ಖಾಸಗಿ ಕ್ಷೇತ್ರದಲ್ಲಿ ಉತ್ತಮ ಆಡಳಿತ ಸಾಧ್ಯ
ಮಂಗಳೂರು ಲಿಟ್ ಫೆಸ್ಟ್ 2019 ಸಮಾರೋಪದಲ್ಲಿ ಕೇಂದ್ರ ಸಚಿವ ಠಾಕೂರ್
Team Udayavani, Dec 1, 2019, 5:42 AM IST
ಮಂಗಳೂರು: ಖಾಸಗಿ ರಂಗದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯ ಆಗುವುದರಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಬೇಕಾಗಿರುವುದರಿಂದ ಸರಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಸಂಸ್ಥೆಯನ್ನು ಖಾಸಗಿಗೆ ವಹಿಸಲು ನಿರ್ಧರಿಸಲಾಗಿದೆ. ಈ ದಿಶೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದರು.
ಶನಿವಾರ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ “ಭಾರತದ ಪರಿಕಲ್ಪನೆ- ಇಂದು ಮತ್ತು ನಾಳೆ’ ಎಂಬ ಶೀರ್ಷಿಕೆಯಡಿ ನಡೆದ ಎರಡನೆಯ “ಮಂಗಳೂರು ಲಿಟ್ ಫೆಸ್ಟ್’ ನಲ್ಲಿ “ಮನಿ ಮ್ಯಾಟರ್’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಪಿಸಿಎಲ್ ಲಾಭದಾಯಕವಾಗಿ ನಡೆಯುತ್ತಿರುವಾಗ ಅದನ್ನು ಖಾಸಗಿಗೆ ವಹಿಸುವುದು ಸರಿಯೇ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಷ್ಟದಲ್ಲಿ ನಡೆಯುತ್ತಿರುವ ಉದ್ಯಮವನ್ನು ವಹಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲವಲ್ಲ ಎಂದರು.
ದೇಶದ ಹಿತಾಸಕ್ತಿ
ಸರಕಾರವು ಪ್ರತಿಯೊಂದು ನಿರ್ಧಾರವನ್ನು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕೈಗೊಳ್ಳುತ್ತಿದೆ. ಇದರಿಂದ ಪ್ರಾರಂಭದಲ್ಲಿ ಜನರಿಗೆ ಸ್ವಲ್ಪ ತೊಂದರೆಗಳಾಗಬಹುದು. ದೇಶಕ್ಕಾಗಿ ಅದನ್ನು ಸಹಿಸಬೇಕಾಗುತ್ತದೆ ಎಂದರು.
ದೇಶದ ಆರ್ಥಿಕತೆಯ ಅಡಿಗಲ್ಲು ಗಟ್ಟಿಯಾಗಿದೆ. ಇದರಿಂದಲೇ ವಿದೇಶಿಗರಿಗೆ ಭಾರತದ ಮೇಲೆ ವಿಶ್ವಾಸ ಬಂದಿದ್ದು, ಹೂಡಿಕೆ ಮಾಡಲು ಅಧಿಕ ಪ್ರಮಾಣದಲ್ಲಿ ಮುಂದೆ ಬರುತ್ತಿದ್ದಾರೆ. 5 ವರ್ಷಗಳಲ್ಲಿ 447 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಬಂದಿದ್ದು, 2025ರ ವೇಳೆಗೆ ಈ ಮೊತ್ತ 5 ಟ್ರಿಲಿಯನ್ ಡಾಲರ್ ತಲುಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ 1 ಟ್ರಿಲಿಯನ್ ಡಾಲರ್ ಸಾಧನೆ ಆಗಿದೆ ಎಂದರು.
ತೆರಿಗೆ ಸಂಗ್ರಹ ವೃದ್ಧಿ
ತೆರಿಗೆದಾರರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದು, ಪ್ರಮಾಣ ಶೇ. 15ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು. ವಿದೇಶ ಗಳಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ಆಮದು ಆಗುವುದರಿಂದ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಖರ್ಚಾಗುತ್ತದೆ. ಉಳಿತಾಯದ ನಿಟ್ಟಿನಲ್ಲಿ ಭಾರತದಲ್ಲಿಯೇ ವಿದೇಶಿ ಕಂಪೆನಿಗಳ ಉತ್ಪನ್ನಗಳ ತಯಾರಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಜನ್‌ಧನ್ ಖಾತೆದಾರರಿಗೆ ಮುದ್ರಾ ಸಾಲ ನೀಡಿಕೆಯನ್ನು ನಿರಾಕರಿಸಲಾಗದು; ಹಾಗೇನಾದರೂ ಸಾಲ ನೀಡಲು ಬ್ಯಾಂಕುಗಳು ನಿರಾಕರಿಸಿದರೆ ತನಗೆ ತಿಳಿಸಬೇಕು ಎಂದು ಅನುರಾಗ್ ಸಿಂಗ್ ಠಾಕೂರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಪೌಷ್ಟಿಕತೆ ಅಂಕಿ-ಅಂಶ
ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲು ತ್ತಿರುವ ಜನರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ವರದಿ ತಯಾರಿಸಿದ್ದು, ಶೀಘ್ರದಲ್ಲಿಯೇ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದರು. ಲೆಕ್ಕ ಪರಿಶೋಧಕ ವಿವೇಕ್ ಮಲ್ಯ ಗೋಷ್ಠಿಯ ಸಮನ್ವಯಕಾರರಾಗಿದ್ದರು.
ಹಿಂದುತ್ವದಿಂದ ಬಹುತ್ವ: ಕಿಯೋನ್‌ರಾಡ್ ಎಲ್‌ಸ್ಟ್
ಮಂಗಳೂರು: ಭಾರತದಲ್ಲಿ ಹಿಂದುತ್ವದಿಂದಾಗಿ ಬಹುತ್ವ ಸಾಧ್ಯವಾಗಿದೆ ಎಂದು ವಿದೇಶಿ ಮೂಲದ ಹಿಂದುತ್ವ ಪ್ರತಿಪಾದಕ, ಲೇಖಕ ಕಿಯೋನ್‌ರಾಡ್ ಎಲ್‌ಸ್ಟ್ ಹೇಳಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಾಕಿಸ್ಥಾನದಲ್ಲಿ ಹಿಂದುತ್ವ ಪ್ರಬಲವಾಗಿಲ್ಲ. ಹಾಗಾಗಿ ಅಲ್ಲಿ ಬಹುತ್ವವಿಲ್ಲ. ಭಾರತ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಸಿಗದ ಸೌಲಭ್ಯಗಳು ಅಲ್ಪಸಂಖ್ಯಾಕರಿಗೆ ದೊರೆಯುತ್ತಿವೆೆ. ಹೊಸ ಭಾರತ ಅವರಿಗೆ ಒಳ್ಳೆಯ ದಿನಗಳನ್ನು ಕೊಟ್ಟಿದೆ. ಪಾಕ್‌ನಲ್ಲಿ ಅಲ್ಪಸಂಖ್ಯಾಕರ ಸ್ಥಿತಿ ಉತ್ತಮವಾಗಿಲ್ಲ. ಭಾರತ ಬಹುದೊಡ್ಡ ಪ್ರಜಾಪ್ರಭುತ್ವವಾಗಿದ್ದರೂ ಪ್ರಸ್ತುತ ಕಾಲಘಟ್ಟದಲ್ಲಿ ಒಗ್ಗಟ್ಟು ಅತೀ ಅಗತ್ಯವಾಗಿದೆ ಎಂದರು.
ಹಿಂದೂಗಳಿಗೆ ನ್ಯಾಯ
ಅಯೋಧ್ಯೆ ವಿಚಾರದಲ್ಲಿ ಕೊನೆಗೂ ಹಿಂದೂಗಳಿಗೆ ನ್ಯಾಯ ದೊರೆತಿದೆ. ಅಯೋಧ್ಯೆ ಹಿಂದೂಗಳ ಆರಾಧನಾ ಸ್ಥಳವಾಗಿರುವುದರಿಂದ ಅದು ಹಿಂದೂಗಳಿಗೆ ಅರ್ಹವಾಗಿಯೇ ಸಿಗಬೇಕಿತ್ತು. ದೇಶದ ಬಹುಸಂಖ್ಯಾಕರಿಗೆ ಸಮಾನ ಅಧಿಕಾರ ಬೇಕಾಗಿದೆ ಎಂದು ಕಿಯೋನ್‌ರಾಡ್ ಹೇಳಿದರು.
ಇನ್ನೋರ್ವ ಚಿಂತಕ ಆರ್. ಜಗನ್ನಾಥನ್ ಮಾತನಾಡಿ, ಭಾರತ್ ಕಲ್ಪನೆ ಮತ್ತು ಇಂಡಿಯಾ ಕಲ್ಪನೆಗಳು ಒಂದಾಗಬೇಕು. ಭಾರತೀಯ ಮುಸ್ಲಿಮರೂ “ಭಾರತ್ ಕಲ್ಪನೆ’ಯನ್ನು ಒಪ್ಪಿಕೊಳ್ಳಬೇಕಿದೆ. ಭಾರತದ ಧಾರ್ಮಿಕ ಇತಿಹಾಸ ಶಾಸ್ತ್ರವನ್ನು ಹೊಸದಾಗಿ ರಚಿಸುವ ಅಗತ್ಯವಿದೆ ಎಂದರು.
“ಸಂಘಟಿತ ಧರ್ಮದ ಭಾಗವಾಗಬೇಡಿ’
ಮಂಗಳೂರು: ಸಂಘಟಿತ ಧರ್ಮದ (ಆರ್ಗನೈಸ್ಡ್ ರಿಲೀಜನ್) ಭಾಗವಾಗಬೇಡಿ ಎಂದು ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಸಲಹೆ ಮಾಡಿದ್ದಾರೆ. “ಇಸ್ಲಾಂ ಇನ್ ಇಂಡಿಯಾ: ದ ರೋಡ್ ಅಹೆಡ್’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸೂಫಿ ಸಂತರು ಅರಬ್ ಮೂಲದ ಸಂಘಟನಾತ್ಮಕ ಧರ್ಮದ ದಾರಿಯನ್ನು ಬಿಟ್ಟು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದ್ದರು. ಅವರು ಸಂಘಟಿತ ಧರ್ಮದ ಪ್ರಬಲ ವಿರೋಧಿಗಳಾಗಿದ್ದರು ಎಂದವರು ವಿವರಿಸಿದರು.
ಇಸ್ಲಾಂ ಏಕ ದೇವತಾ ವಾದವನ್ನು ಪ್ರತಿಪಾದಿಸುವ ಧರ್ಮ ಆಗಿದೆಯೇ ಹೊರತು ಏಕ ವ್ಯಾಖ್ಯಾನದ ಧರ್ಮವಲ್ಲ. ಆರಂಭದ ಕಾಲದಿಂದಲೂ ಇಸ್ಲಾಂ ರಾಜಕೀಯವಾಗಿ ಅತ್ಯಂತ ಪ್ರಬಲವಾಗಿ ಬೆಳೆದಿದೆ. ಈಗಲೂ “ರಾಜಕೀಯ ಇಸ್ಲಾಂ’ನ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿವೆ ಎಂದರು.
ವ್ಯತ್ಯಾಸ ಗೌರವಿಸೋಣ
ದಕ್ಷಿಣ ಭಾರತದ ಮುಸ್ಲಿಮರು ಹೆಚ್ಚು ಸುಶಿಕ್ಷಿತರು. ಇಲ್ಲಿ ಸಹಧರ್ಮಗಳೊಂದಿಗೆ ಸಾಮರಸ್ಯ ಹೆಚ್ಚು ಇದೆ. ಉತ್ತರಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಧರ್ಮಾತೀತವಾಗಿ ದಿರಿಸು, ಭಾಷೆ, ಆಹಾರ ಸಮಾನವಾಗಿದೆ. ಇದು ಹೆಚ್ಚು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ವ್ಯಾಖ್ಯಾನಿಸಿದರು.
ಪತ್ರಕರ್ತ ಜಗನ್ನಾಥನ್ ಗೋಷ್ಠಿಯ ಸಮನ್ವಯಕಾರರಾಗಿದ್ದರು. ಡಾ| ಗಿರಿಧರ ಉಪಾಧ್ಯಾಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.