ಉಭಯ ಜಿಲ್ಲೆ: 3,237 ಕೋ.ರೂ. ಮೀನುಗಾರಿಕೆ
Team Udayavani, May 26, 2018, 5:12 AM IST
ಮಂಗಳೂರು: ಕರಾವಳಿಯಲ್ಲಿ ಒಂದು ಕಡೆ ಮುಂಗಾರು ಪ್ರವೇಶಕ್ಕೆ ತಾಲೀಮು ಶುರುವಾಗಿರಬೇಕಾದರೆ ಇನ್ನೊಂದೆಡೆ ಮೀನುಗಾರರು ಈ ಋತುವಿನ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ತಮ್ಮ ಬೋಟುಗಳನ್ನು ದಡ ಸೇರಿಸಿ ಲಂಗರು ಹಾಕುವತ್ತ ಕಾರ್ಯಪ್ರವೃತ್ತರಾಗಿದ್ದಾರೆ. ಹೀಗಿರುವಾಗ ಈ ಋತುವಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೀನುಗಾರರು ಹಿಡಿದಿರುವ ಮೀನುಗಳ ಮೊತ್ತ ಒಟ್ಟು ಮೊತ್ತ 3,237 ಕೋಟಿ ರೂ.
ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ, ಅಂದರೆ ಜೂನ್ 1ರಿಂದ ಜುಲೈ 31ರ ವರೆಗೆ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಹೀಗಾಗಿ ಈ ಋತುವಿನ ಮೀನುಗಾರಿಕೆ ಬಹುತೇಕ ಮುಕ್ತಾಯದ ಹಂತ ತಲುಪಿದೆ. ‘ಉದಯವಾಣಿ’ಗೆ ಲಭಿಸಿರುವ ಮಾಹಿತಿಯಂತೆ 2017 ಎಪ್ರಿಲ್‌ನಿಂದ 2018 ಮಾರ್ಚ್‌ವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 3,237 ಕೋ.ರೂ.ಮೌಲ್ಯದ 2,92,061 ಟನ್ ಮೀನು ಹಿಡಿಯಲಾಗಿದೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ 1,656.99 ಕೋ.ರೂ ಮೌಲ್ಯದ 1,63,925 ಟನ್ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (1582.90 ಕೋ.ರೂ ಮೌಲ್ಯದ 1,52,573 ಟನ್) ಈ ಬಾರಿ 11,352 ಟನ್‌ನಷ್ಟು ಅಧಿಕ ಮೀನು ಲಭ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ವರೆಗೆ 1,580.00 ಕೋ.ರೂ. ಮೌಲ್ಯದ 1,28,136 ಟನ್ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (1456.64 ಕೋ.ರೂ. ಮೌಲ್ಯದ 1,44,525 ಟನ್) 16,389 ಟನ್‌ನಷ್ಟು ಕಡಿಮೆ ಮೀನು ಲಭ್ಯವಾಗಿದೆ. 2015-16ರಲ್ಲಿ ದ.ಕ ಜಿಲ್ಲೆಯಲ್ಲಿ 1 ,370.53 ಕೋ.ರೂ. ಮೌಲ್ಯದ 1,51,458 ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 1,463.66 ಕೋ.ರೂ. ಮೌಲ್ಯದ 1,51,099 ಟನ್ ಮೀನು ಹಿಡಿಯಲಾಗಿದೆ. ಅಂದರೆ, ಕಳೆದ ಎರಡು ಋತುವಿಗೆ ಹೋಲಿಸಿದರೆ ಈ ಬಾರಿ ಮೀನಿನ ಲಭ್ಯತೆ ಸ್ವಲ್ಪ ಮಟ್ಟಿಗೆ ಜಾಸ್ತಿಯಿದೆ.
ಬಂಗುಡೆ ಜಾಸ್ತಿ – ಬೂತಾಯಿ ಕಡಿಮೆ!
ಈ ವರ್ಷದ ಮೀನುಗಾರಿಕಾ ಋತುವಿನಲ್ಲಿಯೂ ‘ಬಂಗುಡೆ’ ಲಭ್ಯತೆ ಅಧಿಕವಿತ್ತು. ‘ಬೂತಾಯಿ’ ಕೊಂಚ ಕಡಿಮೆ ಎಂದು ಮೀನುಗಾರರು ಅಭಿಪ್ರಾಯಪಡುತ್ತಾರೆ. ಉಳಿದಂತೆ ‘ಮದ್ಮಾಲ್’, ‘ಅರಣೆ’, ‘ಅಂಜಲ್’, ‘ಕೊಡ್ಡಾಯಿ’, ‘ಮುರು ಮೀನು’ ಬೊಂಡಾಸ್ ಅಧಿಕ ಎನ್ನುತ್ತಾರೆ ಮೀನುಗಾರರು. ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಂದರ್ಭ ನಾಡದೋಣಿಗಳು ಮೀನು ಬೇಟೆಗೆ ಇಳಿಯುತ್ತವೆ. ದೋಣಿ -ಬಲೆಯೊಂದಿಗೆ ಕಡಲಿಗೆ ಇಳಿಯುವ ಇವರು 10 ಅಶ್ವಶಕ್ತಿಯ ಎಂಜಿನ್ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ ಹಾಗೂ ನದಿಗಳಲ್ಲಿ ಜೂನ್ 1ರಿಂದ ಮೀನುಗಾರಿಕೆ ನಡೆಸುತ್ತಾರೆ. ಮೀನುಗಾರಿಕೆ ರಜೆ ಘೋಷಿಸಿದ ಸಂದರ್ಭದಲ್ಲಿ ಮೀನುಗಾರರು ಬೋಟ್ ರಿಪೇರಿ, ಬಲೆ ನೇಯುವುದು ಮತ್ತಿತರ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.
5 ರಾಜ್ಯಗಳಲ್ಲಿ ಒಂದೇ ಅವಧಿಯ ರಜೆ
ಪಶ್ಚಿಮ ಕರಾವಳಿಯಲ್ಲಿ 2015ಕ್ಕಿಂತ ಹಿಂದೆ 57 ದಿನ (ಜೂ. 15ರಿಂದ ಆ.10) ಮೀನುಗಾರಿಕೆ ನಿಷೇಧವಿತ್ತು. ಆದರೆ ಮತ್ಸ್ಯಕ್ಷಾಮ ನೀಗಿಸುವ ಉದ್ದೇಶದಿಂದ 2015ರಲ್ಲಿ ಕೇಂದ್ರ ಸರಕಾರ ಪಶ್ಚಿಮ ಕರಾವಳಿಗೆ ಏಕರೂಪದಲ್ಲಿ 61 ದಿನಗಳ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ. ಅದರಂತೆ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಷೇಧವಿದೆ.
ಬೋಟು ಬಂದರೆ ತಂಗುವುದು ಎಲ್ಲಿ ?
ಮಂಗಳೂರು ಮೀನುಗಾರಿಕೆ ದಕ್ಕೆಗೆ ಒಳಪಟ್ಟಂತೆ ಮೋಟರೀಕೃತ ನಾಡದೋಣಿ, ಯಾಂತ್ರೀಕೃತ ದೋಣಿ ಸಹಿತ ಸುಮಾರು 2,000ಕ್ಕೂ ಅಧಿಕ ದೋಣಿಗಳು ಇವೆ. ಈಗ ಇರುವ ಮಂಗಳೂರು ದಕ್ಕೆ 600 ಮೀಟರ್ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಕ್ರಮಪ್ರಕಾರವಾಗಿ ಹೆಚ್ಚಾ ಕಡಿಮೆ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶವಿದೆ. ಉಳಿದಂತೆ ಎಲ್ಲ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಒಂದರ ಹಿಂದೆ ಇನ್ನೊಂದರಂತೆ 7 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ ಇಲ್ಲಿದೆ. ಮರದ ಹಾಗೂ ಸ್ಟೀಲ್‌ಬೋಟುಗಳು ಇದರಲ್ಲಿ ಇರುವುದರಿಂದ ಬಹಳಷ್ಟು ಬಾರಿ ಬೋಟುಗಳು ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತಿವೆ. ಇದರ ದುರಸ್ತಿಗಾಗಿ ಸಾವಿರಾರು ರೂಪಾಯಿಗಳನ್ನು ಬೋಟು ಮಾಲಕರು ವೆಚ್ಚ ಮಾಡಬೇಕಾತ್ತದೆೆ. 7 ಸಾಲುಗಳಲ್ಲಿ ನಿಂತ ಬಳಿಕವೂ ಬಹಳಷ್ಟು ಬೋಟುಗಳು ಸ್ಥಳವಾಕಾಶವನ್ನು ಹುಡುಕಿಕೊಂಡು ಇತರ ಕಡೆಗಳಿಗೆ ಸಾಗುತ್ತವೆ. ಕಸ್ಬಾ ಬೆಂಗ್ರೆ, ಬೋಳೂರು, ಕುದ್ರೋಳಿ ಬೊಕ್ಕಪಟ್ಣ ಮುಂತಾದ ಕಡೆ ನಿಲ್ಲುವ ಸಂದರ್ಭ ಎದುರಾಗಿದೆ.
ಯಾಕಾಗಿ ಮೀನುಗಾರಿಕೆ ನಿಷೇಧ?
ಮೀನುಗಳು ಸಂತಾನೋತ್ಪತ್ತಿ ಮಾಡುವ ಅವಧಿ ಮಳೆಗಾಲ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗೆ ಇಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ. ಇದರಿಂದ ಮತ್ಸ éಸಂಕುಲಕ್ಕೆ ಹೊಡೆತ ಬೀಳಲಿದೆ. ಪರಿಣಾಮವಾಗಿ ಮೀನುಗಾರರಿಗೆ ನಷ್ಟ ಉಂಟಾಗುತ್ತದೆ. ಜತೆಗೆ ಈ ಸಮಯದಲ್ಲಿ ವಿಪರೀತ ಗಾಳಿ-ಮಳೆ ಇರುವುದರಿಂದ ದೊಡ್ಡ ದೊಡ್ಡ ಪ್ರಮಾಣದ ಅಲೆಗಳ ಸಾಧ್ಯತೆ ಇರುವುದರಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಗಾಲದ ಸಮಯ ಮೀನುಗಾರಿಕೆ ನಿಷೇಧ ನಿಯಮ ಜಾರಿಯಲ್ಲಿದೆ.
— ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.