ಲಾಕರ್‌ನಲ್ಲಿರುವ ಚಿನ್ನದ ಮರು ಮೌಲ್ಯಮಾಪನಕ್ಕೆ ಸಹಕಾರ ಇಲಾಖೆ ಸೂಚನೆ
Team Udayavani, Jul 27, 2017, 9:30 AM IST
ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಟಿ - ಕೋಟಿ ನಕಲಿ ಚಿನ್ನ ಸಾಲ ಪ್ರಕರಣ
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಹಕಾರ ಬ್ಯಾಂಕ್ ಅಥವಾ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅತ್ತ ರಾಜ್ಯ ಸಹಕಾರ ಇಲಾಖೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಮುಂದಾಗಿದೆ.
ಉಡುಪಿಯ ಶಿರ್ವದ ಸಹಕಾರ ಬ್ಯಾಂಕ್ ಒಂದರಲ್ಲಿ ಶಂಕರ ಆಚಾರ್ಯ ಅವರು ನಕಲಿ ಚಿನ್ನ ಅಡವಿಟ್ಟು 65 ಲಕ್ಷ ರೂ. ಸಾಲ ಪಡೆದು ವಂಚನೆಗೈದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಂಗಳೂರು ನಗರದ ಫಳ್ನೀರ್‌ನ ಕೆಥೋಲಿಕ್ ಸಿರಿಯನ್ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 4.5 ಕೋ.ರೂ. ಸಾಲ ಪಡೆದು ವಂಚಿಸಿದ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಇದರ ಪರಿಣಾಮ ಕರಾವಳಿಯಲ್ಲಿ ಅದರಲ್ಲಿಯೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಸಹಕಾರ ಬ್ಯಾಂಕ್‌ಗಳು ಅಕ್ಷರಶಃ ಆತಂಕಕ್ಕೆ ಒಳಾಗಿವೆ. ಇದರಿಂದ ಒಂದು ಕಡೆ ಚಿನ್ನಾ ಭರಣಗಳನ್ನು ಬ್ಯಾಂಕ್ ಅಥವಾ ಸಹಕಾರ ಬ್ಯಾಂಕ್‌ಗಳಲ್ಲಿ ಅಡವಿಟ್ಟ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದರೆ, ಇನ್ನೊಂದೆಡೆ ಚಿನ್ನಾಭರಣ ಪಡೆದು ಅದಕ್ಕೆ ಬದಲಿಯಾಗಿ ಕೋಟ್ಯಂತರ ರೂ. ಸಾಲ ನೀಡಿರುವ ಬ್ಯಾಂಕ್‌ಗಳು ಹಾಗೂ ಕೋ- ಆಪರೇಟಿವ್ ಸೊಸೈಟಿಗಳು ತಮ್ಮ ಲಾಕರ್‌ನಲ್ಲಿ ಭದ್ರವಾಗಿರುವ ಚಿನ್ನದ ಪೈಕಿ ಅಸಲಿ ಎಷ್ಟು, ನಕಲಿ ಎಷ್ಟು ಎಂಬ ಸಂಶಯಕ್ಕೆ ಒಳಗಾಗಿವೆೆ.
ಕಳೆದ ಒಂದು ತಿಂಗಳಿಂದ ಕರಾವಳಿಯಲ್ಲಿ ಬೆಳಕಿಗೆ ಬಂದಿರುವ ನಕಲಿ ಚಿನ್ನದ ಮೇಲೆ ಸಾಲ ಪಡೆದು ವಂಚಿಸಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಹಕಾರ ಇಲಾಖೆಯು ಆ ದಿಕ್ಕಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿನ್ನಾಭರಣ ಸಾಲ ನೀಡುತ್ತಿರುವ ಸುಮಾರು 350 ಸಹಕಾರ ಸೊಸೈಟಿಗಳು ಸೀಮಿತ ಅವಧಿಯೊಳಗೆ ತಮ್ಮಲ್ಲಿ ಅಡವು ಇಟ್ಟಿರುವ ಎಲ್ಲ ಮಾದರಿಯ ಚಿನ್ನಾಭರಣಗಳನ್ನು ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಿ ಅದರ ಗುಣಮಟ್ಟ ಹಾಗೂ ಮೌಲ್ಯ ದೃಢೀಕರಿಸಿ ಆ ಬಗ್ಗೆ ಸಹಕಾರ ಇಲಾಖೆಗೆ ಮಾಹಿತಿ ನೀಡುವಂತೆ ಇದೀಗ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ. ಸಲೀಂ ಸುತ್ತೋಲೆ ಕಳುಹಿಸಲು ತೀರ್ಮಾನಿಸಿದ್ದಾರೆ.
ಸೊಸೈಟಿಗಳ ಜವಾಬ್ದಾರಿ
ಈ ಬಗ್ಗೆ ‘ಉದಯವಾಣಿ’ ಜತೆ ಮಾತನಾಡಿದ ಅವರು, ‘ದ.ಕ. ಜಿಲ್ಲೆಯಲ್ಲಿ ಸದ್ಯ 843 ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 350 ಸೊಸೈಟಿಗಳು ಚಿನ್ನಾಭರಣ ಸಾಲ ನೀಡುತ್ತಿವೆ. ಪ್ರತಿ ಸೊಸೈಟಿಯೂ ಚಿನ್ನಾ ಭರಣ ಸಾಲ ನೀಡುವ ಸಂಬಂಧ ಅದರದ್ದೇ ಆದ ನಿಯಮ- ನಿಬಂಧನೆಗಳನ್ನು ಹೊಂದಿವೆೆ. ಗ್ರಾಹಕರು ಚಿನ್ನ ಅಡವಿಟ್ಟು ಸಾಲ ಪಡೆಯುವಾಗ ಆ ಚಿನ್ನವನ್ನು ಆಯಾ ಸಹಕಾರ ಬ್ಯಾಂಕ್‌ಗಳ ಜತೆಗೆ ಒಪ್ಪಂದ ಮಾಡಿಕೊಂಡಿರುವ ಚಿನ್ನ ಪರೀಕ್ಷಕರಿಂದ ಪರಿಶೀಲಿಸಿ, ಅವರು ನೀಡುವ ವಿವರ ಹಾಗೂ ಮೌಲ್ಯವನ್ನು ಪರಿಗಣಿಸಿ ಸಾಲ ನೀಡುವ ಕ್ರಮವಿದೆ. ಆದರೆ ಕೆಲವೊಮ್ಮೆ ಚಿನ್ನದ ಬಗ್ಗೆ ಸಂಶಯ ಬಾರದೆ ಅಥವಾ ಸಂಶಯ ಬಂದರೂ ಕೂಡ ಗೊತ್ತಾಗದಂತೆ ಚಿನ್ನ ಪರೀಕ್ಷಕ ವ್ಯವಹರಿಸಿದ ಕಾರಣಕ್ಕಾಗಿ ನಕಲಿ ಚಿನ್ನ ಸೊಸೈಟಿ ಸೇರುವಂತಾಗುವ ಅಪಾಯಗಳಿರುತ್ತವೆೆ. ಹೀಗಾಗಿ ಸಂಬಂಧಿತ ಸೊಸೈಟಿಯ ಆಡಳಿತ ಮಂಡಳಿ ಇದರ ಬಗ್ಗೆ ಪೂರ್ಣ ಎಚ್ಚರಿಕೆ ವಹಿಸಬೇಕಿದೆ’ ಎನ್ನುತ್ತಾರೆ.
‘ಪ್ರಸ್ತುತ ಕರಾವಳಿ ಭಾಗದಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಮುನ್ನೆಚ್ಚರಿಕೆ ವಹಿಸಲು ತೀರ್ಮಾನಿಸಿದೆ. ಅದರಂತೆ ಜಿಲ್ಲೆ ಯಲ್ಲಿ ಚಿನ್ನದ ಮೇಲೆ ಸಾಲ ನೀಡುವ ಎಲ್ಲ ಸಹಕಾರ ಬ್ಯಾಂಕ್‌ಗಳಿಗೆ ಸುತ್ತೋಲೆ ಹೊರಡಿಸಲಾಗುವುದು. ಆ ಮೂಲಕ ತಮ್ಮಲ್ಲಿರುವ ಎಲ್ಲ ಚಿನ್ನಾಭರಣವನ್ನು ನಕಲಿ ಅಥವಾ ಅಸಲಿಯೋ ಎಂಬ ಬಗ್ಗೆ ಚಿನ್ನ ಪರಿಶೀಲಕರಿಂದ ತಪಾಸಣೆಗೆ ಒಳಪಡಿಸಿ ಸೂಕ್ತ ವರದಿ ನೀಡುವಂತೆ ಸೂಚಿಸಲಾಗುವುದು’ ಎಂದು ತಿಳಿಸಿದ್ದಾರೆ.
ಬ್ಯಾಂಕ್‌ಗಳಿಗಿವೆ ಆರ್‌ಬಿಐ ಮಾರ್ಗಸೂಚಿ
ಬ್ಯಾಂಕುಗಳು ಅಡವಿಡುವ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷೆಗೆ ಒಳಪಡಿಸಿ ಅದರ ಮೌಲ್ಯದ ಶೇ. 75ರಷ್ಟು ಸಾಲವನ್ನು ಮಾತ್ರ ನೀಡಬಹುದು ಎಂದು ಆರ್‌ಬಿಐ ಮಾರ್ಗ ಸೂಚಿ ಹೇಳುತ್ತದೆೆ. ಚಿನ್ನದ ಪರಿ ಶುದ್ಧತೆಯು 22 ಕ್ಯಾರೆಟ್‌ಗಿಂತ ಕಡಿಮೆ ಇದ್ದರೆ ಅದರ ನೈಜ ಮೌಲ್ಯಕ್ಕನುಗುಣವಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ನೀಡಬೇಕು. ಅಲ್ಲದೆ ಬ್ಯಾಂಕು ಗಳು ಚಿನ್ನಾಭರಣ ಈಡಿನ ಸಾಲ ನೀಡುವಾಗ ಬ್ಯಾಂಕುಗಳ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಅಗತ್ಯ ಹಾಗೂ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಆರ್‌ಬಿಐ ತಿಳಿಸುತ್ತದೆ.
ಪ್ರತೀ ಗ್ರಾಂ ಚಿನ್ನದ ಮೌಲ್ಯವನ್ನು ನಿರ್ಧರಿಸಿ ಬ್ಯಾಂಕುಗಳು ಸಾಲ ನೀಡುತ್ತವೆ. ಬ್ಯಾಂಕಿನ ಅಪ್ರೈಸರ್ ನಡೆಸುವ ಮೌಲ್ಯ ಮಾಪನದ ಹೊರತಾಗಿ ಇನ್ನೊಬ್ಬ ಅಪ್ರೈಸರ್‌ರಿಂದ ಸೆಕೆಂಡ್ ಒಪೀನಿಯನ್ ಪಡೆದುಕೊಳ್ಳಬೇಕೆಂಬ ನಿಯಮವಿದೆ. ಅಲ್ಲದೆ ಚಿನ್ನದ ಪರಿಶುದ್ಧತೆಯ ಬಗ್ಗೆ ಸಂಶಯವಿದ್ದರೆ ಅದನ್ನು ಥರ್ಡ್ ಪಾರ್ಟಿಯಿಂದ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.
ಸಹಕಾರ ಸಂಸ್ಥೆಗಳಿಗೆ ಸಾಲದ ನೀತಿ ಅಗತ್ಯ
ನಕಲಿ ಚಿನ್ನಾಭರಣ ಸಾಲ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ‘ರಾಷ್ಟ್ರೀಕೃತ ಬ್ಯಾಂಕ್ ಅಥವಾ ಕೆಲವು ಸಹಕಾರ ಸಂಸ್ಥೆಗಳಲ್ಲಿ ಚಿನ್ನಾಭರಣ ಸಾಲಕ್ಕೆ ಸಂಬಂಧಿಸಿ ಆರ್‌ಬಿಐ ನಿಯಮಗಳು ಜಾರಿಯಲ್ಲಿವೆ. ಆದರೆ ಸಹಕಾರ ಸಂಸ್ಥೆಗಳು ಎಷ್ಟು ಸಾಲ ನೀಡಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿಯಮವಿರಲಿಲ್ಲ. ಇದ್ದರೂ ಅದನ್ನು ಪಾಲಿಸುವ ಕಡೆಗೆ ಕೆಲವರು ಗಮನಹರಿಸಿಲ್ಲ. ಇದಕ್ಕಾಗಿ ಸಹಕಾರ ಸಂಸ್ಥೆಗಳಿಗೆ ಸಾಲದ ನೀತಿ ಜಾರಿಗೊಳಿಸುವ ಅಗತ್ಯ ಇದೆ’ ಎನ್ನುತ್ತಾರೆ.
3 ಬಾರಿ ಮಾತ್ರ ಚಿನ್ನಾಭರಣ ಸಾಲ
ಚಿನ್ನಾಭರಣ ಸಾಲ ಕೊಡುವಾಗ ಸಹಕಾರ ಸಂಸ್ಥೆಗಳು ಬಹಳಷ್ಟು ಎಚ್ಚರಿಕೆ ವಹಿಸಬೇಕು. ಯಾವುದೇ ಸಹಕಾರ ಬ್ಯಾಂಕ್ ಶಾಖೆಯು ಒಬ್ಬ ವ್ಯಕ್ತಿಗೆ ಗರಿಷ್ಠವೆಂದರೆ ಕೇವಲ ಮೂರು ಬಾರಿ ಚಿನ್ನಾಭರಣ ಸಾಲ ನೀಡಲು ಮಾತ್ರ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಈಗಾಗಲೇ ಎಲ್ಲ ಬ್ಯಾಂಕ್ ಶಾಖೆಗಳಿಗೆ ಸುತ್ತೋಲೆ ಕಳುಹಿಸಿಸಲಾಗಿದೆ. ಜತೆಗೆ ಚಿನ್ನಾಭರಣದ ಮೌಲ್ಯ ಹಾಗೂ ಗುಣಮಟ್ಟದ ಬಗ್ಗೆ ಎರಡನೇ ವ್ಯಕ್ತಿಯಿಂದಲೂ ಪರಿಶೀಲಿಸುವ ಕೆಲಸ ವನ್ನು ಸೊಸೈಟಿಗಳು ಮಾಡಬೇಕು. ಜತೆಗೆ ಸಾಲ ಪಡೆಯುವ ವ್ಯಕ್ತಿಯ ಕುರಿತ ಪೂರ್ವಾಪರ ವಿವರಗಳನ್ನು ಸೊಸೈಟಿಯ ಅಧಿಕಾರಿ ವರ್ಗ ಹೊಂದಿರಬೇಕು.
– ಡಾ| ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್
ನಕಲಿ ಚಿನ್ನಾಭರಣ ಸಾಲ ಹೊಸದೇನಲ್ಲ !
2014ರಲ್ಲಿ ಪ್ರತಿಷ್ಠಿತ ಬ್ಯಾಂಕ್‌ನ ತೊಕ್ಕೊಟ್ಟು ಶಾಖೆಯಲ್ಲಿ ಕೆಲವು ಗ್ರಾಹಕರು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದರು. ಸುಮಾರು 11.97 ಲಕ್ಷ ರೂ. ವಂಚಿಸಲಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬ್ಯಾಂಕ್ ನೇಮಿಸಿದ ಚಿನ್ನಾಭರಣ ಮೌಲ್ಯಮಾಪಕ ಚಿನ್ನ ಅಸಲಿಯಾಗಿದೆ ಎಂದು ದೃಢೀಕರಣ ನೀಡಿದ್ದರು. ಆದರೆ ಬ್ಯಾಂಕ್ ಸಿಬಂದಿ ಅನುಮಾನದಿಂದ ಅದನ್ನು ಬೇರೊಬ್ಬರ ಬಳಿ ಪರಿಶೀಲನೆಗೆ ಕಳುಹಿಸಿದಾಗ ಚಿನ್ನ ನಕಲಿ ಎಂಬುದು ಪತ್ತೆಯಾಗಿತ್ತು. ಕಳೆದ ವರ್ಷ ಕಾಸರಗೋಡಿನ ಸಹಕಾರ ಬ್ಯಾಂಕ್‌ನ ಎರಡು ಶಾಖೆಗಳಲ್ಲಿ ನಕಲಿ ಒಡವೆ ಅಡವಿಟ್ಟು ನಾಲ್ಕು ಕೋಟಿ ರೂ. ಗಳಿಗೂ ಹೆಚ್ಚು ಹಣ ಲಪಟಾಯಿಸಿದ ಘಟನೆ ನಡೆದಿತ್ತು. ಈ ಸಂಬಂಧ ಸಹಕಾರ ಬ್ಯಾಂಕ್‌ನ ಮ್ಯಾನೇಜರ್, ಚಿನ್ನಾಭರಣ ಮೌಲ್ಯಮಾಪಕರು ಹಾಗೂ 137 ಗ್ರಾಹಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾಸರಗೋಡಿನ ಹಲವು ಸಹಕಾರ ಬ್ಯಾಂಕ್‌ಗಳಲ್ಲಿ ಇಂತಹ ಘಟನೆ ಮರುಕಳಿಸಿತ್ತು. ಮಲ್ಪೆಯಲ್ಲೂ ಇಂತಹ ಪ್ರಕರಣವೊಂದು ವರದಿಯಾಗಿತ್ತು. ಉಡುಪಿಯ ಶಿರ್ವದಲ್ಲಿ ಇತ್ತೀಚೆಗೆ, ಸಹಕಾರ ಬ್ಯಾಂಕ್ ಒಂದರಲ್ಲಿ ಶಂಕರ ಆಚಾರ್ಯ ಅವರು ನಕಲಿ ಚಿನ್ನ ಅಡವಿಟ್ಟು 65 ಲಕ್ಷ ರೂ. ಸಾಲ ಪಡೆದು ವಂಚನೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮತ್ತೆ ಮಂಗಳೂರು ಫಳ್ನೀರ್‌ನ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸುಮಾರು 4.5 ಕೋ.ರೂ. ಸಾಲ ಪಡೆದಿರುವುದು ಗಮನಾರ್ಹ.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.