ಕಾಯಕ, ಜ್ಞಾನ ಗಳಿಕೆಯೇ ಶ್ರೇಷ್ಠ
Team Udayavani, May 28, 2018, 4:13 PM IST
ನುಡಿದು ಜಾಣರೆನಿಸಿಕೊಳ್ಳುವುದಕ್ಕಿಂತ, ನಡೆದು ಜಾಣರೆನಿಸಿಕೊಳ್ಳುವುದು ಶ್ರೇಷ್ಠ… ಹೀಗೆಂದವರು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ.
ಆಧ್ಯಾತ್ಮಿಕತೆಯ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಇವರು ಅನುಭವಿ ಸಂತ ಪುರುಷ. ಕಾಯಕ, ಜ್ಞಾನ ಹಾಗೂ ಜೀವನದ ಬಗೆಗಿನ ಹೊಸ ವಿಚಾರಧಾರೆಯನ್ನು ಹಂಚುತ್ತಿರುವ ಇವರ ಪ್ರವಚನ ಕೇಳಲು ಲಕ್ಷೋಪಾದಿಯಲ್ಲಿ ಭಕ್ತ ಸಾಗರ ಹರಿದು ಬರುತ್ತದೆ.
ಶ್ವೇತ ವಸ್ತ್ರಧಾರಿಯಾದ ಸ್ವಾಮಿ, ಹಣೆಯಲ್ಲಿ ವಿಭೂತಿ ಧರಿಸಿ, ಸದಾ ಮಂದಸ್ಮಿತ ಮುಗುಳ್ನಗೆ ಮೂಲಕ ಭಕ್ತರ ಮುಂದೆ ಬರುವ ಜ್ಞಾನಯೋಗಿ. ಇವರನ್ನು ಭಕ್ತರು ಬುದ್ಧಿಜೀ ಹಾಗೂ ಅಪ್ಪಾಜೀ ಎಂದು ಕರೆಯುವುದುಂಟು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ ಶ್ರೀಗಳು, ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿಷ್ಣಾತರಾಗಿ ದ್ದಾರೆ. ವೇದಾಂತ, ಭಗವದ್ಗೀತೆ, ಉಪನಿಷತ್, ಸಿದ್ಧಾಂತ ಶಿಖಾಮಣಿ, ವಚನಗಳ ಬಗೆಗಿನ ಆಳವಾದ ಆಧ್ಯಯನ ಹಾಗೂ ಪಾಂಡಿತ್ಯಪೂರ್ಣ ಚಿಂತನೆಗಳೊಂದಿಗೆ ಅನುಭವದ ಲೇಪನದಿಂದ ಸರಳವಾಗಿ ಪ್ರವಚನ ನೀಡುವ ಮಧುರ ಸ್ವಭಾವದವರು ಸಿದ್ದೇಶ್ವರ ಶ್ರೀಗಳು. ಸ್ವಾಮಿಗಳ ಬದುಕೇ ಒಂದು ಅಧ್ಯಯನ. ಸರಳ ಜೀವನವೇ ನಮ್ಮೆಲ್ಲರಿಗೂ ಆದರ್ಶದ ದೀವಿಗೆ ಎನ್ನುತ್ತಾರೆ ಇವರನ್ನು ಬಲ್ಲವರು.
ಬಾಲ್ಯ ಮತ್ತು ಜೀವನ
ಸಿದ್ದೇಶ್ವರ ಸ್ವಾಮೀಜಿಗಳು ರೈತ ಕುಟುಂಬದಲ್ಲಿ 1941 ಆಕ್ಟೋಬರ್ 24ರಂದು ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು. ವಿಜಯಪುರದ ಜ್ಞಾನ ಯೋಗಾಶ್ರಮದ ಸಂಪರ್ಕಕ್ಕೆ ಬಂದ ಸ್ವಾಮಿಗಳು, ಮಠದ ಪೀಠಾಧಿಪತಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವ ರ ಅಧ್ಯಾತ್ಮ ಹಾಗೂ ಪ್ರವಚನಗಳಿಂದ ಪ್ರಭಾವಿತರಾದರು. ಬಳಿಕ ಮಲ್ಲಿಕಾರ್ಜುನ ಸ್ವಾಮಿ ನೀಡಿದ ಪ್ರವಚನಗಳನ್ನು ಸಂಗ್ರಹಿಸಿ, ತಮ್ಮ 19ನೇ ವಯಸ್ಸಿನಲ್ಲಿಯೇ ಸಿದ್ಧಾಂತ ಶಿಖಾಮಣಿ ಎಂಬ ಗ್ರಂಥವನ್ನು ಹೊರ ತಂದು, ಗುರುವಿಗೆ ತಕ್ಕ ಶಿಷ್ಯ ಎನಿಸಿಕೊಂಡರು. ಮಠದಲ್ಲಿ ಗುರು ಸ್ವಾಮಿಗಳ ಅನುಪಸ್ಥಿತಿಯಲ್ಲಿ ಸ್ವತಃ ಸಿದ್ದೇಶ್ವರ ಸ್ವಾಮೀಜಿಯವರೇ ಪ್ರವಚನ ನೀಡುತ್ತಿದ್ದರು.
ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನ ಕೇಳಲು ಲಕ್ಷೋಪಾದಿಯಲ್ಲಿ ಭಕ್ತ ಸಾಗರ ಕೂಡುತ್ತದೆ. ಜೀವನ ಸನ್ಮಾರ್ಗಗಳ ಬಗ್ಗೆ ಹೇಳುವ ಕಥೆಗಳು, ಸಂಸ್ಕೃತ-ಇಂಗ್ಲಿಷ್‌ನ ವ್ಯಾಖ್ಯೆಗಳು ಜನಸಾಗರವನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ಜ್ಞಾನ, ಕಾಯಕ ಜೀವನಕ್ಕೆ ತಮ್ಮ ಪ್ರವಚನದಲ್ಲಿ ಹೆಚ್ಚು ಒತ್ತು ನೀಡುತ್ತದೆ.
ನುಡಿ, ನಡೆ ಒಂದಾಗಿರಲಿ
ಜೀವನದಲ್ಲಿ ಕೆಲವೊಮ್ಮೆ ನುಡಿದಂತೆ, ನಡೆಯುವುದಿಲ್ಲ. ಇದನ್ನೇ ಗಾದೆಯಿಂದ ಉದಾಹರಿಸುವುದಾದರೆ, ಹೇಳುವುದು
ಶಾಸ್ತ್ರ- ತಿಂಬುವುದು ಬದನೆಕಾಯಿ ಎಂಬಂತೆ. ಕೆಲವರು ಉದ್ದುದ್ದ ಭಾಷಣ ಬಿಗಿದು, ಅದರಂತೆ ನಡೆದುಕೊಳ್ಳುವುದು ದೂರದ ಮಾತು. ಇದು ವ್ಯಕ್ತಿತ್ವಕ್ಕೆ ತಕ್ಕುದಲ್ಲ. ಇದರ ಕುರಿತು ಸಿದ್ದೇಶ್ವರ ಸ್ವಾಮೀಜಿ ಹೇಳು ವುದು ಹೀಗೆ..’ನುಡಿ, ನಡೆ ಒಂದಾಗಿರಲಿ. ನುಡಿದು ಜಾಣರೆನಿಕೊಳ್ಳುವುದಕ್ಕಿಂತ, ನಡೆದು ಜಾಣರೆನಿಸಿಕೊಳ್ಳುವುದು ಶ್ರೇಷ್ಠ. ಈ ನಾಡಿನ ಶರಣರು, ಸಂತರ ಜೀವನವೇ ನಮಗೆ ಸಂದೇಶ-ಉಪದೇಶ. ಹಾಗಾಗಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯಬೇಕು.’
ಸಹಬಾಳ್ವೆ ಮುಖ್ಯ
ಜೀವನದಲ್ಲಿ ಹೊಂದಾಣಿಕೆ, ಸಹಬಾಳ್ವೆ ಇಲ್ಲದಿರುವುದೇ ಸಮಸ್ಯೆಗಳಿಗೆ ಮೂಲ ಕಾರಣ. ಜನರಲ್ಲಿ ಹೊಂದಾಣಿಕೆ ಇಲ್ಲದಿದ್ದರೆ, ಮಾಡುವ ಕಾರ್ಯಗಳು ಶಕ್ತಿಹೀನವಾಗುತ್ತದೆ. ಪರಿಶ್ರಮ, ಸಮಯ ಹಾಳಾಗುತ್ತದೆ. ಈ ಕುರಿತು ಸ್ವಾಮೀಜಿ
ಹೇಳು ವುದು ಹೀಗೆ ‘ಜಗತ್ತಿನಲ್ಲಿ ಪ್ರಿಯ ಹಾಗೂ ಅಪ್ರಿಯವಾದ ಸಂಗತಿಗಳು ಎರಡೂ ಇವೆ. ಅಸಂಖ್ಯ ಜೀವ ರಾಶಿಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಅದಕ್ಕಾಗಿ ಆ ಅಸಂಖ್ಯ ಜೀವರಾಶಿಗಳೊಂದಿಗೆ ನಾವು ಸಹಬಾಳ್ವೆ ಹಾಗೂ ಹೊಂದಾಣಿಕೆಯಿಂದ ಇರಬೇಕು. ಕತ್ತಲೆ ಬರಲಿ, ಬೆಳಕೇ ಇರಲಿ, ಈ ಎರಡಕ್ಕೂ ಅಂಜದೇ ಧೈರ್ಯದಿಂದ
ಮುನ್ನುಗ್ಗಬೇಕು’ ಎನ್ನುತ್ತಾರೆ.
ಗಳಿಕೆ ನಶ್ವರ
ದುಡಿಮೆ ಜೀವನದ ಕಾಯಕ. ಸಂಪತ್ತು ಗಳಿಕೆಯೇ ಜೀವನದ ಮುಖ್ಯ ಉದ್ದೇಶವಲ್ಲ, ಕಾಯಕದ ಮೂಲಕ ಬಂದ ಸಂಪತ್ತನ್ನು ಸಂಗ್ರಹಿಸುವುದು ತಪ್ಪಲ್ಲ. ಆದರೆ ಅನ್ಯಮಾರ್ಗದಿಂದ ಗಳಿಕೆ ಮಾಡಿ ದರೆ ಅದು ನಶ್ವರ. ಇದು ಪರಮಾತ್ಮನಿಗೆ ಬೇಡವಾದದ್ದು ಎನ್ನುವ ಸ್ವಾಮೀಜಿ, ಸುಖ ಜೀವನಕ್ಕಾಗಿ ಹಣ ಗಳಿಕೆ ಮಾಡಿದರೆ ತಪ್ಪಲ್ಲ. ಅದರಲ್ಲಿ ನೆಮ್ಮದಿ, ಪರಿಶ್ರಮವಿದೆ. ಆದರೆ ಭೋಗ ಜೀವನಕ್ಕಾಗಿ ಅನ್ಯಮಾರ್ಗಗಳಿಂದ ಗಳಿಸುವ ಸಂಪತ್ತು ಅದು ನಶ್ವರ ಎನ್ನುತ್ತಾರೆ.
ಪ್ರಶಸ್ತಿ ಅವಶ್ಯಕತೆ ನನಗಿಲ್ಲವೆಂದವರು….
ಭಾರತ ಸರಕಾರ ಕೊಡಮಾಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯೂ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಹುಡುಕಿಕೊಂಡು ಬಂದಿತ್ತು. ಆದರೆ ಅದನ್ನು ವಿನಮ್ರವಾಗಿ ತ್ಯಜಿಸಿ, ನೀವು ನೀಡಿದ ಈ ಗೌರವಕ್ಕೆ ಧನ್ಯವಾದಗಳು, ನಾನೊಬ್ಬ ಸರಳ ವ್ಯಕ್ತಿ. ಅಧ್ಯಾತ್ಮ ಬೋಧನೆಯ ಮೂಲಕ ಜನರ ಜೀವನವನ್ನು ಶ್ರೇಷ್ಠಗೊಳಿಸುವುದೇ ನನ್ನ ಮುಖ್ಯ ಉದ್ದೇಶ.
ಹಾಗಾಗಿ ಪ್ರಶಸ್ತಿ ಆವಶ್ಯಕತೆ ನನಗಿಲ್ಲ ಎಂದು ಸರಕಾರಕ್ಕೆ ಬರೆದ ಪತ್ರ ದ ಮೂಲಕ ಗೌರವಾದರಗಳಿಂದ ಪ್ರಶಸ್ತಿಯನ್ನು ನಿರಾಕರಿಸಿದರು. ಈ ಹಿಂದೆ ಕರ್ನಾಟಕ ವಿವಿ ನೀಡಿದ್ದ ಗೌರವ ಡಾಕ್ಟರೇಟ್‌ನ್ನು ಕೂಡ ಅವರು ನಿರಾಕರಿಸಿದ್ದರು.
ದೇವನು ಸರ್ವಜ್ಞ
ದೇವರು ಹೇಗಿದ್ದಾನೆ, ಎಲ್ಲಿದ್ದಾನೆ ಎಂಬ ಪ್ರಶ್ನೆ ನಮಗಷ್ಟೇ ಅಲ್ಲ, ಇಡೀ ಜನಾಂಗವನ್ನೇ ಕಾಡುತ್ತದೆ. ಈ ಪ್ರಶ್ನೆಗೆ ಸಿದ್ದೇಶ್ವರ ಸ್ವಾಮಿಗಳು ಬಹು ತರ್ಕ ಹಾಗೂ ಸೌಮ್ಯವಾದ ಉತ್ತರವನ್ನು ತಮ್ಮ ಪ್ರವಚನಗಳ ಮೂಲಕ ನೀಡುತ್ತಾರೆ ‘ದೇವನೂ ಸರ್ವವ್ಯಾಪಿ, ಸರ್ವಜ್ಞ, ಕಣಕಣದಲ್ಲೂ ದೇವನು ನೆಲೆಸಿರುವನು. ಈ ಪ್ರಪಂಚವೇ ಪರಮಾತ್ಮನ ಅಭಿವ್ಯಕ್ತಿ ರೂಪ. ನಮ್ಮ ಭಕ್ತಿಯನ್ನು ಅಭಿವ್ಯಕ್ತಿಗೊಳಿಸಲು ಮಠ, ಮಂದಿರಗಳು ಸುಂದರ ಸಾಧನ. ಮಠದ ಗುರುಗಳ ಚಿಂತನೆಗಳಲ್ಲಿ, ಜೀವನ ಸನ್ಮಾರ್ಗಗಳ ಮೂಲವೇ ದೇವರ ಸ್ಥಾನ ಎಂಬ ಬಹು ವಿಶಾಲವಾದ ಉತ್ತರ ನೀಡುತ್ತಾರೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.