Hill collapse ಶಿರಾಡಿ, ಸಂಪಾಜೆ ಮಾರ್ಗ ಬಂದ್, ಚಾರ್ಮಾಡಿಯೂ ಸುರಕ್ಷಿತವಲ್ಲ
ಕರಾವಳಿ - ಬೆಂಗಳೂರು ಬೆಸೆಯುವ "ಘಟ್ಟ'ಗಳಿಗೆ "ಮುಂಗಾರು' ಕಂಟಕ!
Team Udayavani, Jul 20, 2024, 7:15 AM IST
ಮಂಗಳೂರು: ಮುಂಗಾರು ಅಬ್ಬರಿಸುತ್ತಿದ್ದಂತೆ ರಾಜ್ಯದ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕರಾವಳಿಗೆ ಸಂಪರ್ಕ ಬೆಸೆಯುವ “ಘಾಟಿ’ ರಸ್ತೆಗಳು ಈ ಬಾರಿಯೂ ಭೂಕುಸಿತದ ಹೊಡೆತಕ್ಕೆ ಸಿಲುಕಿದೆ. ವರ್ಷ ಉರುಳಿದರೂ, ಆಡಳಿತ ಬದಲಾದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತದಿಂದಾಗಿ ಹಾನಿಗೊಂಡ ಹೆದ್ದಾರಿ ದುರಸ್ತಿ ಕಾರಣಕ್ಕಾಗಿ ಎಲ್ಲ ರೀತಿಯ ವಾಹನ (ತುರ್ತು ಸೇವೆ ಹೊರತುಪಡಿಸಿ) ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಂಪಾಜೆ ಮಾರ್ಗದಲ್ಲಿ ಜು.22ರ ವರೆಗೆ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿರ್ಬಂಧವಿದೆ. ಸದ್ಯ ಚಾರ್ಮಾಡಿ ಮೂಲಕ ಮಾತ್ರ ಸಂಚಾರ ಅವಕಾಶ.
ರಾಜ್ಯದ ಎರಡು ಪ್ರಮುಖ ನಗರವನ್ನು ಬೆಸೆಯುವ ಹಾಗೂ ಕೋಟ್ಯಂತರ ರೂ. ವ್ಯವಹಾರಕ್ಕೆ ಶಕ್ತಿಯಾಗಿರುವ ಗುಂಡ್ಯದಿಂದ ಸಕಲೇಶಪುರದ ವರೆಗಿನ ಸುಮಾರು 30 ಕಿ.ಮೀ.ವರೆಗೆ ಸುವ್ಯವಸ್ಥಿತ ರಸ್ತೆ ಮಾಡಲು ಇನ್ನೂ ಸಾಧ್ಯವಾಗದ ಕಾರಣ ಪ್ರತಿ ಮಳೆಗಾಲದಲ್ಲಿ ಘಾಟಿ ರಸ್ತೆ ಸಂಚಾರ ಅಪಾಯಕಾರಿಯಾಗುತ್ತಿವೆ.
ಬಂದರು ನಗರಿ ಮಂಗಳೂರು-ಬೆಂಗಳೂರು ಮಧ್ಯೆ ವಾಣಿಜ್ಯೋದ್ಯಮ ನಿಂತಿದೆ. ನೂರಾರು ಕೋ.ರೂ.ಗಳ ವ್ಯವಹಾರ ಈ ಎರಡೂ ನಗರಗಳ ಮಧ್ಯೆ ನಡೆಯುತ್ತಿದೆ. ಎನ್‌ಎಂಪಿಎ, ಎಂಆರ್‌ಪಿಎಲ್, ಎಂಎಸ್‌ಇಝಡ್ ಸಹಿತ ದೇಶದ ಬೃಹತ್ ಆರ್ಥಿಕ ವ್ಯವಹಾರ ನಡೆಸುವ ಉದ್ದಿಮೆಗಳು ರಾಜ್ಯದ ಕರಾವಳಿ ಭಾಗದಲ್ಲಿವೆ. ಜತೆಗೆ ಮಂಗಳೂರು-ಬೆಂಗಳೂರು ಮಧ್ಯೆ ತರಕಾರಿ, ದಿನಸಿ ಸಾಮಗ್ರಿ, ಇಂಧನ ಸಹಿತ ವಿವಿಧ ರೀತಿಯ ಉದ್ಯಮ ವ್ಯವಹಾರ ನಂಟುಗಳಿವೆ. ಶಿರಾಡಿ, ಸಂಪಾಜೆ, ಚಾರ್ಮಾಡಿ ಪೂರ್ಣವಾಗಿ ಕೆಲವು ದಿನಗಳವರೆಗೆ ಬಂದ್ ಆದರೆ ನೇರ ವ್ಯವಹಾರಗಳಿಗೂ ಬಹುದೊಡ್ಡ ಅಡ್ಡಿ.
ಪ್ರಯಾಣಿಕರು ತಬ್ಬಿಬ್ಬು!
ಘಾಟಿ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ಖಾಸಗಿ-ಸರಕಾರಿ ಬಸ್‌ಗಳು ಬಹುತೇಕ ಟ್ರಿಪ್ ಕಡಿತ ಮಾಡಿವೆ. ತುರ್ತುಪ್ರಯಾಣಿಸಬೇಕಾಗಿದ್ದವರು ಪರದಾಡುವಂತಾಗಿದೆ.
“ಮಳೆ ಬರುವುದು ಸಾಮಾನ್ಯ. ಆದರೆ ಮಳೆಯನ್ನು ಎದುರಿಸುವಲ್ಲಿ ನಾವು ಪ್ರತಿ ವರ್ಷವೂ ಎಡವುತ್ತಿದ್ದೇವೆ. ಮಣ್ಣು ಕುಸಿಯುವ ಘಟನೆಗಳು ಮತ್ತೆ ಎದುರಾಗುತ್ತಲೇ ಇದೆ. ಈಗಾಗಲೇ ಆರ್ಥಿಕ ಹೊಡೆತದಲ್ಲೇ ನಾವಿದ್ದೇವೆ. ಈಗ ರಸ್ತೆಯ ಕಾರಣಕ್ಕೆ ಬಸ್ ನಿಲ್ಲಿಸಿದರೆ ಎಲ್ಲರಿಗೂ ಕಷ್ಟ-ನಷ್ಟ. ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಇನ್ನಾದರೂ ಗಮನಹರಿಸಲಿ’ ಎನ್ನುತ್ತಾರೆ ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ.
ರೈಲು ಪ್ರಯಾಣವೂ ಸುರಕ್ಷಿತವಲ್ಲ!
ರೈಲು ಸಂಚಾರ ಸದ್ಯಕ್ಕೆ ಲಭ್ಯವಿದ್ದರೂ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯವರೆಗಿನ ಹಳಿಗಳಲ್ಲಿ ರೈಲು ಸಂಚಾರ ಮಳೆ ಸಂದರ್ಭ ಅಪಾಯಕಾರಿಯೂ ಹೌದು. ರೈಲು ಹಳಿಗಳ ಮೇಲೆ ಈ ಭಾಗದಲ್ಲಿ ಈ ಹಿಂದೆ ಗುಡ್ಡ ಕುಸಿದ ಉದಾಹರಣೆ ಇದೆ.
ಪರ್ಯಾಯ “ಘಾಟಿ’ ರಸ್ತೆ; ಇರಲಿ ಗಮನ
ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಾರ ಶಿರಾಡಿ ಮೂಲಕ ದಿನವೊಂದಕ್ಕೆ ಸರಾಸರಿ 10 ಸಾವಿರಕ್ಕೂ ಅಧಿಕ ವಾಹನಗಳ ಆಗಮನ-ನಿರ್ಗಮನ ಇರುತ್ತದೆ. ಇಲ್ಲಿ ದುರಸ್ತಿ ಅಥವಾ ಭೂಕುಸಿತ ಸಂಭವಿಸಿದಾಗ ಚಾರ್ಮಾಡಿ, ಸಂಪಾಜೆ, ಮಾಳ, ಬಾಳೆಬರೆ, ಆಗುಂಬೆ, ಹುಲಿಕಲ್ ಘಾಟ್ ಅನ್ನು ಪರ್ಯಾಯ ಮಾರ್ಗಗಳಾಗಿ ಹೆಚ್ಚು ಸೂಚಿಸಲಾಗುತ್ತಿದೆ. ಇದರಲ್ಲಿ ಸದ್ಯ ಸಂಪಾಜೆ ರಾತ್ರಿ ಸಂಚಾರಕ್ಕೆ ಲಭ್ಯವಿಲ್ಲ. ಚಾರ್ಮಾಡಿ, ಹುಲಿಕಲ್ ಸದ್ಯಕ್ಕೆ ಲಭ್ಯವಿದ್ದರೂ ಸಂಚಾರ ದಟ್ಟಣೆ ಇದೆ. ಉಳಿದ ಘಾಟಿಯಲ್ಲಿ ಮಳೆಗೆ ಪ್ರಯಾಣ ಕಷ್ಟ.
ಕಾರ್ಗೊ ಕುಸಿತ!
ನವಮಂಗಳೂರು ಬಂದರಿನಿಂದ ಕಾಫಿ, ತರಕಾರಿ ಆಹಾರ ಪದಾರ್ಥ ಸಹಿತ ವಿವಿಧ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ದೇಶ-ವಿದೇಶಗಳಿಗೆ ಹಡಗುಗಳ ಮೂಲಕ ಸಾಗಾಟ ಮಾಡಲಾಗುತ್ತದೆ. ಹಾಸನ, ಕೊಡಗು, ಬೆಂಗಳೂರು ಸಹಿತ ವಿವಿಧ ಭಾಗಗಳಿಂದ ಇದನ್ನು ಟ್ರಕ್ ಮೂಲಕ ನವಮಂಗಳೂರಿಗೆ ತರಲಾಗುತ್ತದೆ. ಆದರೆ, ಶಿರಾಡಿ, ಸಂಪಾಜೆ ಚಾರ್ಮಾಡಿ ಬಂದ್‌ನಿಂದ ಕಾರ್ಗೊ ಸಾಗಾಟಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಪ್ರತಿ ಮಳೆಗಾಲದಲ್ಲೂ ಸಂಚಾರ ಸಮಸ್ಯೆ ಕಾರಣದಿಂದ ಕಾರ್ಗೊ ಸಾಗಾಟ ಕುಸಿತ ಕಾಣುತ್ತಲೇ ಇರುವುದು ಗಮನೀಯ ಅಂಶ.
ತೈಲ ಸಾಗಾಟಕ್ಕೂ ಹೊಡೆತ!
ಎಂಆರ್‌ಪಿಎಲ್‌ನಿಂದ ಉತ್ಪಾದಿಸಲಾದ ಪೆಟ್ರೋಲ್, ಡೀಸೆಲ್, ಅನಿಲ ಸಹಿತ ವಿವಿಧ ಪೆಟ್ರೋಲಿಯಂ ಉತ್ಪನ್ನಗಳನ್ನು ಎಚ್‌ಪಿಸಿಎಲ್-ಬಿಪಿಸಿಎಲ್ ರಾಜ್ಯದ ವಿವಿಧ ಭಾಗಗಳಿಗೆ ಸಾಗಾಟ ಮಾಡುತ್ತದೆ. ಶಿರಾಡಿ, ಸಂಪಾಜೆ ಬಂದ್ ಆಗಿ ತೈಲ ಸಾಗಾಟಕ್ಕೂ ಸಮಸ್ಯೆ ಇದೆ. ಬಂದ್ ಮುಂದುವರಿದರೆ ತೈಲ ಸರಬರಾಜಿನ ಮೇಲೆ ಮತ್ತಷ್ಟು ಹೊಡೆತ ಬೀಳಲಿದೆ.
ಚಾರ್ಮಾಡಿಯಲ್ಲಿಯೂ ಅಪಾಯ!
ಶಿರಾಡಿ, ಸಂಪಾಜೆ ಸಂಚಾರ ಸ್ಥಗಿತ ಕಾರಣದಿಂದ ಚಾರ್ಮಾಡಿ ಮೇಲೆ ಒತ್ತಡ ಅಧಿಕವಾಗಿದೆ. ಪರಿಣಾಮವಾಗಿ ಘಾಟಿ ಪೂರ್ತಿ ವಾಹನ ದಟ್ಟಣೆ ಇದೆ. ಕಿ.ಮೀ.ಗಟ್ಟಲೆ ವಾಹನಗಳು ಸಾಲು ನಿಲ್ಲುತ್ತಿವೆ. ಈ ಮಧ್ಯೆ, ಈ ಫಾಟಿಯಲ್ಲೂ ಸಾಕಷ್ಟು ತೊಂದರೆಗಳಿವೆ. ಕೆಲವೆಡೆ ರಸ್ತೆ ಬಿರುಕು ಬಿಟ್ಟಿದ್ದು, ತಡೆಗೋಡೆಗಳು ಅಪಾಯದಲ್ಲಿವೆ. ಅಪಾಯಕಾರಿ ಮರಗಳೂ ಇವೆ. ಕಡಿದಾದ ತಿರುವು ಇರುವ ಕಾರಣದಿಂದ ಇಲ್ಲಿ ಬೃಹತ್ ವಾಹನ ಬಾಕಿ ಆದರೆ ಚಾರ್ಮಾಡಿ ಸಂಚಾರವೇ ಸಂಕಟವಾಗಲಿದೆ.
ಟ್ರಕ್, ಟ್ಯಾಂಕರ್ ಅಲ್ಲಲ್ಲೇ ಬಾಕಿ!
“ಪ್ರತೀ ನಿತ್ಯ ಟ್ಯಾಂಕರ್, ಗೂಡ್ಸ್ ಸಹಿತ ಸುಮಾರು 3 ಸಾವಿರ ಟ್ರಕ್‌ಗಳು ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿ ಸುತ್ತದೆ. ಘಾಟ್ ದಿಢೀರ್ ಬಂದ್ ಆದರೆ ಲಾರಿಯಲ್ಲಿದ್ದ ತರಕಾರಿ, ಹಣ್ಣು ಹಂಪಲು ಹಾಳಾದರೆ ನಮ್ಮ ಪರಿಸ್ಥಿತಿ ಕೇಳುವವರು ಯಾರು?
ಸಂಚಾರ ದಟ್ಟಣೆಯಲ್ಲಿ ಚಾಲಕರು ಸಿಲುಕಿ ಊಟ, ತಿಂಡಿ ಮಾಡಲೂ ಆಗದ ಪರಿಸ್ಥಿತಿಗೆ ಯಾರು ಹೊಣೆ? ನಾಲ್ಕೈದು ದಿನ ವಾಹನಗಳು ನಿಂತರೆ ಅದಕ್ಕಾಗುವ ನಷ್ಟ ಕೊಡುವವರು ಯಾರು? ಘನ ವಾಹನಗಳು ಅಲ್ಲಲ್ಲಿ ನಿಂತಿವೆ. ತಾತ್ಕಾಲಿಕವಾಗಿ ಸರಿ ಮಾಡಿಕೊಟ್ಟು ವಾಹನ ಸಂಚರಿಸಿ ಮುಂದೆ ಯಾವುದೇ ಅನಾಹುತ ಆದರೆ ಅದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸುತ್ತಾರೆ ದ.ಕ. ಟ್ರಕ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುನಿಲ್ ಡಿ’ ಸೋಜಾ.
ಸಂಚಾರ ನಿಲುಗಡೆ; ಕೋಟ್ಯಂತರ ರೂ. ನಷ್ಟ
ಕರಾವಳಿ ಭಾಗಕ್ಕೆ ಘಾಟ್ ರಸ್ತೆಗಳು ಉದ್ಯಮ-ವ್ಯವಹಾರ ಕ್ಷೇತ್ರಕ್ಕೆ ಬಹುದೊಡ್ಡ ಆಧಾರ. ಈ ರಸ್ತೆಗಳು ಸಮರ್ಪಕವಾಗಿದ್ದರೆ ಮಾತ್ರ ಎಲ್ಲ ವಹಿವಾಟುಗಳು ಸಹಜ ಸ್ಥಿತಿಯಲ್ಲಿ ನಡೆಯುತ್ತವೆ. ಇಲ್ಲಿನ ಯಾವುದೇ ರಸ್ತೆಗೆ ಸಮಸ್ಯೆ ಆದರೂ ಸಂಚಾರ ಸಮಸ್ಯೆ ಆಗಿ ವ್ಯವಹಾರ ಕ್ಷೇತ್ರಕ್ಕೆ ಕೋಟ್ಯಂತರ ರೂ. ನಷ್ಟ ಆಗುತ್ತದೆ. ಇದಕ್ಕಾಗಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ವರ್ಷ ಹಲವು ಸಂದಿದೆ. ಶಿರಾಡಿ ಸುರಂಗ ಮಾರ್ಗ ಯೋಜನೆಗೂ ಮುನ್ನ ಈಗ ಇರುವ ರಸ್ತೆಯನ್ನು ಸಂಚಾರಕ್ಕೆ ಸೂಕ್ತವಾಗುವ ರೀತಿಯಲ್ಲಿ ಮಾಡಬೇಕಿದೆ. ಇದಕ್ಕಾಗಿ ಘಾಟಿ ರಸ್ತೆಯನ್ನು ತುರ್ತಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
-ಅನಂತೇಶ್ ವಿ.ಪ್ರಭು,
ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ-ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.