ಮಾರ್ನಮಿಕಟ್ಟೆ , ಮಂಗಳಾದೇವಿ ಪರಿಸರದಲ್ಲಿ ವಿಶೇಷ ಶ್ರಮದಾನ
Team Udayavani, Jul 23, 2018, 11:45 AM IST
ಮಹಾನಗರ : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ನಾಲ್ಕನೇ ಹಂತದ ಕೊನೆಯ ವಾರದಲ್ಲಿ ವಿಶೇಷ ಶ್ರಮದಾನ ವನ್ನು ಮಾರ್ನಮಿಕಟ್ಟೆ ಹಾಗೂ ಮಂಗಳಾದೇವಿ ಪರಿಸರದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು. ಮಾರ್ನಮಿಕಟ್ಟೆಯ ರೈಲು ಸೇತುವೆಯ ಬಳಿಯಿದ್ದ ಕಸ ಹಾಕುವ ಕಾಂಕ್ರೀಟ್ ತೊಟ್ಟಿ ಹಾಗೂ ಅದರ ಸುತ್ತಮುತ್ತಲಿನ ಜಾಗಗಳನ್ನು ಶುಚಿಗೊಳಿಸಲಾಯಿತು. ಮೊದಲಿಗೆ ಸಿಮೆಂಟಿನಿಂದ ಮಾಡಿದ್ದ ಕಸದ ತೊಟ್ಟಿಯನ್ನು ಕಿತ್ತುತೆಗೆದು ಅದರ ಪಕ್ಕದಲ್ಲಿ ನಿಷ್ಪ್ರಯೋಜಕವಾಗಿ ಪಾಳುಬಿದ್ದಿದ್ದ ಪುಟ್ಟ ಅಂಗಡಿಯನ್ನು ತೆರವುಗೊಳಿಸಲಾಯಿತು. ಅನಂತರ ಆ ಸ್ಥಳವನ್ನು ಜೇಸಿಬಿ ಬಳಸಿ ಸಮತಟ್ಟು ಮಾಡಲಾಯಿತು. ಇದೀಗ ಅಲ್ಲಿ ಯಾರೂ ಕಸ ಹಾಕದಂತೆ ಹೂಗಿಡಗಳನ್ನು ಇಡಲಾಗಿದೆ. ಮುಂದಿನ ವಾರದಲ್ಲಿ ಮತ್ತಷ್ಟು ಶ್ರಮದಾನ ಮಾಡಿ ಆ ಇಡೀ ಜಾಗವನ್ನು ಸುಂದರಗೊಳಿಸಲು ನಿರ್ಧರಿಸಲಾಯಿತು.
ಮಂಗಳಾದೇವಿ ರಥಬೀದಿಯಲ್ಲಿ ಸ್ವಚ್ಛತೆ
ಮಂಗಳಾದೇವಿ ರಥಬೀದಿಯಲ್ಲಿ ಕಾರ್ಯಕರ್ತರು ಸ್ವಚ್ಛತೆ ಕೈಂಕರ್ಯ ನಡೆಸಿದರು. ಅಲ್ಲಿರುವ ಮನೆಮನೆಗೆ ತೆರಳಿ ಜಾಗೃತಿ ಕಾರ್ಯ ನಡೆಸಿದರು. ಹಿರಿಯರಾದ ಪುಣೆಯ ಚಂದ್ರಕಾಂತ ಕುಲಕರ್ಣಿ, ಸುರೇಶ್ ಶೆಟ್ಟಿ, ಕಮಲಾಕ್ಷ ಪೈ, ವಿಠ್ಠಲ ದಾಸ್ ಪ್ರಭು, ಅನಿರುದ್ಧ ನಾಯಕ್ ಮತ್ತಿತರ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶ್ರಮದಾನದ ಬಳಿಕ ರಾಮಕೃಷ್ಣ ಮಠದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಸ್ವಚ್ಛತಾ ದರ್ಶನ : ವಿಶೇಷ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ನಾಲ್ಕನೇ ಹಂತದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಮನಸ್ಸು ಅಭಿಯಾನದ ಐದನೇ ಕಾರ್ಯಕ್ರಮ ಸ್ವಚ್ಛತಾ ದರ್ಶನ ಸುಮಾರು 100 ಪ್ರೌಢಶಾಲೆಗಳಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳ ಮನೋಪರಿವರ್ತನೆ, ಆಲೋಚನೆ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆ ಆಧರಿಸಿ ನೂರು ಅಂಕಗಳ ಉತ್ತರ ಪತ್ರಿಕೆ ಸತತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು. ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕಿನ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸುಮಾರು ಅರುವತ್ತು ಜನ ಸಂಪನ್ಮೂಲ ವ್ಯಕ್ತಿಗಳು ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆಯ ಮಾಹಿತಿ ಹಾಗೂ ಈ ವಿಶೇಷ ಪರೀಕ್ಷೆಯ ಔಚಿತ್ಯ ತಿಳಿಸಿದರು. ಈಗಾಗಲೇ ಮೌಲ್ಯಮಾಪನ ಆರಂಭವಾಗಿದ್ದು, ಮುಂದಿನ ವಾರದಲ್ಲಿ ಅತ್ಯುತ್ತಮವಾಗಿ ಉತ್ತರಿಸಿದವರನ್ನು ಪುರಸ್ಕಾರ ನೀಡಿ ಗೌರವಿಸಲಾಗುವುದು. ಸ್ವಚ್ಛ ಮನಸ್ಸು ಮುಖ್ಯ ಸಂಯೋಜಕ ರಂಜನ್ ಬೆಳ್ಳಪಾಡಿ, ಗುರುಪ್ರಸಾದ್ ಮತ್ತು ಕಾಂಚನಾ ಅವರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಿದರು.
ಕುಡಿಯುವ ನೀರಿನ ಘಟಕಗಳ ವಿತರಣೆ
ಸ್ವಚ್ಛತಾ ಅಭಿಯಾನದ ಪ್ರಯುಕ್ತ ಸುಮಾರು ಹತ್ತು ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರಿನ ಆವಶ್ಯಕತೆಯನ್ನು ಮನಗಂಡು ಹಾಗೂ ಶಾಲೆಗಳ ವಿನಂತಿಯನ್ನು ಪರಿಗಣಿಸಿ ಈ ಘಟಕಗಳನ್ನು ನೀಡಲಾಯಿತು. ಸರಕಾರಿ ಪ್ರೌಢಶಾಲೆ ರಥಬೀದಿ, ಸರಕಾರಿ ಪ್ರೌಢಶಾಲೆ ಬಲ್ಮಠ, ಮದನಿ ಪ್ರೌಢಶಾಲೆ ಉಳ್ಳಾಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಮಂಜೂರು, ಸ್ವಾಮಿ ಸದಾನಂದ ಸರಸ್ವತಿ ಪ್ರೌಢಶಾಲೆ ನಂತೂರು ಪದವು, ಸರಕಾರಿ ಪ್ರೌಢಶಾಲೆ ಮೂಡುಶೆಡ್ಡೆ, ಭಗಿನಿ ಸಮಾಜ ಜೆಪ್ಪು, ಹಿರಿಯ ಪ್ರಾಥಮಿಕ ಶಾಲೆ ಬದ್ರಿಯಾ ನಗರ ಮಲ್ಲೂರು ಇತ್ಯಾದಿ ಶಾಲೆಗಳಲ್ಲಿ ಅಳವಡಿಸಲಾಯಿತು. ಕಾರ್ಯಕರ್ತರಾದ ಸಚಿನ ಶೆಟ್ಟಿ ನಲ್ಲೂರು ಹಾಗೂ ಅಭಿಷೇಕ ಎಸ್. ತರಣ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸ್ವಚ್ಛತೆಗಾಗಿ ಜಾದೂ
ಸ್ವಚ್ಛತೆಯ ಕುರಿತಂತೆ ಜನಮಾನಸದಲ್ಲಿ ಜಾಗೃತಿಯನ್ನುಂಟು ಮಾಡಲು ರಾಮಕೃಷ್ಣ ಮಿಷನ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ವಚ್ಛತೆಗಾಗಿ ಜಾದೂ ಎಂಬ ಕಾರ್ಯಕ್ರಮದ ಪ್ರದರ್ಶನಗಳನ್ನು ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು 100 ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಮತ್ತು ಬಳಗದ ವತಿಯಿಂದ ನಲ್ವವತ್ತು ದಿನಗಳಿಂದ ಈ ಅಭಿಯಾನ ನಡೆಯುತ್ತಿದೆ. ಈ ವರೆಗೆ 56 ಶಾಲೆಗಳಲ್ಲಿ ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ಯಶಸ್ವಿಯಾಗಿ ಜರಗಿದೆ. ಮನೋರಂಜನೆ ಹಾಗೂ ಸ್ವಚ್ಛತೆಯ ಕುರಿತು ಮಕ್ಕಳಲ್ಲಿ ಅರಿವನ್ನುಂಟು ಮಾಡಲು ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ನವನೀತ ಶೆಟ್ಟಿ ಜಾದೂ ಪ್ರದರ್ಶನಗಳನ್ನು ಸಂಯೋಜನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.