನಗದು ಪಾವತಿ ಮೂಲಕ ಸಂಚರಿಸುವ ವಾಹನಗಳಿಗೆ ಪ್ರತ್ಯೇಕ ಟೋಲ್ ಲೈನ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ನಗದು ಪಾವತಿ ಲೇನ್‌ನಲ್ಲಿ ವಾಹನಗಳ ದಟ್ಟಣೆ ಉಂಟಾಗಿದೆ. ಮಂಗಳೂರು-ತಲಪಾಡಿ ನಡುವೆ ಸಂಚರಿಸುವ ಖಾಸಗಿ ಬಸ್ಸುಗಳು ಟೋಲ್ ಕಟ್ಟುವುದರಿಂದ ವಿನಾಯಿತಿ ಸಿಗದ ಹಿನ್ನಲೆಯಲ್ಲಿ ಟೋಲ್ ಫ್ಲಾಝಾವನ್ನೇ ಲಾಸ್ಟ್ ಸ್ಟಾಪ್ ಮಾಡಿದ್ದರಿಂದ ಕೆಳಗಿನ ತಲಪಾಡಿ ಮತ್ತು ಮೇಲಿನ ತಲಪಾಡಿಗೆ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಯಿತು.
ತಲಪಾಡಿ ಟೋಲ್‌ನ ಎರಡೂ ಬದಿಯ 10 ಟೋಲ್ ಗೇಟ್‌ಗಳಲ್ಲಿ 6 ಟೋಲ್‌ಗಳಲ್ಲಿ ಫಾಸ್ಟಾಗ್ ಅಳವಡಿಸಿದ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದರೆ, ಎರಡು ಟೋಲ್ ಗೇಟ್‌ನಲ್ಲಿ ನಗದು ನೀಡಿ ಸಂಚಾರ ಮಾಡುವ ವಾಹನಗಳಿಗೆ ಮತ್ತು ಎರಡು ಟೋಲ್‌ಗಳನ್ನು ತುರ್ತು (ಆ್ಯಂಬುಲೆನ್ಸ್) ಸಂಚರಿಸುವ ವಾಹನಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಫಾಸ್ಟ್ಯಾಗ್ ಅಳವಡಿಸಿದ ಗೇಟ್‌ಗಳಲ್ಲಿ ವಾಹನಗಳು ನಿರಾಂತಕವಾಗಿ ಸಂಚರಿಸಿದರೆ, ನಗದು ನೀಡಿ ಸಂಚರಿಸುವ ಗೇಟ್‌ಗಳಲ್ಲಿ ವಾಹನಗಳ ಸರತಿ ಸಾಲು ಕಂಡುಬಂತು.
ನಗದಿಗೆ ಹ್ಯಾಂಡ್ ಮಿಷನ್
ಬೆಳಗ್ಗೆ ನಗದು ಪಾವತಿ ಟೋಲ್‌ಗೇಟ್‌ಗಳಲ್ಲಿ ಕೆಲ ಸಮಯ ಗೊಂದಲಗಳು ಉಂಟಾಯಿತು. ಆಬಳಿಕ ಟೋಲ್ ಸಿಬಂದಿ ಹ್ಯಾಂಡ್ ಮಿಷನ್ ಮೂಲಕ ವಾಹನಗಳ ಬಳಿ ತೆರಳಿ ಟೋಲ್ ಸಂಗ್ರಹ ಮಾಡಿದ್ದರಿಂದ ಸರತಿ ಕಡಿಮೆ ಮಾಡಲಾಯಿತು ಎಂದು ಟೋಲ್‌ನ ಪ್ರಬಂಧಕ ಶಿವಪ್ರಸಾದ್ ರೈ ಪತ್ರಿಕೆಗೆ ಮಾಹಿತಿ ನೀಡಿದರು.
ಖಾಸಗಿ ಬಸ್ಸುಗಳ ಟೊಲ್ ಸಂಗ್ರಹದ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ಫಾಸ್ಟ್ಯಾಗ್ ಅಳವಡಿಸಿದ್ದು, ಕೇರಳ ಸಾರಿಗೆ ಸಂಸ್ಥೆ ಇನ್ನೆರಡು ದಿನಗಳಲ್ಲಿ ಫಾಸ್ಟ್ಯಾಗ್ ಅಳವಡಿಸುವ ವಿಚಾರದಲ್ಲಿ ಮಾತುಕತೆ ನಡೆಸಿದೆ. ಮಂಜೇಶ್ವರ ವ್ಯಾಪ್ತಿಯ ವಾಹನಗಳಿಗೆ ಎರಡು ದಿನಗಳ ಸಮಾಯವಕಾಶ ಕೊಟ್ಟಿದ್ದು ಮಾತುಕತೆ ನಡೆಯುತ್ತಿದೆ.
ಖಾಸಗಿ ಬಸ್ಸುಗಳ ಲಾಸ್ಟ್‌ಸ್ಟಾಪ್
ಈ ಹಿಂದೆ ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಸುಗಳಿಗೆ ಮತ್ತು ಶಾಲಾ ಬಸ್ಸುಗಳಿಗೆ ಟೋಲ್‌ನಿಂದ ವಿನಾಯಿತಿ ಇತ್ತು. ಆದರೆ ಫಾಸ್ಟಾಗ್ ಕಡ್ಡಾಯದ ಬಳಿಕ ಬಸ್ಸುಗಳಿಗೂ ಟೋಲ್ ಕಡ್ಡಾಯವಾದ ಹಿನ್ನಲೆಯಲ್ಲಿ ತಲಪಾಡಿ ನಡುವೆ ಸಂಚರಿಸುವ ಬಸ್ಸುಗಳು ತಲಪಾಡಿ ಟೋಲ್‌ಗೇಟನ್ನೇ ಲಾಸ್ಟ್ ಸ್ಟಾಪ್ ಮಾಡಿದ್ದರಿಂದ ಮೇಲಿನ ತಲಪಾಡಿ ಮತ್ತು ಕೆಳಗಿನ ತಲಪಾಡಿ ಕಡೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು. ಬೆರಳೆಣಿಕೆ ಬಸ್ಸುಗಳು ಮಾತ್ರ ಟೋಲ್ ನೀಡಿ ಸಂಚರಿಸಿವೆ. ಸೋಮವಾರ ಸಮಸ್ಯೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆಯಿದೆ. ಟೋಲ್‌ನಲ್ಲಿ ನಗದು ಹಣ ನೀಡಿ ಸಂಚರಿಸುವ ವೇಳೆ ವಾಹನಗಳ ಸರತಿಯಿಂದ ಬಸ್ಸುಗಳ ಸಮಯ ಪಾಲನೆ ನಡೆಸಲು ಕಷ್ಟವಾಗುವುದರಿಂದ ಟೋಲ್ ಬಳಿಯೇ ವಾಹನಗಳನ್ನು ತಿರುಗಿಸಲಾಗುತ್ತಿದೆ ಎಂದು ಬಸ್ ಚಾಲಕರು ತಿಳಿಸಿದರು.
ಸುರತ್ಕಲ್: ಫಾಸ್ಟ್ಯಾಗ್ ಲೇನ್‌ನಲ್ಲಿ ವಿರಳ ಸಂಚಾರ
ಸುರತ್ಕಲ್: ಸುರತ್ಕಲ್ ಟೋಲ್ ಕೇಂದ್ರದಲ್ಲೂ ಹಣ ಪಾವತಿ ಲೇನ್‌ನಲ್ಲಿ ವಾಹನದಟ್ಟಣೆ ಅಧಿಕವಾಗಿತ್ತು. ಎರಡು ಲೇನ್‌ಗಳಲ್ಲಿ ಹಣ ಪಾವತಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಶೇ. 60ಕ್ಕೂ ಅಧಿಕ ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ಕಾರಣ ಇಲ್ಲಿ ರವಿವಾರ ಫಾಸ್ಟ್ಯಾಗ್ ಲೇನ್‌ನಲ್ಲಿ ವಿರಳವಾಗಿ ವಾಹನಗಳು ಸಂಚರಿಸಿದವು. ಫಾಸ್ಟ್ಯಾಗ್ ರೀಡಿಂಗ್‌ನಲ್ಲಿ ರವಿವಾರ ಸರ್ವರ್ ವೇಗವಿದ್ದುದರಿಂದ ವಾಹನ ಸವಾರರಿಗೆ ಕಾಯುವ ಪ್ರಮೇಯ ಬರಲಿಲ್ಲ. ಟೋಲ್ ಸೆನ್ಸಾರ್ ಮುಂದೆ ಬಂದು ನಿಂತ ಐದು ಸೆಕೆಂಡ್‌ಗಳಲ್ಲಿ ಗೇಟ್ ತೆರೆಯಲ್ಪಡುತ್ತಿತ್ತು. ಇನ್ನು ಕೆಲವು ವಾಹನಗಳು ಫಾಸ್ಟಾಗ್ ಅಳವಡಿಸಿದ್ದರೂ ಆ್ಯಕ್ಟಿವೇಟ್ ಮಾಡಿರ ಲಿಲ್ಲ. ಸ್ಟಿಕ್ಕರ್ ಮುಂಭಾಗ ಧೂಳು ನಿಂತಿದ್ದ ವಾಹನಗಳನ್ನು ಹ್ಯಾಂಡ್ ಸ್ಕ್ಯಾನರ್ ಬಳಕೆ ಮಾಡಿ ಕಳುಹಿಸಿಕೊಡಲಾಯಿತು. ಕಂಪ್ಯೂಟರ್ ಕೈಕೊಟ್ಟಲ್ಲಿ 10ಕ್ಕೂ ಮಿಕ್ಕಿ ಸ್ಕ್ಯಾನರ್‌ಗಳನ್ನು ಸಿಬಂದಿಗೆ ಒದಗಿಸಲಾಗಿದೆ.
ಬೀಚ್ ರಸ್ತೆಯಲ್ಲಿ ಓಡಾಟ!
ಸ್ಥಳೀಯ ವಾಹನಗಳು ಸುರತ್ಕಲ್ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿಯ ಬೀಚ್ ರಸ್ತೆಯಾಗಿ ಸಾಗಿ ಮುಕ್ಕ ಹೆದ್ದಾರಿಯನ್ನು ಸೇರುತ್ತಿದ್ದವು. ಹೆಚ್ಚಿನ ವಾಹನಗಳು ಟೋಲ್ ನೀಡುವುದನ್ನು ತಪ್ಪಿಸಲು ಈ ಮಾರ್ಗವನ್ನು ಆಯ್ಕೆ ಮಾಡಿವೆ.
ಪೊಲೀಸ್ ಭದ್ರತೆ
ರವಿವಾರದಿಂದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ. ಒಂದು ತುಕಡಿ ಕೆಎಸ್‌ಆರ್‌ಪಿ, ಹೈವೇ ಪೆಟ್ರೋಲಿಂಗ್ ವಾಹನಗಳು ಭದ್ರತೆ ಒದಗಿಸಿದ್ದವು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.