ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಭಾರೀ ಮಳೆ
Team Udayavani, May 12, 2018, 5:19 AM IST
ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ, ರಾತ್ರಿ ವೇಳೆಗೆ ಗುಡುಗು ಸಹಿತ ಮಳೆ ಬಂದಿದೆ. ಸುಬ್ರಹ್ಮಣ್ಯ, ಕಡಬದಲ್ಲಿ ಸಂಜೆ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ರಸ್ತೆಯಲ್ಲೇ ನೀರು ಹರಿದಿದ್ದು, ನದಿಯಂತಾಗಿದೆ. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕಕ್ಕಿಂಜೆ ಗುರುವಾಯನಕೆರೆ ಮೊದಲಾದೆಡೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಸುಳ್ಯ, ಬೆಳ್ಳಾರೆ, ಐವರ್ನಾಡು ಮುಂತಾದೆಡೆಯೂ ಮಳೆ ಬಂದಿದೆ. ಮಂಗಳೂರಿನಲ್ಲಿ ಸಂಜೆ ಸಿಡಿಲು ಕಾಣಿಸಿಕೊಂಡಿದೆ. ಪುತ್ತೂರಿನಲ್ಲಿ ಸಿಡಿಲು ಸಹಿತ ಮಳೆ ಬಂದಿದೆ. ಮೂಡಬಿದಿರೆಯಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು ಅಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ವಿಟ್ಲದಲ್ಲಿ ಮೋಡ ಆವರಿಸಿತ್ತು. ಉಡುಪಿ, ಕುಂದಾಪುರ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ರಾತ್ರಿ ಗುಡುಗು ಸಹಿತ ಮಳೆ ಸುರಿದಿದೆ.
ಶಿರ್ವ: ಮನೆಗೆ ಸಿಡಿಲು ಬಡಿದು ಹಾನಿ
ಶಿರ್ವ: ಇಲ್ಲಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಳಿಯ ಗಾಂದೊಟ್ಯ ನಿವಾಸಿ ಗುಲಾಬಿ ಶೇರಿಗಾರ್ತಿ ಅವರ ಮನೆಗೆ ಬುಧವಾರ ರಾತ್ರಿ 11ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಸಿಡಿಲಿನ ರಭಸಕ್ಕೆ ಬಚ್ಚಲು ಮನೆಯ ಮಾಡಿನ ತಗಡು ಶೀಟುಗಳು ಒಡೆದು ಹೋಗಿದ್ದು, ವಿದ್ಯುತ್ ಮೀಟರ್ ಪುಡಿಪುಡಿಯಾಗಿದೆ. ಮನೆಯ ಫ್ಯಾನ್, ಸರ್ವಿಸ್ ವಯರ್ ಹಾಗೂ ವಿದ್ಯುತ್ ಪಂಪ್ ಸುಟ್ಟು ಹೋಗಿದೆ. ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ವಿದ್ಯುತ್ ಉಪಕರಣ ಗಳು ಚೆಲ್ಲಾಪಿಲ್ಲಿಯಾಗಿ ಸುಮಾರು 1ಲಕ್ಷ ರೂ. ನಷ್ಟ ಸಂಭವಿಸಿದೆ. ಮನೆಯಲ್ಲಿರುವವರು ಚಾವಡಿಯಲ್ಲಿ ಕುಳಿತಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಬೆಳ್ತಂಗಡಿ: ಸಿಡಿಲು ಬಡಿದು ಇಬ್ಬರಿಗೆ ಗಾಯ
ತಾಲೂಕಿನ ಮೂರು ಕಡೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಎರಡು ತೆಂಗಿನ ಮರಗಳು ಹೊತ್ತಿ ಉರಿದಿವೆ.ಕಕ್ಕಿಂಜೆ ಗಾಂಧಿನಗರ ಬಳಿ ಮನೆಯೊಂದಕ್ಕೆ ಶುಕ್ರವಾರ ಸಂಜೆ 7.20ರ ಸುಮಾರಿಗೆ ಸಿಡಿಲು ಬಡಿದು ಮನೆಯಲ್ಲಿದ್ದ ನೆಬಿಸಾ ಹಾಗೂ ಆಸಿಫ್ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತತ್ ಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
ನೆರಿಯ ಬಳಿಯ ಅಣಿಯೂರಿನಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ. ಗೋಪಾಲ ಗೌಡ ಅವರ ಮನೆ ಸಮೀಪವೇ ತೆಂಗಿನ ಮರವಿದ್ದು, ಉರಿದಿದೆ. ಘಟನೆ ವೇಳೆ ಮನೆಯಲ್ಲಿ ಗೋಪಾಲ ಗೌಡ, ಅವರ ಪತ್ನಿ, ಪುತ್ರನಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ವಯರಿಂಗ್ ಸುಟ್ಟುಹೋಗಿದೆ.
ವೀಡಿಯೋ ವೈರಲ್
ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ವೀಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು ವೈರಲ್ ಆಗಿದೆ. ಗುರುವಾರ ರಾತ್ರಿ ತಾಲೂಕಿನಾದ್ಯಂತ ಸಿಡಿಲಿನ ಆರ್ಭಟ ಜೋರಾಗಿದ್ದು, ಜನತೆ ಭಯಪಡುವಂತಾಯಿತು.
ಇನ್ನೊಂದು ಘಟನೆಯಲ್ಲಿ ಸುರ್ಯ ಬಳಿಯ ಶಿವರಾಮ್ ಪಡ್ವೆಟ್ನಾಯ ಮನೆ ಸಮೀಪದ ತೆಂಗಿನ ಮರಕ್ಕೆ ರಾತ್ರಿ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ.
ಧಾರವಾಡದಲ್ಲಿ 7 ಸೆಂ.ಮೀ. ಮಳೆ
ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಉತ್ತರ ಒಳನಾಡಿನ ಹಲವೆಡೆ ಮತ್ತು ಕರಾವಳಿಯ ಕೆಲವೆಡೆ ಸಾಧಾರಣ ಮಳೆಯಾಯಿತು. ಧಾರವಾಡದಲ್ಲಿ ಅಧಿಕವೆನಿಸಿದ 7 ಸೆಂ.ಮೀ. ಮಳೆ ಸುರಿಯಿತು. ಉತ್ತರ ಒಳನಾಡಿನ ಹಲವೆಡೆ ಮತ್ತು ಕರಾವಳಿಯ ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಇನ್ನು ದಕ್ಷಿಣ ಒಳನಾಡಿನಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬರಲಿಲ್ಲ. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.1ಡಿ.ಸೆ. ತಾಪಮಾನ ದಾಖಲಾಯಿತು. ರವಿವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.