ಓಡಬಾೖ ತೂಗುಸೇತುವೆ ನಿರ್ವಹಣೆಗೆ ನಿರ್ಲಕ್ಷ್ಯ
ಪಿಂಡಿ ದೋಣಿ ಪಯಣಕ್ಕೆ ವಿದಾಯ ಹೇಳಿದ್ದ ಬಳ್ಳಿ ಸೇತುವೆ
Team Udayavani, Dec 16, 2019, 5:57 AM IST
ಸುಳ್ಯ : ಸುಮಾರು 150ಕ್ಕೂ ಅಧಿಕ ಕುಟುಂಬಗಳ ಪಿಂಡಿ ಪಯಣಕ್ಕೆ ವಿದಾಯ ಹೇಳಿ ಬಳ್ಳಿ ಸೇತುವೆ ಮೂಲಕ ಜನರನ್ನು ಸ್ವಾಗತಿಸಿದ ಸುಳ್ಯ- ದೊಡ್ಡೇರಿ ಸಂಪರ್ಕದ ಓಡಬಾೖ ತೂಗು ಸೇತುವೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಪರಿಣಾಮ ಶಿಥಿಲಗೊಳ್ಳುತ್ತಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ವಯಂಸೇವಾ ಸಂಸ್ಥೆಯೊಂದರ ಸಹಯೋಗದಲ್ಲಿ 13 ವರ್ಷಗಳ ಹಿಂದೆ ನಿರ್ಮಿಸಿದ್ದ ತಾಲೂಕಿನ ಅತಿ ಎತ್ತರದ ಈ ತೂಗು ಸೇತುವೆಯ ವಾರ್ಷಿಕ ನಿರ್ವಹಣೆ ಬಗ್ಗೆ ನ.ಪಂ. ಗಮನ ಹರಿಸಿಲ್ಲ ಎಂಬ ಆಕ್ರೋಶ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.
ಅಜ್ಜಾವರ ಗ್ರಾಮದ ದೊಡ್ಡೇರಿ ಪ್ರದೇಶದ ಬಸವನಪಾದೆ ಪರಿಸರದ 150 ಮನೆಗಳ ನಿವಾಸಿಗಳಿಗೆ ಮತ್ತು ಆಸುಪಾಸಿನ ಪ್ರದೇಶದವರಿಗೆ ಸುಳ್ಯದಿಂದ ದೊಡ್ಡೇರಿಗೆ ಹಾಗೂ ದೊಡ್ಡೇರಿ-ಸುಳ್ಯ ಸಂಪರ್ಕಕ್ಕೆ ಓಡಬಾೖ ಬಳಿಯ ಪಯಸ್ವಿನಿ ನದಿಯಲ್ಲಿ ಅಪಾಯಕಾರಿ ಪಿಂಡಿ ದೋಣಿ ಸಂಚಾರ ಏಕೈಕ ಮಾರ್ಗವಾಗಿತ್ತು.
ನಿತ್ಯ 40ಕ್ಕೂ ಅಧಿಕ ಮಂದಿಯನ್ನು ಕುಳ್ಳಿರಿಸಿಕೊಂಡು ಹರಿಯುವ ನದಿ ದಾಟಿ ದಡ ಸೇರುವುದೆಂದರೆ ಇಲ್ಲಿನ ನಿವಾಸಿಗಳಿಗೆ ಮರು ಹುಟ್ಟು ಪಡೆದಂತಹ ಅನುಭವವಾಗಿತ್ತು. ಇಲ್ಲೊಂದು ತೂಗು ಸೇತುವೆ ನಿರ್ಮಿಸಬೇಕೆನ್ನುವ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದರೂ ಆಡಳಿತ ವ್ಯವಸ್ಥೆ ತೆಪ್ಪಗೆ ಕುಳಿತ ಪರಿಣಾಮ ಸಮಸ್ಯೆ ಕಗ್ಗಂಟಾಗಿ ಉಳಿದು ತೆಪ್ಪದ ಪಯಣವೇ ಅನಿವಾರ್ಯವಾಗಿತ್ತು.
ತೂಗು ಸೇತುವೆ ಕೊಂಡಿ
ಇಲ್ಲಿನ ಬವಣೆ ಕಂಡು ಡಾ| ಪ್ರಭಾಕರ ಶಿಶಿಲರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಳ್ಯ ರೋಟರಿ ಸಂಸ್ಥೆ ತೂಗು ಸೇತುವೆ ನಿರ್ಮಾಣದ ಯೋಜನೆ ಹಾಕಿಕೊಂಡಿತ್ತು. ಅದಕ್ಕಾಗಿ ಶಾಸಕರ ನೇತೃತ್ವದಲ್ಲಿ ತೂಗುಸೇತುವೆ ಅನುಷ್ಠಾನ ಸಮಿತಿ ರಚನೆಯಾಯಿತು. 25 ಲಕ್ಷ ರೂ. ವೆಚ್ಚದ ಈ ಕಾಮಗಾರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ 10 ಲಕ್ಷ ರೂ. ನೆರವು ನೀಡುವ ಮೂಲಕ ಸೇತುವೆ ನಿರ್ಮಾಣದ ಕನಸಿಗೆ ಜೀವ ತುಂಬಿದರು. ಡಾ| ವೀರೇಂದ್ರ ಹೆಗ್ಗಡೆ, ದಿ| ಕುರುಂಜಿ ವೆಂಕಟರಮಣ ಗೌಡ, ಜಗನ್ನಾಥ ಶೆಟ್ಟಿ, ಒಡಿಯೂರು, ಸುಬ್ರಹ್ಮಣ್ಯ ಸ್ವಾಮೀಜಿ ಸಹಿತ ಹಲವು ದಾನಿಗಳು ದೇಣಿಗೆ ರೂಪದಲ್ಲಿ ಕೈ ಜೋಡಿಸಿದ್ದರು. ಅಜ್ಜಾವರ ಗ್ರಾ.ಪಂ.ನಿಂದ 25 ಸಾವಿರ ರೂ. ಅನುದಾನ ಸಿಕ್ಕಿತ್ತು.
25 ಲಕ್ಷ ರೂ.
ವೆಚ್ಚ, 140 ಮೀ. ಉದ್ದ
ತೂಗು ಸೇತುವೆ ಸರದಾರ ಗಿರೀಶ್ ಭಾರದ್ವಾಜ್ ಅವರ ನೇತೃತ್ವದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಯಿತು. 2006ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಕೆಲವರು ಶ್ರಮದಾನ, ವಸ್ತು ರೂಪದಲ್ಲಿ ನೆರವಾಗಿದ್ದರು. ಗಿರೀಶ್ ಭಾರದ್ವಾಜ್ ಉಚಿತವಾಗಿ ತಮ್ಮ ಶ್ರಮ ಸೇವೆ ನೀಡಿದ್ದರು. 2006ರ ಜು. 6ರಂದುರೋಟರಿ ಇನ್ಫೋಸಿಸ್ ಗೋಲ್ಡನ್ ಬ್ರಿಡ್ಜ್ ತೂಗುಸೇತುವೆ ಲೋಕಾರ್ಪಣೆಗೊಂಡು ಸಂಚಾರಕ್ಕೆ ಮುಕ್ತವಾಯಿತು.
ನಿರ್ವಹಣೆ ನಿರ್ಲಕ್ಷ್ಯ
ತೂಗು ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಅನಂತರ ರೋಟರಿ ಸಂಸ್ಥೆ ನಿರ್ವಹಣೆಗೆಂದು ಅಜ್ಜಾವರ ಗ್ರಾ.ಪಂ. ಸುಪರ್ದಿಗೆ ಒಪ್ಪಿಸಿತ್ತು. ಆದರೆ ಗ್ರಾ.ಪಂ. ಆದಾಯದ ಕೊರತೆ ಎದುರಾಗುವ ಕಾರಣದಿಂದ ಸುಳ್ಯ ನ.ಪಂ.ಗೆ ಹಸ್ತಾಂತರಿಸಲು ಮುಂದಾಯಿತು. ಕೊನೆಗೆ ನ.ಪಂ.ಗೆ ಮನವಿ ಮೂಲಕ ಹಸ್ತಾಂತರಿಸಿ ನಿರ್ವಹಣೆ ವಹಿಸಲಾಯಿತು. ಆದರೆ ನ.ಪಂ. ನಿರ್ವಹಣೆ ಕುರಿತು ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸೇತುವೆ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು. ಸೇತುವೆಯ ಎರಡೂ ಬದಿಯಲ್ಲಿ ಸುರಕ್ಷತೆಗೆ ಅಳವಡಿಸಿದ ಬೇಲಿ ಬಲೆ ತುಂಡಾಗಿದೆ. ಬಣ್ಣ ಬಳಿಯದೆ ಕಬ್ಬಿಣ ತುಕ್ಕು ಹಿಡಿದಿದೆ. ಮೆಟ್ಟಿಲು ಸುಸ್ಥಿತಿಯಲ್ಲಿ ಇಲ್ಲ. ಮೆಟ್ಟಿಲಿನ ಕೆಲ ಭಾಗದಲ್ಲಿ ಪೊದೆ, ಕಸ ಕಡ್ಡಿ ತುಂಬಿವೆ. ಹೀಗಾಗಿ, ಸೇತುವೆಗೆ ಮತ್ತಷ್ಟು ಅಪಾಯ ಕಾದಿದೆ.
ನ.ಪಂ. ನಿರ್ಲಕ್ಷ್ಯ
ನನ್ನ ಅಧ್ಯಕ್ಷತೆ ಅವಧಿಯಲ್ಲಿ ಹಲವರ ಸಹಕಾರದಿಂದ ಈ ತೂಗು ಸೇತುವೆ ನಿರ್ಮಾಣವಾಗಿತ್ತು. ಇದು ಬರೀ ಸಂಚಾರಕ್ಕೆ ಮಾತ್ರವಲ್ಲದೆ ಪ್ರವಾಸಿಗರ ಆಕರ್ಷಣೆಯ ಸ್ಥಳವೂ ಆಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಶಿಥಿಲವಾಗುತ್ತಿದೆ. ಲಕ್ಷಾಂತರ ರೂ. ಆದಾಯ ಇರುವ ನ.ಪಂ. ನಿರ್ವಹಣೆ ಜವಾಬ್ದಾರಿ ಹೊಂದಿದ್ದರೂ ಸ್ಪಂದಿಸುತ್ತಿಲ್ಲ. ಒಂದು ವೇಳೆ ಸಂಪೂರ್ಣ ಹಾಳಾದರೆ ಮರು ನಿರ್ಮಾಣಕ್ಕೆ 45 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚಾಗುತ್ತದೆ.
– ಡಾ| ಪ್ರಭಾಕರ ಶಿಶಿಲ,
ಸಾಹಿತಿ, ಪರಿಸರ ತಜ್ಞ
ಪರಿಶೀಲಿಸಲಾಗುವುದು
ಈ ತೂಗು ಸೇತುವೆ ನ.ಪಂ.ಗೆ ಕ್ರಮಬದ್ಧ ರೀತಿಯಲ್ಲಿ ಹಸ್ತಾಂತರ ಆಗಿದೆಯೇ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು. ಸೇತುವೆ ನಿರ್ಮಾಣ ಸಂಸ್ಥೆಯೊಂದರ ಮೂಲಕ ಖಾಸಗಿ ಎಂಜಿನಿಯರ್ ಅವರು ತೂಗು ಸೇತುವೆ ಪರಿಶೀಲಿಸಿ ದುರಸ್ತಿಗೆ 18 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದಾರೆ. ಅನುದಾನದ ಲಭ್ಯತೆ, ಹಸ್ತಾಂತರ ಬಗ್ಗೆ ಪರಿಶೀಲಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
– ಮತ್ತಡಿ,
ಮುಖ್ಯಾಧಿಕಾರಿ, ನ.ಪಂ., ಸುಳ್ಯ
ಗೋಲ್ಡನ್ ಬ್ರಿಡ್ಜ್ ತೂಗುಸೇತುವೆ
ತೂಗುಸೇತುವೆ ಓಡಬಾೖ ರೋಟರಿ ಇನ್ಫೋಸಿಸ್
ಸ್ಥಾಪನೆ 2006 ಜು.4
ಉದ್ದ 140 ಮೀ.
ವಿಶೇಷತೆ ರೋಟರಿ ಕ್ಲಬ್, ಇನ್ಫೋಸಿಸ್ ಸಹಯೋಗದಲ್ಲಿ ಪ್ರಥಮ ಹಾಗೂ ತಾಲೂಕಿನ ಅತಿ ಎತ್ತರದ
ತೂಗು ಸೇತುವೆ.
ವೆಚ್ಚ 25 ಲಕ್ಷ ರೂ.
ಪ್ರಯೋಜನ ದೊಡ್ಡೇರಿ ಗ್ರಾಮಸ್ಥರಿಗೆ ಸುಳ್ಯ ಸಂಪರ್ಕ
ಯೋಜನೆ ರೋಟರಿ ಸಂಸ್ಥೆ ಸುಳ್ಯ ಮತ್ತು ದಾನಿಗಳು
ಈಗಿನ ಸಮಸ್ಯೆ ನಿರ್ವಹಣೆ ಇಲ್ಲದೆ ಶಿಥಿಲ. 18 ಲಕ್ಷ ರೂ. ವೆಚ್ಚ ಅಂದಾಜು.
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.