ಜನಪದೀಯ ಕ್ರೀಡೆಗೆ ಸಮಾಜದ ಸ್ಪಂದನೆ ಅಗತ್ಯ
Team Udayavani, Dec 10, 2017, 2:54 PM IST
ಸವಣೂರು: ಜನಪದೀಯ ಕ್ರೀಡೆಗಳ ಬೆಳವಣಿಗೆಗೆ ಸಮಾಜದ ಸ್ಪಂದನೆ ಅಗತ್ಯ.ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜನಪದೀಯ ಕ್ರೀಡೆಗಳು ಈಗ ಕಾಣಲು ಅಪರೂಪವಾಗಿವೆ. ಈ ನಿಟ್ಟಿನಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಮೂಲಕ ದೇಸಿ ಕ್ರೀಡೆ ಲಗೋರಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಂದ್ಯಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಶಿನಾರೆ ರಶ್ಮಿ ಜಿಲ್ಲಾ ಮಟ್ಟದ ಲಗೋರಿ ಪಂದ್ಯಾಟ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಾಂಪ್ರದಾಯಿಕ ಕ್ರೀಡಾಕೂಟದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ತುಳು ಭಾಷೆ, ಪರಂಪರೆ, ಕ್ರೀಡೆಗಳು ಪ್ರಾಚೀನವಾದದ್ದು,ತುಳು ಭಾಷೆಗೆ ತನ್ನದೇ ಆದ ವಿಶೇಷತೆ ಇದೆ. 36 ಶಾಲೆಗಳಲ್ಲಿ ತುಳು ಭಾಷೆ ಪಠ್ಯ ಬೋಧಿಸಲಾಗುತ್ತಿದೆ. ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 400 ವಿದ್ಯಾರ್ಥಿಗಳು ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ದುಕೊಂಡಿದ್ದಾರೆ. ನಮ್ಮ ಮಾತೃಭಾಷೆಯ ಪ್ರೀತಿ, ಅಭಿಮಾನ ಶಾಶ್ವತವಾಗಿರಬೇಕು ಎಂದರು.
ಸರ್ವರ ಸಹಕಾರ ಅಗತ್ಯ
ಮುಖ್ಯ ಅತಿಥಿ ಮಂಗಳೂರು ವಿಶ್ವ ವಿದ್ಯಾ ನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರಸನ್ನ ಬಿ.ಕೆ. ಮಾತನಾಡಿ,
ಜನಪದೀಯ ಸಂಸ್ಕೃತಿ ನಾಶವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಲಗೋರಿಯಂತಹ ಪಂದ್ಯಗಳ ಆಯೋಜನೆಯಿಂದ ಸಂಸ್ಕೃತಿ ಉಳಿಯಲು ಸಾಧ್ಯ.ಇದರ ಬೆಳವಣಿಗೆಗೆ ಸರ್ವರ ಸಹಕಾರ ಅಗತ್ಯ. ಲಗೋರಿ ಪಂದ್ಯಾಟವನ್ನು ವಿಶ್ವವಿದ್ಯಾನಿಲಯದಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿ ಪ್ರಥಮ ಬಾರಿಗೆ ನಡೆಸಿದ ಹೆಗ್ಗಳಿಕೆ ಮಂಗಳೂರು ವಿಶ್ವವಿದ್ಯಾನಿಲಯದ್ದು. ಕ್ರೀಡೆ ಸಾಂಸ್ಕೃತಿಕವಾಗಿ ಬೆಳವಣಿಗೆಯಾದರೆ ಸಮಾಜ ಗುರುತಿಸುತ್ತದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಟ್ರಸ್ಟಿ ಎನ್. ಸುಂದರ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಚಾರ್ಯ
ಸೀತಾರಾಮ ಕೇವಳ, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರಾಜಲಕ್ಷ್ಮೀ ಎಸ್. ರೈ, ಸುಳ್ಯ ಪೆರಾಜೆ ಜ್ಯೋತಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಘುನಾಥ್ ಬಿ.ಎಸ್., ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ರಸಾದ್ ಆಳ್ವ, ಬೇಬಿ ಎ. ಉಪಸ್ಥಿತರಿದ್ದರು.
ನವ್ಯಾ, ತಂಡದವರು ಆಶಯ ಗೀತೆ ಹಾಡಿದರು.ವಿದ್ಯಾರ್ಥಿ ನಾಯಕ ಮಹಮ್ಮದ್ ನಾಸೀರ್ ಸ್ವಾಗತಿಸಿ, ಕಾಲೇಜಿನ ಕ್ರೀಡಾ ಸಂಘದ ಜತೆ ಕಾರ್ಯದರ್ಶಿ ಸಂಧ್ಯಾ ಕೆ. ವಂದಿಸಿದರು. ಅನುಶ್ರೀ ನಿರೂಪಿಸಿದರು.
ನಮ್ಮ ಮಣ್ಣಿನ ಕ್ರೀಡೆ
ಪಂದ್ಯಾಟ ಉದ್ಘಾಟಿಸಿದ ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಮಾತನಾಡಿ, ಲಗೋರಿ ನಮ್ಮ ಮಣ್ಣಿನ ಕ್ರೀಡೆ. ಈ ಕ್ರೀಡೆಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಜನಪ್ರಿಯಗೊಳಿಸುವ ಅಗತ್ಯವಿದೆ. ವಿಶ್ವತುಳು ಸಮ್ಮೇಳನದಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರು ಲಗೋರಿ ಪಂದ್ಯಾಟ ಆಯೋಜಿಸಿದ್ದರು. ಇದೇ ಲಗೋರಿ ಪಂದ್ಯಾಟ ನಡೆಸಲು ಪ್ರೇರಣೆ. ಶಾಲಾ, ಸಂಘಟನೆಗಳ ಕ್ರೀಡಾಕೂಟದಲ್ಲಿ ಈ ಪಂದ್ಯಾಟವನ್ನು ಸೇರಿಸಿದರೆ ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.