ಗ್ರಾ.ಪಂ.ಗಿಲ್ಲ ಏಕವಿನ್ಯಾಸ ಅಧಿಕಾರ; ಪರಿಷ್ಕೃತ ಆದೇಶದಿಂದ ಜನರಿಗೆ ಅಲೆದಾಟದ ಶಿಕ್ಷೆ
9/11 ಖಾತೆಗೆ ನಗರ, ಗ್ರಾಮಾಂತರ ಯೋಜನಾ ಇಲಾಖೆ ಪೂರ್ವಾನುಮತಿ ಅಗತ್ಯ
Team Udayavani, Mar 17, 2022, 6:55 AM IST
ಕಡಬ: ಸ್ಥಳೀಯ ಯೋಜನಾ ಪ್ರದೇಶದ ಹೊರಗಡೆ ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಾಗಿ ವಿನ್ಯಾಸ ಅನುಮೋದನೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅನುಮತಿ ಅಗತ್ಯ. ಗ್ರಾ.ಪಂ. ಹಾಗೂ ತಾ.ಪಂ.ಗಿದ್ದ ಏಕವಿನ್ಯಾಸ ಅನುಮೋದನೆ ಅಧಿಕಾರವನ್ನು ಸರಕಾರ ಹಿಂಪಡೆದಿದೆ.
ಭೌಗೋಳಿಕ ಹಿನ್ನೆಲೆ ಗಮನಿಸಿ ದ.ಕ., ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ 2015ರ ಮಾ. 19ರ ಆದೇಶದಂತೆ ಸ್ಥಳೀಯ ಯೋಜನಾ ಪ್ರದೇಶದ ಹೊರಗೆ 0 – 0.25 ಎಕರೆ ವರೆಗೆ ಗ್ರಾ.ಪಂ., 1 ಎಕರೆ ವರೆಗೆ ತಾ.ಪಂ., 1 ಎಕರೆಗಿಂತ ಅಧಿಕ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೂ ಪರಿವರ್ತಿತ ಜಮೀನುಗಳಲ್ಲಿಏಕವಿನ್ಯಾಸ ಅನುಮೋದನೆ ಅಧಿಕಾರ ನೀಡಲಾಗಿತ್ತು.ಅದರಿಂದ ಅ ಭಾಗದ ಜನರಿಗೆ 9/11 ಖಾತೆ ಸುಲಭವಾಗಿ ಹಾಗೂ ಪಾರದರ್ಶಕವಾಗಿ ಲಭ್ಯವಾಗುತ್ತಿತ್ತು.
ಪಂಚಾಯತ್ ಅಧಿಕಾರ ಮೊಟಕು
ರಾಜ್ಯ ಸರಕಾರವು 2021ರ ಅಕ್ಟೋಬರ್ 7ರಂದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆಗೆ ತಿದ್ದುಪಡಿಗೊಳಿಸಿದೆ. ಯಾವುದೇ ಭೂಮಿಯನ್ನು ಅಭಿವೃದ್ಧಿ ಮಾಡಲು ಉದ್ದೇಶಿಸಿರುವ ವ್ಯಕ್ತಿ ಅನುಮತಿ ಗಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಲಿಖಿತ ಅರ್ಜಿ ಸಲ್ಲಿಸಬೇಕು. ಸ್ಥಳೀಯ ಪ್ರಾಧಿಕಾರವು ಅನುಮತಿ ನೀಡುವ ಮೊದಲು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಅಥವಾ ಅವರಿಂದ ಅಧಿಕೃತಗೊಂಡು ನಗರ ಯೋಜನೆ ಸಹಾಯಕ ನಿರ್ದೇಶಕರ ದರ್ಜೆಗೆ ಕಡಿಮೆಯಿಲ್ಲದ ಅಧೀನ ಅಧಿಕಾರಿಯ ಪೂರ್ವಾನುಮೋದನೆ ಪಡೆಯುವುದು ಅಗತ್ಯ ಎಂಬುದಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 2022ರ ಫೆ. 28ರಿಂದ ಗ್ರಾ.ಪಂ. ಹಾಗೂ ತಾ.ಪಂ.ಗೆ ಏಕವಿನ್ಯಾಸ ಅನುಮೋದನೆ ನೀಡುವ ಅಧಿಕಾರವನ್ನು ಮೊಟಕುಗೊಳಿಸಿದೆ.
ಭೌಗೋಳಿಕ ಹಿನ್ನೆಲೆ ಗಮನಿಸಿಕೊಂಡು ಜನರ ಅನುಕೂಲಕ್ಕಾಗಿ ಸರಕಾರ ಹೊಸ ಆದೇಶವನ್ನು ಹಿಂಪಡೆದು ದ.ಕ., ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ಈ ಹಿಂದಿನ ನಿಯಮವನ್ನೇ ಮುಂದುವರಿಸಬೇಕು. ಇಲ್ಲದಿದ್ದರೆ ದೂರದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದು ಜನಸಾಮಾನ್ಯರಿಗೆ ಹೊರೆ ಯಾಗುತ್ತದೆ. ಆದ್ದರಿಂದ ತಾಲೂಕು ಅಥವಾ ವಿಭಾಗ ಮಟ್ಟದಲ್ಲಿ ಶಾಖಾ ಕಚೇರಿಗಳನ್ನು ತೆರೆದು ಅಲ್ಲಿ ವ್ಯವಹರಿಸಲು ಅವಕಾಶ ನೀಡಬೇಕು ಎನ್ನುವುದು ಜನರ ಆಗ್ರಹ.
ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಾಗಿ ವಿನ್ಯಾಸ ಅನುಮೋದನೆಗೆ ದ.ಕ., ಉಡುಪಿ, ಶಿವಮೊಗ್ಗ ಹಾಗೂ ಉ.ಕ. ಜಿಲ್ಲೆಗೆ ವಿನಾಯಿತಿ ನೀಡಿದ್ದರಿಂದ ಗ್ರಾ.ಪಂ. ಮತ್ತು ತಾ.ಪಂ.ಗಳಿಗೆ ಈ ಅಧಿಕಾರ ನೀಡಲಾಗಿತ್ತು. ಆದರೆ ಪರಿಷ್ಕೃತ ಆದೇಶದಂತೆ ಸ್ಥಳೀಯ ಪ್ರಾಧಿಕಾರವು ಅನುಮತಿ ನೀಡುವ ಮೊದಲು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಪೂರ್ವಾನುಮತಿ ಅಗತ್ಯ.
– ಕುಮಾರ್, ಸಿಇಒ, ದ.ಕ. ಜಿ.ಪಂ.
-ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.