ಅಂಗಡಿಗೆ ಬೆಂಕಿ: ಶಿಕ್ಷಕನ ವಿರುದ್ಧ ಪ್ರಕರಣ ದಾಖಲು
Team Udayavani, Feb 3, 2018, 2:43 PM IST
ಕಡಬ: ಕುಟ್ರಾಪ್ಪಾಡಿ ಗ್ರಾಮದ ಹೊಸ್ಮಠದಲ್ಲಿನ ಸ್ತ್ರೀಶಕ್ತಿ ಸಂಘದ ಸದಸ್ಯರ ಅಂಗಡಿ ಬೆಂಕಿ ಗಾಹುತಿಯಾದ ಬಗ್ಗೆ ದೂರುದಾರರ ಹೇಳಿಕೆ ಆಧರಿಸಿ ನೇಲ್ಯಡ್ಕ ಸರಕಾರಿ ಶಾಲಾ ಶಿಕ್ಷಕ, ಕೋಡಿಂಬಾಳ ನಿವಾಸಿ ತೀರ್ಥೇಶ್ ಪಡೆಜ್ಜಾರ್ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಕುಟ್ರಾ ಪ್ಪಾಡಿಯ ಹೊಸ್ಮಠದಲ್ಲಿ ಗ್ರಾಮ ಪಂಚಾಯತ್‌ಗೆ ಸೇರಿದ ಕಟ್ಟಡದಲ್ಲಿ ಸ್ಥಳೀಯರಾದ ಸುಗುಣಾ ದೇವಯ್ಯ ಹಾಗೂ ಜಯಶ್ರೀ ಅವರು ನಡೆಸುತ್ತಿದ್ದ ಟೈಲರಿಂಗ್ ಮತ್ತು ಫ್ಯಾನ್ಸಿ ಅಂಗಡಿ ಬೆಂಕಿಗಾಹುತಿಯಾಗಿತ್ತು. ಆ ಕುರಿತು ತೀರ್ಥೇಶ್ ಪಡೆಜ್ಜಾರ್ ವಿರುದ್ಧ ಶಂಕೆ ವ್ಯಕ್ತಪಡಿಸಿ ಕಡಬ ಪೊಲೀಸರಿಗೆ ದೂರು ನೀಡಲಾಗಿತ್ತು.
ತೀರ್ಥೇಶ್ ಈ ಹಿಂದೆ ಕುಟ್ರಾ ಪ್ಪಾಡಿ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ನೇಲ್ಯಡ್ಕ ಶಾಲೆಯಲ್ಲಿದ್ದಾರೆ. ಅವರು ಕುಟ್ರಾ ಪ್ಪಾಡಿ ಶಾಲೆಯಲ್ಲಿದ್ದಾಗ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಯಾಗಿದ್ದ ಸುಗುಣಾ ದೇವಯ್ಯ ಅವರು ತೀರ್ಥೇಶ್ ವಿರುದ್ಧ ಶಾಲೆಗೆ ಸಂಬಂ ಧಿಸಿ ವಿವಿಧ ಅರೋಪಗಳನ್ನು ಹೊರಿಸಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಇದರಿಂದಾಗಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅದೇ ದ್ವೇಷದಿಂದ ತೀರ್ಥೇಶ್ ಅಂಗಡಿ ಕೊಠಡಿಗೆ ಬೆಂಕಿ ಹಚ್ಚಿರಬಹುದು ಎಂದು ಸುಗುಣಾ ದೂರಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುಳ್ಳು ದೂರು: ತೀರ್ಥೇಶ್
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ತೀರ್ಥೇಶ್, ಹಳೆ ದ್ವೇಷದಿಂದ ಸುಗುಣಾ ದೇವಯ್ಯ ನನ್ನ ಮೇಲೆ ಸುಳ್ಳು ದೂರು ನೀಡಿ ಕಿರುಕುಳ ನೀಡುತ್ತಿದ್ದಾರೆ. ನಾನು ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡಿದ್ದೇನೆ. ನನ್ನನ್ನು ಈ ಹಿಂದೆಯೇ ಪೊಲೀಸರು ವಿಚಾರಣೆ ನಡೆಸಿದ್ದು, ನಾನು ನಿರಪರಾಧಿ ಎನ್ನುವುದು ಪೊಲೀಸರಿಗೆ ಮನವರಿಕೆಯಾಗಿತ್ತು. ಈಗ ದೂರುದಾರರ ಒತ್ತಡಕ್ಕೆ ಮಣಿದಿರುವ ಪೊಲೀಸರು ನನ್ನ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿಗಳ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಲಿದ್ದೇನೆ. ಜತೆಗೆ ನ್ಯಾಯ ಒದಗಿಸಿಕೊಡುವಂತೆ ಕಾರಣಿಕ ಕ್ಷೇತ್ರಕ್ಕೂ ಹರಕೆ ಹೇಳಿಕೊಂಡಿ ದ್ದೇನೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.