ಹಂಪನಕಟ್ಟೆ: ಮಹಿಳೆಯರು ರಾತ್ರಿ ಓಡಾಡುವುದೇ ಕಷ್ಟ
Team Udayavani, Dec 23, 2018, 9:47 AM IST
ಮಹಾನಗರ : ರಾತ್ರಿ ಹೊತ್ತು ಮಹಿಳೆಯರು ನಿರ್ಭೀತಿಯಿಂದ ಸಂಚರಿಸುವಂಥ ವಾತಾವರಣ ನಗರದಲ್ಲಿ ಇದೆಯೇ? ಈ ಪ್ರಶ್ನೆ ಹಿಡಿದು ನಗರಾದ್ಯಂತ ಸಂಚರಿಸಿದಾಗ ಕಂಡು ಬಂದ ಅಂಶ ವೆಂದರೆ, ಕಷ್ಟ ಎಂಬುವುದು. ತೋಟ ಬೆಂಗ್ರೆಯಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಜನರಲ್ಲಿ ಭೀತಿ ಸೃಷ್ಟಿಸಿತ್ತು. ಈಗ ನಗರದ ಹೃದಯಭಾಗದ ರಸ್ತೆಗಳಲ್ಲೇ ಬೀದಿ ಕಾಮಣ್ಣರ ಹಾವಳಿ ಮಿತಿ ಮೀರುವುದು ಆತಂಕ ಹೆಚ್ಚಿಸಿದೆ. ಹಂಪನಕಟ್ಟೆ ಹಳೆ ಬಸ್ ನಿಲ್ದಾಣ, ನೆಹರೂ ಮೈದಾನ ಸುತ್ತಮುತ್ತ, ಪುರಭವನದ ಆಸು-ಪಾಸು, ಲೇಡಿಗೋಶನ್ ಆಸ್ಪತ್ರೆ ಮುಂಭಾಗ, ಸ್ಟೇಟ್ ಬ್ಯಾಂಕ್ ಪರಿಸರ, ನಂತೂರು ಜಂಕ್ಷನ್ ಹಾಗೂ ಕೆಪಿಟಿ ಸರ್ಕಲ್ ಬಳಿ ಸಂಜೆ 6 ಗಂಟೆ ಬಳಿಕ ಹೆಮ್ಮಕ್ಕಳು ಒಂಟಿಯಾಗಿ ಸಂಚರಿಸುವುದು ಅಪಾಯಕಾರಿ ಎಂಬಂತಿದೆ. ಈ ಕಿಡಿಗೇಡಿಗಳು ರಾತ್ರಿ ಏಳು ಗಂಟೆ ಬಳಿಕ ತಮ್ಮ ಆಯಕಟ್ಟಿನ ಸ್ಥಳಗಳಲ್ಲಿ (ಅಡ್ಡೆ) ನಿಂತು, ಹೆಮ್ಮಕ್ಕಳು ಓಡಾಡುವಾಗ ಅವರ ಮೈಗೆ ತಾಗಿಕೊಂಡು ಹೋಗುವುದು, ದೇಹದ ಮೇಲೆ ಕೈ ಹಾಕುವುದು, ಹಿಂಬಾಲಿಸುವುದೂ ಸಹಿತ ಅಶ್ಲೀಲ ಚೇಷ್ಟೆಗಳನ್ನು ಎಸಗುತ್ತಾರೆ.
ಫೋನ್-ಇನ್‌ನಲ್ಲಿ ದೂರು
ರಾತ್ರಿ 8 ಗಂಟೆ ಕಳೆದ ಮೇಲಂತೂ, ಈ ಗುಂಪುಗಳು ರಾಜಾರೋಷವಾಗಿ ರಸ್ತೆ ಯಲ್ಲಿ ಹೆಮ್ಮಕ್ಕಳನ್ನು ಚುಡಾಯಿಸುತ್ತಾರೆ. ಲೇಡಿಗೋಶನ್ ಆಸ್ಪತ್ರೆ ಎದುರು, ಸ್ಟೇಟ್ ಬ್ಯಾಂಕ್, ನೆಹರೂ ಮೈದಾನದ ಸುತ್ತಮುತ್ತ ಬೀದಿ ಕಾಮಣ್ಣರ ಹಾವಳಿ ಬಗ್ಗೆ ಪೊಲೀಸ್ ಕಮಿಷನರ್‌ರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದ್ದರು. ಇಂಥ ಸ್ಥಳಗಳಲ್ಲಿ ಗಸ್ತು ಪೊಲೀಸರನ್ನು ನಿಯೋಜಿಸುವ ಅಥವಾ ಮಫ್ತಿಯಲ್ಲಿ ಕಾರ್ಯಾಚರಿಸುವ ಭರವಸೆಯೂ ಆಯುಕ್ತರಿಂದ ಸಿಕ್ಕಿತ್ತು. ಆದರೂ ಕಿಡಿಗೇಡಿಗಳ ಹಾವಳಿ ತಪ್ಪಿಲ್ಲ ಎಂಬುದು ಜನರ ಆತಂಕಕ್ಕೆ ಕಾರಣ. ಇದಕ್ಕೆ ಪುಷ್ಟಿ ನೀಡುವಂತೆ ಕಿರುಕುಳಕ್ಕೆ ಒಳಗಾದ ಕೆಲವು ಮಹಿಳೆಯರು ‘ಉದಯವಾಣಿ’ ಕಚೇರಿಗೂ ಫೋನ್ ಮಾಡಿ ದೂರು ನೀಡಿದ್ದಾರೆ.
ಪುರಭವನ ಆಸು-ಪಾಸು, ಹಂಪನಕಟ್ಟೆ, ಲೇಡಿಗೋಶನ್ ಆಸ್ಪತ್ರೆ ಮುಂಭಾಗ, ಸ್ಟೇಟ್ ಬ್ಯಾಂಕ್ ಆಸು-ಪಾಸಿನಿಂದ ಉದ್ಯೋಗಸ್ಥ ಮಹಿಳೆಯರು ಕಚೇರಿಯಿಂದ ಸಂಜೆ ಸ್ವಲ್ಪ ತಡವಾಗಿ ಹೊರಟರೂ, ಬಸ್ ನಿಲ್ದಾಣ ತನಕ ಆತಂಕದಿಂದಲೇ ಸಾಗುವಂತಿದೆ. ಈ ಪೈಕಿ ಒಂದೆರಡು ನೈಜ ಪ್ರಕರಣ ಇಲ್ಲಿದೆ.
ಘಟನೆ ಒಂದು: ಕೆಲವು ದಿನಗಳ ಹಿಂದಿನ ಪ್ರಕರಣ. ಸಂಜೆ 6.15 ರ ವೇಳೆ. ಸರಕಾರಿ ಕಚೇರಿಯೊಂದರ ಉದ್ಯೋಗಿ ವಿವಾಹಿತ ಮಹಿಳೆಯೊಬ್ಬರು ಮನೆಗೆ ಹೋಗುವ ಬಸ್‌ಗಾಗಿ ಯು.ಪಿ. ಮಲ್ಯರಸ್ತೆಯಿಂದ ಪುರಭವನ ಮತ್ತು ಗಾಂಧಿ ಪಾರ್ಕ್ ನಡುವಿನ ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಈ ಸಂದರ್ಭ ದಢೂತಿ ದೇಹದ ಓರ್ವ ಗಂಡಸು ಆಕೆಯ ದೇಹದ ಮೇಲೆ ಕೈಹಾಕಿ ಕೈ ಹಿಡಿದು ಎಳೆಯಲು ಪ್ರಯತ್ನಿಸಿದ್ದ. ಆಗ ಆಕೆ ತಪ್ಪಿಸಿಕೊಂಡು ಬೊಬ್ಬೆ ಹಾಕಿದ್ದರು. ಆದರೂ ಪಕ್ಕದಲ್ಲೇ ಸಾಗಿ ಹೋಗುತ್ತಿದ್ದ ಯಾರೂ ಇವರ ಸಹಾಯಕ್ಕೆ ಬರಲಿಲ್ಲ.
ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾದ ಅವರು ತಮ್ಮ ಪತಿಗೆ ವಿವರಿಸಿದರು. ಮರುದಿನ ದಂಪತಿ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದರು. ಆ ಪೊಲೀಸರು ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಿದರು. ಅಲ್ಲಿ ‘ಇಲ್ಲಿಗೇಕೆ ಬಂದಿರಿ? ಪುರಭವನ ವ್ಯಾಪ್ತಿ ಪಾಂಡೇಶ್ವರ ಠಾಣೆಗೆ ಬರುತ್ತದಲ್ಲವೇ?’ಎಂದು ಪ್ರಶ್ನಿಸಲಾಯಿತು.
ಪಾಂಡೇಶ್ವರ ಠಾಣೆಯವರೇ ಇಲ್ಲಿಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿ ಹೇಳಿದ ಬಳಿಕ ಮಹಿಳಾ ಪೊಲೀಸರು ಅಹವಾಲು ಆಲಿಸಿ ವಿವರಗಳನ್ನು ಬರೆದುಕೊಂಡರು. ಆದರೆ ದೂರು ದಾಖಲಾದರೆ ಫಾಲೋಅಪ್ ಗಾಗಿ ಮತ್ತೆ ಠಾಣೆಗೆ ಬರ ಬೇಕಾದೀತೆಂದು ಪೊಲೀಸರು ತಿಳಿಸಿದಾಗ ದಂಪತಿ ಕೇಸು ದಾಖಲಿಸಲು ಹಿಂದೇಟು ಹಾಕಿದರು.
ಘಟನೆ ಎರಡು: ನಂತೂರು ಜಂಕ್ಷನ್. ಹತ್ತು ದಿನಗಳ ಹಿಂದೆ ಸಂಜೆ 7-7.30. ಮಹಿಳೆಯೊಬ್ಬರು ಬಸ್ಸಿಗೆ ಕಾಯುತ್ತಿದ್ದರು. ಯುವಕನೊಬ್ಬ ಬೈಕ್ ನಿಲ್ಲಿಸಿ ಕೆಳಗಿಳಿದು ಬಳಿ ಬಂದು ಏನೇನೊ ಮಾತನಾಡ ತೊಡಗಿದ್ದ. ಅವರು ಪ್ರತಿಕ್ರಿಯಿಸದಿದ್ದರೂ ಅವನು ಮತ್ತೆ ಮಾತನಾಡಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ಇತರರು ಅವನನ್ನು ತರಾಟೆಗೆ ತೆಗೆದುಕೊಂಡದ್ದರಿಂದ ಬೈಕ್‌ನಲ್ಲಿ ಪರಾರಿಯಾದ.
ಇಂಥ ಘಟನೆಗಳು ನಗರದ ಅಲ್ಲಲ್ಲಿ ಆಗಾಗ್ಗೆ ನಡೆಯುತ್ತಲೇ ಇವೆ. ಆದರೆ ಬಹುತೇಕ ಹೆಮ್ಮಕ್ಕಳು ಮತ್ತವರ ಕುಟುಂಬದವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡುವುದಿಲ್ಲ. ಇದೇ ಈ ಬೀದಿ ಕಾಮಣ್ಣರಿಗೆ ವರವಾಗಿದೆ. ಜತೆಗೆ ಕೆಲವು ಮಹಿಳೆಯರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೆ ಪೊಲೀಸರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹಾಗಾಗಿ, ಇಂತಹ ಸ್ಥಳಗಳಲ್ಲಿ ಪುರುಷ ಪೊಲೀಸ್ ಸಿಬಂದಿ ನಿಯೋಜಿಸಿ ಕಠಿನ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಕೇರಾಫ್ ಫುಟ್‌ಪಾತ್!
ನೆಹರೂ ಮೈದಾನ ಸುತ್ತಮುತ್ತ ಪಾದಚಾರಿಗಳ ಸರ ಎಳೆಯುವುದು, ಜೇಬುಗಳ್ಳತನ, ಸುಲಿಗೆ ಮತ್ತಿತರ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಘಟನೆಗಳೂ ಇವೆ. ಕೆಲವೊಂದು ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳ ಆರೋಪಿಗಳ ವಿಳಾಸ ಕೇರಾಫ್ ಫುಟ್‌ಪಾತ್ !
ಪೊಲೀಸ್ ನಿಯೋಜನೆ
ಪುರಭವನ, ಗಾಂಧಿ ಪಾರ್ಕ್ ನಡುವಣ ಕಾಲುದಾರಿಯಲ್ಲಿ ಹೆಮ್ಮಕ್ಕಳಿಗೆ ಕಿಡಿಗೇಡಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಇದುವರೆಗೆ ನಿರ್ದಿಷ್ಟ ದೂರು ಬಂದಿಲ್ಲ. ಆದರೂ ಜನರ ಆತಂಕ ದೂರವಾಗಿಸಲು ಈ ಪ್ರದೇಶವೂ ಸಹಿತ ಕೆಲವು ಪ್ರಮುಖ ಸ್ಥಳಗಳಲ್ಲಿ ಮುಖ್ಯವಾಗಿ ಸಂಜೆ ವೇಳೆ ಸಿಬಂದಿ ನಿಯೋಜಿಸಲಾಗುವುದು.
– ಟಿ.ಆರ್. ಸುರೇಶ್, ಪೊಲೀಸ್ ಕಮಿಷನರ್
ಕಿಡಿಗೇಡಿಗಳ ಪತ್ತೆಗೆ ಕ್ರಮ
ನೆಹರೂ ಮೈದಾನ ಸುತ್ತ ಮುತ್ತ ಹೆಮ್ಮಕ್ಕಳಿಗೆ ಕಿರುಕುಳ ಕೊಡುವುದನ್ನು ತಡೆಯಲು ಸಂಜೆ ಹೊತ್ತಿನಲ್ಲಿ ಸಿಬಂದಿ ನಿಯೋಜಿಸಿ ಕಿಡಿಗೇಡಿಗಳಿಗೆ ಕಡಿವಾಣ ಹಾಕಲಾಗುವುದು.
-ಉಮಾ ಪ್ರಶಾಂತ್, ಡಿಸಿಪಿ
ಸಹಾಯಕ್ಕೆ ಬರುವುದಿಲ್ಲ
ನೆಹರೂ ಮೈದಾನ ಸುತ್ತ ಮುತ್ತಲು ಮಹಿಳೆಯರು ಒಬ್ಬೊಬ್ಬರು ಓಡಾಡುವುದು ಕಷ್ಟ. ಬೊಬ್ಬೆ ಹಾಕಿ ದರೂ ಯಾರೂ ಸಹಾಯಕ್ಕೆ ಬರುವುದಿಲ್ಲ. ಪುರುಷ ಪೊಲೀಸ್ ಸಿಬಂದಿಯನ್ನು ನಿಯೋಜಿಸಬೇಕು. ಸಂಜೆ ವೇಳೆಯಂತೂ ಸಿಬಂದಿ ಬೇಕೇಬೇಕು.
-ಮನೋಜ್, ನಾಗರಿಕ
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.