ಅಲ್ಲಲ್ಲಿ ಧಾರಾಕಾರ ಮಳೆ; ಸಿಡಿಲು ಬಡಿದು ಹಾನಿ, ವೃದ್ಧೆ ಸಾವು
ವಿದ್ಯುತ್, ದೂರವಾಣಿ ಸಂಪರ್ಕ ಕಡಿತ ; ಇಂದು -ನಾಳೆ ಆರೆಂಜ್ ಅಲರ್ಟ್
Team Udayavani, Oct 18, 2019, 5:00 AM IST
ಮಂಗಳೂರು/ ಉಡುಪಿ: ಕರಾವಳಿಯ ಹಲವೆಡೆ ಗುರುವಾರವೂ ಮಧ್ಯಾಹ್ನದ ಬಳಿಕ ಮಿಂಚು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ಮಿಂಚಿನಿಂದಾಗಿ ಬಹುತೇಕ ಗ್ರಾಮಾಂತರ ಪ್ರದೇಶ ಸಹಿತ ಹಲವೆಡೆ ವಿದ್ಯುತ್, ದೂರ ವಾಣಿ ಸಂಪರ್ಕ ಕೈಕೊಟ್ಟಿದ್ದು, ಜನರು ಕತ್ತಲಿನಲ್ಲಿ ಪರದಾಡುವ ಸ್ಥಿತಿಯಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ದಲ್ಲಿ ಸಂಜೆ ವೇಳೆಗೆ ಗುಡುಗು, ಮಿಂಚು ಸಹಿತ ಉತ್ತಮ ಮಳೆ ಯಾಗಿದೆ. ಉಳಿದಂತೆ ಬೆಳ್ತಂಗಡಿ, ಗುರುವಾಯನಕೆರೆ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಕಡಬ, ಮಡಂತ್ಯಾರು, ಬಂಟ್ವಾಳ, ಉಳ್ಳಾಲ, ವಿಟ್ಲ, ಕನ್ಯಾನ, ವೇಣೂರು ಸೇರಿದಂತೆ ಜಿಲ್ಲೆಯಅನೇಕ ಕಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯಾದರೆ ಇನ್ನು ಕೆಲವೆಡೆ ಸಾಧಾರಣ ಮಳೆ ಸುರಿದಿದೆ.
ಬೆಳ್ಮಣ್, ಮುಂಡ್ಕೂರು, ತೆಕ್ಕಟ್ಟೆ, ಕಾರ್ಕಳ, ಶಿರ್ವ, ಕಾಪು, ಸಿದ್ದಾಪುರ, ಬ್ರಹ್ಮಾವರ, ಕಟಪಾಡಿ, ತೆಕ್ಕಟ್ಟೆ, ಪಡುಬಿದ್ರಿ, ಕುಂದಾಪುರ, ಕೊಲ್ಲೂರು, ಬೈಂದೂರು ಭಾಗಗಳಲ್ಲಿ ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಳಗ್ಗೆ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನದ ಅನಂತರ ಮಳೆ ಸುರಿಯಲು ಆರಂಭಿಸಿತು. ಉಡುಪಿ ನಗರದಲ್ಲೂ ಮಧ್ಯಾಹ್ನದ ಅನಂತರ ಧಾರಾಕಾರ ಮಳೆ ಸುರಿಯಿತು.
ಕೃತಕ ನೆರೆ, ಸಂಚಾರಕ್ಕೆ ಅಡ್ಡಿ
ಹಲವು ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿ ಯಾಯಿತು. ನಗರ-ಪೇಟೆ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.
ಕಾಂತಾವರ: ಬೇಲಾಡಿ, ಕಾಂತಾವರ ಸುತ್ತಮುತ್ತ ಗುರುವಾರ ಭಾರೀ ಮಳೆಯಾಗಿದ್ದು, ಸಿಡಿಲಿನ ಆರ್ಭಟ ಜಾಸ್ತಿಯಾಗಿತ್ತು. ಕಾಂತಾವರ ಹೈಸ್ಕೂಲ್ -ಮಿತ್ತಲಚ್ಚಿಲ್ ರಸ್ತೆಯು ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ಹೊಳೆಯಂತಾಗಿತ್ತು. ಕೆಲವೆಡೆ ಕಟಾವಾಗಿ ಗದ್ದೆಯಲ್ಲಿದ್ದ ಪೈರಿಗೆ ಹಾನಿಯಾಗಿದೆ.
ಕಾಸರಗೋಡು: ಉತ್ತಮ ಮಳೆ
ಕಾಸರಗೋಡು ಜಿಲ್ಲೆಯಲ್ಲಿ ಗುರು ವಾರವೂ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಗುರುವಾರವೂ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಕಾಸರಗೋಡು, ಮಂಜೇಶ್ವರ, ಕುಂಬಳೆ, ಉಪ್ಪಳ, ಬದಿಯಡ್ಕ, ಪೆರ್ಲ, ಮುಳ್ಳೇರಿಯ, ಬೇಕಲ, ಕಾಂಞಂಗಾಡ್ ಮೊದಲಾದೆಡೆ ಸಾಮಾನ್ಯದಿಂದ ಭಾರೀ ಮಳೆ ಸುರಿದಿದೆ. ಈ ತಿಂಗಳಾಂತ್ಯದ ವರೆಗೂ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಟಾವಿಗೆ ಸಿದ್ಧ ರೈತರಿಗೆ ನಿರಾಸೆ
ಕರಾವಳಿಯ ಹಲವು ಕಡೆಗಳಲ್ಲಿ ಭತ್ತದ ಬೆಳೆ ಕಟಾವಿಗೆ ಸಿದ್ಧವಾಗಿದ್ದು, ಕೆಲವು ದಿನಗಳಿಂದ ಮಧ್ಯಾಹ್ನದ ಬಳಿಕ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಒಣಗಿರುವ ಪೈರು ಗಾಳಿ ಮಳೆಗೆ ನೆಲಕ್ಕೊರಗಿದರೆ ಯಾಂತ್ರೀಕೃತ ಕಟಾವಿಗೆ ಅಡಚಣೆ ಯುಂಟಾಗುತ್ತದೆ. ಹಲವೆಡೆ ನಾಟಿ ವಿಳಂಬವಾಗಿರುವುದರಿಂದ ಪೈರು ಬೆಳೆಯದ ಸಮಸ್ಯೆ ಒಂದೆಡೆಯಾದರೆ, ಕಟಾವಿಗೆ ಸಿದ್ಧವಾಗಿರುವಲ್ಲೂ ಮಳೆಯಿಂದ ಅಡಚಣೆಯು ದೀಪಾವಳಿಗೆ ಮುನ್ನ ಕಟಾವು ನಡೆಸಿ ಹೊಸ ಬೆಳೆಯನ್ನು ಮನೆಗೆ ತರುವ ರೈತರ ಬಯಕೆಗೆ ಹಿನ್ನಡೆಯುಂಟು ಮಾಡಿದೆ.
ಮಳೆ ಮುಂದುವರಿದಲ್ಲಿ ಮಂದಗತಿಯನ್ನು ಹೊಂದಿದ್ದು, ನವರಾತ್ರಿ ಮತ್ತು ಆ ಬಳಿಕ ತೇಜಿ ಕಂಡಿದ್ದ ವ್ಯಾಪಾರ- ವಹಿವಾಟು ಮಾರುಕಟ್ಟೆಗೂ ತೊಂದರೆ ಉಂಟು ಮಾಡುವುದರ ಜತೆಗೆ ದೀಪಾವಳಿಯ ತಯಾರಿ, ಸಂಭ್ರಮಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ.
ಸಿಡಿಲು ಬಡಿದು ಹಾನಿ
ಬಂಟ್ವಾಳ: ತಾಲೂಕಿನ ಬಂಟ್ವಾಳ ಕಸ್ಬಾ ಗ್ರಾಮದ ಕಡಂಬಳಿಕೆ ನಿವಾಸಿ ದೇವಪ್ಪ ಪೂಜಾರಿ ಅವರ ಮನೆಗೆ ಗುರುವಾರ ಸಂಜೆ ಸಿಡಿಲು ಬಡಿದು ಹಾನಿಯಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖಾಧಿ ಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ¨ªಾರೆ.
ಉಳ್ಳಾಲ: ಕೊಣಾಜೆಯ ಮನೆಯೊಂದಕ್ಕೆ ಗುರುವಾರ ಸಿಡಿಲು ಬಡಿದು ಹಾನಿಯಾದರೆ, ಚೆಂಬುಗುಡ್ಡೆ ಬಳಿ ಮನೆ ಕುಸಿದು ಓರ್ವ ಗಾಯಗೊಂಡಿದ್ದಾರೆ. ಕೊಣಾಜೆ ಗ್ರಾಮದ ಮುಟ್ಟಿಂಜದ ನವೀನ್ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು, ತೆಂಗಿನ ಮರಕ್ಕೂ ಹಾನಿಯಾಗಿದೆ. ಚೆಂಬುಗುಡ್ಡೆ ಬಳಿ ಮನೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಮಹಮ್ಮದ್ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು, ನಾಳೆ ಭಾರೀ ಮಳೆ ಸಾಧ್ಯತೆ
ಅರಬೀ ಸಮುದ್ರದಲ್ಲಿ ಲಕ್ಷದ್ವೀಪದ ಆಸುಪಾಸು ನಿಮ್ನ ಒತ್ತಡ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ರಾಜ್ಯ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹವಾಮಾನ ಇಲಾಖೆಯು ಶುಕ್ರವಾರ ಮತ್ತು ಶನಿವಾರ ಆರೆಂಜ್ ಅಲರ್ಟ್ ಘೋಷಿಸಿದೆ. ಕೆಲವು ಸ್ಥಳಗಳಲ್ಲಿ ಮಿಂಚು – ಸಿಡಿಲು ಸಹಿತ ಭಾರೀ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ಜತೆಗೆ 45ರಿಂದ 55 ಕಿ.ಮೀ. ವೇಗದ ಗಾಳಿ ಬೀಸುವುದು ಸಂಭವನೀಯ, ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ. ರವಿವಾರ ಮತ್ತು ಸೋಮವಾರ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡುಗಳಲ್ಲಿ ಯೆಲ್ಲೊ ಅಲರ್ಟ್ ಇರಲಿದ್ದು, ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಓರ್ವ ಸಾವು
ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ರೈಲ್ವೇ ಹಳಿ ದಾಟುತ್ತಿದ್ದ ಇಬ್ಬರಿಗೆ ಗುರು ವಾರ ಸಂಜೆ ರೈಲು ಢಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೊರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾವೇರಿಯ ಆಣೇಕಲ್ಲು ಹುಣಸಿ ನಿವಾಸಿ ಸುಭಾಷ್ (24) ಮೃತರಾಗಿದ್ದು, ಅದೇ ಊರಿನ ಮಂಜುನಾಥ್ (26) ಗಾಯಾ ಳು. ಕೂಲಿ ಕಾರ್ಮಿಕರಾಗಿದ್ದ ಇವರು ತೊಕ್ಕೊಟ್ಟಿನ ಬಾಡಿಗೆ ಮನೆಗೆ ಬರಲು ಹಳಿ ದಾಟುತ್ತಿದ್ದಾಗ ಘಟನೆ ಸಂಭವಿಸಿದೆ.
ಸಂಜೆ ಹೊತ್ತಿಗೆ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಅವಸರದಲ್ಲಿ ಇಬ್ಬರು ಕೊಡೆ ಹಿಡಿದು ಹಳಿ ದಾಟುತ್ತಿದ್ದರು. ಆಗ ರೈಲಿನ ಸದ್ದು ಕೇಳದೆ ದುರಂತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಡುಬಿದಿರೆ: ಸಿಡಿಲಿಗೆ ವೃದ್ಧೆ ಬಲಿ
ಮೂಡುಬಿದಿರೆ: ಕರಿಂಜೆ ಗ್ರಾಮದ ಅಜ್ಜಿಬೆಟ್ಟಿನಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ವೃದ್ಧೆಯೋರ್ವರು ಸಾವನ್ನಪ್ಪಿದ್ದಾರೆ. ದಿ| ಅಪ್ಪು ಶೆಟ್ಟಿ ಅವರ ಪತ್ನಿ ಅಪ್ಪಿ ಶೆಡ್ತಿ (80) ಮೃತ ಮಹಿಳೆ. ಮೂಡುಬಿದಿರೆಯಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭ ಅಪ್ಪಿ ಶೆಡ್ತಿ ತನ್ನ ಮಗಳ ಜತೆ ಮನೆಯ ಚಾವಡಿಯ ಕಿಟಕಿ ಬಳಿ ಕುಳಿತಿದ್ದರು. ಆ ಹೊತ್ತಿಗೆ ಮನೆಯ ಗೋಡೆಗೆ ಸಿಡಿಲು ಬಡಿಯಿತೆನ್ನಲಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದಾರೆ.
ಮೃತರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದಿರೆ ತಹಶೀಲ್ದಾರ್ ಅನಿತಾಲಕ್ಷ್ಮೀ, ಪ್ರಭಾರ ಕಂದಾಯ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಿಗೆ ಭವ್ಯಾ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಡಿಲಿನಿಂದ ಹಾನಿ
ಕಟೀಲು/ವೇಣೂರು/ಮೂಲ್ಕಿ: ಕಟೀಲು ದೇವಸ್ಥಾನ ಬಸ್ ನಿಲ್ದಾಣದ ಹತ್ತಿರ ಮರವೊಂದಕ್ಕೆ ಸಿಡಿಲು ಬಡಿದು ಮರ ಛಿದ್ರವಾಗಿದೆ. ಕಿನ್ನಿಗೋಳಿಯ ಸೈಂಟ್ ಮೇರೀಸ್ ಶಾಲೆಯ ಬಳಿ ಸಿಡಿಲಿನಿಂದ 2 ತೆಂಗಿನ ಮರಗಳಿಗೆ ಬೆಂಕಿ ಉಂಟಾಗಿದೆ.ವೇಣೂರು ಆರಂಬೋಡಿ ಗ್ರಾಮದ ಜನಾರ್ದನ ಪೂಜಾರಿ ಅವರ ಮನೆಯ ಹಿಂದಿಯ ಮರಕ್ಕೆ ಸಿಡಿಲು ಬಡಿದಿದ್ದು, ಮನೆಗೂ ಹಾನಿಯಾಗಿದೆ. ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಮೀಟರ್, ವಯರ್‌ಗಳು ಸುಟ್ಟುಹೋಗಿವೆ. ಮರ ಸಂಪೂರ್ಣ ಛಿದ್ರಗೊಂಡಿದೆ. ಸಿಡಿಲಿನಿಂದ ಮೂಲ್ಕಿ ಕಾರ್ನಾಡು ಗ್ರಾಮದ ಕೊಕ್ಕರ್‌ಕಲ್ ಬಳಿಯ ಲಕ್ಷ್ಮಣ ದೇವಾಡಿಗ ಅವರ ಮನೆಯ ಶೌಚಾಲಯ ಗೋಡೆ ಕುಸಿದು ಬಿದ್ದಿದೆ. ಮನೆಯ ಇನ್ನೊಂದು ಭಾಗಕ್ಕೂ ಸಿಡಿಲಿನ ಅಬ್ಬರದಿಂದ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.