ಸರಕಾರಿ ಶಾಲಾ ನೂತನ ಕಟ್ಟಡ ಅಪೂರ್ಣ
Team Udayavani, Sep 30, 2018, 11:46 AM IST
ಉಪ್ಪಿನಂಗಡಿ: ಸರಕಾರಿ ಶಾಲಾ ನೂತನ ಕಟ್ಟಡ ಕಾಮಗಾರಿ ಅಪೂರ್ಣಗೊಳಿಸಿದ ಗುತ್ತಿಗೆದಾರರು ಯಾವುದೇ ಕಾರಣ ನೀಡದೇ ಕಾಮಗಾರಿ ನಡೆಸಲು ತಂದ ಸಾಮಗ್ರಿಗಳೊಂದಿಗೆ ನಾಪತ್ತೆಯಾದ ಬೆನ್ನಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಕನ್ಯಾ ಡಿ.ಎನ್. ಅವರು ಭೇಟಿ ನೀಡಿದ್ದಾರೆ. ಇಲ್ಲಿನ ಮಠ ಹಿರ್ತಡ್ಕ ಸ.ಹಿ.ಮಾ. ಶಾಲೆಯಲ್ಲಿ ತರಗತಿಗಳನ್ನು ನಡೆಸಲು ಕೊಠಡಿಗಳ ಸಮಸ್ಯೆ ಉದ್ಭವಿಸಿದ್ದು, ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ತಮ್ಮ ಅವಧಿಯಲ್ಲಿ 15 ಲಕ್ಷದ 70 ಸಾವಿರ ರೂ. ಬಿಡುಗಡೆಗೊಳಿಸಿ, ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದರು.
ಆದರೆ ಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆ ದಾರರು ಬಹುತೇಕ ಕಾಮಗಾರಿ ಮುಗಿಸಿ ಕೇವಲ ಹತ್ತು ಸಾವಿರದೊಳಗಿನ ಕಾಮಗಾರಿ ಬಾಕಿ ಉಳಿಸಿ ಮಂಜೂರುಗೊಂಡ ಅನುದಾನ ಕಡಿಮೆಯಾಗಿದೆ ಎಂಬ ನೆಪದಲ್ಲಿ ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಿ ಕೆಲಸ ಕಾರ್ಯವನ್ನು ಬಾಕಿ ಉಳಿಸಿ ಹೋಗಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಕೊಠಡಿಗಳ ಸಮಸ್ಯೆ ಅತಂತ್ರವಾಗಿದೆ. ಈ ಕುರಿತು ಉದಯವಾಣಿ ಸುದಿನ ಸಚಿತ್ರ ವರದಿಯನ್ನು ಪ್ರಕಟಿಸಿತ್ತು.
ಬಳಿಕ ಶಾಲಾ ರಜಾದಿನದಲ್ಲಿ ಗುತ್ತಿಗೆದಾರರು ಯಾವುದೇ ವಿಚಾರವನ್ನು ಮುಖ್ಯಶಿಕ್ಷಕರಿಗೂ ತಿಳಿಸದೇ ಕಾಮಗಾರಿ ನಡೆಸಲು ತಂದ ಸಾಮಗ್ರಿಗಳೊಂದಿಗೆ ಏಕಾಏಕಿ ಹಿಂತಿರುಗಿದ್ದಾರೆ. ಇದನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇದಿನಬ್ಬ ಹಾಗೂ ಕಟ್ಟಡ ಸಮಿತಿ ಅಧ್ಯಕ್ಷರಾದ ಆದಂ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಅದರಂತೆ ಶುಕ್ರವಾರ ಸಂಜೆ ಶಿಕ್ಷಣಾಧಿಕಾರಿಗಳಾದ ಸುಕನ್ಯಾ ಡಿ.ಎನ್. ಅವರು ಶಾಲೆಗೆ ಭೇಟಿ ನೀಡಿ ನೂತನ ಕಟ್ಟಡ ಕಾಮಗಾರಿ ಪಡಿಶೀಲನೆ ನಡೆಸಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಸಮಿತಿ ಅಧ್ಯಕ್ಷರಿಗೆ ಭರವಸೆ ನೀಡಿದರು.
ನೆಲ ಸಾರಣೆಯಷ್ಟೇ ಬಾಕಿ
ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ವಿಷಯ ಪ್ರಸ್ತಾವಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ, ಕಾಮಗಾರಿಗೆ ಎರಡು ಹಂತದಲ್ಲಿ ಅನುದಾನ ಬಿಡುಗಡೆಗೊಂಡಿತ್ತು. ಎರಡು ಕೊಠಡಿಗಳಿಗೆ 8.70 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಳಿಸಿದ್ದಾಗಿ, ಗುತ್ತಿಗೆದಾರರು ದೃಢೀಕರಣ ಪತ್ರ ಪಡೆದಿದ್ದಾರೆ. ಇನ್ನುಳಿದ ಎರಡು ಕೊಠಡಿಗಳು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿವೆ. ಆದರೆ ಕೊನೆ ಹಂತದಲ್ಲಿ ನೆಲ ಸಾರಣೆಗೆ ಮಂಜೂರಾತಿಯಲ್ಲಿ ಸೇರಿಸಿಕೊಂಡಿಲ್ಲವೆಂದು ಹೆಚ್ಚುವರಿ ಅನುದಾನಕ್ಕೆ ಗುತ್ತಿಗೆದಾರರು ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿ ಹಿಂತಿರುಗಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.