ಕೇರಳ-ಕರ್ನಾಟಕ ಗಡಿಯಲ್ಲಿ ಇಂಧನ ಬೆಲೆ ಏರಿಕೆ ಬಿಸಿ
Team Udayavani, Nov 1, 2018, 10:17 AM IST
ಜಾಲ್ಸೂರು: ಪೆಟ್ರೋಲ್, ಡೀಸೆಲ್ ಬೆಲೆಯೆರಿಕೆಯ ಬಿಸಿ ಬಹುತೇಕ ಎಲ್ಲ ಕಾರ್ಯಕ್ಷೇತ್ರಗಳಿಗೂ ತಟ್ಟಿದೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಕೇರಳ-ಕರ್ನಾಟಕ ಗಡಿಭಾಗದಲ್ಲಿ ಬೋರ್‌ವೆಲ್ ಹಾಗೂ ಜೆಸಿಬಿ ಕೆಲಸಗಳ ದರವನ್ನು ಏರಿಸಲಾಗಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆಯಲ್ಲಿ ಆಗುವಂತಹ ಏರುಪೇರುಗಳಿಗೆ ಅನುಸಾರವಾಗಿ ಬೆಲೆ ಹೆಚ್ಚಿಸಿದ್ದಾರೆ ಎಂದು ಹೇಳಲಾಗಿದೆ. ಬೋರ್‌ವೆಲ್, ಜೆಸಿಬಿ, ಹುಲ್ಲು ತೆಗೆಯುವ ಯಂತ್ರ ಇನ್ನಿತರ ಯಂತ್ರಾಧಾರಿತ ಕೆಲಸ ಕಾರ್ಯಗಳಿಗೆ ಅಡಿಗಳ ಲೆಕ್ಕ ಹಾಗೂ ಗಂಟೆಗಳ ಲೆಕ್ಕದಲ್ಲಿ ಒಂದಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ.
ಜೆಸಿಬಿ ಗಂಟೆಗೆ 50 ರೂ. ಏರಿಕೆ
ಜೆಸಿಬಿ ಕೆಲಸದ ದರವೂ ಹೆಚ್ಚಳವಾಗಿದೆ. ಸುಮಾರು 20 ವರ್ಷಗಳ ಮೊದಲು ಅಂದರೆ 1996-97ರಲ್ಲಿ ಡೀಸೆಲ್‌ಗೆ ಅಂದಾಜು 16ರಿಂದ 17 ರೂ. ಇತ್ತು. ಆ ಸಮಯದಲ್ಲಿ ಜೆಸಿಬಿ ಕೆಲಸಕ್ಕೆ ಗಂಟೆಗೆ 700 ರೂ. ಪಡೆಯುತ್ತಿದ್ದರು. ಆಮೇಲೆ ಒಟ್ಟು 250 ರೂ. ಹೆಚ್ಚಾಗಿದೆ. ಮೂರು ತಿಂಗಳ ಹಿಂದೆ ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದರಿಂದ 50 ರೂ. ಏರಿಸಲಾಗಿದೆ. ಗಂಟೆಗೆ 950 ಪಡೆಯುತ್ತಿದ್ದವರು ಪ್ರಸ್ತುತ 1,000 ರೂ. ದರ ಪಡೆಯುತ್ತಿದ್ದಾರೆ. ಮೂರೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಿರೋದು ಮಾತ್ರ ದೊಡ್ಡ ಬದಲಾವಣೆ. ಮೊದಲಿನಂತೆ ಈ ಕ್ಷೇತ್ರದಲ್ಲಿ ಲಾಭವಿಲ್ಲ. ಡೀಸೆಲ್ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ. ಜೆಸಿಬಿ ವಾಹನ ರಿಪೇರಿಗೆ ಬಂದರೆ ದುಬಾರಿಯಾಗುತ್ತದೆ ಎಂದು ಮಾಲಕರು ಹೇಳುತ್ತಾರೆ. ಹುಲ್ಲು ತೆಗೆಯುವ ಯಂತ್ರ, ಭತ್ತದ ಕಟಾವು ಯಂತ್ರ , ಟ್ರ್ಯಾಕ್ಟರ್ ಹೀಗೆ ಎಲ್ಲದಕ್ಕೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸ್ವಲ್ಪ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲೂ ಏರಿಕೆಯಾಗಿದೆ.
ಗಡಿನಾಡ ಪೆಟ್ರೋಲ್ ಬಂಕ್‌ನಲ್ಲಿ ರಶ್!
ಇಂಧನಗಳ ಬೆಲೆ ಏರಿಕೆಯಾಗಿದ್ದರೂ ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಪೆಟ್ರೋಲ್‌ಗೆ 2 ರೂ. ಹಾಗೂ ಡೀಸೆಲ್ ಗೆ 4 ರೂ. ದರ ಕಡಿಮೆ ಇದೆ. ಹೀಗಾಗಿ ಗಡಿನಾಡು ಪ್ರದೇಶವಾದ ಜಾಲ್ಸೂರು ಪೆಟ್ರೋಲ್ ಬಂಕ್‌ಗಳಲ್ಲಿ ವ್ಯವಹಾರ ಹೆಚ್ಚಾಗಿದೆ. ಕೇರಳ ಗಡಿಭಾಗದ ಪಂಜಿಕಲ್ಲು, ಪರಪ್ಪೆ, ಕೊಟ್ಯಾಡಿ, ಬೆಳ್ಳಿಪ್ಪಾಡಿ ಗ್ರಾಮಸ್ಥರು ತಮ್ಮ ವಾಹನಗಳಿಗೆ ಇಂಧನ ಹಾಕಿಸಿಕೊಳ್ಳಲು ಇಲ್ಲಿಗೆ ಬರುತ್ತಿದ್ದಾರೆ.
ಬೋರ್‌ವೆಲ್ ಒಂದಡಿಗೆ 5 ರೂ. ಏರಿಕೆ
ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾದ ಪರಿಣಾಮ ಬೋರ್‌ವೆಲ್ ಕೊರೆಯಲು 5 ರೂ.ನಷ್ಟು ಏರಿಕೆ ಮಾಡಲಾಗಿದೆ. ಮೊದಲು ಒಂದು ಅಡಿ ಬೋರ್‌ವೆಲ್ ಕೊರೆಯಲು 85 ರೂ. ನಿಗದಿಪಡಿಸಲಾಗಿತ್ತು. ಪ್ರಸ್ತುತ 90 ರೂ. ಮಾಡಿದ್ದಾರೆ. ಡೀಸೆಲ್ ಬೆಲೆ, ಸಾಮಗ್ರಿಗಳ ನಿರ್ವಹಣೆ, ಕೂಲಿ ಕಾರ್ಮಿಕರ ಸಂಬಳ ಹೀಗೆ ಎಲ್ಲವನ್ನೂ ಭರಿಸಲು ತೊಂದರೆಯಾಗುತ್ತಿದೆ ಎಂದು ಬೋರ್‌ವೆಲ್ ಯಂತ್ರ ಮಾಲಕರು ಹೇಳುತ್ತಾರೆ.
ವೆಚ್ಚ ಭರಿಸುವುದು ಕಷ್ಟ
ಬೋರ್‌ವೆಲ್ ಕೊರೆಯುವುದಕ್ಕೆ ಒಂದಡಿಗೆ 85ರಿಂದ 90 ರೂ. ಗೆ ಏರಿಸಿದ್ದೇವೆ. ಇದು ಮೂರು ತಿಂಗಳ ಅನಂತರದ ಬೆಳವಣಿಗೆ. ಎಲ್ಲ ವೆಚ್ಚಗಳನ್ನು ಭರಿಸುವುದು ಕಷ್ಟಕರವಾಗಿದೆ. ಹೀಗಾಗಿ ಹೆಚ್ಚು ಮಾಡಿದ್ದೇವೆ.
– ರಾಮಕೃಷ್ಣ,
ಬೋರ್‌ವೆಲ್ ಮಾಲಕರು
ದರ ಏರಿಕೆ ಅನಿವಾರ್ಯ
ಇಂಧನ ಬೆಲೆ ಏರಿಕೆಯಾಗಿರುವುದರಿಂದ ಸಹಜವಾಗಿ ಜೆಸಿಬಿ ಕೆಲಸದ ದರ ಏರಿಸುವುದು ಅನಿವಾರ್ಯವಾಗಿದೆ. 50 ರೂ. ಹೆಚ್ಚಿಸಿದ್ದೇವೆ. ಡೀಸೆಲ್ ವೆಚ್ಚ, ಜೆಸಿಬಿ ರಿಪೇರಿ, ಕೆಲಸಗಾರರ ಸಂಬಳ ಎಲ್ಲವನ್ನೂ ಗಮನಿಸಿ ಹೆಚ್ಚಿಸಲಾಗಿದೆ.
– ವಿಶ್ವನಾಥನ್, ಅರ್ಥ್ ಮೂವರ್ಸ್ ಮಾಲಕರು,
ಮುಳ್ಳೇರಿಯ
ಶಿವಪ್ರಸಾದ್ ಮಣಿಯೂರು