
ಅರ್ಧಂಬರ್ಧ ರಸ್ತೆ ಕಾಮಗಾರಿ; ಸಾರ್ವಜನಿಕರಿಗೆ ಸಂಕಷ್ಟ
Team Udayavani, Apr 24, 2019, 5:50 AM IST

ಕೊಟ್ಟಾರ ಕ್ರಾಸ್‌ನಿಂದ ಕೊಟ್ಟಾರವನ್ನು ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು.
ಮಹಾನಗರ: ನಗರದ ಪ್ರಮುಖ ರಸ್ತೆಗಳನ್ನು ನೀರು, ವಿದ್ಯುತ್ ಮತ್ತು ಒಳಚರಂಡಿ ಮತ್ತಿತರ ಸಂಪರ್ಕಕ್ಕಾಗಿ ಮಹಾನಗರ ಪಾಲಿಕೆಯು ಕೆಲವೊಂದು ಕಡೆಗಳಲ್ಲಿ ಅಗೆದು ಹಾಕಿದ್ದು, ಆ ರಸ್ತೆಗಳ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿದೆ. ಇದೇ ಕಾರಣಕ್ಕೆ ಪಾದಚಾರಿಗಳು, ವಾಹನ ಸವಾರರರು ಪ್ರತಿ ದಿನ ಸಮಸ್ಯೆ ಎದುರಿಸುತ್ತಿದ್ದಾರೆ.
ನಗರದ ಪ್ರಮುಖ ಕೇಂದ್ರವಾದ ಕೊಟ್ಟಾರವನ್ನು ಸಂಪರ್ಕಿಸಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೊಟ್ಟಾರ ಕ್ರಾಸ್ ಸಂಪರ್ಕ ಇರುವ ಈ ರಸ್ತೆಯಲ್ಲಿ ದಡ್ಡಲಕಾಡು ಸಮೀಪ ಇತ್ತೀಚೆಗೆ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗೆ ಸಂಬಂಧಿಸಿ ಕೆಲವು ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಸುಮಾರು ಒಂದು ತಿಂಗಳ ಹಿಂದೆಯೇ ನೀರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಿನ ಸುಮಾರು ಅರ್ಧ ಕಿಲೋ ಮೀಟರ್‌ನಷ್ಟು ಅಗೆದ ರಸ್ತೆ ಸರಿಪಡಿಸುವ ಗೋಜಿಗೆ ಸ್ಥಳೀಯಾಡಳಿತ ಹೋಗಲಿಲ್ಲ. ರಸ್ತೆಯನ್ನು ಅಗೆದು ಹಾಕಿ ಹೊಂಡಕ್ಕೆ ಅರ್ಧಂಬರ್ಧ ಮಣ್ಣು ತುಂಬಿಸಿ ಹಾಗೆಯೇ ಬಿಡಲಾಗಿದ್ದು, ಇದರಿಂದಾಗಿ ವಾಹನ ಚಾಲಕರು ಸದಾ ಸಂಕಷ್ಟ ಅನುಭವಿಸುವಂತಾಗಿದೆ. ಅಂದಹಾಗೆ, ಈ ರಸ್ತೆಯ ಪೂರ್ಣ ಈ ಹಿಂದೆ ಡಾಮರು ಇತ್ತು. ಆದರೆ, ಕಾಮಗಾರಿಗೆ ಸಂಬಂಧಿಸಿ ಡಾಮರು ತೆಗೆಯಲಾಗಿದೆ. ಈಗ ಮಣ್ಣಿನ ರಸ್ತೆ ಇದ್ದು, ವಾಹನ ಸವಾರರು, ಅಕ್ಕ ಪಕ್ಕದ ಮನೆಗಳ ಮಂದಿ ಧೂಳಿನ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಮಳೆಗಾಲಕ್ಕೂ ಮುನ್ನ ಸರಿಪಡಿಸಿ
ಸ್ಥಳೀಯ ನಿವಾಸಿ ರಮೇಶ್ ಕುಮಾರ್ “ಸುದಿನ’ಕ್ಕೆ ಪ್ರತಿಕ್ರಿಯಿಸಿ, ಮೇ ಕೊನೆಯ ವೇಳೆ ಮಳೆಗಾಲ ಆರಂಭವಾಗಲಿದ್ದು, ಅದಕ್ಕೂ ಮುನ್ನ ರಸ್ತೆ ಸರಿಪಡಿಸಬೇಕು. ಸದ್ಯ ಮಣ್ಣಿನ ರಸ್ತೆಯಿದ್ದು, ಪೂರ್ತಿ ಧೂಳಿನಿಂದ ಕೂಡಿದೆ. ಒಂದು ಮಳೆ ಬಂದರೆ ಈ ರಸ್ತೆಯಲ್ಲಿ ಜನರು ಕೂಡ ಓಡಾಡುವುದು ಕಷ್ಟವಾಗಬಹುದು. ಸ್ಥಳೀಯಾಡಳಿತ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ನಡೆಯುತ್ತಿದೆ
ನಗರದ ಅನೇಕ ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ದಡ್ಡಲಕಾಡು ಪ್ರದೇಶದಲ್ಲಿ ಕೆಲವೊಂದು ಕಾಮಗಾರಿ ಬಾಕಿ ಇವೆ ಎಂಬ ಉದ್ದೇಶದಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸದೇ ಇದ್ದಿರಬಹುದು. ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಬಳಿ ಮಾತುಕತೆ ನಡೆಸಿ, ವಾಸ್ತವಾಂಶವನ್ನು ಪಡೆದುಕೊಳ್ಳುತ್ತೇನೆ.
- ನಾರಾಯಣಪ್ಪ, ಪಾಲಿಕೆ ಆಯುಕ್ತ (ಪ್ರಭಾರ)
ಟಾಪ್ ನ್ಯೂಸ್

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.