ಗುರುಪುರ ಸೇತುವೆ ಶಿಥಿಲ: ವಾಹನ ಸಂಚಾರ ದುಸ್ತರ
Team Udayavani, Feb 13, 2018, 12:00 PM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ- ಮೂಡಬಿದಿರೆ ನಡುವೆ ಫಲ್ಗುಣಿ ನದಿಗೆ ಇರುವ 95 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಗುರುಪುರ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂಬ ಕಳವಳ ಪದೇ ಪದೆ ಕೇಳಿಬರುತ್ತಿದೆ. ಪರ್ಯಾಯ ಸೇತುವೆ ಅನಿವಾರ್ಯವಾಗಿದೆ.
ಆದರೆ ರಾ.ಹೆ. ಇಲಾಖೆ ಸೇತುವೆ ಶಿಥಿಲಾವಸ್ಥೆಗೆ ತಲುಪಿರುವ ವಿಚಾರವನ್ನು ಅಲ್ಲಗಳೆದಿದೆ. ಬದಲಾಗಿ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ನಿಯಮದ ಪ್ರಕಾರ 16 ಮೀ. ಅಗಲ ಇಲ್ಲದಿರುವುದರಿಂದ ಹೊಸ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುಪುರ ಸೇತುವೆ ಹಳೆಯದಾಗಿದ್ದಲ್ಲದೆ ಕಿರಿದಾಗಿದ್ದು, ಪದೇ ಪದೇ ಟ್ರಾಫಿಕ್ ಜಾಮ್ ಕೂಡ ಸಂಭವಿಸುತ್ತಿದೆ. “ಉದಯವಾಣಿ’ ತಂಡ ಸ್ಥಳಕ್ಕೆ ತೆರಳಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿದಾಗ, ಸೇತುವೆ ಅಪಾಯದಲ್ಲಿದೆ ಎಂದೇ ಹೇಳಿದ್ದಾರೆ. ಸೇತುವೆಯ ಕೆಳಭಾಗದಲ್ಲಿ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದಿರುವುದು ಗಮನಕ್ಕೆ ಬಂದಿದೆ.
ಸಾರ್ವಜನಿಕರ ಅಭಿಪ್ರಾಯದ ಪ್ರಕಾರ 1923ರಲ್ಲಿ ಬ್ರಿಟಿಷರು ಈ ಸೇತುವೆಯನ್ನು ಕಪ್ಪಕಾಣಿಕೆ ಸಂಗ್ರಹಕ್ಕಾಗಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದರು. ಪ್ರಸ್ತುತ ಇದು ರಾ.ಹೆ. ಸೇತುವೆಯಾಗಿ ಮಾರ್ಪಟ್ಟಿದೆ. ಆದರೆ ದಾಖಲೆಯಲ್ಲಿ ಬದಲಾಗಿದೆಯೇ ವಿನಾ ಸೇತುವೆಯ ಸಾಮರ್ಥ್ಯದಲ್ಲಿ ಬದಲಾವಣೆ ಆಗಿಲ್ಲ. ಈ ಸೇತುವೆ 40 ಟನ್‌ಗಳಷ್ಟು ಭಾರ ಹೊರುತ್ತಿದೆ. ಸೇತುವೆಯ ಮೇಲ್ಭಾಗ ರಸ್ತೆಯೂ ಹದಗೆಟ್ಟಿದ್ದು, ವಾಹನಗಳು ಓಡಾಟ ನಡೆಸುವಾಗ ಅಲ್ಲಾಡಿದ ಅನುಭವವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
500ಕ್ಕೂ ಅಧಿಕ ಬಸ್ಸುಗಳು
ಮಂಗಳೂರಿನಿಂದ ಕೈಕಂಬ, ಮೂಡಬಿದಿರೆ, ಕಾರ್ಕಳ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಗುರುಪುರ ಸೇತುವೆ ಪ್ರಮುಖ ಕೊಂಡಿ. ನಿತ್ಯ ಬಸ್‌ಗಳು 500ಕ್ಕೂ ಹೆಚ್ಚು ಟ್ರಿಪ್ ನಡೆಸುತ್ತವೆ. ಇದರ ಜತೆಗೆ ಟಿಪ್ಪರ್, ಲಾರಿಗಳು ಸಹಿತ ಸಾವಿರಾರು ವಾಹನಗಳು ಸೇತುವೆಯಲ್ಲಿ ಓಡಾಡುತ್ತವೆ.
ಸುಮಾರು 170 ಮೀ. ಉದ್ದದ ಈ ಸೇತುವೆಯು ಕೇವಲ 5.10 ಮೀ.ನಷ್ಟು ಅಗಲವಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಸೇತುವೆಯ ಎರಡೂ ಬದಿಗಳಲ್ಲಿ ನಿತ್ಯ ಟ್ರಾಫಿಕ್ ಜಾಮ್.
ಸೇತುವೆ ಗಟ್ಟಿಯಿದೆ ಎಂದು ವರದಿ!
ಈ ರಸ್ತೆಯಲ್ಲಿ ಮಂಗಳೂರು- ಮೂಡಬಿದಿರೆ- ಕಾರ್ಕಳ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟಕ್ಕೆ ಪರವಾನಿಗೆ ಲಭಿಸಿದ್ದು, ಖಾಸಗಿ ಬಸ್‌ನವರು ಈ ಸೇತುವೆಯ ಕಾರಣವನ್ನೇ ಮುಂದಿಟ್ಟು ಕಾನೂನು ಹೋರಾಟ ಮಾಡು ತ್ತಿದ್ದಾರೆ. ಸೇತುವೆ ಕಿರಿದಾಗಿದೆ ಎಂಬ ಕಾರಣ ನೀಡಿ ಪರವಾನಿಗೆಯ ವಿರುದ್ಧ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಸೇತುವೆಯ ಸಾಮರ್ಥ್ಯ ವನ್ನು ಪರಿಶೀಲನೆ ಮಾಡುವಂತೆ ಇಬ್ಬರು ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ರಾ.ಹೆ. ಇಲಾಖೆಯ ಅಧಿಕಾರಿ ಹಾಗೂ ಆರ್‌ಟಿಒ ಅಧಿಕಾರಿಯನ್ನೊಳಗೊಂಡ ಸಮಿತಿ ರಚಿಸಿ ಜ. 27ರೊಳಗೆ ವರದಿ ನೀಡುವಂತೆ ತಿಳಿಸಿತ್ತು.
ಪರಿಶೀಲಿಸಿದ ಸಮಿತಿ ಇಲ್ಲಿ ಏಕಕಾಲದಲ್ಲಿ ಎರಡು ವಾಹನ ಗಳು ಸಾಗುವುದು ಕಷ್ಟವಾದರೂ ಏಕಮುಖ ಸಂಚಾರಕ್ಕೆ ಸೇತುವೆ ಸೂಕ್ತವಾಗಿದೆ ಎಂಬ ವರದಿಯನ್ನು ನೀಡಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟಕ್ಕೆ ಸಾರ್ವಜನಿಕರ ವಿರೋಧ ಇಲ್ಲದೇ ಇದ್ದರೂ ಸೇತುವೆ ಗಟ್ಟಿಯಾಗಿದೆ ಎಂದು ಹೇಗೆ ವರದಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಡ್‌ಗಳು ಕಳ್ಳರ ಪಾಲು
ಈ ಸೇತುವೆಗೆ ಕಾಂಕ್ರೀಟ್‌ಗಿಂತಲೂ ಹೆಚ್ಚಾಗಿ ಕಬ್ಬಿಣವನ್ನೇ ಬಳಸಲಾಗಿದೆ. ವರ್ಷ ಕಳೆದಂತೆ ಇದರ ರಾಡ್‌ಗಳು ತುಕ್ಕು ಹಿಡಿಯುತ್ತಿದ್ದು, ಕಳ್ಳರ ಪಾಲಾಗುತ್ತಿವೆ. ಸೇತುವೆಯ ಪಿಲ್ಲರ್‌ಗಳಿಗೆ ನದಿಯಲ್ಲಿ ತೇಲಿ ಬರುವ ಬೃಹತ್ ಮರದ ದಿಮ್ಮಿಗಳು ಬಡಿದು ಹಾನಿಯಾಗಬಾರದು ಎಂಬ ಕಾರಣಕ್ಕೆ ಸುತ್ತಲೂ ಕಬ್ಬಿಣದ ರಾಡ್‌ಗಳನ್ನು ಬಳಸಲಾಗಿತ್ತು.
ಆದರೆ ಆ ರಾಡ್‌ಗಳನ್ನು ಕಿಡಿಗೇಡಿಗಳು ದೋಣಿಯಲ್ಲಿ ಬಂದು ಹೊತ್ತೂಯ್ದಿದ್ದಾರೆ. ಸೇತುವೆಯ ಮೇಲ್ಭಾಗದಲ್ಲಿ ಅಳವಡಿಸಿರುವ ರಾಡ್‌ಗಳಲ್ಲೂ ಕೆಲವನ್ನು ಕಿತ್ತು ತೆಗೆಯಲಾಗಿದೆ. ಇಲಾಖೆ, ಸರಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇನ್ನಷ್ಟು ಕಬ್ಬಿಣದ ರಾಡ್‌ಗಳು ಕಳ್ಳರ ಪಾಲಾಗಲಿವೆ.
ಜನಪ್ರತಿನಿಧಿಗಳು ಸುಳ್ಳು ಹೇಳುತ್ತಿದ್ದಾರೆ
ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣದ ಕುರಿತು ಕಳೆದ ಹಲವು ವರ್ಷಗಳಿಂದ ಜನಪ್ರತಿನಿಧಿ ಗಳು ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ. ಪ್ರಸ್ತುತ ಇರುವ ಸೇತುವೆಯ ಕೆಳಭಾಗದ ರಾಡ್ ಗಳು ಅಪಾಯದಲ್ಲಿವೆ ಎಂದು ಸಿವಿಲ್ ಎಂಜಿ ನಿಯರ್‌ಗಳು ಅಭಿಪ್ರಾಯಪಟ್ಟರೂ ಸಂಬಂಧ ಪಟ್ಟ ಅಧಿಕಾರಿಗಳು ಸೇತುವೆ ಗಟ್ಟಿಯಾಗಿದೆ ಎಂದು ಹೇಳುತ್ತಾರೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಯಾಗಿ ಮೇಲ್ದರ್ಜೆಗೇರಿದರೂ ಅಭಿವೃದ್ಧಿಯ ಕುರಿತು ಯಾರಲ್ಲೂ ಮಾಹಿತಿ ಇಲ್ಲ.
– ಸುಧಾಕರ ಪೂಂಜಾ ಮಿಜಾರು
ಅಧ್ಯಕ್ಷರು, ರಾ.ಹೆ. 169 ಹೋರಾಟ ಸಮಿತಿ
ಮಾರ್ಚ್‌ನಲ್ಲಿ ಮಂಜೂರಾತಿ ಸಾಧ್ಯತೆ
ಗುರುಪುರದಲ್ಲಿ ಹೊಸ ಸೇತುವೆಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದ್ದು, ಮಾರ್ಚ್ ಒಳಗಡೆ ಮಂಜೂರಾತಿ ಸಿಗುವ ಸಾಧ್ಯತೆ ಇದೆ. ಪ್ರಸ್ತುತ ಸಂಸದರು ಈ ಕುರಿತು ಸರಕಾರಕ್ಕೆ ಒತ್ತಡ ಹೇರುತ್ತಿದ್ದಾರೆ. ಮಂಜೂರಾತಿ ದೊರೆತರೆ ಮುಂದಿನ ವರ್ಷ ಕಾಮಗಾರಿ ಆರಂಭವಾಗುತ್ತದೆ. ಪ್ರಸ್ತುತ ಹಳೆಸೇತುವೆ ಗಟ್ಟಿಯಾಗಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಇದು ಐಆರ್‌ಸಿ ನಿಯಮದ ಪ್ರಕಾರ 16 ಮೀ. ಅಗಲ ಇಲ್ಲದೇ ಇರುವುದರಿಂದ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವಿಸಲಾಗಿದೆ.
– ಯಶವಂತ್‌ಕುಮಾರ್ ಎಸ್.
ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾ.ಹೆ. ಉಪವಿಭಾಗ, ಮಂಗಳೂರು.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.