ಹದಗೆಟ್ಟ ಗುತ್ತಿಗಾರು- ಬಳ್ಪ ರಸ್ತೆ ದುರಸ್ತಿ
Team Udayavani, Jul 15, 2017, 2:00 AM IST
ಸುಳ್ಯ: ಅವ್ಯವಸ್ಥೆಯಿಂದ ಕೂಡಿರುವ ರಸ್ತೆಯಲ್ಲಿ ಸಾಗುವುದೇ ಒಂದು ಹರಸಾಹಸವಾದರೆ, ಓಡಾಟ ನಡೆಸಿ ಸುಸ್ತಾದ ಜನತೆಗೆ ಈಗ ರಸ್ತೆ ದುರಸ್ತಿ ಕೈಗೊಳ್ಳುವ ದುಃಸ್ಥಿತಿ ಒದಗಿದೆ. ಇದು 10 ವರ್ಷಗಳಿಂದಲೂ ದುರಸ್ತಿಗೊಳ್ಳದ ಗುತ್ತಿಗಾರು-ಕಮಿಲ ಮಾರ್ಗವಾಗಿ ಬಳ್ಪವನ್ನು ಸಂಪರ್ಕಿಸುವ ಜಿ.ಪಂ. ರಸ್ತೆಯ ಕಥೆ.
ಸಿಗದ ಸಹಕಾರ
ಚುನಾವಣೆ ಸಂದರ್ಭ ನೀಡಿದ ಭರವಸೆ ಕೇವಲ ಭರವಸೆಯಾಗಿಯೇ ಉಳಿದ ಪರಿಣಾಮ ಗ್ರಾಮಸ್ಥರಿಗೆ ಈ ಸ್ಥಿತಿ ಬಂದಿದೆ. ಹೊಂಡ ಗುಂಡಿಗಳಿಂದ ಕೂಡಿದ, ಚರಂಡಿ ವ್ಯವಸ್ಥೆಯೂ ಇಲ್ಲದಿರುವ ಈ ರಸ್ತೆಯನ್ನು ಗ್ರಾಮಸ್ಥರು ಮೂರ್‍ನಾಲ್ಕು ದಿನಗಳಿಂದ ಕಲ್ಲು, ಮರಳು ಹಾಕಿ ತಾತ್ಕಾಲಿಕವಾಗಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಈ ಕೆಲಸಕ್ಕೆ ಯಾವುದೇ ಜನಪ್ರತಿನಿಧಿಗಳು ಇದುವರೆಗೆ ಸಹಕಾರ ನೀಡಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣ.
ಗುತ್ತಿಗಾರು ಕಮಿಲ ಬಳ್ಪದ 5.4 ಕಿಮೀ. ಉದ್ದದ ರಸ್ತೆ ತೀವ್ರ ಹದಗೆಟ್ಟಿದೆ. ಈ ಪೈಕಿ ಕಮಿಲ ಬಳಿಯಿಂದ ಅರಣ್ಯದೊಳಗೆ ಸಾಗಿ ಬಳ್ಪ ಸಂಪರ್ಕಿಸುವ ರಸ್ತೆವರೆಗೂ ಸಂಚಾರಕ್ಕೆ ಅಯೋಗ್ಯವಾಗಿದೆ. ಶಾಲಾ ಮಕ್ಕಳ ವಾಹನ ಅಲ್ಲದೇ ಸರಕಾರಿ ಬಸ್ಸುಗಳ ಸಂಚಾರವೂ ಕಷ್ಟವಾಗಿದೆ. ಹೀಗಾಗಿ ಮುಂದೆ ಇಲ್ಲಿ ಸಂಚಾರ ನಡೆಸುವುದಿಲ್ಲ ಎಂದು ವಾಹನಗಳ ಚಾಲಕರು ಹೇಳುತ್ತಿರುವುದರಿಂದ ಈ ಭಾಗದ ಜನತೆಗೆ ಸಂಪರ್ಕ ಕಡಿದುಹೋಗಬಹುದೆಂಬ ಭೀತಿಯಲ್ಲಿದ್ದಾರೆ. ದುರವಸ್ಥೆಗೊಂಡಿರುವ ಈ ರಸ್ತೆಯಲ್ಲಿ ಮಳೆಗಾಲದ ಸಂದರ್ಭ ಸಂಚಾರ ಕಷ್ಟವಾಗಲಿದೆ ಎಂದು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದವು. ದುರಸ್ತಿ, ಡಾಮರೀಕರಣಕ್ಕೂ ಜನರು ಆಗ್ರಹಿಸುತ್ತಿದ್ದರು. ಆದರೂ ಕನಿಷ್ಠ ತೇಪೆ ಹಾಕುವ ಕಾರ್ಯಕ್ಕೂ ಸಂಬಂಧಿಸಿದ ಇಲಾಖೆ ಮುಂದಾಗಿಲ್ಲ ಎಂಬುದು ಜನರ ಆರೋಪ.
ಆದ ಮೇಲಷ್ಟೇ ಗ್ಯಾರಂಟಿ
ರಸ್ತೆ ದುರಸ್ತಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 1.5 ಕಿಮೀ ರಸ್ತೆ ಡಾಮರೀಕರಣ, 2017-18ನೇ ಸಾಲಿನ ಗ್ರಾಮೀಣ ರಸ್ತೆಗಳ ನಿರ್ವಹಣೆ ಹಾಗೂ ದುರಸ್ತಿ ಕ್ರಿಯಾಯೋಜನೆಯಲ್ಲಿ ಶಾಸಕರ ಅನುದಾನದಿಂದ 5 ಲಕ್ಷ ರೂ. ಕಾದಿರಿಸಲಾಗಿದೆ. ಮಳೆಗಾಲದ ಅನಂತರ ದುರಸ್ತಿ ಮಾಡಲಾಗುತ್ತದೆ ಎಂದು ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ತಿಳಿಸಿದ್ದಾರೆ. ಇಲಾಖೆ ಕೂಡಾ ಇದೇ ಹೇಳಿಕೆ ನೀಡುತ್ತಿದೆ. ಅದು ಈಡೇರಿದ ಮೇಲೆಯೇ ನಂಬುವಂಥ ಸ್ಥಿತಿ ಗ್ರಾಮಸ್ಥರದ್ದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.