ಕಸ ಎಸೆಯುವವರ ಮೇಲೆ ಕ್ರಮ ಕೈಗೊಳ್ಳಲು ಜಿ.ಪಂ. ಗಸ್ತು ಪಡೆ
Team Udayavani, Jul 16, 2017, 3:30 AM IST
ಹಳೆಯಂಗಡಿ: ಹೆದ್ದಾರಿಯಲ್ಲಿ ಕಸ ಎಸೆಯುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್‌ನ ಗಸ್ತು ಪಡೆಯೊಂದು ಕಾರ್ಯ ನಿರ್ವಹಿಸುತ್ತಿದೆ.
ಈ ಬಗ್ಗೆ ಪಂಚಾಯತ್‌ಗಳಿಗೆ ಅಧಿಕೃತವಾಗಿ ಮಾಹಿತಿ ರವಾನಿಸಿದೆ. ಜಿಲ್ಲಾದ್ಯಂತ ಹಾದು ಹೋಗುವ ಹೆದ್ದಾರಿಗಳ ಬದಿಯಲ್ಲಿ ಕಸ ಸುರಿ ಯುವವರನ್ನು ಪತ್ತೆಹಚ್ಚಲೆಂದೇ ಈ ಗಸ್ತು ಪಡೆ ಯನ್ನು ನಿಯೋಜಿಸಲಾಗಿದೆ.
ಸ್ವಲ್ಪ ದಿನಗಳ ಹಿಂದೆ ದೇರಳಕಟ್ಟೆ ಬಳಿ ಹೆದ್ದಾರಿ ಬದಿಗೆ ಟೆಂಪೋದಲ್ಲಿ ಕೋಳಿ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದವರನ್ನು ಪತ್ತೆ ಹಚ್ಚಲಾಗಿತ್ತು. ಪ್ರಕರಣವನ್ನೂ ದಾಖಲಿಸಲಾಗಿದೆ.
ಹಳೆಯಂಗಡಿಯಲ್ಲಿ ದೊಡ್ಡ ಸಮಸ್ಯೆ
ಹಳೆಯಂಗಡಿ ಪಂಚಾಯತ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಪಂಚಾಯತ್‌ಗಳಿಗೆ ಹೆದ್ದಾರಿ ಬದಿಯಲ್ಲಿ ಹೊರಗಿನವರು ಬಂದು ತ್ಯಾಜ್ಯ ಸುರಿದು ಹೋಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಹಳೆಯಂಗಡಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡೂ ಕಡೆಗಳಲ್ಲಿ ಕಸ ಸುರಿಯುವುದು ಇನ್ನೂ ತಪ್ಪಿಲ್ಲ.
ಇಂದಿರಾನಗರದ ರೈಲ್ವೇ ಗೇಟ್‌ನ ಮುಂಭಾಗದಲ್ಲೂ ಹೊರಗಿನ ವ್ಯಕ್ತಿಗಳು ಇದೇ ರೀತಿಯಲ್ಲಿ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ದ್ವಿಚಕ್ರ ವಾಹನ, ಕಾರು, ಟೆಂಪೋ, ಕೆಲವೊಮ್ಮೆ ಬಸ್ಸುಗಳಿಂದಲೂ ತ್ಯಾಜ್ಯವನ್ನು ಎಸೆದು ಹೋಗು ವವರ ಸಂಖ್ಯೆ ಹೆಚ್ಚಾಗಿದೆ.
ಹೆದ್ದಾರಿಯ ಎರಡು ಪ್ರದೇಶದ ರಸ್ತೆ ಬದಿಗಳಲ್ಲೂ ಅಲ್ಲಲ್ಲಿ ಎಚ್ಚರಿಕೆಯ ಫಲಕವನ್ನು ಪಂಚಾಯತ್ ಹಾಕಿದ್ದರೂ ಪ್ರಯೋಜನವಾಗಿಲ್ಲ. ವಿಚಿತ್ರವೆಂದರೆ, ಫಲಕ ಇರುವ ಸ್ಥಳದಲ್ಲೇ ಹೆಚ್ಚು ತ್ಯಾಜ್ಯ ಕಂಡು ಬರುತ್ತಿದೆ. ಪಾವಂಜೆ ಸೇತುವೆಯಲ್ಲೂ ಎಚ್ಚರಿಕೆ ಫಲಕ ಹಾಕಲಾಗಿದೆ. ಆದರೂ ತಡರಾತ್ರಿಯಲ್ಲಿ ನದಿ ನೀರಿಗೆ ಕೋಳಿ ತ್ಯಾಜ್ಯವನ್ನು ಸುರಿದು ಹೋಗುವ ತಂಡವೇ ಇದೆ. ಇದೆಲ್ಲವನ್ನೂ ಕಾನೂನು ಕ್ರಮಗಳಿಂದ ಸರಿಪಡಿಸಲೂ ಪಂಚಾಯತ್ ಅಸಹಾಯಕ ಸ್ಥಿತಿಯಲ್ಲಿದೆ.
ಗಸ್ತು ಪಡೆ
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್.ರವಿ ಅವರ ಮಾರ್ಗ ದರ್ಶನದಲ್ಲಿ ಜಿ.ಪಂ. ಗಸ್ತು ಪಡೆಯನ್ನು ರಚಿಸಲಾಗಿದೆ. ಇದರಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬಂದಿ ಸೇರಿ ದಂತೆ ಐದು ಮಂದಿ ಸದಸ್ಯರಿದ್ದಾರೆ. ಕಸ ಬಿಸಾಡುವವರ ಚಿತ್ರ, ವಾಹನ ಸಂಖ್ಯೆ ಸೆರೆ ಹಿಡಿದು ನೇರವಾಗಿ ಗ್ರಾಮ ಪಂಚಾಯತ್‌ಗೆ ನೀಡಲಾಗುವುದು. ಗ್ರಾ.ಪಂ., ಸಾರ್ವ ಜನಿಕ ಸ್ಥಳಗಳಲ್ಲಿ ನೈರ್ಮಲ್ಯಕ್ಕೆ ಭಂಗ ತರುವ ನಿಯಮದಡಿ (ಸಿಆರ್‌ಪಿಸಿ 133) ನೋಟಿಸ್ ನೀಡಿ ಬಳಿಕ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಸ್ವತ್ಛತೆ ಬಗೆಗೆ ಜಾಗೃತಿ ಮೂಡಿಸಿದ್ದೇವೆ
ನಾಗರಿಕರು ಸಹ ಜವಾಬ್ದಾರಿಯುತವಾಗಿ ಗ್ರಾಮ ಪಂಚಾಯತ್‌ನ ತ್ಯಾಜ್ಯ ವಿಲೇವಾರಿಗೆ ಸಹಕಾರ ನೀಡಬೇಕು. ಸ್ವತ್ಛತೆಗೆ ವಿಶೇಷ ಜಾಗೃತಿ, ಎಚ್ಚರಿಕೆಯನ್ನು ಸಹ ನಿರಂತರವಾಗಿ ನೀಡ ಲಾಗುತ್ತಿದೆ. ಕೊಣಾಜೆ ಗ್ರಾಮದಲ್ಲಿ ಎರಡು ಪ್ರಕರಣ ದಾಖಲಾದ ಅನಂತರ ಇನ್ನಿತರ ಕಡೆ ಗಳ ಹೆದ್ದಾರಿಯಲ್ಲಿ ಕಸ ಬಿಸಾಡುವವರು ಸಹ ಜಾಗೃತರಾಗಿದ್ದಾರೆ. ಗಸ್ತು ಪಡೆಯ ಸದಸ್ಯರಿಗೆ ಮಳೆಗಾಲದಲ್ಲಿ ಇನ್ನಿತರ ಕಾರ್ಯದ ಒತ್ತಡ ಇರುವುದರಿಂದ ಪ್ರತೀ ಗ್ರಾಮ ಪಂಚಾಯತ್‌ನ ಅಧಿಕಾರಿಗಳಿಗೆ ಈ ಬಗ್ಗೆ ನಿಗಾ ವಹಿಸಲು ತಿಳಿಸಲಾಗಿದೆ.
-ಡಾ| ಎಂ.ಆರ್. ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್
ಕೆ.ಡಿ.ಬಿ. ಸಭೆಯಲ್ಲಿ ಪ್ರಸ್ತಾವನೆ
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದು ಹೋಗುವುದರಿಂದ ಇಲ್ಲಿಗೆ ಹೊರಗಿನ ವ್ಯಕ್ತಿಗಳು ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಪಂಚಾಯತ್‌ಗೆ ಸೂಕ್ತವಾದ ಜಮೀನನ್ನು ಗುರುತಿಸಿದ್ದರೂ ಮಂಜೂರು ಮಾಡಲು ಕಳೆದ ಮೂರು ವರ್ಷಗಳಿಂದ ಎಂಟು ಬಾರಿ ಕಡತವನ್ನು ಪರಿಶೀಲಿಸಲಾಗಿದೆ ಈ ಬಗ್ಗೆ ಜು.13ರಂದು ನಡೆದ ತ್ತೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್ ಅವರು ಪ್ರಶ್ನಿಸಿದ್ದರಿಂದ ಜಿಲ್ಲಾಧಿಕಾರಿಯವರು ವಾರದಲ್ಲಿ ಮೈಸೂರು ಪ್ರಾದೇಶಿಕ ಕಚೇರಿಗೆ ತಲುಪಿಸುವ ಭರವಸೆ ನೀಡಿದ್ದಾರೆ.
-ಎಚ್. ವಸಂತ ಬೆರ್ನಾರ್ಡ್,
ಅಧ್ಯಕ್ಷರು, ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ, ಹಳೆಯಂಗಡಿ ಗ್ರಾಮ ಪಂಚಾಯತ್
– ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.