ಬಿಜೆಪಿಗೆ ಸುವರ್ಣ ಯುಗ: ನಳಿನ್ ಕುಮಾರ್
Team Udayavani, Sep 12, 2019, 5:00 AM IST
ಮಂಗಳೂರು: ಭಾರತೀಯ ಜನತಾ ಪಕ್ಷವು ಹಿರಿಯರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ಸುವರ್ಣ ಯುಗದಲ್ಲಿದೆ. ಕೇಂದ್ರ ಸರಕಾರವು ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನ-ಮಾನವನ್ನು ರದ್ದುಪಡಿ ಸುವ ಮೂಲಕ ನುಡಿದಂತೆ ನಡೆದಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಬುಧವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಮ ಮಂದಿರ ನಿರ್ಮಾಣ ಸೇರಿದಂತೆ ಇನ್ನೂ ಕೆಲವು ಐತಿಹಾಸಿಕ ತೀರ್ಮಾನಗಳು ಮಾಡಲು ಬಾಕಿ ಯಿದ್ದು, ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಸದಸ್ಯತ್ವವನ್ನು ವಿಸ್ತರಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಪದಾಧಿಕಾರಿಗಳು ಸಹಕರಿಸಬೇಕು ಎಂದರು.
ಹುದ್ದೆ ಇರುವುದು ಪಕ್ಷಕ್ಕೆ ದುಡಿಯಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೂತ್ ಮಟ್ಟಕ್ಕೆ ತೆರಳಿ ಸದಸ್ಯತ್ವ ಅಭಿಯಾನ ಮಾಡುತ್ತಾರೆ. ಆದ್ದರಿಂದ ಪಕ್ಷದ ಪದಾಧಿಕಾರಿಗಳು ಕೂಡ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪದಾಧಿಕಾರಿಗಳ ಹುದ್ದೆ ವಿಸಿಟಿಂಗ್ ಕಾರ್ಡ್‌ಗಾಗಿ, ಜಾಹೀರಾತು ನೀಡಲು ಅಥವಾ ಕಟೌಟ್ ಹಾಕುವುದಕ್ಕೆ ಇರುವುದಲ್ಲ. ಪಕ್ಷದ ಕೆಲಸ ಮಾಡುವುದಕ್ಕಾಗಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದು, ಈ ದಿಶೆಯಲ್ಲಿ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದರು.
ಮಹಾತ್ಮಾ ಗಾಂ ಧಿ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ 150 ಕಿ.ಮೀ. ಪಾದಯಾತ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಗರಿಷ್ಠ ಪರಿಹಾರ ನಿರೀಕ್ಷೆ: ಕೋಟ
ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಖಾತೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ಗರಿಷ್ಠ ಮೊತ್ತ ಬಿಡುಗಡೆ ಮಾಡುವ ವಿಶ್ವಾಸವಿದೆ. ಸಂತ್ರಸ್ತರನ್ನು ಗುರುತಿಸುವ ಬಗ್ಗೆ ಅಧಿಕಾರಿಗಳನ್ನು ಮಾತ್ರ ನಂಬಿದರೆ ಆಗದು, ಜನಸಾಮಾನ್ಯರ ಗೊಂದಲ ನಿವಾರಿಸಲು ಪಕ್ಷ ಕೂಡ ಮುತುವರ್ಜಿಯಿಂದ ಕೆಲಸ ಮಾಡ ಬೇಕು ಎಂದರು. ವಿಪಕ್ಷದವರ ಆರೋಪಗಳ ಬಗ್ಗೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಪಕ್ಷದ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಪ್ರತಾಪ ಸಿಂಹ ನಾಯಕ್ ವೇದಿಕೆಯಲ್ಲಿದ್ದರು.
ರಾಜಕೀಯದಲ್ಲಿ ಮಸಾಲೆ ಇದ್ದರೆ ಸುದ್ದಿ
ರಾಜಕೀಯದಲ್ಲಿ ಮಸಾಲೆ ಬೇಕು. ಆಗ ಅದು ಸುದ್ದಿ ಆಗುತ್ತದೆ. ಅದಕ್ಕಾಗಿ ಕೆಲವು ಮಾಧ್ಯಮಗಳು ಬಿಜೆಪಿ ಬಗ್ಗೆ ಋಣಾತ್ಮಕ ಸುದ್ದಿಗಳನ್ನು ಬಿತ್ತರಿಸುತ್ತಿವೆ. ನಮ್ಮಲ್ಲಿ ಭಿನ್ನಾಪ್ರಾಯ ಇಲ್ಲ. ಕೋರ್ ಕಮಿಟಿ ಸಭೆ ಮುಖ್ಯಮಂತ್ರಿ ನೇತೃತ್ವದಲ್ಲಿಯೇ ನಡೆದಿದೆ. ಆರ್. ಅಶೋಕ್ ಅವರು ಸಭೆಗೆ ಹಾಜರಾಗದಿರಲು ಅಸೌಖ್ಯವೇ ಕಾರಣ ಎಂದು ನಳಿನ್ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.