ವಾಮಂಜೂರು ಪ್ರದೇಶದಲ್ಲಿಡೀ ದಟ್ಟ ಹೊಗೆ: ಆತಂಕ ಸೃಷ್ಟಿ
Team Udayavani, Feb 1, 2019, 5:29 AM IST
ಮಹಾನಗರ: ಪಚ್ಚನಾಡಿ ಯಲ್ಲಿರುವ ಪ್ರಮುಖ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಾಕಿರುವ ತ್ಯಾಜ್ಯಕ್ಕೆ ಮತ್ತೆ ಬೆಂಕಿ ಬಿದ್ದಿದೆ. ಇದರಿಂದಾಗಿ ಗುರುವಾರ ಸಂಜೆ ವೇಳೆಗೆ ಇಡೀ ವಾಮಂಜೂರು ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಜ. 23ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಂಪಿಂಗ್ ಯಾರ್ಡ್‌ನ ಎಡಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅನಂತರ ಬೆಂಕಿ ನಂದಿಸುವ ನಿಟ್ಟಿನಲ್ಲಿ ಸತತ ಕಾರ್ಯಾಚರಣೆ ನಡೆದು ಸುತ್ತಮುತ್ತಲ ಪ್ರದೇಶದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಬಳಿಕ ಹೊಗೆ ಕಡಿಮೆಯಾಗಿದ್ದರೆ, ಗುರುವಾರ ಮತ್ತೆ ಯಾರ್ಡ್‌ನ ಕೆಳಭಾಗದಲ್ಲಿ ಬೆಂಕಿ ಬಿದ್ದು, ಇಡೀ ಪ್ರದೇಶವನ್ನು ಹೊಗೆ ಆರಿಸಿದೆ.
ಕಸ ಹೆಕ್ಕುವವರು ಬೆಂಕಿ ನೀಡುತ್ತಾರೆ
ಮತ್ತೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಎಂಜಿನಿಯರ್ ಮಧು ಅವರಲ್ಲಿ ವಿಚಾರಿಸಿ ದಾಗ, ಡಂಪಿಂಗ್ ಯಾರ್ಡ್‌ನ ಕೊನೆಯ ಭಾಗದಲ್ಲಿ ಸ್ವಲ್ಪ ಬೆಂಕಿ ತಗುಲಿದೆ. ಪ್ಲಾಸ್ಟಿಕ್ ಇದ್ದುದರಿಂದ ಹೊಗೆ ಕಾಣಿಸಿಕೊಂಡಿದೆ. ಕಸ ಹೆಕ್ಕುವವರು ಮೆಟಲ್, ಕಬ್ಬಿಣ, ವಯರ್ ಮುಂತಾದವುಗಳನ್ನು ಹೆಕ್ಕುವುದಕ್ಕಾಗಿ ಬೆಂಕಿ ಹಾಕಿರಬೇಕು. ತತ್‌ಕ್ಷಣವೇ ಬೆಂಕಿ ನಂದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ರವೀಂದ್ರ ಭಟ್ ಮಂದಾರಮನೆ ಹೇಳುವ ಪ್ರಕಾರ, ಪ್ರತಿ ವರ್ಷ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿಯೇ ಇಲ್ಲಿ ಬೆಂಕಿ ಬೀಳುತ್ತಿದೆ. ಭದ್ರತಾ ಸಿಬಂದಿಗಳಿದ್ದ ಮೇಲೆ ಹೊರಗಿನವರು ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಲಿನ ನೀರು ಬಾವಿಗೆ
ಕಳೆದ ವಾರ ಬಿದ್ದ ಬೆಂಕಿಯನ್ನು ನಂದಿಸಲು ಬಳಸಲಾದ ನೀರಿನೊಂದಿಗೆ ಕಸದ ಪಳೆಯುಳಿಕೆ, ಬೂದಿ ಸೇರಿಕೊಂಡು ಸನಿಹದ ಮನೆಗೆ ಹರಿದು ಬರುತ್ತಿದೆ. ಇದರಿಂದ ಸಹಿಸಲಸಾಧ್ಯ ವಾಸನೆ ಉಂಟಾಗುತ್ತಿದೆ. ಅಲ್ಲದೆ ಮನೆ ಅಂಗಳದಲ್ಲಿರುವ ಬಾವಿ ನೀರಿಗೂ ಮಲಿನ ನೀರು ಸೇರ್ಪಡೆಯಾಗುತ್ತಿದೆ. ಮೊದಲೇ ಕಸರಾಶಿಯಿಂದಾಗಿ ವಾಸನೆಯನ್ನೇ ಉಸಿರಾಡಬೇಕಾದ ಗ್ರಾಮಸ್ಥರಿಗೆ ಇದೀಗ ತ್ಯಾಜ್ಯ ನೀರಿನ ಸೇವನೆಯಿಂದಾಗಿ ಆರೋಗ್ಯದ ಬಗ್ಗೆ ಆತಂಕ ಸೃಷ್ಟಿಯಾಗಿದೆ.
ರಸ್ತೆಯಲ್ಲೇ ಕಸ
ಖಾಸಗಿ ವಾಹನಗಳಲ್ಲಿ ಕಸ ತೆಗೆದು ಕೊಂಡು ಬರುವವರಿಗೆ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲು ಅವ ಕಾಶವಿಲ್ಲ. ಇದರಿಂದ ಮಂದಾರ ಪ್ರದೇಶದ ರಸ್ತೆಯಲ್ಲೇ ಕಸ ಬಿಸಾಡಿಹೋಗುತ್ತಿದ್ದಾರೆ. ಇದ ರಿಂದ ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆಯಾಗು ವುದಲ್ಲದೆ, ಕಸದ ವಾಸನೆಯಿಂದ ಮನೆ ಗಳಲ್ಲಿ ಉಳಿದುಕೊಳ್ಳುವುದೇ ಸಮಸ್ಯೆ ಯಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
ಪರಿಶೀಲಿಸಿ ಕ್ರಮ
ಪಚ್ಚನಾಡಿ ಡಂಪಿಂಗ್ ಯಾರ್ಡ್ ಸನಿಹದಲ್ಲಿರುವ ಕುಟುಂಬಗಳಿಗೆ ಸಮಸ್ಯೆಯಾಗದಂತೆ ಸೂಕ್ತ ಗಮನ ಹರಿಸಲಾಗುವುದು. ಬೆಂಕಿ ನಂದಿಸುವ ವೇಳೆ ಹರಿದು ಬಂದ ಮಲಿನ ನೀರು ಬಾವಿಗೆ ಸೇರಿರುವ ಬಗ್ಗೆ ಶುಕ್ರವಾರವೇ ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ.
– ಡಾ| ಮಂಜಯ್ಯ ಶೆಟ್ಟಿ,
ಮನಪಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.