ಗುಜರಿಯಿಂದ ನಾಲ್ಕು ಚಕ್ರದ ಬೈಕ್ ಸಿದ್ಧ !
Team Udayavani, Nov 11, 2018, 10:33 AM IST
ಮಹಾನಗರ : ನಮ್ಮ ಸುತ್ತಮುತ್ತಲು ದಿನನಿತ್ಯ ಕೆ.ಜಿ. ಗಟ್ಟಲೆ ಗುಜರಿ ಸಾಮಗ್ರಿಗಳು ಕೊಳೆತು ತ್ಯಾಜ್ಯವಾಗುತ್ತಿವೆ. ಅಂತಹ ಗುಜರಿ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಇಲ್ಲೊಂದು ವಿದ್ಯಾರ್ಥಿಗಳ ತಂಡ ನೂತನವಾಗಿ ನಾಲ್ಕು ಚಕ್ರದ ಬೈಕ್ ಆವಿಷ್ಕಾರ ಮಾಡಿ ಪ್ರಶಂಸೆಗೆ ಒಳಗಾಗಿದೆ.
ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಗುಜರಿ ಸಾಮಗ್ರಿಗಳು ಅತೀ ಕಡಿಮೆ ಬೆಲೆಗೆ ವಿದೇಶಕ್ಕೆ ರಫ್ತಾಗುತ್ತದೆ. ಅವುಗಳನ್ನು ಉಪಯೋಗಿಸಿಕೊಂಡು ವಿದೇಶದಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ ಹೆಚ್ಚಿನ ಬೆಲೆಗೆ ಭಾರತಕ್ಕೆ ರಫ್ತು ಮಾಡುತ್ತಿದೆ. ಈ ವಿಚಾರವನ್ನು ಅರಿತ ಉಜಿರೆ ಎಸ್ ಡಿಎಂ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಫಿಜ್, ಇಫಾಜ್, ಮರ್ವಾ, ಝಮೀರ್, ಹರ್ಷಾ ಅವರ ತಂಡ ನೂತನವಾಗಿ ಗುಜರಿ ಸಾಮಗ್ರಿಗಳನ್ನೇ ಉಪಯೋಗಿಸಿ ನಾಲ್ಕು ಚಕ್ರದ ಬೈಕ್ ಆವಿಷ್ಕಾರ ಮಾಡಿದ್ದಾರೆ. ಈ ತಂಡಕ್ಕೆ ಕಾಲೇಜಿನ ಉಪನ್ಯಾಸಕಾರದ ಲಕ್ಷ್ಮೀಶ್, ರಾಜೇಶ್ ಮತ್ತು ಗುರುದೀಪ್ ಅವರು ಸಹಕಾರ ನೀಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆಯಲ್ಲಿ ತೊಡಗಿದ ಈ ತಂಡ ಬೈಕ್ ತಯಾರು ಮಾಡಲು ಉಪಯೋಗಿಸಿದ ಸೈಲೆನ್ಸರ್, ನಾಲ್ಕು ಟಯರ್, ಡಿಸ್ಕ್, ಗೇರ್ ಬಾಕ್ಸ್, ಟೆಂಪರ್ಡ್ ರಾಡ್, ಲ್ಯಾಂಪ್, ಇಂಜಿನ್, ಚೈನ್, ಡಿಸ್ಕ್ಪ್ಲೇ ಟ್, ಕ್ಯಾಲಿಪರ್, ಬೇರಿಂಗ್, ಬೋಲ್ಟ್ ಸಹಿತ ಮತ್ತಿತರ ಉತ್ಪನ್ನಗಳನ್ನು ನಗರದ ಬಂದರು, ಸೋಮಂತ್ತಡ್ಕ, ಉಜಿರೆ ಮತ್ತಿತರ ಭಾಗಗಳ ಗುಜರಿ ಅಂಗಡಿಗಳಿಂದ ತರಲಾಗಿದೆ. ಅವುಗಳನ್ನು ಒಟ್ಟುಗೂಡಿಸಿದ ಬಳಿಕ ಮೂರೇ ತಿಂಗಳಿಲ್ಲಿ ಬೈಕ್ ಆವಿಷ್ಕರಿಸಿದ್ದಾರೆ.
ಕೃಷಿಕರಿಗೆ ಸಹಕಾರಿ
ನೂತನ ಬೈಕ್‌ನಲ್ಲಿ ನಾಲ್ಕು ಚಕ್ರಗಳಿರುವುದರಿಂದ ಅಂಗವಿಕಲರು ಕೂಡ ಚಲಾಯಿಸಬಹುದು. ಕರಾವಳಿ ಪ್ರದೇಶದಲ್ಲಿ ಅಡಿಕೆ ತೋಟಗಳು ಹೆಚ್ಚಿದ್ದು, ತೋಟದಿಂದ ಅಡಿಕೆ ತರಲು ಈ ಬೈಕ್ ಉಪಯೋಗಮಾಡಬಹುದಾಗಿದೆ. ಸದ್ಯ ಈ ಬೈಕ್‌ಗೆ ಆಟೋ ರಿಕ್ಷಾದ ನಾಲ್ಕು ಟಯರ್ ಅಳವಡಿಸಿದ್ದು, ಬಜಾಜ್ ಸಿ.ಟಿ.-100 ಇಂಜಿನ್ ಬಳಸಲಾಗಿದೆ. 40 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. 4 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದ್ದು, 12 ವ್ಯಾಟ್ ಬ್ಯಾಟರಿ ಹೊಂದಿದೆ.
ಮತ್ತಷ್ಟು ನವೀಕರಣ
ಈ ಬೈಕ್‌ನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ನವೀಕರಣ ಮಾಡುವ ಉತ್ಸಾಹ ಈ ತಂಡಕ್ಕಿದೆ. ಬೈಕ್‌ಗೆ ರಿವರ್ಸ್ ಗೇರ್ ಅಳವಡಿಸುವುದು. ಬೈಕ್ ಸವಾರನಿಗೆ ಅನುಕೂಲವಾಗುವಂತೆ ಬಟರ್‌ಫ್ಲೈ ಸ್ಟೇರಿಂಗ್ ಅಳವಡಿಸುವ ಚಿಂತನೆ ಮಾಡಲಾಗುತ್ತಿದೆಯಂತೆ. ಜೊತೆಗೆ ಅಡ್ವೆಂಚರ್ ಪ್ರಯಾಣಕ್ಕೆ ಅನುಕೂಲವಾಗುವಂತೆಯೇ ರೂಪಿಸುವ ಯೋಚನೆ ಇದೆ.
ಯೂಟ್ಯೂಬ್ ನೋಡಿ ರಿಪೇರಿ
ನೂತನ ಆವಿಷ್ಕಾರ ಮಾಡಿದ ತಂಡದ ಸದಸ್ಯರಲ್ಲೊಬ್ಬರಾದ ಆಫಿಜ್ ಅವರು ‘ಉದಯವಾಣಿ ಸುದಿನ’ಕ್ಕೆ ಮಾತನಾಡಿ, ‘ಗುಜರಿ ಅಂಗಡಿಗಳಿಂದ ತಂದಂತಹ ಕೆಲವೊಂದು ಬಿಡಿ ಭಾಗಗಳು ಸಮರ್ಪಕವಾಗಿ ಚಾಲು ಇರಲಿಲ್ಲ. ಅದರಲ್ಲಿಯೂ ಇಂಜಿನ್, ಲ್ಯಾಂಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆ ಸಮಯದಲ್ಲಿ ಕೆಟ್ಟು ಹೋದ ವಸ್ತುಗಳನ್ನು ಯಾವ ರೀತಿ ರಿಪೇರಿ ಮಾಡಬಹುದು ಎಂಬುವುದನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿ ಸರಿಪಡಿಸಿದೆವು ಎನ್ನುತ್ತಾರೆ.
ತ್ಯಾಜ್ಯದಿಂದ ಆವಿಷ್ಕಾರ
ಪೊಲೀಸ್ ಠಾಣೆ ಸೇರಿದಂತೆ ದೇಶದಲ್ಲಿ ಅತೀ ಹೆಚ್ಚಿನ ಗುಜರಿ ವಾಹನಗಳು ತ್ಯಾಜ್ಯವಾಗುತ್ತಿದ್ದು, ಆದರೆ ವಿದೇಶಗಳಲ್ಲಿ ಅವುಗಳಿಂದ ನೂತನ ಆವಿಷ್ಕಾರ ಮಾಡಲಾಗುತ್ತದೆ. ಅವುಗಳನ್ನೇ ಗಮನದಲ್ಲಿಟ್ಟು ನೂತನ ಆವಿಷ್ಕಾರದಲ್ಲಿ ತೊಡಗಿದೆವು.
– ಆಫೀಜ್, ತಂಡದ ಸದಸ್ಯ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.