ಪೆರ್ನೆ ಅನಿಲ ದುರಂತಕ್ಕೆ ಐದು ವರ್ಷ
Team Udayavani, Apr 9, 2018, 6:00 AM IST
ಸುಳ್ಯ: ಹನ್ನೊಂದು ಮಂದಿಯ ಜೀವ ಬಲಿ ತೆಗೆದುಕೊಂಡ ಭೀಕರ ಪೆರ್ನೆ ಅನಿಲ ದುರಂತಕ್ಕೆ ಐದು ವರ್ಷ ತುಂಬಿದೆ. ದುರ್ಘಟನೆಯಿಂದ ಸಂತ್ರಸ್ತರಾದ ಹಲವು ಕುಟುಂಬಗಳು ಊರನ್ನೇ ತೊರೆದರೆ, ಮಿಕ್ಕವರ ಭೂಮಿಯನ್ನು ಚತುಷ್ಪಥ ರಸ್ತೆ ಸೀಳಿಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ 2013ರ ಎಪ್ರಿಲ್ 9ರಂದು ಗ್ಯಾಸ್ ಟ್ಯಾಂಕರ್ ಅನಿಲ ದುರಂತ ಸಂಭವಿಸಿ ಈ ಎಪ್ರಿಲ್ 9ಕ್ಕೆ ಭರ್ತಿ ಐದು ವರ್ಷ. ದುರಂತ ನಡೆದ ಸ್ಥಳದಲ್ಲಿದ್ದ ಸಂತ್ರಸ್ತರ ಮನೆಗಳು ಈಗಿಲ್ಲ. ಬದುಕುಳಿದವರು ಊರೇ ಬಿಟ್ಟು ಹೋಗಿದ್ದಾರೆ. ಉಳಿದವರ ಭೂಮಿ ರಸ್ತೆ ಪಾಲಾಗಿದೆ. ದುರ್ಘಟನೆಯ ಸಣ್ಣ ಕುರುಹು ಕೂಡ ಇಂದು ಉಳಿದಿಲ್ಲ; ಆದರೆ ಪೆರ್ನೆಯಲ್ಲಿ ಕರಾಳ ನೆನಪು ಮಾಸಿಲ್ಲ.
ಘಟನೆ ವಿವರ
ತಮಿಳುನಾಡು ಮೂಲದ ಸೆಲ್ವರಸು ಚಲಾಯಿಸಿಕೊಂಡು ಬರುತ್ತಿದ್ದ ಅನಿಲ ತುಂಬಿದ ಬುಲೆಟ್ ಟ್ಯಾಂಕರ್ ಮಾಣಿ -ಉಪ್ಪಿನಂಗಡಿ ರಸ್ತೆಯ ಪೆರ್ನೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೆಳಗ್ಗೆ 9.30ರ ಹೊತ್ತಿಗೆ ಉರುಳಿ ಬಿತ್ತು. ಅನಂತರದ್ದು ಊರಿಗೇ ಬೆಂಕಿ ಬಿದ್ದ ಕಥೆ. ಟ್ಯಾಂಕರ್ ಒಳಗಿನಿಂದ ದ್ರವರೂಪದಲ್ಲಿರುವ ಅನಿಲ ಬಿಳಿ ನೊರೆಯ ರೂಪದಲ್ಲಿ ಊರನ್ನೇ ಆವರಿಸುತ್ತಿದ್ದಂತೆ ಭಗ್ಗನೆ ಬೆಂಕಿ ಹಿಡಿಯಿತು, ಸ್ಫೋಟವೂ ಸಂಭವಿಸಿತ್ತು. ಮುಂದಿನ ಆರು ತಾಸು ಊರು ಬೆಂಕಿ ಕೆನ್ನಾಲಿಗೆಯ ತೆಕ್ಕೆಯೊಳಗೆ ಸಿಲುಕಿ ಕರಟಿ ಹೋಯಿತು. ಆರು ಮಂದಿ ಸಜೀವ ದಹನವಾದರೆ, ಐವರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದರು. ಆರು ಮನೆ, ಎರಡು ಅಂಗಡಿ, ಒಂದು ಗ್ಯಾರೇಜು, ಒಂದು ಟೆಂಪೋ, ಒಂದು ಕಾರು, ಒಂದು ಮೊಪೆಡ್, ಎರಡು ಬೈಕ್‌ಗಳು, ಒಂದು ಸ್ಕೂಟರ್, ನಾಲ್ಕು ಅಡಿಕೆ ಮತ್ತು ತೆಂಗಿನ ತೋಟಗಳು ಕ್ಷಣ ಮಾತ್ರದಲ್ಲಿ ಭಸ್ಮವಾಗಿದ್ದವು. ಪೆರ್ನೆ ನಿವಾಸಿಗಳಾದ ಶೋಭಾ ರೈ (35), ಗುರುವಪ್ಪ (30), ಚಿತೇಶ (2), ವನಿತಾ (38), ಸುನಿಲ್ (6), ಖತೀಜಮ್ಮ (40), ವಸಂತ (32), ಇಂದಿರಾ ರೈ (50), ಹಜೀಮಾ (40) ಮತ್ತು ಟ್ಯಾಂಕರ್ ಚಾಲಕ ಸೆಲ್ವರಸು ದುರಂತದಲ್ಲಿ ಮಡಿದ ದುರ್ದೈವಿಗಳು.
ಊರನ್ನೇ ತೊರೆದರು!
ದುರಂತದ ದಿನ ರಿಕ್ಷಾ ಚಾಲಕ ಸುಂದರ ರೈ ಅವರು ಬಾಡಿಗೆ ಹೋಗಿದ್ದರು. ಮರಳಿ ಬರುವಾಗ ಪತ್ನಿ, ಮನೆ, ತೋಟ ಎಲ್ಲವೂ ಭಸ್ಮವಾಗಿತ್ತು. ದುರಂತದ ಬಳಿಕ ಊರು ತ್ಯಜಿಸಿದ ಅವರು ಮಂಗಳೂರಿನಲ್ಲಿರುವ ಮಗಳ ಮನೆಯಲ್ಲಿದ್ದಾರೆ. ಬಟ್ಟೆ ಒಗೆಯುತ್ತಿದ್ದ ವೇಳೆ ಬೆಂಕಿ ಅಟ್ಟಿಸಿಕೊಂಡು ಬಂದು ಶೋಭಾ ರೈ ಬಲಿಯಾದ ಅನಂತರ ಅವರ ಪತಿ ಶಂಕರ ರೈ ತನ್ನಿಬ್ಬರು ಹೆಣ್ಣುಮಕ್ಕಳ ಜತೆ ಪೆರ್ನೆಯ ಮಾಣಿಯಲ್ಲಿ ವಾಸವಾಗಿದ್ದಾರೆ. ಇನ್ನೋರ್ವ ಕೂಲಿ ಕಾರ್ಮಿಕ ನಾರಾಯಣ ನಾಯ್ಕ ಅವರ ಪತ್ನಿ ಮತ್ತು ಮಗ ಮನೆಯೊಳಗೆ ಬೆಂಕಿಗೆ ಆಹುತಿಯಾಗಿದ್ದರು. ಸಣ್ಣ ಮನೆ ಸುಟ್ಟು ಹೋಗಿತ್ತು. ನಾರಾಯಣ ನಾಯ್ಕ ಊರು ಬಿಟ್ಟು ಮಂಗಳೂರಿನ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದಾರೆ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಅವಿವಾಹಿತ ಗುರುವಪ್ಪ ಸಾವನ್ನಪ್ಪಿದ ಬಳಿಕ ಅವರ ಕುಟುಂಬದ ಆಧಾರ ಸ್ಥಂಭ ಕಳಚಿದೆ. ಆ ಕುಟುಂಬ ಪಕ್ಕದೂರಿನಲ್ಲಿ ಜೀವನ ನಿರ್ವಹಿಸುತ್ತಿರುವ ಮಾಹಿತಿ ಇದೆ.
ತಾಯಿಯನ್ನು ಕಳೆದುಕೊಂಡರು
ಘಟನೆಯಲ್ಲಿ ಸಂತ್ರಸ್ತ 14 ಕುಟುಂಬಗಳಲ್ಲಿ ಖತೀಜಮ್ಮ ಅವರ ಕುಟುಂಬವೂ ಒಂದು. ಐವರು ಮಕ್ಕಳೊಂದಿಗೆ ವಾಸವಾಗಿದ್ದ ಖತೀಜಮ್ಮ ಅನಿಲ ದುರಂತಕ್ಕೆ ಬಲಿಯಾದರು. ಹಿರಿಮಗಳು ಎಸೆಸೆಲ್ಸಿ ಪರೀಕ್ಷೆ ಬರೆದು ಮರಳಿ ಬಂದಾಗ ಎದುರಾದದ್ದು ತಾಯಿ ಸುಟ್ಟು ಹೋದ ಸುದ್ದಿ. ತಂದೆ ಇಲ್ಲದ ಐವರು ಮಕ್ಕಳಿಗೆ ತಾಯಿಯೇ ಆಧಾರ ಆಗಿದ್ದರು. ಅಮ್ಮನ ಅಗಲಿಕೆಯಿಂದ ಮಕ್ಕಳು ಅನಾಥರಾದರು. ಖತೀಜಮ್ಮ ಅವರ ಐವರು ಮಕ್ಕಳಾದ ಮಮ್ತಾಜ್, ಸಲೀಂ, ಮುಫಿದಾ, ಮುನೀರಾ, ಮೊಬಿದಾ ಅವರಿಗೆ ಚಿಕ್ಕಪ್ಪ ಇಸ್ಮಾಯಿಲ್ ಶಾಫಿ ಅವರ ಮನೆಯೇ ಆಧಾರ. ಆಗ ಎಸೆಸೆಲ್ಸಿ ಓದುತ್ತಿದ್ದ ಹಿರಿ ಮಗಳು ಮಮ್ತಾಜ್ ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಮಕ್ಕಳಿಗಾಗಿ ಸಮೀಪದಲ್ಲಿ ಇವರಿಗೆಂದು ಹೊಸ ಮನೆ ಕಟ್ಟಲಾಗಿದೆ. ಮಕ್ಕಳು ಅಲ್ಲಿಗೆ ಸ್ಥಳಾಂತರ ಆಗಬೇಕಷ್ಟೆ.
ಅಂಗಡಿ, ಹೊಟೇಲ್ ಭಸ್ಮ
ಹೆದ್ದಾರಿ ಪಕ್ಕದ ಉಮ್ಮರ್ ಅವರ ಅಂಗಡಿ ಹೊಟೇಲ್, ಇಸ್ಮಾಯಿಲ್ ಶಾಫಿ ಅವರ ಬೀಡಿ ಬ್ರಾಂಚ್, ದಿನಸಿ ಅಂಗಡಿ ಸುಟ್ಟು ಕರಕಲಾಗಿತ್ತು. ಸಿಕ್ಕಿದ ಒಂದಷ್ಟು ಪರಿಹಾರ ಮೊತ್ತದಲ್ಲಿ ಈ ಇಬ್ಬರು ಮತ್ತೆ ವ್ಯವಹಾರ ಆರಂಭಿಸಿದ್ದಾರೆ. ದುರಂತಕ್ಕೆ ಸಿಲುಕಿ ಬದುಕಿ ಉಳಿದ ನೆಫಿಸಾ ಅವರು ತಾಯಿ ಮನೆ ಅಡ್ಯನಡ್ಕ ಸೇರಿದ್ದಾರೆ.
ಪರಿಹಾರ ವಿತರಣೆ
ಮೂರು ಹಂತಗಳಲ್ಲಿ ಸಂತ್ರಸ್ತರಿಗೆ ಪರಿಹಾರ ದೊರೆತಿದೆ. ರಾಜ್ಯ ಸರಕಾರ ತುರ್ತು ಪರಿಹಾರದಡಿ ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಲಾಗಿದೆ. ಉದ್ಯಮಿ ಅಶೋಕ್ ರೈ ನೇತೃತ್ವದಲ್ಲಿ ಸ್ಥಾಪಿಸಿದ ಅನಿಲ ದುರಂತ ಪರಿಹಾರ ನಿಧಿಗೆ ಊರ-ಪರವೂರ ಮಂದಿ ನೀಡಿದ ದೇಣಿಗೆ 11.70 ಲಕ್ಷ ರೂ.ಗಳಲ್ಲಿ ಮೃತರ ಉತ್ತರಾಧಿಕಾರಿಗಳಿಗೆ ತಲಾ 75 ಸಾವಿರ ರೂ., ಮನೆಗಳಿಗೆ 50 ಸಾವಿರ ರೂ., ಅಂಗಡಿಗಳಿಗೆ 25-50 ಸಾವಿರ ರೂ., ಕೃಷಿ ಹಾನಿಗೆ 10-20 ಸಾವಿರ ರೂ.ಗಳಂತೆ ಪಾವತಿಸಲಾಗಿದೆ. ಎಚ್‌ಪಿಸಿಎಲ್ ಸಂಸ್ಥೆ 43.20 ಲ.ರೂ. ಪರಿಹಾರ ನೀಡಿದ್ದು, ಅದನ್ನು ನಷ್ಟ ಅಂದಾಜು ಆಧರಿಸಿ 14 ಸಂತ್ರಸ್ತ ಕುಟುಂಬಕ್ಕೆ ಹಂಚಲಾಗಿದೆ. ಅನಿಲ ಸಾಗಾಟದ ಟ್ಯಾಂಕರ್‌ನ ವಿಮೆ ಪರಿಹಾರದ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಜಾಗ ನಿರಾಕರಣೆ
ಸಂತ್ರಸ್ತ ಕುಟುಂಬಗಳಿಗೆ ಪೆರ್ನೆ ಗ್ರಾಮ ಪಂಚಾಯತ್ ತಲಾ ಐದು ಸೆಂಟ್ಸ್ ಜಮೀನು ಗುರುತಿಸಿ, ಕಡತವನ್ನು ಕಂದಾಯ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಈ ಜಾಗ ಸೂಕ್ತವಾಗಿಲ್ಲ ಎಂದು ಸಂತ್ರಸ್ತರು ಅದನ್ನು ನಿರಾಕರಿಸಿ ಪತ್ರ ನೀಡಿದ್ದರು. ಅನಂತರ ಬೇರೆ ಜಾಗ ಒದಗಿಸುವ ಬಗ್ಗೆ ಪ್ರಸ್ತಾವ ಆಗಿಲ್ಲ.
ರಸ್ತೆ ಸೀಳಿತು!
ದುರಂತದ ಬಳಿಕ ಜಮೀನು ತ್ಯಜಿಸಿ ಪರವೂರಿಗೆ ತೆರಳಿದ ಕುಟುಂಬಗಳ ಭೂಮಿಯನ್ನು ವಿಸ್ತರಣೆಗೊಂಡು ಚತುಷ್ಪಥವಾಗಿರುವ ರಸ್ತೆ ಸೀಳಿಹಾಕಿದೆ. ಅನಿಲ ದುರಂತ ಇನ್ನಷ್ಟು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಿದ ಪೆರ್ನೆ ತಿರುವಿನ ಏಕೈಕ ಗುಡ್ಡ ಚತುಷ್ಪಥ ರಸ್ತೆಗಾಗಿ ಸಮತಟ್ಟಾಗುತ್ತಿದೆ. ರಸ್ತೆಗೆ ಭೂಮಿ ನೀಡಿದವರಿಗೆ ಪರಿಹಾರವೂ ಸಿಕ್ಕಿದೆ. ಈಗ ಘಟನೆ ನಡೆದ ಆ ಪರಿಸರದಲ್ಲಿ ಯಾವ ಕುರುಹುಗಳೂ ಉಳಿದಿಲ್ಲ. ಇನ್ನು ಸ್ವಲ್ಪವೇ ಸಮಯದಲ್ಲಿ ದುರಂತ ಸ್ಥಳದಲ್ಲಿ ನಾಲ್ಕು ಪಥಗಳ ರಾಜರಸ್ತೆ ನಿರ್ಮಾಣ ಆಗಲಿದೆ.
ಭಯಾನಕ ಘಟನೆ
ಅದನ್ನು ನೆನಪಿಸಿಕೊಂಡರೆ ಭಯ ಆಗುತ್ತದೆ. ಅಂಗಡಿ ಎದುರಿನ ರಸ್ತೆಯಲ್ಲಿಯೇ ಗ್ಯಾಸ್ ಟ್ಯಾಂಕರ್ ಬಿದ್ದ ತತ್‌ಕ್ಷಣ ಬೆಂಕಿ ಹಬ್ಬಿತ್ತು. ಜನರೆಲ್ಲ ದಿಕ್ಕಾಪಾಲಾದರು. ನಾನು ಅಂಗಡಿಯಿಂದ ಓಡಿದೆ. ಬೆಂಕಿಯ ಕೆನ್ನಾಲಗೆ ಬೆನ್ನಿಗೆ ಸ್ಪರ್ಶಿಸಿದ ಅನುಭವ ಆಗಿತ್ತು. ಅಂಗಡಿ ಸುಟ್ಟು ಹೋಯಿತು. ಜೀವ ಉಳಿದದ್ದೇ ಪುಣ್ಯ.
– ಇಸ್ಮಾಯಿಲ್ ಶಾಫಿ, ಪೆರ್ನೆ
— ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.