ಸರಕಾರಿ ಆಸ್ಪತ್ರೆ ಹೊರಗುತ್ತಿಗೆ ಡಿ ಗ್ರೂಪ್ ನೌಕರರ ಸಂಕಷ್ಟ
ನಾಲ್ಕು ತಿಂಗಳಿಂದ ವೇತನವಿಲ್ಲ; ಕೆಲಸಕ್ಕೆ ಗೈರು
Team Udayavani, Jun 22, 2019, 5:00 AM IST
ಸುಳ್ಯ: ರಾಜ್ಯಾದ್ಯಂತ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಡಿ ಗ್ರೂಪ್ ಸಿಬಂದಿಗೆ ನಾಲ್ಕು ತಿಂಗಳಿನಿಂದ ವೇತನ ಲಭಿಸಿಲ್ಲ. ಇದರಿಂದ ಹೆಚ್ಚಿನ ಸಿಬಂದಿ ಕೆಲಸಕ್ಕೆ ಗೈರುಹಾಜರಾಗುತ್ತಿದ್ದು, ಆಸ್ಪತ್ರೆಯ ಸ್ವಚ್ಛತೆ ಸೇರಿದಂತೆ ಹಲವು ಕೆಲಸಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಮಳೆಗಾಲ ಆರಂಭದ ಸಂದರ್ಭ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವ ಹೊತ್ತಲ್ಲೇ ಸಿಬಂದಿ ಕೊರತೆಯಿಂದ ದಿನನಿತ್ಯದ ಚಟುವಟಿಕೆಗಳಿಗೆ ಪರದಾಡುವಂತಾಗಿದೆ.
ಉಭಯ ಜಿಲ್ಲೆಯಲ್ಲಿ 330 ನೌಕರರು!
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ 176 ಮತ್ತು ಉಡುಪಿ ಜಿಲ್ಲೆಯಲ್ಲಿ 154 ಹೊರಗುತ್ತಿಗೆ ಸಿಬಂದಿ ಇದ್ದಾರೆ. ಇವರು ಸ್ವಚ್ಛತೆ, ಅಡುಗೆ ಸಹಾಯಕ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರಲ್ಲಿ ಶೇ. 90ಕ್ಕೂ ಅಧಿಕ ಮಂದಿಗೆ ವೇತನ ಬಂದಿಲ್ಲ.
ಜೀವನ ನಿರ್ವಹಣೆ ಕಷ್ಟ!
ವೇತನ ಸಿಗದ ಕಾರಣ ಸುಳ್ಯ ಆಸ್ಪತ್ರೆಯಲ್ಲಿ 15 ಸಿಬಂದಿ ಕೆಲಸಕ್ಕೆ ಹಾಜರಾಗುತ್ತಿಲ್ಲ; ಬರುತ್ತಿರುವವರು ಮೂವರು ಮಾತ್ರ. ನಾಲ್ವರು ಉದ್ಯೋಗವನ್ನೇ ತೊರೆದಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಬೇರೆ ದಾರಿ ಕಾಣದೆ ಪರ್ಯಾಯ ಉದ್ಯೋಗ ಹುಡುಕುವ ಸ್ಥಿತಿ ಇವರದು. ವೇತನ ಪಾವತಿ ಮಾಡದ ಕಾರಣ ಕೆಲಸಕ್ಕೆ ಬನ್ನಿ ಎಂದು ಒತ್ತಡ ಹೇರಲಾಗದ ಸ್ಥಿತಿಯಲ್ಲಿ ಇಲಾಖೆಯಿದೆ.
ಬಿಡುಗಡೆ ಹಂತದಲ್ಲಿದೆ
ನಾಲ್ಕು ತಿಂಗಳ ಬಾಕಿ ಪೈಕಿ ಎರಡು ತಿಂಗಳ ವೇತನ ಪಾವತಿ ಪ್ರಕ್ರಿಯೆ ಅಂತಿಮಗೊಂಡಿದೆ. ಟ್ರೆಜರಿಯಿಂದ ಬಿಡುಗಡೆ ಬಾಕಿ ಇದೆ. ಉಳಿದ ಎರಡು ತಿಂಗಳ ವೇತನ ಬಿಡುಗಡೆ ಆಗಬೇಕಿದೆ. ಕೆಲವು ಸಿಬಂದಿಯಷ್ಟೇ ಕರ್ತವ್ಯಕ್ಕೆ ಬರುತ್ತಿದ್ದು, ಹೆಚ್ಚಿನವರು ಗೈರಾಗಿದ್ದಾರೆ.
– ಡಾ| ಭಾನುಮತಿ ಮುಖ್ಯ ವೈದ್ಯಾಧಿಕಾರಿ, ತಾ| ಸ.ಆಸ್ಪತ್ರೆ, ಸುಳ್ಯ
ರಾಜ್ಯಮಟ್ಟದ ಪ್ರಕ್ರಿಯೆ
ಹೊರಗುತ್ತಿಗೆ ಸಿಬಂದಿಗೆ ವೇತನ ಆಗದೆ ಇರುವುದು ನಿಜ. ಅದು ರಾಜ್ಯಮಟ್ಟದ ಪ್ರಕ್ರಿಯೆ. ಸರಕಾರದ ಖಜಾನೆಯಿಂದ ಸಿಬಂದಿ ಬ್ಯಾಂಕ್ ಖಾತೆಗೆ ನೇರ ಪಾವತಿ ಆಗುತ್ತದೆ.
– ಡಾ| ಸುಬ್ರಹ್ಮಣ್ಯ, ತಾಲೂಕು ಆರೋಗ್ಯಾಧಿಕಾರಿ, ಸುಳ್ಯ
ಶೀಘ್ರ ಪಾವತಿ ನಿರೀಕ್ಷೆ
ಕೆಲವರಿಗೆ ವೇತನ ಸಿಕ್ಕಿಲ್ಲ. ರಾಜ್ಯ ವಲಯದಿಂದ ಬಿಡುಗಡೆ ಆಗಬೇಕಿದೆ. ಈ ಬಗ್ಗೆ ಪತ್ರ ಕಳುಹಿಸಲಾಗಿದೆ. ಅನುದಾನ ಬಿಡುಗಡೆಗೊಳ್ಳುವ ಸಾಧ್ಯತೆ ಇದ್ದು, ಶೀಘ್ರ ವೇತನ ಪಾವತಿ ಆಗುವ ನಿರೀಕ್ಷೆ ಇದೆ.- ರಾಮಕೃಷ್ಣ ರಾವ್ ಡಿಎಚ್ಒ, ದ.ಕ. ಜಿಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.