ಮರೋಳಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಅನಿಲ ಸೋರಿಕೆ; ಆತಂಕ ಸೃಷ್ಟಿ
Team Udayavani, Jan 20, 2019, 5:17 AM IST
ಮಹಾನಗರ: ನಗರದ ಮರೋಳಿಯಲ್ಲಿ ರಾ. ಹೆ. 75ರಲ್ಲಿ ಶನಿವಾರ ಅಪರಾಹ್ನ ಗ್ಯಾಸ್ ಟ್ಯಾಂಕರ್ ಒಂದು ಮಗುಚಿ ಬಿದ್ದು ಗ್ಯಾಸ್ ಸೋರಿಕೆಯಾದ ಕಾರಣ ಮರೋಳಿ, ಪಡೀಲ್ ಸುತ್ತಮುತ್ತ ಆತಂಕ ಸೃಷ್ಟಿಯಾಯಿತು.
ಮರೋಳಿ- ಪಡೀಲ್ ಜಂಕ್ಷನ್ ತನಕ ಸುಮಾರು 1 ಕಿ.ಮೀ. ಮಧ್ಯೆ ವಾಹನ ಸಂಚಾರವನ್ನು ನಿಷೇಧಿಸಿದ್ದರಿಂದ ವಾಹನ ಚಾಲಕರು, ಸವಾರರು ಮತ್ತು ಸುತ್ತ ಮುತ್ತಲ ಜನರು ತೀವ್ರ ತೊಂದರೆಗೊಳಗಾದರು.
ಎಂಆರ್‌ಪಿಎಲ್‌ನಿಂದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆಗಾಗಿ ಹಾಸನ ಮಾರ್ಗವಾಗಿ ಶಿವಮೊಗ್ಗಕ್ಕೆ ಅನಿಲ ಸಾಗಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಎಂಆರ್‌ಪಿಎಲ್‌ನಿಂದ ಹೊರಟು ನಂತೂರು ಜಂಕ್ಷನ್ ಮತ್ತು ಬಿಕರ್ನಕಟ್ಟೆ ಫ್ಲೈಓವರ್ ದಾಟಿ ಮುಂದಕ್ಕೆ ಹೋಗುತ್ತಿದ್ದಾಗ ಮರೋಳಿಯಲ್ಲಿ ಇಳಿಜಾರು ಝಿಗ್‌ಝ್ಯಾಗ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಅಪರಾಹ್ನ 2.15ರ ವೇಳೆಗೆ ರಸ್ತೆಯ ಎಡ ಬದಿಗೆ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ.
ಟ್ಯಾಂಕರ್‌ನಲ್ಲಿ ಚಾಲಕ ಶರವಣನ್ ಸಿ. (28) ಮಾತ್ರ ಇದ್ದು, ಅವರು ಸಣ್ಣ ಪುಟ್ಟ ತರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಟ್ಯಾಂಕರ್ ಮಗುಚಿ ಬಿದ್ದ ಕಾರಣ ಅನಿಲ ಸೋರಿಕೆಯಾಗಲು ಆರಂಭಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮರೋಳಿ, ಪಡೀಲ್ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಯಿತು. ಮನೆಗಳಲ್ಲಿ ಬೆಂಕಿಯನ್ನು ಉರಿಸುವಾಗ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಬಿಕರ್ಣಕಟ್ಟೆಯಿಂದ ಮರೋಳಿ ಮೂಲಕ ಪಡೀಲ್ ಕಡೆಗೆ ಸಾಗುವ ವಾಹನಗಳನ್ನು ಮರೋಳಿಯ ಬಳಿ ತಡೆದು ನಿಲ್ಲಿಸಿ ವಾಪಸ್ ಕಳುಹಿಸಲಾಗುತ್ತಿದೆ. ಪಡೀಲ್ ಭಾಗದಿಂದ ಮರೋಳಿ ಕಡೆಗೆ ಹೋಗುವ ವಾಹನಗಳನ್ನು ಪಡೀಲ್ ಜಂಕ್ಷನ್‌ನಲ್ಲಿ ತಡೆ ಹಿಡಿದು ಪಂಪ್‌ವೆಲ್ ಕಡೆಗೆ ಕಳುಹಿಸಲಾಗುತ್ತಿದೆ.
ಅಗ್ನಿ ಶಾಮಕ ದಳದ ಕಾರ್ಯಾಚರಣೆ
ಗ್ಯಾಸ್ ಸೋರಿಕೆಯಿಂದ ಯಾವುದೇ ದುಷ್ಪರಿಣಾಮ ಬೀರದಿರಲಿ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಮ್ಮ ವಾಹನಗಳಲ್ಲಿ ನೀರನ್ನು ತಂದು ಗ್ಯಾಸ್ ಟ್ಯಾಂಕರ್ ಮೇಲೆ ನಿರಂತರವಾಗಿ ಸಿಂಪಡಿಸಿ ರಕ್ಷಣಾ ಕಾರ್ಯ ಕೈಗೊಂಡರು. ಅಗ್ನಿ ಶಾಮಕ ವಾಹನಗಳು ಒಂದರ ಬಳಿಕ ಒಂದರಂತೆ ನೀರು ಹೊತ್ತು ತಂದಿದ್ದು, ನೀರು ಸಿಂಪರಣೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಖಾಸಗಿ ಟ್ಯಾಂಕರ್ ಮೂಲಕವೂ ನೀರು ತರಿಸಲಾಯಿತು.
ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನಿನ ಅಧಿಕಾರಿಗಳು ರಕ್ಷಣಾ ವಾಹನದೊಂದಿಗೆ ಬಂದು ಮಗುಚಿ ಬಿದ್ದ ಟ್ಯಾಂಕರ್‌ನಿಂದ ಅನಿಲವನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲು ಕಾರ್ಯಕ್ರಮ ರೂಪಿಸಿದರು. ಸಂಜೆ 3.50ರ ವೇಳೆಗೆ ಖಾಲಿ ಗ್ಯಾಸ್ ಟ್ಯಾಂಕರ್ ಆಗಮಿಸಿತು. ಸರಿ ಸುಮಾರು 4.30ರ ವೇಳೆಗೆ ಮಗುಚಿದ ಟ್ಯಾಂಕರ್‌ನಿಂದ ಅನಿಲವನ್ನು ಖಾಲಿ ಟ್ಯಾಂಕರ್‌ಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಯಿತು.
ಅಪಘಾತಕ್ಕೊಳಗಾದ ಟ್ಯಾಂಕರ್‌ನಿಂದ ಪೂರ್ತಿ ಅನಿಲವನ್ನು ಒಂದೇ ಬಾರಿಗೆ ಒಂದೇ ಟ್ಯಾಂಕರಿಗೆ ವರ್ಗಾಯಿಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, 3- 4 ಟ್ಯಾಂಕರ್‌ಗಳಿಗೆ ವರ್ಗಾಯಿಸಬೇಕಾಗಿದೆ. ಹಾಗಾಗಿ ಈ ಕಾರ್ಯಾಚರಣೆ ಪೂರ್ಣಗೊಳ್ಳಲು ಸುಮಾರು 6ರಿಂದ 8 ಗಂಟೆಗಳಷ್ಟು ಸಮಯ ಬೇಕಾಗ ಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ರವಿವಾರ ಬೆಳಗ್ಗಿನ ತನಕವೂ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಅಷ್ಟರ ತನಕ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಬೇಕಾಗ ಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಮರೋಳಿ- ಪಡೀಲ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದ್ದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನಗಳು ನಂತೂರಿನಿಂದ ಪಂಪ್‌ವೆಲ್ ಜಂಕ್ಷನ್- ಪಡೀಲ್ ಮಾರ್ಗವಾಗಿ ಚಲಿಸಬೇಕಾಗಿದೆ. ಆದರೆ ಪಂಪ್‌ವೆಲ್- ಪಡೀಲ್ ಮಾರ್ಗದಲ್ಲಿ ವಾಹನಗಳ ಒತ್ತಡ ಜಾಸ್ತಿ ಇರುವುದರಿಂದ ಕೆಲವೊಂದು ವಾಹನಗಳನ್ನು ಪಂಪ್‌ವೆಲ್‌ನಿಂದ ತೊಕ್ಕೊಟ್ಟು – ಕೊಣಾಜೆ- ಮುಡಿಪು- ಬಿ.ಸಿ. ರೋಡ್ ಮಾರ್ಗವಾಗಿ ಚಲಾಯಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಕನಾಡಿ ನಗರ ಠಾಣೆಯ ಮತ್ತು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಎರಡು ತಿಂಗಳ ಹಿಂದೆ
ಸುಮಾರು ಎರಡು ತಿಂಗಳ ಹಿಂದೆ ನಗರದ ನಂತೂರಿನಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದ ಘಟನೆ ಸಂಭವಿಸಿದ್ದು, ಈ ಸಂದರ್ಭ ಸುತ್ತಮುತ್ತಲಿನ ಜನರಲ್ಲಿ ಆತಂಕ ಉಂಟಾಗಿತ್ತು. ಅನಿಲ ಸೋರಿಕೆ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.
ಅಪಾಯಕಾರಿ ರಸ್ತೆ
ಮರೋಳಿ- ಪಡೀಲ್ ರಸ್ತೆ ಇಳಿಜಾರು ಪ್ರದೇಶವಾಗಿದ್ದು, ಅನೇಕ ತಿರುವುಗಳಿಂದ ಕೂಡಿದೆ. ಒಂದು ರೀತಿಯಲ್ಲಿ ಝಿಗ್ ಝ್ಯಾಗ್ ಮಾದರಿಯಲ್ಲಿರುವ ಈ ರಸ್ತೆ ಅಪಾಯಕಾರಿಯೂ ಆಗಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಚಾಲಕರು ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ಸಣ್ಣ ಪುಟ್ಟ ಅಪಘಾತಗಳು ಈ ಪ್ರದೇಶದಲ್ಲಿ ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ ಎನ್ನುತ್ತಾರೆ ಪೊಲೀಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.