ಹೆಲ್ತ್ ಕಾರ್ಡ್ ಗೊಂದಲ ಸರಿಪಡಿಸಲು ಆಗ್ರಹ
ಬೆಳುವಾಯಿ ಗ್ರಾಮಸಭೆ
Team Udayavani, Jul 11, 2019, 5:55 AM IST
ಮೂಡುಬಿದಿರೆ: ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್‌ನಿಂದ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದಾದ ಚಿಕಿತ್ಸೆಗಳ ಬಗ್ಗೆ ಉಂಟಾಗಿರುವ ಗೊಂದಲ ಕುರಿತು ಸರಿಯಾದ ಮಾಹಿತಿ ನೀಡ ಬೇಕೆಂದು ಬೆಳುವಾಯಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾ.ಪಂ. ಅಧ್ಯಕ್ಷ ಸೋಮನಾಥ ಕೋಟ್ಯಾನ್ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭರತೇಶ್ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಡ್ ಹೊಂದಿರುವವರು ಮೊದಲು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಬೇಕು. ಸೂಚಿತ ಕಾಯಿಲೆಗೆ ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ವೈದ್ಯಾಧಿಕಾರಿಯ ಶಿಫಾರಸು ಪತ್ರ ಪಡೆದು ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ತುರ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರ ಖಾಸಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆಯೊಳಗೆ ಸರಕಾರಿ ಜಿಲ್ಲಾಸ್ಪತ್ರೆಯ ಸಂಬಂಧಿತ ವೈದ್ಯರಿಗೆ ಮಾಹಿತಿ ನೀಡಬೇಕಾಗುತ್ತೆ ಎಂದರು.
ಜಿ. ಪಂ. ಸದಸ್ಯೆ ಕೆ.ಪಿ. ಸುಜಾತಾ ಮಾತನಾಡಿ, ಈ ಯೋಜನೆಯಲ್ಲಿ ತುರ್ತು ಸಂದರ್ಭ ರೋಗಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಂತರ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯ ಪತ್ರ ಪಡೆದರೆ ಸಾಕೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಜಿ.ಪಂ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದುಕೊಂಡು ಹೆಲ್ತ್ ಕಾರ್ಡ್‌ನ ಬಗ್ಗೆ ಇರುವ ಗೊಂದಲವನ್ನು ಸರಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಭೆಗೆ ತಿಳಿಸಿದ್ದರು ಎಂದರು.
ಹೈಮಾಸ್ಟ್ ದೀಪಗಳ ಬಿಲ್ ಸಮಸ್ಯೆ
ಕೆಸರ್‌ಗದ್ದೆ, ಕರಿಯನಂಗಡಿ, ಕಾಂತಾವರ ಕ್ರಾಸ್‌ನ ಹೈಮಾಸ್ಟ್ ದೀಪಗಳಿಂದ ಬರುವ ಬಿಲ್ ಪಂಚಾಯತ್‌ಗೆ ಹೊರೆಯಾಗುತ್ತಿದೆ. ಇವುಗಳಲ್ಲಿ ಕೆಸರ್‌ಗದ್ದೆಯ ದೀಪಕ್ಕೆ ಮಾತ್ರ ಪಂಚಾಯತ್ ನಿರಾಕ್ಷೇ ಪಣ ಪತ್ರ ನೀಡಿದೆ. ಉಳಿದಂತೆ ಮಸೀದಿ, ಚರ್ಚ್‌ಗಳ ಸಮೀಪ ಇರುವ ದೀಪಗಳನ್ನು ಧಾರ್ಮಿಕ ಕೇಂದ್ರಗಳ ಅವರಣಕ್ಕೆ ಹಾಕಿಕೊಂಡು ಅವರೇ ವಿದ್ಯುತ್ ಬಿಲ್ ಕಟ್ಟಲೊಪ್ಪುವುದಾದರೆ ಅವುಗಳನ್ನು ಉಳಿಸಿಕೊಳ್ಳಲಾಗುವುದು. ಇಲ್ಲವಾದರೆ , ವಾರ್ಡ್ ಸಭೆಗಳಲ್ಲಿ ನಿರ್ಣಯವಾದಂತೆ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಪಿಡಿಒ ಭೀಮಾ ನಾಯಕ್ ತಿಳಿಸಿದರು.
ನೋಡಲ್ ಅಧಿಕಾರಿಯಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವಿಸ್ತರ ಣಾಧಿಕಾರಿ ದಯಾನಂದ ಶೆಟ್ಟಿ ಕಾರ್ಯನಿರ್ವಹಿಸಿದರು.
ಮಳೆಗಾಲದಲ್ಲೂ ನೀರಿನ ಸಮಸ್ಯೆ
ಮಲೆಬೆಟ್ಟು, ಕುಕ್ಕುಡೇಲು ಪರಿಸರದಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸ್ಥಳೀಯರು ಆರೋಪಿಸಿದರು. ಪಂಪ್ ಆಪರೇಟರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರಿಗೆ ಎಚ್ಚರಿಸ ಲಾಗಿದೆ ಎಂದು ಅಧ್ಯಕ್ಷ ಸೋಮನಾಥ ಕೋಟ್ಯಾನ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.