ಕರ್ವೇಲು-ಶಾಂತಿನಗರ ರಸ್ತೆಗೆ ಕೊನೆಗೂ ಡಾಮರು ಭಾಗ್ಯ
Team Udayavani, Oct 28, 2017, 4:03 PM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ಸಂಪರ್ಕಕೊಂಡಿಯೆನಿಸಿದ ಕರ್ವೇಲು- ಶಾಂತಿನಗರ ರಸ್ತೆಗೆ ಕೊನೆಗೂ ಡಾಮರು ಕಾಮಗಾರಿ ಭಾಗ್ಯ ಒಲಿದು ಬಂದಿದೆ. ಈ ರಸ್ತೆಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ.
ಕರ್ವೇಲು- ಶಾಂತಿನಗರ ರಸ್ತೆಯು ಜಿಲ್ಲಾ ಪಂಚಾಯತ್ ರಸ್ತೆಯಾಗಿದ್ದು, ಸುಮಾರು 20 ವರ್ಷಗಳ ಹಿಂದೆ ಇದರ
ಡಾಮರು ಕಾಮಗಾರಿ ನಡೆದಿತ್ತು. ಬಳಿಕ ಒಮ್ಮೆ ತೇಪೆ ಹಾಕಿ ದಶಕಗಳೇ ಸಂದು ಹೋಗಿವೆ. ಈಗ ಈ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿ ರಸ್ತೆಯು ಹೊಂಡ ಗುಂಡಿಗಳಿಂದ ತುಂಬಿ ಹೋಗಿತ್ತಲ್ಲದೆ, ನಡೆದಾಡಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಚಾಲಕರ ಪಾಡಂತೂ ಕೇಳುವುದೇ ಬೇಡ. ಇಲ್ಲಿನ ರಸ್ತೆ ದುರಸ್ತಿಗೆ ಹಲವು ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಪ್ರಮುಖ ಸಂಪರ್ಕ ಕೊಂಡಿ
ಈ ರಸ್ತೆಯು ಸುಮಾರು ಒಂದೂವರೆ ಕಿ.ಮೀ. ನಷ್ಟು ಉದ್ದವಿದ್ದು, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಪಡೆಯುವ ಈ ರಸ್ತೆಯು ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿಯ ಶಾಂತಿನಗರ ಎಂಬಲ್ಲಿ ಕೂಡುತ್ತದೆ. ಈ ರಸ್ತೆಯಲ್ಲಿ ಶಾಲೆ, ಶ್ರೀ ಮಹಾವಿಷ್ಣು ದೇವಸ್ಥಾನ, ಮಸೀದಿ, ಭಜನ ಮಂದಿರವೂ ಇದೆ. ಅಲ್ಲದೆ, ಇದು ಮಠಂತಬೆಟ್ಟು, ಕಿನ್ನಿತಪಳಿಕೆ, ಎಸ್ಸಿಎಸ್ಟಿ ಕಾಲನಿ, ಜನತಾ ಕಾಲನಿಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಸುಮಾರು 75 ಕುಟುಂಬಗಳು ಈ ರಸ್ತೆಯನ್ನೇ ನೆಚ್ಚಿಕೊಂಡಿವೆ.
ಇಚ್ಛಾಶಕ್ತಿಯ ಕೊರತೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಏನಾದರೂ ಸಂಚಾರಕ್ಕೆ ತಡೆಯಾದರೆ ಕರ್ವೇಲಿನಿಂದ ಶಾಂತಿ ನಗರದ ಮೂಲಕ ಉಪ್ಪಿನಂಗಡಿಗೆ ಬರಲು, ಪುತ್ತೂರು ಮೂಲಕ ಮಾಣಿ ರಾಷ್ಟ್ರೀಯ ಹೆದ್ದಾರಿಯನ್ನು ಕೂಡಿಕೊಳ್ಳಲು ಇದು ಅನುಕೂಲವಾಗುತ್ತಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ರಸ್ತೆ ಸಂಪೂರ್ಣ ನನೆಗುದಿಗೆ
ಬಿದ್ದು, ಸಂಚಾರಕ್ಕೆ ಅಸಾಧ್ಯವಾಗಿತ್ತು. ಈ ರಸ್ತೆಯ ದುರಸ್ತಿಗಾಗಿ ಊರವರು ನೆಕ್ಕಿಲಾಡಿ ಗ್ರಾಮ ಪಂಚಾಯತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರಿಗೆ ಮನವಿಗಳನ್ನು ನೀಡಿದ್ದರು. ಹೋರಾಟಕ್ಕೂ ಅಣಿಯಾಗಿದ್ದರು.
ನಬಾರ್ಡ್‌ನಿಂದ ಹಣ ಮಂಜೂರು
ಆದರೆ ಇದೀಗ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಯತ್ನದಿಂದ ಈ ರಸ್ತೆಯ ಡಾಮರು ಕಾಮಗಾರಿಗೆ ನಬಾರ್ಡ್‌ನಡಿ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ
ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಇನ್ನಷ್ಟೇ ನಡೆಯ ಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನೆಲ್ಲ ಆದಷ್ಟು ಬೇಗ ಮುಗಿಸಿ ಈ ರಸ್ತೆಗೆ ಶೀಘ್ರವೇ ಡಾಮರು ಭಾಗ್ಯ ಕಲ್ಪಿಸ ಬೇಕೆಂಬುದು ಗ್ರಾಮಸ್ಥರ ಆಗ್ರಹ.
‘ಡಿಸೆಂಬರ್‌ನಲ್ಲಿ ಕಾಮಗಾರಿ’
ನಬಾರ್ಡ್ ಯೋಜನೆಯಡಿ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಅದರಲ್ಲಿ 50 ಲಕ್ಷ ರೂಪಾಯಿಯನ್ನು ಕರ್ವೇಲು – ಶಾಂತಿನಗರ ರಸ್ತೆಗೆ, 50 ಲಕ್ಷ ರೂಪಾಯಿಯನ್ನು ದೇವಸ್ಯ- ಚೆಲ್ಲ್ಯಡ್ಕ ರಸ್ತೆಗೆ ಇಡಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಾಗಿದ್ದು, ಕರ್ವೇಲು – ಶಾಂತಿನಗರ ರಸ್ತೆಯ ಕಾಮಗಾರಿಯನ್ನು ಡಿಸೆಂಬರ್‌ನಲ್ಲಿ ಆರಂಭಿಸಿ, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವ ಇರಾದೆ ಇದೆ. ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಕಾಮಗಾರಿಗೆ ಚಾಲನೆ ನೀಡಲಾಗುವುದು.
– ಶಕುಂತಳಾ ಟಿ. ಶೆಟ್ಟಿ, ಶಾಸಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.