ಹಳ್ಳಿಗೊಂದು ಪೊಲೀಸ್ ಸಿಬಂದಿ : ಹೊಸ ಯೋಜನೆ ಘೋಷಣೆ
Team Udayavani, Feb 27, 2017, 12:59 PM IST
ಬೆಳ್ತಂಗಡಿ : ಮಾರ್ಚ್ ತಿಂಗಳಿನಿಂದ ಹಳ್ಳಿಗೊಂದು ಪೊಲೀಸ್ ಸಿಬಂದಿ ಎಂದು ನಿಯೋಜಿಸ ಲಾಗುವುದು. ಆ ಹಳ್ಳಿಯ ಉಸ್ತುವಾರಿ ವಹಿಸಿಕೊಂಡ ಪೊಲೀಸ್ ಹಳ್ಳಿಯ ಎಲ್ಲ ವಿಚಾರಗಳ ಕಡೆ ಗಮನಹರಿಸಬೇಕು. ಅವರ ವಸತಿ ಕೂಡ ಹಳ್ಳಿಯಲ್ಲೇ. ಈಗ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಆರಂಭ. ಅನಂತರ ಎಲ್ಲ ಠಾಣೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಹೇಳಿದ್ದಾರೆ.ಅವರು ರವಿವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ದಲಿತರ ಕುಂದು ಕೊರತೆ ಆಲಿಸುವ ಸಭೆಯಲ್ಲಿ ಮಾತನಾಡಿದರು.
ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಬೇಕು. ಜನರಿಗೆ ಪೊಲೀಸರು ಸುಲಭವಾಗಿ ದೂರು ನೀಡಲು ಸಿಗುವಂತಾಗಬೇಕು ಎಂದು ಹೊಸ ಯೋಜನೆ ರೂಪಿಸಲಾಗಿದೆ. ಹಳ್ಳಿಗೊಬ್ಬ ಎಸ್‌ಐ ಇದ್ದಂತೆ. ಎಲ್ಲ ರೀತಿಯ ದೂರುಗಳನ್ನು ಜನ ಅವರ ಬಳಿ ಹೇಳಬಹುದು ಎಂದು ಎಸ್‌ಪಿ ಅವರು ವಿವರಿಸಿದರು.
ಅನಧಿಕೃತ ಅಂಗಡಿ ತೆರವಿಗೆ ಮನವಿ
ಬೆಳ್ತಂಗಡಿಗೆ ಸಂಚಾರ ಠಾಣೆ ಮಂಜೂರು ಮಾಡಿಸಿದ್ದಕ್ಕೆ ಪೊಲೀಸ್ ಅಧಿಕಾರಿಗಳನ್ನು ದಲಿತ ಮುಖಂಡ ಶೇಖರ್ ಎಲ್ . ಅಭಿನಂದಿಸಿದರು. ಗುರುವಾಯನಕೆರೆಯಿಂದ ಉಜಿರೆಯವರೆಗೆ ಅತ್ಯಧಿಕ ಸಂಚಾರದಟ್ಟಣೆ ಇದ್ದು ಅನಧಿಕೃತ ಅಂಗಡಿಗಳ ತೆರವಿಗೆ ಒತ್ತಾಯಿಸಿದರು.
ಅಕ್ರಮ ಸಾರಾಯಿ ಅಡ್ಡೆ
ಕಳಂಜದಲ್ಲಿ ಅಕ್ರಮ ಸಾರಾಯಿ ಅಡ್ಡೆಗಳು ತಲೆ ಎತ್ತಿದ್ದು ಫೆ.20ರಂದು 5ನೇ ತರಗತಿಯ ಪ್ರವೀಣ ಎಂಬ ಬಾಲಕನಿಗೆ ಮೋಹನ ಎಂಬಾತ ಕಳ್ಳಭಟ್ಟಿ ಸಾರಾಯಿ ಕುಡಿಸಿದ್ದಾನೆ. ಆತ ಅಸ್ವಸ್ಥನಾಗಿ ರಸ್ತೆಯಲ್ಲಿ ಬಿದ್ದುದನ್ನು ನೋಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಶಾಲೆಗೆ ಹೋಗಲು ಹೆದರುತ್ತಿದ್ದಾನೆ. ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ. ದಲಿತ ಮುಖಂಡರ ಹೆಸರಿನಲ್ಲಿ ವಿಶ್ವನಾಥ ಎಂಬ ವ್ಯಕ್ತಿ ರಾಜಿ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇಂತಹ ಪ್ರಕರಣ ನಡೆಯಲು ಬಿಡಬಾರದು. ವಿಶ್ವನಾಥ ಹಾಗೂ ಧರ್ಮಸ್ಥಳ ಎಸ್‌ಐ ಮೇಲೆ ಕ್ರಮ ಜರಗಿಸಬೇಕೆಂದು ಶ್ರೀಧರ ಕಳಂಜ, ಚಂದು ಎಲ್., ಬಿ.ಕೆ. ವಸಂತ್, ಬೇಬಿ ಸುವರ್ಣ ಒತ್ತಾಯಿಸಿದರು.
ಬೆಳಾಲು ಕೊಲ್ಪಾಡಿಯಲ್ಲಿ ವೇದಾವತಿ ಎಂಬವರಿಗೆ ಶ್ರೇಯಸ್, ಧರ್ಣಪ್ಪ ಗೌಡ ಮೊದಲಾದವರು ಏರ್‌ಗನ್‌ನಿಂದ ಶೂಟ್ ಮಾಡಿದ್ದು ಗುರಿತಪ್ಪಿ ಅದು ನಾಯಿಗೆ ತಗುಲಿದೆ. ಜಾಗದ ತಕರಾರಿನಲ್ಲಿ ನಿರಂತರ ಕಿರುಕುಳ ಕೊಡುತ್ತಿದ್ದಾರೆ. ಈ ಪ್ರಕರಣ ಕೂಡ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಲಿಲ್ಲ. ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಎಸ್‌ಐಯನ್ನು ವರ್ಗಾವಣೆ ಮಾಡಿ ಎಂದು ಸೇಸಪ್ಪ ನಲ್ಕೆ ಮತ್ತಿತರರು ಒತ್ತಾಯಿಸಿದರು. ಪೊಲೀಸ್ ಠಾಣೆಗಳು ಪಂಚಾಯತಿ ಕಟ್ಟೆ ಆಗದಿರಲಿ, ನ್ಯಾಯಕೇಂದ್ರವಾಗಿರಲಿ ಎಂದು ಶೇಖರ್ ಸಲಹೆ ನೀಡಿದರು.
ಪೆರಿಯಶಾಂತಿ ಎಂಬಲ್ಲಿ ಕೇಸರಿ ಶಾಲು ಹಾಕಿದ ತಂಡವೊಂದು ಇಲ್ಲದ ದೇವಾಲಯಗಳ ಹೆಸರಿನಲ್ಲಿ ನಕಲಿ ಬ್ರಹ್ಮಕಲಶದ ಚೀಟಿ ಹಿಡಿದು ವಾಹನ ಸವಾರರಿಂದ ಬಲವಂತದ ವಸೂಲಿ ನಡೆಸುತ್ತಿದ್ದೆ ಎಂದು ಚಂದು ಎಲ್. ಹೇಳಿದರು. ಈ ಬಗ್ಗೆ ಯಾರೇ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದರು. ಈ ರೀತಿ ವಸೂಲಿ ಮಾಡಲು ಅವಕಾಶ ಇಲ್ಲ ಎಂದರು. 1,574 ಎಕರೆ ಡಿಸಿ ಮನ್ನಾ ಜಾಗ ಇದ್ದರೂ 990 ಎಕರೆ ಮಾತ್ರ ದಲಿತರಿಗೆ ಮೀಸಲಿಡಲಾಗಿದೆ. ಉಳಿಕೆ ಜಾಗ ಇತರರಿಂದ ಒತ್ತುವರಿ ಆಗಿದೆ ಎಂದು ಕಂದಾಯ ಇಲಾಖೆಯೇ ವರದಿ ನೀಡಿದ್ದು ದಲಿತರ ಭೂಮಿ ಒತ್ತುವರಿ ಮಾಡಿದವರ ಮೇಲೆ ತತ್‌ಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ಶೇಖರ್ ಎಲ್. ಒತ್ತಾಯಿಸಿದರು. ತಾಲೂಕಿನಲ್ಲಿ ಸಂವಿಧಾನಬಾಹಿರ ಕೆಲಸ ನಡೆಸುವ ಪುಂಡಪೋಕರಿಗಳ ಸಂಖ್ಯೆ ಹೆಚ್ಚಾಗಿದ್ದು ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸೌಹಾರ್ದ ರ್ಯಾಲಿಯ ಬ್ಯಾನರ್ ಹರಿದವರ ಮೇಲೆ ಕೇಸು ದಾಖಲಿಸಬೇಕು ಎಂದು ಶೇಖರ್ ಒತ್ತಾಯಿಸಿದರು.
ಬಂಟ್ವಾಳ ಡಿವೈಎಸ್‌ಪಿ ರವೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಸಿ. ಆರ್., ಕಂದಾಯ ಇಲಾಖೆ ಪ್ರಥಮ ದರ್ಜೆ ಗುಮಾಸ್ತ ಗೋವಿಂದ ನಾಯ್ಕ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್, ದಲಿತ ದೌರ್ಜನ್ಯ ತಡೆ ಜಿಲ್ಲಾ ಸಮಿತಿ ಸದಸ್ಯ ಸಂಜೀವ ನೆರಿಯ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.