ಗುರುಪುರ ನದಿ; ಕಪ್ಪು ಬಣ್ಣಕ್ಕೆ ತಿರುಗಿದ ನೀರು
Team Udayavani, May 20, 2018, 10:21 AM IST
ಬಜಪೆ: ಕಳೆದ ವಾರದಿಂದ ಮಳವೂರು ವೆಂಟೆಡ್ ಡ್ಯಾಂನ ಕೆಳ ಭಾಗದಲ್ಲಿ ಗುರುಪುರ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕಶ್ಮಲಗೊಂಡು ದುರ್ನಾತ ಬರುತ್ತಿದೆ. ಈ ಬಗ್ಗೆ ಈ ತನಕ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲವಾದರೂ ನದಿಯ ನೀರು ಕಪ್ಪಾಗಿರುವುದಕ್ಕೆ ಕೈಗಾರಿಕೆಯ ತ್ಯಾಜ್ಯ ನೀರು ಕಾರಣವಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಮೇ ತಿಂಗಳಲ್ಲಿ ಈ ಪ್ರದೇಶದ ನೀರು ಕಶ್ಮಲಗೊಂಡು ಕಪ್ಪು ಬಣ್ಣಕ್ಕೆ ತಿರುಗಿ, ನದಿಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಮೀನುಗಳು ಸತ್ತು ಹೋಗಿದ್ದವು. ಸಾರ್ವಜನಿಕರು ನೀಡಿದ ದೂರಿನನ್ವಯ ಜಿಲ್ಲಾಡಳಿತ ಎಚ್ಚೆತ್ತು ಕೊಂಡು ಮಾರ್ಗೋಪಾಯಗಳನ್ನು ಕಂಡುಕೊಂಡಿತ್ತು. ನದಿ ನೀರು ಮಲೀನಗೊಂಡಿರುವ ಬಗ್ಗೆ ಪರಿಸರ ಇಲಾಖೆಯೂ ವರದಿ ಸಲ್ಲಿಸಿತ್ತು.
ನದಿಯಲ್ಲಿರುವ ಮಣ್ಣು ತೆಗೆಯಲಾಗಿದೆ
ಡ್ಯಾಂ ನೀರಿನ ಕೆಳಭಾಗದಲ್ಲಿ ರಾಶಿ ಹಾಕಿದ ಮಣ್ಣಿನ ಸಂಗ್ರಹದಿಂದಾಗಿ ಮಣ್ಣು ಕೊಳೆತಿದ್ದು, ಇದರಿಂದ ನೀರು ಹರಿಯಲು ಸ್ಥಳಾವಕಾಶ ಇಲದೇ ನದಿ ನಿರು ಮಲೀನವಾಗಿದೆ. ಮಣ್ಣನ್ನು ಜಾಕ್ವೆಲ್ ಮೂಲಕ ತೆಗೆಯಲಾಗಿದೆ.
ನಿರ್ಭೀತಿಯಿಂದ ಕಶ್ಮಲ ನದಿಗೆ
ಅಧಿಕಾರಿಗಳು, ಚುನಾವಣೆಯ ಕಾರ್ಯದಲ್ಲಿ ಮಗ್ನರಾಗಿದ್ದರು. ಅಲ್ಲದೆ ನದಿಯ ನೀರು ಕಶ್ಮಲವಾಗುವ ಬಗ್ಗೆ ಯಾರೂ ತಿಳಿಸಿಲ್ಲ. ಕುಡಿಯುವ ನೀರಿಗೆ ತೊಂದರೆಯಾಗಿಲ್ಲ. ಜನಪ್ರತಿನಿಧಿಗಳಿಗೆ ನೀತಿ ಸಂಹಿತೆಯ ಅಡ್ಡಿಯಾದ್ದರಿಂದ ಸುಮ್ಮನಿದ್ದರು. ಹಾಗಾಗಿ ಕೈಗಾರಿಕೆಗಳು ನಿರ್ಭೀತಿಯಿಂದ ತ್ಯಾಜ್ಯ ನೀರು ನದಿಗೆ ಬಿಟ್ಟು ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಕಳೆದ ಬಾರಿಯಷ್ಟು ದುರ್ನಾತ ಬರುವುದಿಲ್ಲ ಎಂದು ನದಿ ತೀರದ ನಿವಾಸಿಗಳು ತಿಳಿಸಿದ್ದಾರೆ. ಈಗಾಗಲೇ ಮಳೆ ಬಂದಿದೆ. ನೀರು ನದಿಯಲ್ಲಿ ಹರಿದರೂ ನೀರಿನ ಬಣ್ಣ ಕಪ್ಪು ಆಗಿದೆ, ಗಬ್ಬು ವಾಸನೆ ಬರತೊಡಗಿದೆ. ಮೀನು ಅಥವಾ ಹಾವುಗಳು ಇಷ್ಟರತನಕ ಸತ್ತಿಲ್ಲ. ಮಳೆ ಬಾರದಿದ್ದರೆ, ನದಿಯಲ್ಲಿ ನೀರು ಹರಿಯದಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಇದರ ಜತೆ ವೆಂಟಡ್ ಡ್ಯಾಂನ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕಾಗಿದೆ.
ಕುಡಿಯಲು ತೊಂದರೆಯಿಲ್ಲ
ವೆಂಟೆಡ್ ಡ್ಯಾಂನ ನೀರನ್ನು ಓರ್ವ ತಜ್ಞರಿಂದ ಪ್ರತಿದಿನ ನೀರಿನ ಪರೀಕ್ಷೆ ಮಾಡಿ, ವರದಿಯನ್ನು ನೀಡಲಾಗಿದೆ. ವರದಿನ್ವಯ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ.
– ಪ್ರಭಾಕರ, ಎಂಜಿನಿಯರ್