ಫುಟ್‌ಪಾತ್, ರಸ್ತೆ ಬದಿ ಮಣ್ಣು, ಮರಳು, ವಾಹನ ಬಿಡಿ ಭಾಗ ಹಾಕಿದರೆ ಕ್ರಮ: ಕಮಿಷನರ್
Team Udayavani, Jun 1, 2019, 6:00 AM IST
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಜರಗಿತು.
ಮಹಾನಗರ: ನಗರದಲ್ಲಿ ಫುಟ್‌ಪಾತ್ ಮತ್ತು ರಸ್ತೆ ಬದಿ ಕಟ್ಟಡ ನಿರ್ಮಾಣ ಸಾಮಗ್ರಿ, ವಾಹನಗಳ ಬಿಡಿ ಭಾಗ, ಗುಜರಿ ಸಾಮಗ್ರಿಗಳನ್ನು ಹರಡುವ ಮೂಲಕ ಸಂಚಾರಕ್ಕೆ ಅಡ್ಡಿಯುಂಟು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರ ದೂರುಗಳಿಗೆ ಸ್ವಂದಿಸಿ ಅವರು ಮಾತನಾಡಿದರು. ಕದ್ರಿ ಕಂಬಳ ಕ್ರಾಸ್ ಸಹಿತ ನಗರದ ವಿವಿಧ ಕಡೆಗಳಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಫುಟ್‌ಪಾತ್, ರಸ್ತೆ ಬದಿಯಲ್ಲೇ ಹಾಕುತ್ತಾರೆ. ಅಲ್ಲದೆ ಗ್ಯಾರೇಜುಗಳಿರುವಲ್ಲಿ ವಾಹನ, ಅವುಗಳ ಬಿಡಿ ಭಾಗಗಳನ್ನು ರಸ್ತೆ ಬದಿ ಎಲ್ಲೆಂದರಲ್ಲಿ ಎಸೆದಿರುತ್ತಾರೆ. ಗುಜರಿ ಸಾಮಗ್ರಿ ಕೂಡ ಫುಟ್‌ಪಾತ್‌ನಲ್ಲಿರುತ್ತವೆ. ಇದರಿಂದ ಪಾದಚಾರಿಗಳ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇವುಗಳನ್ನು ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು ಎಲ್ಲ ಗ್ಯಾರೇಜುಗಳ ಮಾಲಕರಿಗೆ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದರು.
ಮುಡಿಪು ಪ್ರದೇಶದಲ್ಲಿ ಕಲ್ಲು, ಮಣ್ಣು, ಜಲ್ಲಿ, ಮರಳು ಸಾಗಿಸುವ ಲಾರಿಗಳನ್ನು ಟರ್ಪಾಲು ಮುಚ್ಚದೆ ವೇಗವಾಗಿ ಚಲಾಯಿಸುತ್ತಿರುವುದರಿಂದ ಹಿಂಬದಿ ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಗಮನ ಹರಿಸುವಂತೆ ಕೊಣಾಜೆ ಪೊಲೀಸರಿಗೆ ಸೂಚಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಸ್ ಬೇಕು ಮೂಡುಬಿದಿರೆ ಕಡೆಯಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ “ಒಂದೇ ಒಂದು’ ಬಸ್ಸಿಲ್ಲ. ಆಟೋ ರಿಕ್ಷಾ ಚಾಲಕರು 600 ರೂ., ಟ್ಯಾಕ್ಸಿಯವರು 1,200 ರೂ. ಕೇಳುತ್ತಾರೆ. ಗಂಜಿಮಠದಿಂದ ಮಂಗಳೂರಿಗೆ ಬಸ್ ದರ ಕೇವಲ 26 ರೂ. ಮಾತ್ರ. ಆದ್ದರಿಂದ ಈ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ಓಡಿಸಬೇಕು ಎಂದು ನಾಗರಿಕರೊಬ್ಬರು ಒತ್ತಾಯಿಸಿದರು. ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳನ್ನು 10 ನಿಮಿಷಕ್ಕೆ ಒಂದರಂತೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ಪಂಪ್‌ವೆಲ್, ನಂತೂರು, ಗಂಜಿಮಠ ಮಾರ್ಗವಾಗಿ ಓಡಿಸಿದರೆ, ಲಾಭದಾಯಕವಾಗಿ ನಡೆಸಬಹುದು. ಇದರಿಂದ ರೋಗಿಗಳು, ಹಿರಿಯ ನಾಗರಿಕರಿಗೆ ಮತ್ತು ಜಂಕ್ಷನ್‌ಗೆ ಹೋಗುವ ರೈಲು ಪ್ರಯಾಣಿಕರಿಗೆ ಅನುಕೂಲ ಆಗಬಹುದು. ಇದೀಗ ನಾಗುರಿ ಕಡೆಯಿಂದ ಜಂಕ್ಷನ್ ರೈಲು ನಿಲ್ದಾಣಕ್ಕೆ ಏಕ ಕಾಲದಲ್ಲಿ ಎರಡು ಬಸ್‌ಗಳು ಹೋಗಿ ಬರುವಷ್ಟು ರಸ್ತೆ ವಿಸ್ತೀರ್ಣವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಸಂದೀಪ್ ಪಾಟೀಲ್, ಈ ಬಗ್ಗೆ ಆರ್.ಟಿ.ಎ. ಸಭೆಯಲ್ಲಿ ಪ್ರಸ್ತಾವಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂಡುಬಿದಿರೆಯಲ್ಲಿ ಪದೇ ಪದೇ ಸಂಚಾರ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದು, ಇವೆಲ್ಲದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮೂಡುಬಿದಿರೆ, ಮೂಲ್ಕಿ, ಕೈಕಂಬಗಳಲ್ಲಿ ಸಂಚಾರ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಮಂಗಳೂರು- ಮೂಡುಬಿದಿರೆ ನಡುವೆ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಆದರೆ ರಸ್ತೆ ಅಗಲ ಕಿರಿದಾಗಿದೆ. ಮೂಡುಬಿದಿರೆಯಲ್ಲಿ ಟ್ರಾಫಿಕ್ ಠಾಣೆಯ ಅಗತ್ಯವಿದೆ ಎಂದು ಆಯುಕ್ತರು ಹೇಳಿದರು.
ಪ್ರಮುಖ ದೂರುಗಳು
ಬಜಪೆ – ಸ್ಟೇಟ್‌ಬ್ಯಾಂಕ್ ಮಧ್ಯೆ ಸಂಚರಿಸುವ 47 ಸಿ ನಂಬ್ರದ ಒಂದೇ ಒಂದು ಬಸ್ ಇದ್ದು, ಅದು ದಿನದ 4 ಟ್ರಿಪ್ ಬದಲು 3 ಟ್ರಿಪ್ ಮಾತ್ರ ಕಾರ್ಯಾಚರಿಸುತ್ತಿದೆ. 1 ಟ್ರಿಪ್ ಕಡಿತ ಮಾಡುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಮಹಿಳೆಯರಿಗೆ ಬಸ್‌ನಲ್ಲಿ 40 ವರ್ಷಗಳಿಂದ 4 ಸೀಟು ಮಾತ್ರ ಮೀಸಲಿದೆ; ಈಗ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದ್ದು, ಮೀಸಲು ಸೀಟುಗಳನ್ನು 8ಕ್ಕೇರಿಸಬೇಕು.
ಖಾಸಗಿ ಬಸ್‌ಗಳು ಬಸ್ ಬೇ ಬಿಟ್ಟು ಬೇರೆ ಕಡೆ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಬಗ್ಗೆ ಬಸ್ ಮಾಲಕರ ಗಮನಕ್ಕೆ ತರಲಾಗುವುದು. ಅಲ್ಲದೆ ಟ್ರಾಫಿಕ್ ಪೊಲೀಸರು ಕೂಡ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.
ಇದು 114ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಡಿಸಿಪಿ ಲಕ್ಷ್ಮೀ ಗಣೇಶ್, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಹರೀಶ್ ಕೆ. ಪಟೇಲ್, ಕೃಷ್ಣಾನಂದ ನಾಯ್ಕ, ಪಿಎಸ್‌ಐಗಳಾದ ಎಸ್. ಎಂ. ರುದ್ರಪ್ಪ, ಪಿ. ಯೋಗೇಶ್ವರನ್, ಹೆಡ್‌ಕಾನ್‌ಸ್ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.