ಸೈನಿಕನ ಪುತ್ರಿಗೆ ಪ್ರಥಮ ರ‍್ಯಾಂಕ್, ಐದು ಚಿನ್ನ ದ ಪದಕ
Team Udayavani, Jan 19, 2018, 4:40 PM IST
ಸುಳ್ಯ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 202 ಕಾಲೇಜುಗಳ ಬಿ.ಇ. ಪರೀಕ್ಷೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಹಾಗೂ ಐದು ಚಿನ್ನದ ಪದಕ ಗಳಿಸುವ ಜತೆಗೆ, ಕೆವಿಜಿ ಚಿನ್ನದ ಪದಕಕ್ಕೂ ಭಾಗಿಯಾದ ಸುಳ್ಯದ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ
ವಿದ್ಯಾರ್ಥಿನಿ, ಅಜ್ಜಾವರ ಗ್ರಾಮದ ಕಾಂತಮಂಗಲ ಶಶಿಧರ್ ಕೇಕುಣ್ಣಾಯ ಮತ್ತು ಕವಿತಾ ಶಶಿಧರ್ ಅವರ ಪುತ್ರಿ ಅರ್ಪಿತಾ ಕೆ.ಎಸ್. ಅವರಿಗೆ ಸಾಧನೆಯ ಖುಷಿ, ಇನ್ನಷ್ಟು ಸಾಧಿಸುವ ಹಂಬಲ.
ಪ್ರಥಮ ರ‍್ಯಾಂಕ್ ಬಂದಿದೆ, ಏನನ್ನಿಸಿತ್ತು?
ತುಂಬಾ ಖುಷಿ ಆಯಿತು. ಹೆತ್ತವರು, ಉಪನ್ಯಾಸಕರು, ಸ್ನೇಹಿತರು, ಕಾಲೇಜಿನ ಬಳಗ, ಕುಟುಂಬಸ್ಥರ ಪ್ರೋತ್ಸಾಹ ಹಾಗೂ ಸಹಕಾರದಿಂದ ಇದು ಸಾಧ್ಯವಾಯಿತು. ಇನ್ನೊಂದು ಪ್ರಮುಖ ಗುರಿ ಇದೆ. ಅದನ್ನು ಸಾಧಿಸಲು ಇದು ಸ್ಫೂರ್ತಿ ಎಂದು ಭಾವಿಸಿದ್ದೇನೆ.
ರ‍್ಯಾಂಕ್ ಬರಬಹುದೆಂಬ ನಿರೀಕ್ಷೆ ಇತ್ತಾ?
ದ್ವಿತೀಯ ಸೆಮಿಸ್ಟರ್‌ನಿಂದ ನನ್ನ ಅಂಕ ಹಾಗೂ ವಿ.ವಿ. ವ್ಯಾಪ್ತಿಯ ಇತರ ವಿದ್ಯಾರ್ಥಿಗಳ ಅಂಕಗಳನ್ನು ತಂದೆ ದಾಖಲು ಮಾಡಿಕೊಳ್ಳುತ್ತಿದ್ದರು. ಅದರ ಆಧಾರದಲ್ಲಿ ರ‍್ಯಾಂಕ್ ಬರಬಹುದು ಎಂಬ ಆಶಾಭಾವನೆ ಇತ್ತು. ಅಂತಿಮ ಫಲಿತಾಂಶ ಬಂದಾಗ, ಅದು ಇನ್ನಷ್ಟು ಖಾತರಿ ಆಗಿತ್ತು. ಆದರೆ ಇವೆಲ್ಲವೂ ನಮ್ಮ ಲೆಕ್ಕಾಚಾರವಷ್ಟೇ ಆಗಿದ್ದ ಕಾರಣ, ಅಧಿಕೃತ ಆಗಿರಲಿಲ್ಲ. ರ‍್ಯಾಂಕ್ಘೋಷಣೆಯಾದಾಗ ನಿರೀಕ್ಷೆ ನಿಜವಾಯಿತು.
ರ‍್ಯಾಂಕ್ ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದಿರಾ?
ಖಂಡಿತ ಇಲ್ಲ. ಮೊದಲ ಸೆಮಿಸ್ಟರ್‌ನಲ್ಲಿ ಶೇ. 81 ಅಂಕ ಸಿಕ್ಕಿತ್ತು. ದ್ವಿತೀಯ ಸೆಮಿಸ್ಟರ್ ಬಳಿಕ ಶೇ. 90ಕ್ಕಿಂತ ಜಾಸ್ತಿ
ಅಂಕಗಳು ಬಂದವು. ಆಗ ಕೆಲವರು, ಕಾಲೇಜಿಗೆ ರ‍್ಯಾಂಕ್ ತಂದುಕೊಡು ಎಂದು ಹೇಳಿದ್ದುಂಟು. ಕುಟುಂಬ ಸದಸ್ಯರು, ಕಾಲೇಜಿನ ಉಪನ್ಯಾಸಕರು ರ‍್ಯಾಂಕ್ ಪಡೆಯಲು ಅವಕಾಶವಿದೆ ಎಂದಿದ್ದರು. ಆದರೆ ರ‍್ಯಾಂಕ್ ಗಿಂತ
ಜ್ಞಾನ ಸಂಪಾದನೆಯೇ ನನ್ನ ಓದಿನ ಉದ್ದೇಶವಾಗಿತ್ತು. ನಾನು ಓದಿದ್ದೇನೆ. ಅಂಕವೂ ಸಿಕ್ಕಿತ್ತು. ಅದರ ಮೇಲೆ ರ‍್ಯಾಂಕ್ ಬಂದಿದೆ ಹೊರತು ಇನ್ನೇನೂ ಇಲ್ಲ. ದಿನ ನಿತ್ಯದ ತಯಾರಿ ಎಂಬ ವಿಶೇಷ ಅಭ್ಯಾಸ ಏನೂ ಮಾಡಿಲ್ಲ. ವರ್ಷದ ಕೊನೆಯ ಒಂದು ತಿಂಗಳು ರಜೆ ಇತ್ತು. ಆವಾಗ ಕಲಿಕೆಯ ಕಡೆ ಹೆಚ್ಚು ಗಮನ ವಹಿಸಿದ್ದೆ. ತರಗತಿ ಅವಧಿಯಲ್ಲಿ ಗಮನವಿಟ್ಟು ಕೇಳಿ ಮನನ ಮಾಡಿಕೊಳ್ಳುತ್ತಿದ್ದೆ. ಲ್ಯಾಬ್‌ಗೆ ತಪ್ಪದೇ ಹಾಜರಾಗುತ್ತಿದ್ದೆ.
ಮನೆಯಲ್ಲಿ ಓದಿಗೆ ಪೂರಕ ವಾತಾವರಣ ಹೇಗಿತ್ತು?
ನಮ್ಮದು ಅವಿಭಕ್ತ ಕುಟುಂಬ. ಅಜ್ಜಾವರ ಕಾಂತಮಂಗಲದಲ್ಲಿ ಮನೆ. ಕೃಷಿ ಕುಟುಂಬ. ಅಪ್ಪ ಸೈನ್ಯದಲ್ಲಿ ಸೇವೆ ಸಲ್ಲಿಸಿ ಈಗ ಸುಳ್ಯದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದಾರೆ. ಅಮ್ಮ ಗೃಹಿಣಿ. ತಂಗಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಮನೆಯಲ್ಲಿ ಕಲಿಕೆಗೆ ಸಂಬಂಧಿಸಿ ಯಾವುದೇ ಒತ್ತಡ ಇರಲಿಲ್ಲ. ಒತ್ತಡ ರಹಿತ ಓದು ನನ್ನ ಯಶಸ್ಸಿಗೆ ಕಾರಣ. ಕುಟುಂಬದ ಸದಸ್ಯರು, ಸ್ನೇಹಿತರು ತುಂಬ ಸಹಕಾರ ನೀಡಿದ್ದಾರೆ.
ಪ್ರೌಢಶಾಲೆ, ಪಿಯುಸಿಯಲ್ಲಿ ನಿಮ್ಮ ಸಾಧನೆ ಹೇಗಿತ್ತು?
ನಾನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸೈಂಟ್ ಜೋಸೆಪ್ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಅಂಬಿಕಾ ಪ.ಪೂ. ಕಾಲೇಜಿನಲ್ಲಿ, ಎಂಜಿನಿಯರಿಂಗ್ ಪದವಿಯನ್ನು ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿದ್ದೇನೆ. ಎಸೆಸೆಲ್ಸಿಯಲ್ಲಿ ಶೇ. 94.6, ಪಿಯುಸಿಯಲ್ಲಿ ಶೇ. 94.8 ಅಂಕ ಗಳಿಸಿ ಟಾಪ್ 5ರೊಳಗೆ ಗುರುತಿಸಿಕೊಂಡಿದ್ದೆ.
ಪಠ್ಯತೇರ ಚಟುವಟಿಕೆಯಲ್ಲಿ ಅಭಿರುಚಿ ಇದೆಯೇ? ಇತರ ಹವ್ಯಾಸಗಳೇನು?
ಹವ್ಯಾಸಗಳೆಂದರೆ ಪೇಪರ್ ಕ್ರಾಫ್ಟ್, ಹಾಡುವುದು ಇತ್ಯಾದಿ. ಕ್ರಾಫ್ಟಿಂಗ್‌ನಲ್ಲಿ ಹೆಚ್ಚು ಆಸಕ್ತಿ. ಅನುಪಯುಕ್ತ ಎಂದು
ಬಿಸಾಡುವ ವಸ್ತುಗಳನ್ನು ಸಂಗ್ರಹಿಸಿ, ಅದರಿಂದ ಪರಿಕರ ತಯಾರಿಸುತ್ತೇನೆ. ಜಿಲ್ಲಾ ಮಟ್ಟದ ಆಂಗ್ಲ ಭಾಷಣದಲ್ಲಿ ಪ್ರಥಮ ಬಹುಮಾನ ಸಿಕ್ಕಿತ್ತು.
ಮುಂದೇನು ಮಾಡುವಿರಿ?
ಈಗ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಯುಪಿಎಸ್ಸಿ ಪರೀಕ್ಷೆ ಬರೆಯುವ ಗುರಿ ಇದೆ. 2019ನಲ್ಲಿ ಪರೀಕ್ಷೆ ಬರೆಯುವ ತೀರ್ಮಾನ ಮಾಡಿದ್ದೇನೆ. ಅದಕ್ಕಾಗಿ ತಯಾರಿಯಲ್ಲಿದ್ದೇನೆ.
ಎಂಜಿನಿಯರಿಂಗ್ ಪದವಿಯಿಂದ ಭವಿಷ್ಯ ಉಜ್ವಲವಾಗಿದೆಯೇ?
ಜಗತ್ತು ತಂತ್ರಜ್ಞಾನ ಬಳಕೆಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಇದಕ್ಕೆಲ್ಲ ಎಂಜಿನಿಯರ್‌ಗಳ ಬೇಡಿಕೆ ಇದೆ. ಸಾಫ್ಟ್ವೇರ್, ಆ್ಯಪ್ ಅಭಿವೃದ್ಧಿ, ಅಪ್ಲಿಕೇಶನ್ ತಯಾರಿಗೆ ಕಂಪ್ಯೂಟರ್ ಸೈನ್ಸ್ ಮತ್ತಿತರ ಎಂಜಿನಿಯರಿಂಗ್ ಕೋರ್ಸ್‌ಗಳ ಅಗತ್ಯವಿದೆ. ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ಕಲಿಕೆಯ ಅವಧಿಯಲ್ಲೇ ಸಿಗುತ್ತದೆ.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏನು ಹೇಳಲು ಬಯಸುವಿರಿ?
ಥಿಯರಿಗಿಂತಲೂ, ಪ್ರಾಕ್ಟಿಕಲ್ ಗೆ ಆದ್ಯತೆ ಕೊಡಬೇಕು. ಪ್ರಾಯೋಗಿಕ ಜ್ಞಾನವಿದ್ದರೆ ಉದ್ಯೋಗ ಕ್ಷೇತ್ರದಲ್ಲಿ ಅನುಕೂಲ. ನಾವು ಓದಿದ್ದರ ಪ್ರಯೋಜನ ಔದ್ಯೋಗಿಕ ಕ್ಷೇತ್ರದಲ್ಲಿ ಆಗಬೇಕು. ಉತ್ತಮ ಜ್ಞಾನ, ಟ್ಯಾಲೆಂಟ್ ಇದ್ದರೆ ಅವಕಾಶಕ್ಕೆ ಕೊರತೆಯಿಲ್ಲ. ಪಠ್ಯೇತರ ಚಟುವಟಿಕೆ ಇದಕ್ಕೆ ಪೂರಕವಾಗುತ್ತದೆ. ಅನುಮಾನಗಳಿದ್ದಲ್ಲಿ ಉಪನ್ಯಾಸಕರನ್ನು
ಕೇಳಿ ಬಗೆಹರಿಸಿಕೊಳ್ಳಬೇಕು.
ಐದು ಚಿನ್ನದ ಪದಕ ಸಿಕ್ಕ ಬಗ್ಗೆ ಏನು ಹೇಳುವಿರಿ?
ಇದೊಂದು ಅನಿರೀಕ್ಷಿತ ಘಟ್ಟ. ವಿ.ವಿಯಲ್ಲಿ ಘೋಷಿತ (ಸ್ಪಾನ್ಸರ್) ಪದಕಗಳು ಇರುತ್ತವೆ. ವಿಟಿಯು ವತಿಯಿಂದ ಒಂದು ಪದಕವಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದವರಿಗೆ ಆರ್.ಎನ್. ಶೆಟ್ಟಿ ಪದಕ, ಅಂತಿಮ ತರಗತಿಯ ಅಗ್ರಸ್ಥಾನಕ್ಕೆ ಕುಮಾರಸ್ವಾಮಿ ಮೆಮೋರಿಯಲ್ ಪದಕ ನೀಡಲಾಗುತ್ತದೆ. ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿಗೆ ಈ ಹಿಂದೆ ರ‍್ಯಾಂಕ್ ಬಂದಿತ್ತು. ಆದರೆ ಐದು ಚಿನ್ನದ ಪದಕ ಬಂದಿರುವುದು ಇದೇ ಮೊದಲು.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
Bantwal: ಬೀದಿ ಬದಿ ವ್ಯಾಪಾರ ಸ್ಥಳಾಂತರ
Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಛಲವಾದಿ ನಾರಾಯಣಸ್ವಾಮಿ ಕುಟುಂಬ ಭೇಟಿ
Uppinangady:ಪ್ರಿ ವೆಡ್ಡಿಂಗ್ ಶೂಟಿಂಗ್‌ಗೆ ತೆರಳುತ್ತಿದ್ದಾಗ ಅಪಘಾತ:ಭಾವಿ ವಧು-ವರರಿಗೆ ಗಾಯ
Sullia: ಬಿದ್ದು ಸಿಕ್ಕಿದ್ದ ಚಿನ್ನದ ಸರವನ್ನು ಹಿಂದಿರುಗಿಸಿದ ಬಸ್ ಮಾಲಕರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.