ತೂಗುಯ್ನಾಲೆಯಂತೆ ಹೆದ್ದಾರಿ ಸಂಚಾರ
ಹಳ್ಳ ಕೊಳ್ಳಗಳಾದ ಶಿರಾಡಿ, ಚಾರ್ಮಾಡಿ ರಸ್ತೆ
Team Udayavani, Nov 3, 2019, 5:30 AM IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ಭೂಕುಸಿತದ ಹೊಡೆತದಿಂದಾಗಿ ಸಂಪೂರ್ಣ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ರಸ್ತೆ ಪುನರ್ ನಿರ್ಮಾಣಕ್ಕೆ ಹಲವು ಆತಂಕಗಳು ಮುಂದುವರಿದಿವೆ. ಇದೇ ವೇಳೆ ಪರ್ಯಾಯ ರಸ್ತೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಸಂಚಾರವೂ ಸಂಪೂರ್ಣ ಹದೆಗೆಟ್ಟಿದೆ. ಒಟ್ಟಿನಲ್ಲಿ ಎರಡೂ ರಸ್ತೆಗಳಲ್ಲಿ ಸಂಚಾರ ದುಸ್ತರವೆನಿಸಿದೆ.
ಮಂಗಳೂರು – ಮಿಲ್ಲಪುರಂ ರಾ.ಹೆ. 73ರ ಚಾರ್ಮಾಡಿ ರಸ್ತೆಯ ಚಿಕ್ಕಮಗಳೂರು ವ್ಯಾಪ್ತಿಗೆ ಸೇರಿದ 76 ಕಿ.ಮೀ.ನಿಂದ 86 ಕಿ.ಮೀ. ವರೆಗೆ ಪ್ರಸಕ್ತ ಘನವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲ ಎಂದು ಜಿಲ್ಲಾಡಳಿತ ಲಘು ವಾಹನಗಳಿಗಷ್ಟೇ ಸೀಮಿತಗೊಳಿಸಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಘಾಟಿ ರಸ್ತೆ ಪುನರ್ ನಿರ್ಮಾಣಕ್ಕೆ 260 ಕೋ.ರೂ. ಅಂದಾಜು ಪಟ್ಟಿ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದಾರೆ. ಬಳಿಕ ಏನಾಗಿದೆ ಎಂಬ ಬಗ್ಗೆ ಯಾವುದೇ ಇಲಾಖೆಗೂ ಮಾಹಿತಿ ಇಲ್ಲ. ಪ್ರಸಕ್ತ ರಸ್ತೆ ವಿಸ್ತರಣೆಗೆ ಅರಣ್ಯ ವ್ಯಾಪ್ತಿ ಅಡ್ಡಿಯಾಗಿರುವುದರಿಂದ ಕಾಮಗಾರಿ 2020ರ ಮಳೆಗಾಲ ವರೆಗೆ ಪೂರ್ಣಗೊಳ್ಳುವುದು ಅನುಮಾನ. ಈ ಕುರಿತು ಅಧಿಕಾರಿಗಳ ಬಳಿ ಕೇಳಿದರೆ ಹಾಸನ ವ್ಯಾಪ್ತಿ, ಚಿಕ್ಕಮಗಳೂರು ವ್ಯಾಪ್ತಿ ಎಂದು ನುಣುಚಿಕೊಳ್ಳುತ್ತಿದ್ದಾರೆ.
ದಿಡುಪೆ-ಸಂಸೆ ರಸ್ತೆಗೆ ಮರುಜೀವ
ಚಾರ್ಮಾಡಿಗೆ ಪರ್ಯಾಯ ರಸ್ತೆಯಾಗಿ ದಿಡುಪೆ ಸಂಸೆ ರಸ್ತೆ ನಿರ್ಮಾಣಕ್ಕೆ ಹಲವು ವರ್ಷ ಗಳಿಂದಲೇ ಕೂಗು ಕೇಳಿ ಬಂದಿತ್ತು. ರಾಷ್ಟ್ರೀಯ ಉದ್ಯಾ ವನ ವ್ಯಾಪ್ತಿಗೆ ಬರುವು ದರಿಂದ ಸಮಸ್ಯೆ ಜಟಿಲವಾ ಗುತ್ತಿದೆ. ಈ ರಸ್ತೆಯಾಗಿ 8 ಕಿ.ಮೀ. ನೇರ ರಸ್ತೆ ನಿರ್ಮಾಣ ಸಾಧ್ಯವಿದೆ. ಮತ್ತೂಂದೆಡೆ ಶಿಶಿಲ – ಬೈರಾಪುರ 16 ಕಿ.ಮೀ. ರಸ್ತೆಯೂ ರಾಷ್ಟ್ರೀಯ ಹೆದ್ದಾರಿ ಸಮೀಕ್ಷೆ ನಡೆಸಿದರೂ ಕಾರ್ಯಯೋಜನೆ ಪೂರ್ಣಗೊಂಡಿಲ್ಲ. ಕೇಂದ್ರ ಸರಕಾರದ ಮನವರಿಕೆ ಮಾಡುವಲ್ಲಿ ಸಂಸದ, ಸಚಿವರು ಮುಂದಾಗದೇ ಹೋದಲ್ಲಿ ದ.ಕ.ಜಿಲ್ಲೆಯ ಪ್ರಮುಖ ಸಂಪರ್ಕ ಶಾಶ್ವತವಾಗಿ ಸಂಚಾರ ಕಡಿತಗೊಳ್ಳಲಿದೆ.
ಶಿರಾಡಿ ರಸ್ತೆ ಹೊಂಡ ಗುಂಡಿ
ರಾ.ಹೆ. 75ರ ಶಿರಾಡಿ ರಸ್ತೆಯ ಹಾಸನದಿಂದ ಗುಂಡ್ಯ – ಉಪ್ಪಿನಂಗಡಿ ನಡುವೆ ಸುಮಾರು 100 ಕಿ.ಮೀ. ವ್ಯಾಪ್ತಿಯಲ್ಲಿ ಡಾಮರು ಎದ್ದು ಹೊಂಡ ಗುಂಡಿಯಾಗಿದ್ದು, ರಾತ್ರಿ ಬಸ್ ಸಂಚಾರ ಸಾಹಸಮಯವಾಗಿದೆ. ಮಳೆ ಬಂದರಂತು ನೀರು ನಿಂತು ವಾಹನಗಳ ತಳ ಭಾಗಕ್ಕೆ ಘಾಸಿಯಾಗುತ್ತಿದೆ.
ಚಾರ್ಮಾಡಿ ರಸ್ತೆ ಪುನಃನಿರ್ಮಾಣ ಯೋಜನೆಗೆ 260 ಕೋ.ಟಿರೂ.ನ ಅಂದಾಜು ಪಟ್ಟಿ ಸಿದ್ಧಗೊಳಿಸಿ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇನೆ. ತಾಂತ್ರಿಕ ತೊಂದರೆಗಳು ಹಾಗೂ ಅರಣ್ಯ ಇಲಾಖೆಗೆ ಒಳಪಡುವ ವಿಚಾರ ಇತ್ಯರ್ಥಗೊಳಿಸಿ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತದೆ.
– ನಳಿನ್ ಕುಮಾರ್ ಕಟೀಲು, ಸಂಸದ
ಮುಂಬಯಿ-ಪುಣೆ ಸಂಪರ್ಕ ಮಧ್ಯದ ಖಂಡಾಲ ಘಾಟಿ ಮಾದರಿ ಅತ್ಯಾಧುನಿಕ ರಸ್ತೆ ನಿರ್ಮಿಸುವ ಆವಶ್ಯಕತೆ ಇದೆ. ಮಣ್ಣಿನ ಆಳಕ್ಕೆ ಕಾಂಕ್ರೀಟ್ ಪಿಲ್ಲರ್ ಅಳವಡಿಸಿ ಬಳಿಕ ರಸ್ತೆ ನಿರ್ಮಸಿದರಷ್ಟೆ ಸುರಕ್ಷಿತ ರಸ್ತೆ ಮನಿರ್ಮಾಣ ಸಾಧ್ಯ.
– ಹರೀಶ್ ಪೂಂಜ, ಶಾಸಕ
ಮಂಗಳೂರು ವ್ಯಾಪ್ತಿಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ. ಮೂಡಿಗೆರೆ ವ್ಯಾಪ್ತಿಯ 86 ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ಹಾನಿಯಾಗಿದೆ. ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸೂಕ್ತ ಅನುಮತಿ ದೊರೆತಲ್ಲಿ ಕಾಮಗಾರಿ ಶೀಘ್ರ ನಡೆಸಲಾಗುತ್ತದೆ.
– ರಮೇಶ್ ಎಚ್.ಪಿ., ಸಹಾಯಕ ಕಾರ್ಯಪಾಲಕ ಅಭಿಯಂತ, ರಾ.ಹೆ.ಉಪವಿಭಾಗ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.