ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಸಮ್ಮಾನ
Team Udayavani, May 18, 2018, 12:30 PM IST
ಪುತ್ತೂರು: ಪುತ್ತೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ. ರಾಮಚಂದ್ರ ಮತ್ತು ಹಾಸನ ನ್ಯಾಯಾಲಯಕ್ಕೆ ವರ್ಗವಾದ ಪ್ರಧಾನ ಸಿವಿಲ್ ನ್ಯಾಯಾ ಧೀಶ ಸಿ. ಕೆ. ಬಸವರಾಜ್ ಅವರಿಗೆ ಪುತ್ತೂರು ವಕೀಲರ ಸಂಘದಿಂದ ಗುರುವಾರ ನ್ಯಾಯಾಲಯದ ಪರಾಶರ ಸಭಾಂಗಣದಲ್ಲಿ ಬೀಳ್ಕೊಡುವ ಸಮಾರಂಭ ಆಯೋಜಿಸಲಾಯಿತು.
ವರ್ಗಾವಣೆಗೊಂಡ ನ್ಯಾಯಾಧೀಶರನ್ನು ದಂಪತಿ ಸಮೇತರಾಗಿ ಸಮ್ಮಾನಿಸಿ, ಫಲಪುಷ್ಪ, ಜೇನು, ಗೋಡಂಬಿ, ಚಾಕಲೇಟು ನೀಡಿ ವಿಶೇಷವಾಗಿ ಗೌರವಿಸಲಾಯಿತು. ಆಯಿಲ್ ಪೈಂಟಿಂಗ್‌ನಲ್ಲಿ ಬಿಡಿಸಿದ ಇಬ್ಬರೂ ನ್ಯಾಯಾಧೀಶರ ಭಾವ ಚಿತ್ರವನ್ನು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ನ್ಯಾಯಾಧೀಶರಿಗೆ ಸಮರ್ಪಣೆ ಮಾಡಿದರು.
ನೆನಪಿನಲ್ಲಿ ಉಳಿಯುವ ಸೇವೆ
ಸಮ್ಮಾನ ಸ್ವೀಕರಿಸಿದ ನ್ಯಾಯಾಧೀಶ ಎಂ. ರಾಮಚಂದ್ರ ಮಾತನಾಡಿ, ನ್ಯಾಯದಾನ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ಅವಕಾಶವನ್ನು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ನಿಭಾಯಿಸುತ್ತಿದ್ದೇವೆ. ಪುತ್ತೂರಿನಲ್ಲಿ ಅತ್ಯಂತ ಹಿರಿಯ ನ್ಯಾಯವಾದಿಗಳ ವಾದವನ್ನು ಕೇಳುವ ಅವಕಾಶ ಸಿಕ್ಕಿದೆ. ಹಲವು ವರ್ಷದ ಸೇವೆಯಲ್ಲಿ ಅತ್ಯುತ್ತಮ ವಾತಾವರಣ, ಸಮಾಧಾನ ಸಿಕ್ಕಿದ ಪುತ್ತೂರಿನ ಸೇವೆ ಮರೆಯಲಾಗದ ಸೇವೆಯಾಗಿ ನೆನಪಿನಲ್ಲಿ ಉಳಿಯಲಿದೆ ಎಂದರು.
ಮರೆಯದ ಸಂಸ್ಕೃತಿ
ಸಮ್ಮಾನಿತ ನ್ಯಾಯಾಧೀಶ ಸಿ.ಕೆ. ಬಸವರಾಜ್ ಮಾತನಾಡಿ, ಸರಕಾರಿ ಸೇವೆಯಲ್ಲಿರುವವರನ್ನು ಬೀಳ್ಕೊಡುವುದು, ಸ್ವಾಗತಿಸುವ ಉತ್ತಮ ಬೆಳವಣಿಗೆ ದ.ಕ. ಜಿಲ್ಲೆಯಲ್ಲಿ ಮಾತ್ರ ಕಂಡು ಬರುತ್ತಿದೆ. ಇಲ್ಲಿನ ಎಲ್ಲರ ಹಾರೈಕೆ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯಾಧೀಶ ಮಂಜುನಾಥ್ ಮಾತನಾಡಿ, ಅತ್ಯಂತ ಹಳೆಯ ಕೇಸ್‌ಗಳನ್ನು ಉಳಿಸಿಕೊಳ್ಳುವಂತಾಗಬಾರದು ಎಂಬ ನಿಟ್ಟಿನಲ್ಲಿ ವಕೀಲರಿಗೆ ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ. ಹಳೆಯ ಕೇಸುಗಳಿಗೆ ಮುಕ್ತಿ ಕೊಡುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರಿನಲ್ಲಿ ನ್ಯಾಯಾಧೀಶರು ವಕೀಲರಲ್ಲಿ ಉತ್ತಮ ರೀತಿಯಲ್ಲೇ ಸೂಚನೆ ನೀಡುತ್ತಾ ನ್ಯಾಯ ನೀಡುತ್ತಿದ್ದರು. ಸಮಯಕ್ಕೆ ಸರಿಯಾಗಿ ಸೂಕ್ತ ಮಾರ್ಗದರ್ಶನವನ್ನೂ ವಕೀಲರಿಗೆ ನೀಡುತ್ತಿದ್ದರು ಎಂದು ಸ್ಮರಿಸಿದರು.
ಸುಳ್ಯ ವಕೀಲರ ಸಂಘದ ಅಧ್ಯಕ್ಷ ವೆಂಕಪ್ಪ ಗೌಡ, ಪುತ್ತೂರಿನ ವಕೀಲರಾದ ಎನ್. ಕೆ. ಜಗನ್ನಿವಾಸ್ ರಾವ್, ಜಗನ್ನಾಥ ರೈ, ಮಹೇಶ್ ಕಜೆ, ವಕೀಲರ ಸಂಘದ ಉಪಾಧ್ಯಕ್ಷ ಮಹಾಬಲ ಗೌಡ ಸಹಿತ ವಕೀಲರು ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ಪದಾಧಿಕಾರಿ ದೀಪಕ್ ಬೊಳುವಾರು, ಸರಕಾರಿ ವಕೀಲ ಪ್ರವೀಣ್ ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ ಸ್ವಾಗತಿಸಿ, ಕೋಶಾಧಿಕಾರಿ ಕುಮಾರನಾಥ್ ಎಸ್. ವಂದಿಸಿದರು. ನ್ಯಾಯವಾದಿ ಮನೋಹರ್ ಕೆ.ವಿ. ಕಾರ್ಯಕ್ರಮ ನಿರ್ವಹಿಸಿದರು.
ನೆಮ್ಮದಿ ಜೀವನ
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರ ಸಂಬಂಧ
ಪುತ್ತೂರಿನಲ್ಲಿ ಉತ್ತಮವಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ವರ್ಗಾವಣೆಗೊಂಡ ನ್ಯಾಯಾಧೀಶರು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.