ಮತ್ತೆ ಮಳೆ: ಹೆದ್ದಾರಿಯಲ್ಲಿ ಪ್ರವಾಹ, ಕಾಲನಿಗೆ ನೀರು
Team Udayavani, Aug 10, 2018, 1:40 AM IST
ನೆಲ್ಯಾಡಿ: ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಶಿರಾಡಿ, ಗುಂಡ್ಯ, ಅಡ್ಡಹೊಳೆ, ಉದನೆ, ಎಂಜಿರ, ಲಾವತ್ತಡ್ಕ, ಶಿಶಿಲ, ಪಟ್ರಮೆ, ಕೌಕ್ರಾಡಿ ಗ್ರಾಮಗಳಲ್ಲಿ ಹರಿಯುವ ನದಿಗಳ ನೀರಿನ ಮಟ್ಟ ಗುರುವಾರ ಬೆಳಗ್ಗಿನಿಂದ ಏರಿಕೆಯಾಗುತ್ತಲೇ ಸಾಗಿದ್ದು, ನೂರಾರು ಮನೆ, ದೇವಸ್ಥಾನ, ಅಂಗಡಿ ಕಟ್ಟಡಗಳು ಜಲಾವೃತವಾಗಿವೆ. ಗುರುವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಮಳೆಯ ಅಬ್ಬರ ತುಸು ಕಡಿಮೆಯಾದಂತೆ ಕಂಡು ಬಂದಿದ್ದು, ನೆಲ್ಯಾಡಿಯಿಂದ ಗುಂಡ್ಯದ ತನಕವೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಬಸ್ಸು, ಲಾರಿ, ಟ್ಯಾಂಕರ್‌ಗಳು ಸಾಲುಗಟ್ಟಿ ಕಾಯುತ್ತಿದ್ದವು. ಅಪರಾಹ್ನ 12 ಗಂಟೆ ಸುಮಾರಿಗೆ ನೀರು ತುಸು ತಗ್ಗಿದ ಬಳಿಕವೇ ಶಿರಾಡಿ ಘಾಟಿ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ.
ಸಂತ್ರಸ್ತರು ಶಾಲೆಗೆ ಶಿಫ್ಟ್
ಶಿರಾಡಿ ಗ್ರಾಮದ ಅಡ್ಡಹೊಳೆ ಪರಿಶಿಷ್ಟ ಜಾತಿ ಕಾಲನಿಯ ಹತ್ತಾರು ಮನೆಗಳಿದೆ. ಅಡ್ಡಹೊಳೆ ಪಕ್ಕದಲ್ಲೇ ಇದ್ದು, ಬುಧವಾರ ರಾತ್ರಿಯಿಂದಲೇ ಇಲ್ಲಿಗೆ ನೀರು ನುಗ್ಗಿದೆ. ರಾಮ ಎಂಬುವರ ಮನೆಯ ಮಣ್ಣಿನ ಗೋಡೆ ಮಳೆನೀರಿನಿಂದ ಆವೃತವಾಗಿದ್ದು, ಗುರುವಾರ ಬೆಳಗ್ಗೆ ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್ , ಶಿರಾಡಿ ಗ್ರಾ.ಪಂ. ಉಪಾಧ್ಯಕ್ಷೆ ಬಿಂಧು ಶಶಿಧರ್, ಗ್ರಾ.ಪಂ. ಸದಸ್ಯ ಪ್ರಕಾಶ್ ಗುಂಡ್ಯ ಮತ್ತು ಸ್ಥಳೀಯರು ನೆರವಿಗೆ ಧಾವಿಸಿ, ಮನೆಯಲ್ಲಿದ್ದ ಸರಂಜಾಮುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ನೆರವಾಗಿದ್ದಾರೆ. ಇದೇ ವೇಳೆಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿ ರಾಮ, ಅವರ ಪತ್ನಿ ಮತ್ತು 6 ಮಕ್ಕಳು ಸಹಿತ 8 ಜನರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಮೀಪದ ಚಂದಪ್ಪ ಗೌಡ ಎಂಬವರ ಮನೆಯೂ ಜಲಾವೃತಗೊಂಡಿದ್ದು, ಆರು ಜನರಿದ್ದರು.
ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಶಿರಾಡಿ ಗ್ರಾಮ ಕರಣಿಕರು ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದು, ಅವರೂ ಕಾಲನಿಗೆ ಭೇಟಿ ನೀಡಿದ್ದಾರೆ. ಎರಡು ಮನೆಗಳ 14 ಸಂತ್ರಸ್ತರನ್ನು ಶಾಲೆಗೆ ಸ್ಥಳಾಂತರಿಸುವಂತೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ. ಶಾಲೆಯಲ್ಲಿ ಎಲ್ಲರಿಗೂ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ಹಾಲಿನ ಕ್ಯಾನ್ ಹೆಗಲಿಗೇರಿಸಿ ಸಾಗಾಟ
ನೇಲ್ಯಡ್ಕ ಶಾಲೆಯ ಬಳಿ ನದಿ ನೀರು ಹೆದ್ದಾರಿಗೆ ವ್ಯಾಪಿಸಿದ್ದ ಪರಿಣಾಮ ಎಂಜಿರದ ಡಿಪೋಗೆ ಹಾಲು ಹಾಕುವ ಹೈನುಗಾರರು ಕ್ಯಾನ್ ಗಳನ್ನು ಹೆಗಲಿಗೇರಿಸಿಕೊಂಡು ನಡೆದೇ ಹೆದ್ದಾರಿ ದಾಟಿದರು.
ಹೆದ್ದಾರಿ ಜಾಮ್
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯದ ಅಡ್ಡಹೊಳೆಯಲ್ಲಿ, ಉದನೆ ಪೇಟೆಯ ಗಣಪತಿ ಕಟ್ಟೆಯ ಸಮೀಪ ತೂಗುಸೇತುವೆ ಬಳಿ, ಉದನೆ ಪೇಟೆಯಿಂದ ನೆಲ್ಯಾಡಿ ಕಡೆಗೆ ಇನ್ನೊಂದು ಪಾರ್ಶ್ವದಲ್ಲಿ, ರೆಖ್ಯ ಗ್ರಾಮದ ನೇಲ್ಯಡ್ಕ ಶಾಲಾ ಬಳಿ ಹೀಗೆ 4 ಕಡೆಗಳಲ್ಲಿ ಕೆಂಪುಹೊಳೆ ನದಿಯ ಪ್ರವಾಹ ಅಪಾಯದ ಮಟ್ಟಕ್ಕೇರಿದ ಪರಿಣಾಮ ಗುರುವಾರ ಮುಂಜಾನೆಯಿಂದಲೇ ಸಂಚಾರ ಸ್ಥಗಿತಗೊಂಡಿತ್ತು. ಪರಿಸ್ಥಿತಿ ಅರಿತ ಉಪ್ಪಿನಂಗಡಿ ಠಾಣೆ ಉಪ ನಿರೀಕ್ಷಕ ನಂದ ಕುಮಾರ್, ನೆಲ್ಯಾಡಿ ಹೊರಠಾಣೆಯ ಪೊಲೀಸ್ ಸಿಬಂದಿಗೆ ತುರ್ತು ಸಂದೇಶ ಕಳುಹಿಸಿ, ಸಂಚಾರ ವ್ಯವಸ್ಥೆ ನಿರ್ವಹಿಸಲು ಸೂಚನೆ ನೀಡಿದರು. ಪುತ್ತೂರು ವಿಭಾಗದ ಡಿವೈಎಸ್ಪಿ ಶ್ರೀನಿವಾಸ್, ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನೆಲ್ಯಾಡಿ ಹೊರಠಾಣೆ ಎ.ಎಸ್.ಐ. ಶೀನಪ್ಪ ಪೂಜಾರಿ, ಯೋಗೇಂದ್ರ, ಸಿಬಂದಿ ಲಿಂಗಪ್ಪ ಬಂಗೇರ, ಶೇಖರ ಗೌಡ, ರುದ್ರಪ್ಪ, ಗಿರಿ ಪ್ರಶಾಂತ್, ನಂಜುಂಡ, ಪ್ರತಾಪ್ ಸ್ಥಳಕ್ಕೆ ಧಾವಿಸಿದ್ದರು. ಅನ್ನ – ನೀರಿಲ್ಲದೆ ಮಧ್ಯಾಹ್ನ 2 ಗಂಟೆವರೆಗೂ ಕರ್ತವ್ಯ ನಿರ್ವಹಿಸಿದ್ದು, ಪ್ರಯಾಣಿಕರು ಹಾಗೂ ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ.
ಶಿಶಿಲದ ಮನೆ, ಅಂಗಡಿಗಳೂ, ತೋಟ-ಗದ್ದೆಗಳಿಗೂ ನೀರು ಬಂದಿತ್ತು. ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್, ಕಂದಾಯ ನಿರೀಕ್ಷಕ ಪ್ರತೀಕ್ಷ್, ಗ್ರಾಮ ಕರಣಿಕರಾದ ಪರಮೇಶ್ವರ್, ರೂಪೇಶ್ ಸಹಿತ ಹಲವರು ಶಿಶಿಲ, ರೆಖ್ಯಾ, ಲಾವತ್ತಡ್ಕ, ಎಂಜಿರ ಮುಂತಾದ ಕಡೆಗಳಿಗೆ ಭೇಟಿ ನೀಡಿದ್ದಾರೆ. ನದಿಯಲ್ಲಿ ತೇಲಿ ಬಂದ ದಿಮ್ಮಿ ತೂಗು ಸೇತುವೆ ಹಾಗೂ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿತ್ತು. ಅವುಗಳನ್ನು ಗ್ರಾಮಸ್ಥರೇ ತುಂಡರಿಸಿ, ನೀರು ಹರಿಯಲು ಅನುಕೂಲ ಮಾಡಿಕೊಟ್ಟರು. ಈ ಮೂಲಕ ಕೃತಕ ನೆರೆಯ ಅಪಾಯ ತಪ್ಪಿಸಿದರು.
ಪಟ್ರಮೆಯಲ್ಲಿ ಕಪಿಲಾ ಪ್ರವಾಹ
ಕಪಿಲಾ ನದಿ ಕೌಕ್ರಾಡಿ ಗ್ರಾಮದ ಪಾರ್ಪಿಕಲ್ಲು ಸೇತುವೆಗೆ ತಾಗುವ ಮಟ್ಟಕ್ಕೆ ಹರಿದಿದ್ದು, ಪಟ್ರಮೆ ಗ್ರಾಮದಲ್ಲೂ ನೆರೆಯ ಆತಂಕವನ್ನು ಸೃಷ್ಟಿಸಿದೆ. ಸೇತುವೆಯ ಸಂಪರ್ಕ ರಸ್ತೆಯ ತಡೆಗೋಡೆ ಕುಸಿದಿದೆ. ಸಂಕೇಶ ಎಂಬಲ್ಲಿಗೆ ಪಟ್ರಮೆ ಸೇತುವೆಯ ಪಕ್ಕದಿಂದ ತೆರಳುವ ರಸ್ತೆಯ ಕಿರು ಸೇತುವೆಯೂ ಮುಳುಗಡೆಯಾಗಿದೆ. ಪಟ್ರಮೆ ಗ್ರಾಮದ ಶಾಂತಿಕಾಯ ಎಂಬಲ್ಲಿ ನದಿಯ ನೀರು ರಸ್ತೆಯಲ್ಲಿ 6 ಅಡಿ ಎತ್ತರದಲ್ಲಿ ಹರಿದಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು.
ಇಚಿಲಂಪಾಡಿಯಲ್ಲೂ ಮನೆಗಳು ಜಲಾವೃತ
ಇಚಿಲಂಪಾಡಿ ಗ್ರಾಮದಲ್ಲಿ ಐದಾರು ಮನೆಗಳು ಜಲಾವೃತಗೊಂಡಿವೆ. ಸಂತೋಷ್ ಪಿಳ್ಳೆ, ವಿನೋದ್ ಪಿಳ್ಳೆ, ಲಕ್ಷ್ಮೀ ಕುಟ್ಟಿ, ರವೀಶ್ ಜೈನ್ ಎಂಬವರ ಮನೆಗಳು ಮತ್ತು ಇಚಿಲಂಪಾಡಿಯ ಉಳ್ಳಾಯ ಉಳ್ಳಾಕುಳು ದೈವಸ್ಥಾನ, ಗಂಗಾಧರೇಶ್ವರ ದೇವಸ್ಥಾನಗಳು ಜಲಾವೃತಗೊಂಡಿವೆ. ನೆಲ್ಯಾಡಿ ಗ್ರಾ.ಪಂ. ಸದಸ್ಯ ರವಿಪ್ರಸಾದ್ ಶೆಟ್ಟಿ ಹಾಗೂ ಭಾಸ್ಕರ ಗೌಡ ಇಚಿಲಂಪಾಡಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾವೃತಗೊಂಡ ಮನೆಗಳಿಂದ ಸಂತ್ರಸ್ತರನ್ನು ಸಂಬಂಧಿಕರ ಮನೆಗಳು ಹಾಗೂ ಇತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪುತ್ತೂರು ಮತ್ತು ಕಡಬ ತಹಶೀಲ್ದಾರರು ಭೇಟಿ ನೀಡಿದ್ದರು.
ದೇವಸ್ಥಾನ ಜಲಾವೃತ
ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನದ ಪಕ್ಕ ಕಪಿಲಾ ನದಿ ಅಪಾಯದ ಮಟ್ಟದಲ್ಲಿ ಹರಿದಿತ್ತು. ಸಮೀಪದಲ್ಲೇ ಇರುವ ಕಿಂಡಿ ಅಣೆಕಟ್ಟಿನ ಸೇತುವೆ ಮುಳುಗಿದ್ದು, ತೂಗು ಸೇತುವೆಯವರೆಗೂ ನದಿಯ ಮಟ್ಟ ಏರಿಕೆಯಾಗಿತ್ತು. ಕಪಿಲಾ ದಂಡೆಯಲ್ಲಿರುವ ಆಂಜನೇಯ ದೇವರ ಗರ್ಭಗುಡಿ ಭಾಗಶಃ ಮುಳುಗಿ, ಶಿಶಿಲೇಶ್ವರ ದೇವಸ್ಥಾನ ಜಲಾವೃತವಾಗಿತ್ತು.
ಭತ್ತದ ಗದ್ದೆ, ಅಡಿಕೆ ತೋಟಗಳಿಗೆ ಹಾನಿ
ಆಲಂಕಾರು: ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರಾ ನದಿಯ ನೆರೆ ನೀರು ಆಲಂಕಾರು ಗ್ರಾಮದ ಬುಡೇರಿಯಾ ವ್ಯಾಪ್ತಿಯನ್ನು ಆವರಿಸಿದ್ದು, ಅಪಾರ ಪ್ರಮಾಣದ ಭತ್ತದ ಕೃಷಿ, ಅಡಿಕೆ ತೋಟ ಮತ್ತು ವಿದ್ಯುತ್ ಪಂಪ್ ಸೆಟ್‌ಗಳಿಗೆ ಹಾನಿಯಾಗಿದೆ. ಮಂಗಳವಾರ ಸಂಜೆಯಿಂದಲೇ ನೆರೆ ನೀರು ಬುಡೇರಿಯಾ ಬೈಲನ್ನು ಆವರಿಸಿದ್ದರೂ ಬುಧವಾರ ಸಂಜೆ ವೇಳೆಗೆ ತೀರಾ ಅಪಾಯ ಮಟ್ಟಕ್ಕೇರಿತು. ಹನ್ನೆರಡು ಬಳಿಕ ಭಾರೀ ಪ್ರಮಾಣದ ನೆರೆ ನೀರು ಬಂದಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನೆರ ನೀರಿನ ಪರಿಣಾಮ ಚಾಮೆತ್ತಡ್ಕ, ಬುಡೇರಿಯಾ, ಪಲ್ಲತ್ತಡ್ಕ, ಪಜ್ಜಡ್ಕ ಪ್ರದೇಶ ಗಳು ಸಂಚಾರ ಕಳೆದುಕೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಪಜ್ಜಡ್ಕ, ಬುಡೇರಿಯಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಗದ್ದೆಗಳಿರುವುದರಿಂದ 15 ದಿನಗಳ ಹಿಂದೆ ನಾಟಿ ಮಾಡಿದ ಪೈರು ನೀರಿನಲ್ಲಿ ಮುಳುಗಿದೆ. ಶುಕ್ರವಾರ ಸಂಜೆಯೊಳಗೆ ನೆರೆ ನೀರು ಗದ್ದೆಯಿಂದ ಇಳಿಯದಿದ್ದಲ್ಲಿ ಪೈರನ್ನು ಸಂಪೂರ್ಣವಾಗಿ ಕೊಳೆತುಹೋಗುವ ಭೀತಿ ರೈತರನ್ನು ಕಾಡುತ್ತಿದೆ. ಅಡಿಕೆಗೂ ಕೊಳೆರೋಗ ತಗಲುವ ಆತಂಕ ವ್ಯಕ್ತವಾಗಿದೆ. ಆಲಂಕಾರು, ಸವಣೂರು, ಕೊಯಿಲ ಗ್ರಾಮಗಳ ಕುಮಾರಧಾರಾ ನದಿ ತಟದ ಕೊಲ್ಯ, ಪರಂಗಾಜೆ, ಇಡ್ಯಾಡಿ, ಏಣಿತ್ತಡ್ಕ, ಕಕ್ವೆ, ಕೊಂಡಾಡಿ, ಪಜ್ಕಪ್ಪು ಮೊದಲಾದೆಡೆ ಕೃಷಿ ತೋಟಗಳಿಗೆ ನೆರೆ ನುಗ್ಗಿದೆ.
ಕಡಬದಲ್ಲಿ ವಿಪರೀತ ಮಳೆ
ನಿರಂತರ ಮಳೆಯ ಹಿನ್ನೆಲೆ ಯಲ್ಲಿ ಕಡಬ ಪರಿಸರದಲ್ಲಿ ಹರಿಯುತ್ತಿರುವ ಹೊಳೆಗಳಲ್ಲಿ ನೀರು ಅಪಾಯದ ಮಟ್ಟಕ್ಕೆ ಏರಿಕೆಯಾಗಿದ್ದು, ಹೊಳೆಯ ಪಕ್ಕದಲ್ಲಿರುವ ಪ್ರದೇಶಗಳು ಜಲಾವೃತವಾಗಿವೆ. ಗುಂಡ್ಯ ಹೊಳೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದಾಗಿ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸಮಠ ಮುಳುಗು ಸೇತುವೆ ಎರಡು ದಿನಗಳಿಂದ ಮುಳುಗಡೆಯಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಬುಧವಾರ ಮುಂಜಾನೆಯಿಂದ ಮುಳುಗಡೆಯಾಗಿ ರುವ ಸೇತುವೆ ಗುರುವಾರ ಸಂಜೆ ತನಕವೂ ವಾಹನ ಸಂಚಾರಕ್ಕೆ ತೆರವುಗೊಂಡಿಲ್ಲ. ಬೆಳಗ್ಗಿನ ವೇಳೆಗೆ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದ ನೆರೆನೀರು ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಸೇತುವೆ ಮುಳುಗಡೆಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ನಿರ್ಮಾಣ ಹಂತದಲ್ಲಿರುವ ಸೇತುವೆಯ ಸುತ್ತಲೂ ನೀರು ಆವರಿಸಿದ್ದರಿಂದಾಗಿ ಸೇತುವೆಯ ಮೇಲಿನಿಂದ ಜನರು ನಡೆದು ಹೋಗಿ ಹೊಳೆಯನ್ನು ದಾಟುವುದಕ್ಕೂ ಸಂಚಕಾರ ಬಂದಿತ್ತು.
ಹೊಳೆ ಬದಿಯ ಪ್ರದೇಶ ಜಲಾವೃತ
ಗುಂಡ್ಯಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಹೊಳೆಯ ಪಕ್ಕದಲ್ಲಿರುವ ಪ್ರದೇಶಗಳು ಜಲಾವೃತವಾಗಿ ಅಪಾರ ಕೃಷಿ ಹಾನಿಯಾಗಿದೆ. ನೂಜಿಬಾಳ್ತಿಲ ಪರಿಸರದಲ್ಲಿ ಅಡೆಂಜ ದೇವಸ್ಥಾನ ಸಹಿತ ಹಲವು ಆರಾಧಾನಾಲಯಗಳು, ವಾಸದ ಮನೆಗಳು, ಶಾಲೆ ಹಾಗೂ ರಸ್ತೆಗಳಿಗೆ ನೀರು ನುಗ್ಗಿದೆ. ನೆರೆಯಿಂದಾಗಿ ಹಾನಿಯಾಗಿರುವ ಪ್ರದೇಶಗಳಿಗೆ ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್, ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ, ಉಪ್ಪಿನಂಗಡಿ ಎಸ್.ಐ. ನಂದಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.