ಗಣೇಶ ಚತುರ್ಥಿ:ದೇವಸ್ಥಾನಗಳಲ್ಲಿ ಲಕ್ಷಾಂತರ ಭಕ್ತರಿಂದ ಪ್ರಸಾದ ಸ್ವೀಕಾರ
Team Udayavani, Aug 27, 2017, 12:00 PM IST
ಮಂಗಳೂರು/ಉಡುಪಿ/ಕಾಸರಗೋಡು: ಶುಕ್ರವಾರ ಗಣೇಶ ಚತುರ್ಥಿಯಂದು ವಿವಿಧ ಕಡೆಗಳಲ್ಲಿ ಮಳೆ ಇದ್ದರೂ ಲಕ್ಷಾಂತರ ಜನರು ವಿವಿಧ ದೇವಸ್ಥಾನಗಳು, ಸಾರ್ವಜನಿಕ ಗಣೇಶೋತ್ಸವದ ಪೆಂಡಾಲಿಗೆ ತೆರಳಿ ಪ್ರಸಾದವನ್ನು ಸ್ವೀಕರಿಸಿದರು. ಮಳೆಯಿಂದಾಗಿ ಶುಕ್ರವಾರ ಭೇಟಿ ನೀಡಲಾಗದ ಭಕ್ತರು ಶನಿವಾರದ ರಜೆಯಲ್ಲಿ ಭೇಟಿ ನೀಡಿದರು.
ದೇವಸ್ಥಾನಗಳು, ಪೆಂಡಾಲುಗಳಲ್ಲಿ 108, ಸಹಸ್ರನಾರಿಕೇಳ ಗಣಪತಿ ಹೋಮ, ಮೂಡುಗಣಪತಿ ಸೇವೆಗಳು ನಡೆದವು. ಗಣಪತಿ ದೇವಸ್ಥಾನಗಳಲ್ಲದೆ ಮಠ, ಇತರ ದೇವಸ್ಥಾನಗಳಲ್ಲಿಯೂ ಸಂಪ್ರದಾಯದಂತೆ ಗಣಪತಿ ವಿಗ್ರಹವನ್ನು ಇರಿಸಿ ಪೂಜಿಸಲಾಯಿತು.
ಪ್ರಸಿದ್ಧ ಗಣಪತಿ ದೇವಸ್ಥಾನಗಳಾದ ದ.ಕ. ಜಿಲ್ಲೆಯ ಶರವು, ಸೌತಡ್ಕ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆ ವಿನಾಯಕ,ಉದ್ಯಾವರ, ಉಪ್ಪೂರು, ಪಡುಬಿದ್ರಿ, ಹೆಬ್ರಿ ಸೋಮೇಶ್ವರ ದೇವಸ್ಥಾನಗಳಲ್ಲಿ ಕಿಕ್ಕಿರಿದ ಜನಸಂದಣಿ ಇತ್ತು.
ಶರವು ದೇವಸ್ಥಾನ
ಮಂಗಳೂರಿನ ಶರವು ದೇವಸ್ಥಾನಕ್ಕೆ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದರು. 300 ಕೆ.ಜಿ. ಗೋಧಿಯಿಂದ ತಯಾರಿಸಿದ ಅಪ್ಪ, ಹೋಮಕ್ಕಾಗಿ ಮಾಡಿದ 12 ಮೂಟೆ ಅರಳು, ಆರು ಮೂಟೆ ಅವಲಕ್ಕಿಯ ಅಷ್ಟದ್ರವ್ಯ ಪಂಚಗಜ್ಜಾಯ, ನಾಲ್ಕು ಕ್ವಿಂಟಾಲ್ ಕಡಲೆ ಬೇಳೆ ಪಂಚಗಜ್ಜಾಯಗಳನ್ನು ಭಕ್ತರು ಪಡೆದುಕೊಂಡರು. ಸುತ್ತಲೂ ಕಬ್ಬಿನ ಕೋಲು ಹುಗಿದು ಒಳಭಾಗದಲ್ಲಿ ಸುಮಾರು 5,000 ತೆಂಗಿನಕಾಯಿಗಳ ಪಲ್ಲಪೂಜೆ ವಿಶೇಷವಾಗಿತ್ತು. ದೇವಸ್ಥಾನಕ್ಕೆ ಬಂದ ಕಬ್ಬು, ಅರಳು, ಬಾಳೆಹಣ್ಣು, ನೈವೇದ್ಯಕ್ಕಾಗಿ ತಯಾರಿಸಿದ ಪಂಚಗಜ್ಜಾಯಗಳನ್ನು ಅಗತ್ಯವುಳ್ಳ ಶಾಲೆ, ಸಂಘ – ಸಂಸ್ಥೆಗಳಿಗೆ ವಿತರಿಸಲಾಯಿತು.
ಆನೆಗುಡ್ಡೆ ದೇವಸ್ಥಾನ
ಆನೆಗುಡ್ಡೆ ದೇವಸ್ಥಾನಕ್ಕೆ ಸುಮಾರು 35,000 ಭಕ್ತರು ಭೇಟಿ ನೀಡಿದರು. ಸುಮಾರು 12,350 ಪ್ಯಾಕೆಟ್ ಪಂಚಗಜ್ಜಾಯ, 5,000 ಕೊಟ್ಟೆ ಕಡುಬು ವಿತರಣೆಯಾಯಿತು. ಸುಮಾರು 8,500 ಜನರು ಭೋಜನ ಪ್ರಸಾದ ಸ್ವೀಕರಿಸಿದರು. ಸಹಸ್ರ ನಾರಿಕೇಳ ಗಣಪತಿ ಯಾಗ ನಡೆಯಿತು. ಮಳೆಯಿಂದಾಗಿ ಬೆಳಗ್ಗೆ ಜನಸಂದಣಿ ಕಡಿಮೆಯಿತ್ತು.
ಮಧೂರು ದೇವಸ್ಥಾನ
ಮಧೂರು ದೇವಸ್ಥಾನಕ್ಕೆ 25,000 ಭಕ್ತರು ಭೇಟಿ ನೀಡಿದರೆ ಸುಮಾರು 6,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು. 5 ಕ್ವಿಂ. ಅಕ್ಕಿ ಹುಡಿಯಿಂದ ತಯಾರಿಸಿದ ಅಪ್ಪ, ಸುಮಾರು 3,000ಕ್ಕೂ ಹೆಚ್ಚು ಪಂಚಗಜ್ಜಾಯ ಪ್ಯಾಕೆಟ್‌ಗಳನ್ನು ಪಡೆದುಕೊಂಡರು. ಮಳೆಯಿಂದಾಗಿ ಭಕ್ತರ ಭೇಟಿ ಕಡಿಮೆಯಾಗಲಿಲ್ಲ.
ಉದ್ಯಾವರ ದೇವಸ್ಥಾನ
ಉದ್ಯಾವರ ದೇವಸ್ಥಾನದಲ್ಲಿ ಇದೇ ದಿನ ಕದಿರು ಕಟ್ಟುವ ಹಬ್ಬ ನಡೆಯಿತು. ಊರಿನ ಭಕ್ತರು ಇದೇ ದಿನ ಕದಿರನ್ನು ಮನೆಗೆ ಕೊಂಡೊಯ್ದು ಕದಿರು ಕಟ್ಟಿದರು. ಸುಮಾರು 20,000 ಭಕ್ತರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. 108 ಕಾಯಿ ಗಣಪತಿ ಹೋಮಕ್ಕೆ 1,000 ಸೇವಾರ್ಥಿಗಳಿದ್ದರು. 1,129 ತೆಂಗಿನ ಕಾಯಿಯ ಮೂಡುಗಣಪತಿ ನಡೆಸಲಾಯಿತು. ರಾತ್ರಿ ಚಂದ್ರಮಂಡಲ ರಥೋತ್ಸವ ನಡೆಯಿತು.
ಸೌತಡ್ಕ ದೇವಸ್ಥಾನ
ಸೌತಡ್ಕ ದೇವಸ್ಥಾನಕ್ಕೆ ಬೆಳಗ್ಗೆ 4.30 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸುಮಾರು 50,000 ಭಕ್ತರು ಭೇಟಿ
ನೀಡಿದರು. ಮಧ್ಯಾಹ್ನ ಸುಮಾರು 5,000 ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಸುಮಾರು 6,000ಜನರು ಅಪ್ಪಕಜ್ಜಾಯ, 8,500 ಅವಲಕ್ಕಿ ಪಂಚಗಜ್ಜಾಯ, ಸುಮಾರು 2,000 ಲಡ್ಡು, 2,000 ಮೋದಕ, 1,500 ಕಡಲೆ ಪಂಚಗಜ್ಜಾಯ ಪ್ಯಾಕೆಟ್‌ಗಳನ್ನು ಪಡೆದುಕೊಂಡರು.
ಪೆರ್ಣಂಕಿಲ ದೇವಸ್ಥಾನ
ಪೆರ್ಣಂಕಿಲ ದೇವಸ್ಥಾನಕ್ಕೆ ಸುಮಾರು 10,000 ಭಕ್ತರು ಭೇಟಿ ಕೊಟ್ಟರು. ಅಪ್ಪ ಇಲ್ಲಿನ ವಿಶೇಷ. 1.5 ಕ್ವಿಂಟಾಲ್ ಅಕ್ಕಿಯ ಸುಮಾರು 75,000 ಅಪ್ಪ ಪ್ರಸಾದವನ್ನು ಭಕ್ತರು ಪಡೆದರು. 50 ಕೆ.ಜಿ. ಪಂಚಗಜ್ಜಾಯವನ್ನು ಮಾಡಲಾಗಿತ್ತು. ಸುಮಾರು 3,000 ಜನರು ಭೋಜನ ಸ್ವೀಕರಿಸಿದರು. ರಾತ್ರಿ ಹೂವಿನ ಪೂಜೆ ಸಂಪನ್ನಗೊಂಡಿತು.
ಗುಡ್ಡಟ್ಟು ದೇವಸ್ಥಾನ
ಗುಡ್ಡಟ್ಟು ದೇವಸ್ಥಾನಕ್ಕೆ ಸುಮಾರು 10,000 ಭಕ್ತರು ಭೇಟಿ ನೀಡಿದರು. ಸುಮಾರು 2,000 ಪ್ಯಾಕೆಟ್ ಪಂಚ
ಗಜ್ಜಾಯವನ್ನು ಭಕ್ತರು ಪಡೆದುಕೊಂಡರು. 700 ಭಕ್ತರು ಸೇವಾರ್ಥಿಗಳಾಗಿ ಗಣಪತಿ ಹೋಮದಲ್ಲಿ ಪಾಲ್ಗೊಂಡರು. 1,000 ಜನರು ಭೋಜನ ಸ್ವೀಕರಿಸಿದರು.
ಹಟ್ಟಿಯಂಗಡಿ ದೇವಸ್ಥಾನ
ಹಟ್ಟಿಯಂಗಡಿ ದೇವಸ್ಥಾನಕ್ಕೆ ಸುಮಾರು 10,000 ಭಕ್ತರು ಭೇಟಿ ನೀಡಿದರೆ ಸುಮಾರು 2,500 ಜನರು ಭೋಜನ ಪ್ರಸಾದ ಸ್ವೀಕರಿಸಿದರು. 5,000 ಪ್ಯಾಕೆಟ್ ಪಂಚಕಜ್ಜಾಯವನ್ನು ಭಕ್ತರು ಪಡೆದುಕೊಂಡರು.
ಪಡುಬಿದ್ರಿ ದೇವಸ್ಥಾನ
ಪಡುಬಿದ್ರಿ ದೇವಸ್ಥಾನಕ್ಕೆ ಸುಮಾರು 10,000 ಭಕ್ತರು ಭೇಟಿ ನೀಡಿದರು. 1.5 ಕ್ವಿಂಟಾಲ್ ಆಗುವಷ್ಟು ಪಂಚಗಜ್ಜಾಯ, ಸುಮಾರು 400 ಪ್ಯಾಕೇಟ್ ಅಪ್ಪವನ್ನು ಭಕ್ತರು ಪಡೆದರು. ಈಶ್ವರನಿಗೆ 1,000 ರುದ್ರಾಭಿಷೇಕ ಸೇವೆಗಳೂ ನಡೆದವು.
ಬಟ್ಟೆ ವಿನಾಯಕ ದೇವಸ್ಥಾನ
ಬಾರಕೂರಿನ ಬಟ್ಟೆ ವಿನಾಯಕ ದೇವಸ್ಥಾನಕ್ಕೆ ಸುಮಾರು 15,000 ಜನರು ಭೇಟಿ ಕೊಟ್ಟರು. ಸುಮಾರು 8,000 ಪಂಚಗಜ್ಜಾಯ ಪ್ಯಾಕೆಟ್, 4,000 ಕೊಟ್ಟೆ ಕಡುಬು ಪಡೆದುಕೊಂಡರು. 500 ಜನರಿಂದ ಒಂದು ಕಾಯಿ ಗಣಪತಿ ಹೋಮ ಸೇವೆ ನಡೆಯಿತು.
ಉಪ್ಪೂರು ದೇವಸ್ಥಾನ
ಏಕಮಾತ್ರ ಆಗಮೋಕ್ತ ಗಣಪತಿ ದೇವಸ್ಥಾನವಾದ ಉಪ್ಪೂರು ದೇಗುಲಕ್ಕೆ ಸುಮಾರು 10,000 ಭಕ್ತರು ಭೇಟಿ ನೀಡಿದರು. ಸುಮಾರು 600 ಪಂಚಗಜ್ಜಾಯ ಪ್ಯಾಕೆಟ್, 1,500 ಅಪ್ಪ, 700 ಕೊಟ್ಟೆ ಕಡುಬು ಪಡೆದುಕೊಂಡರು. ಗಣಪತಿ ಹೋಮಕ್ಕೆ 400 ಸೇವಾರ್ಥಿಗಳು ಇದ್ದರು.
ಅನಂತೇಶ್ವರ ದೇವಸ್ಥಾನ
ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿರುವ ಕೋಟೆ ಗಣಪತಿಯ ದರ್ಶನ ಮಾಡಿದರೆ 108 ಗಣಪತಿಯ ದರ್ಶನ ಮಾಡಿದಂತೆ ಎಂಬ ನಂಬಿಕೆ ಇರುವುದರಿಂದ ಗಣಪತಿಯ ಪ್ರಧಾನ ದೇವಸ್ಥಾನವಲ್ಲದಿದ್ದರೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. 600 ಗಣಪತಿ ಹೋಮ, 1,500 ಪಂಚಗಜ್ಜಾಯ ಸೇವೆಗಳು ನಡೆದವು.
ಸೋಮೇಶ್ವರ ದೇವಸ್ಥಾನ
ಕಾರ್ಕಳ ತಾಲೂಕು ಸೋಮೇಶ್ವರ ಗಣಪತಿ ದೇವಸ್ಥಾನಕ್ಕೆ ಸುಮಾರು 8,000 ಭಕ್ತರು ಭೇಟಿ ನೀಡಿದರು. 3,000 ಕಡಲೆ ಪಂಚಗಜ್ಜಾಯ, 150 ಗಣಪತಿ ಹೋಮ ಸೇವೆ, 1,000 ಮೋದಕ ಸೇವೆ ಮಾಡಿಸಿ ಪಡೆದುಕೊಂಡಿದ್ದಾರೆ. 14 ಮೂಡುಗಣಪತಿ ಸೇವೆ, ರಾತ್ರಿ ಸೋಣಾರತಿ ಸೇವೆ ನಡೆಯಿತು. 2,000 ಜನರಿಗೆ ಕಡುಬು ಉಪಾಹಾರ ವಿತರಣೆ ನಡೆಯಿತು.
ಇದಲ್ಲದೆ ಸಣ್ಣ ಸಣ್ಣ ಗಣಪತಿಯ ದೇವಸ್ಥಾನ ಗಳಲ್ಲಿಯೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದರು. ಉಡುಪಿ ಜಿಲ್ಲೆಯಲ್ಲಿ 436, ದ.ಕ. ಜಿಲ್ಲೆಯಲ್ಲಿ 372, ಕಾಸರಗೋಡು ಜಿಲ್ಲೆಯಲ್ಲಿ 21 ಕಡೆ ಸಾರ್ವಜನಿಕ ಗಣೇಶೋತ್ಸವಗಳು ಸಂಪನ್ನಗೊಂಡಿದ್ದು ಇಲ್ಲಿಗೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ಗಣೇಶೋತ್ಸವಗಳಲ್ಲಿಯೂ ಕೆಲವೆಡೆ ಭೋಜನದ ಏರ್ಪಾಟು ಮಾಡಲಾಗಿತ್ತು.
ಪೆಂಡಾಲುಗಳಲ್ಲಿ ಸಚಿವರು
ಸಚಿವರಾದ ಪ್ರಮೋದ್ ಮಧ್ವರಾಜ್, ಬಿ. ರಮಾನಾಥ ರೈ, ಯು.ಟಿ. ಖಾದರ್ ಅವರು ಗಣೇಶ ದೇವಸ್ಥಾನ ಮತ್ತು ವಿವಿಧ ಗಣೇಶೋತ್ಸವದ ಪೆಂಡಾಲುಗಳಿಗೆ ಭೇಟಿ ನೀಡಿದರು. ಮನೆಗಳಲ್ಲಿ ಗಣೇಶನ ವಿಗ್ರಹಗಳನ್ನು ಇರಿಸಿ ಪೂಜಿಸುವವರು ಶುಕ್ರವಾರವೇ ಜಲಸ್ತಂಭನ ಮಾಡಿದರು. ಪೆಂಡಾಲುಗಳಲ್ಲಿ ಕೆಲವರು ಶುಕ್ರವಾರ, ಕೆಲವರು ಶನಿವಾರ ಜಲಸ್ತಂಭನ ಮಾಡಿದರೆ ಕೆಲವು ಕಡೆ ಕೆಲವು ದಿನಗಳವರೆಗೆ ಇರಿಸಿ ವಿಗ್ರಹಗಳನ್ನು ಜಲಸ್ತಂಭನ ಮಾಡುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.