“ಮಲೇರಿಯಾ ನಿರ್ಮೂಲನೆ ನನ್ನಿಂದ ಪ್ರಾರಂಭ’ ಜಾಥಾಕ್ಕೆ ಚಾಲನೆ
Team Udayavani, Jun 4, 2019, 6:00 AM IST
ಮಹಾನಗರ: ಮಲೇರಿಯಾ ವಿರೋಧ ಮಾಸಾಚರಣೆ ಅಂಗವಾಗಿ “ಮಲೇರಿಯಾ ನಿರ್ಮೂಲನೆ ನನ್ನಿಂದ ಪ್ರಾರಂಭ’ ಎಂಬ ಶೀರ್ಷಿಕೆಯಡಿ ಜಾಥಾ ಕಾರ್ಯಕ್ರಮ ಸೋಮವಾರ ನಗರದಲ್ಲಿ ನಡೆಯಿತು. ಜಿಲ್ಲಾ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಕೆ.ಎಂ.ಸಿ. ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಜಾಥಾ ನಗರದ ಜ್ಯೋತಿ ಜಂಕ್ಷನ್‌ನಲ್ಲಿ ಪ್ರಾರಂಭವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಅಲ್ಲಿ ಮುಕ್ತಾಯಗೊಂಡಿತು.
ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ| ಅರುಣ್ ಅವರು ಜಾಥಾ ವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್ ವೇಣುಗೋಪಾಲ್ ಮಾತನಾಡಿದರು. ಮಲೇರಿಯಾ ಬಗ್ಗೆ ತಿಳಿವಳಿಕೆ ಇದ್ದರೂ ಬಹಳಷ್ಟು ಮಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಆಗುತ್ತಿರಬೇಕು ಎಂದರು. ಕೆ.ಎಂ.ಸಿ. ಆಸ್ಪತ್ರೆಯ ಮೆಡಿಸಿನ್ ವಿಭಾಗದ ವೈದ್ಯ ಡಾ| ಚಕ್ರಪಾಣಿ, ಅಸೋಸಿಯೇಟ್ ಪ್ರೊಫೆಸರ್ ಡಾ| ದೀಪಕ್ ಮಡಿ, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಅನಿಮೇಷ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕರ್ತರಿಂದ ಜಾಗೃತಿ
ಮಲೇರಿಯಾ ನಿಯಂತ್ರಣ ಮಾಸಾಚರಣೆ ಅಂಗವಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಕಾರ್ಯಕರ್ತೆ ಯರು ಮನೆ ಮನೆ ಭೇಟಿ, ಹಾಸ್ಟೆಲ್ ಮತ್ತು ಆಶ್ರಮ ಭೇಟಿ, ಮಲೇರಿಯಾ ಹರಡುವ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಟೈರ್, ಎಳನೀರು ಚಿಪ್ಪು ತೆರವು ಮತ್ತಿತರ ಕೆಲಸಗಳನ್ನು ಅವರು ನಿರ್ವಹಿಸಲಿದ್ದಾರೆ.
60 ಮಂದಿ ಮಹಾನಗರ ಪಾಲಿಕೆಯ ವಿವಿಧೋದ್ದೇಶ ಕಾರ್ಯಕರ್ತರು (ಎಂ.ಪಿ. ಡಬ್ಲ್ಯು.), ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ 50 ಮಂದಿ ಆರೋಗ್ಯ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ 30 ಮಂದಿ ಕಾರ್ಯಕರ್ತರು, ಅವರಿಗೆ 10 ಮಂದಿ ಮೇಲ್ವಿಚಾರಕರು ಈ ತಂಡದಲ್ಲಿದ್ದಾರೆ.
ಜಾಗೃತಿ ಮೂಢಿಸಲಿರುವ ಕಾರ್ಯಕರ್ತರಿಗೆ ಕೆ.ಎಂ.ಸಿ. ವತಿಯಿಂದ ಟಿ-ಶರ್ಟ್‌ಗಳನ್ನು ವಿತರಿಸಲಾಯಿತು.
ಜಿಲ್ಲೆ ಮಲೇರಿಯಾ ಮುಕ್ತವಾಗಲಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಮಾತನಾಡಿ, ಮುಂದಿನ 2- 3 ವರ್ಷಗಳಲ್ಲಿ ದಕ್ಷಿಣ ಕನ್ನಡವನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ. ಮಲೇರಿಯಾ ಸಂಬಂಧಿತ ಪರೀಕ್ಷಾ ವರದಿಗಳು ಸಕಾಲದಲ್ಲಿ ದೊರೆಯುವಂತಾದರೆ ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಇತರ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಈ ದಿಶೆಯಲ್ಲಿ ಸಂಬಂಧ ಪಟ್ಟ ಎಲ್ಲರೂ ಗಮನ ಹರಿಸಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.