ಹೊಸ ಬೆಳಕು ಯೋಜನೆಯೇ ಕತ್ತಲಲ್ಲಿ !
Team Udayavani, Oct 16, 2018, 9:41 AM IST
ಸುಳ್ಯ: ವಿದ್ಯುತ್ ಉಳಿತಾಯದ ಸದುದ್ದೇಶದಿಂದ ಕೇಂದ್ರ- ರಾಜ್ಯ ಸರಕಾರಗಳ ಸಹಯೋಗದಲ್ಲಿ ಪ್ರಾರಂಭವಾದ ರಿಯಾಯಿತಿ ದರದ ಎಲ್‌ಇಡಿ ಬಲ್ಬ್ ವಿತರಣೆ ಸ್ಥಗಿತಗೊಂಡಿದ್ದು, “ಹೊಸ ಬೆಳಕು’ ಹರಿಯದೇ ವರ್ಷ ಕಳೆದಿದೆ!
ಕೇಂದ್ರ ಸರಕಾರದ ಉನ್ನತ್ ಜ್ಯೋತಿ ಆಫ್ಫೋರ್ಡಬಲ್ ಎಲ್‌ಇಡಿ ಫಾರ್ ಆಲ್ (ಉಜಾಲಾ) ಯೋಜನೆಯನ್ನು ರಾಜ್ಯದಲ್ಲಿ “ಹೊಸ ಬೆಳಕು’ ಎಂಬ ಹೆಸರಿನಡಿ ಪ್ರಾರಂಭಿಸಲಾಗಿತ್ತು.
ಮನೆಗಳಲ್ಲಿ ಈ ಬಲ್ಬ್ ಬಳಕೆಯಿಂದ ಶೇ. 50ಕ್ಕೂ ಹೆಚ್ಚು ವಿದ್ಯುತ್ ಉಳಿತಾಯ ಸಾಧ್ಯ ಎನ್ನಲಾಗಿತ್ತು. 400 ರೂ. ಬೆಲೆಯ ಬಲ್ಬ್ ಆರಂಭದಲ್ಲಿ 100 ರೂ.ಗೆ, ಅನಂತರ 80 ರೂ.ಗೆ ನೀಡಲಾಯಿತು.
ಕುಟುಂಬದ ವಿದ್ಯುತ್ ಬಳಕೆ ಪ್ರಮಾಣ ಅಂದಾ ಜಿಸಿ 5ರಿಂದ 10ರಷ್ಟು ಬಲ್ಬ್ ನೀಡಲಾಗುತ್ತಿತ್ತು. ಫಲಾನುಭವಿಗಳು ನಿರ್ದಿಷ್ಟ ದಾಖಲೆ ನೀಡಿ ವಿದ್ಯುತ್ ಕೇಂದ್ರದಲ್ಲಿನ ಕೌಂಟರ್‌ನಲ್ಲಿ ಬಲ್ಬ್ ಪಡೆಯಬೇಕಿತ್ತು. ಪುತ್ತೂರು ಉಪವಿಭಾಗವೊಂದರಲ್ಲೇ 2.5 ಲಕ್ಷ ರೂ. ಮೌಲ್ಯದ ಬಲ್ಬ್ ವಿತರಿಸಲಾಗಿತ್ತು.
ಕೌಂಟರ್ ಬಂದ್ !
ಜಿಲ್ಲೆ, ತಾಲೂಕು ವಿದ್ಯುತ್ ಕೇಂದ್ರಗಳಲ್ಲಿ ಏಜೆನ್ಸಿಯೊಂದು ವಿತರಣೆ ನಡೆಸಿತ್ತು. ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಸ್ವಲ್ಪ ಸಮಯ ಬಳಿಕ ಕೌಂಟರ್ ಗಳನ್ನು ಏಕಾಏಕಿ ಮುಚ್ಚಲಾಯಿತು. ಸುಮಾರು 10 ತಿಂಗಳು ಕಳೆದರೂ ತೆರೆದಿಲ್ಲ. ಮೆಸ್ಕಾಂ ಕೇಂದ್ರಗಳಲ್ಲಿ ವಿಚಾರಿಸಿದರೆ, ನಾವು ಮಾರಾಟಕ್ಕೆ ಸ್ಥಳ ಒದಗಿಸಿದ್ದಷ್ಟೆ; ವಿತರಣೆ ಏಜೆನ್ಸಿಗೆ ಸೇರಿದ್ದು ಎಂಬ ಉತ್ತರ ಸಿಗುತ್ತಿದೆ
ಸಂಗ್ರಹ ಕೊರತೆ !
ಬಲ್ಬ್ಗಳ ಕೊರತೆಯಿಂದ ಪೂರೈಕೆಯಾಗುತ್ತಿಲ್ಲ ಎಂಬ ಅಭಿಪ್ರಾಯ ಒಂದೆಡೆಯಾದರೆ ಬಲ್ಬ್ ಜತೆಗೆ ಎಲ್‌ಇಡಿ ಟ್ಯೂಬ್‌ಲೈಟ್ ಮಾರುವ ಯೋಜನೆ ಇರುವ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಗುಣಮಟ್ಟ ಸಮರ್ಪಕ ಇಲ್ಲದ ಕಾರಣ ಉತ್ಪಾದನೆ ಸ್ಥಗಿತಗೊಂಡಿದೆ ಎಂದೂ ಹೇಳಲಾಗುತ್ತಿದೆ.
ಹಾಳಾದ ಬಲ್ಬ್ಗಿಲ್ಲ ಹೊಸತು !
ಗ್ಯಾರಂಟಿ ಅವಧಿ ಮುಗಿಯುವ ಮೊದಲೇ ಬಲ್ಬ್ಗಳು ಹಾಳಾದರೆ ಅದನ್ನು ಬದಲಿಸಿ ನೀಡುವ ಹೊಣೆ ವಿತರಣಾ ಸಂಸ್ಥೆಯದು. ತಾಲೂಕಿನಲ್ಲಿ ಹೆಚ್ಚಿನ ಬಲ್ಬ್ಗಳು ಅವಧಿಗೆ ಮುನ್ನವೇ ಹಾಳಾಗಿವೆ. ಆದರೆ ಬದಲಿ ಕೊಡಬೇಕಾದ ಸಂಸ್ಥೆಯೇ ಇಲ್ಲವಾಗಿದೆ ಎಂಬುದು ಗ್ರಾಹಕರ ದೂರು.
ಸ್ಥಳ ಒದಗಿಸಿದ್ದಷ್ಟೆ
ಎಲ್‌ಇಡಿ ಬಲ್ಬ್ ವಿತರಣೆಗೆ ಸಂಬಂಧಿಸಿ ಏಜೆನ್ಸಿ ಸಂಸ್ಥೆಗೆ ಸ್ಥಳ ಒದಗಿಸಿದ್ದೇವಷ್ಟೆ. ವಿತರಣೆ ವಿಷಯ ಸಂಸ್ಥೆ ವ್ಯಾಪ್ತಿಗೆ ಒಳಪಟ್ಟಿದೆ. ಮೆಸ್ಕಾಂ ವಿತರಣೆಯ ಹೊಣೆ ಹೊತ್ತಿಲ್ಲ. ಬೇರೆ ತಾಲೂಕಿನಂತೆ ಪುತ್ತೂರಿನಲ್ಲೂ ಬಲ್ಬ್ ವಿತರಣೆ ಸ್ಥಗಿತಗೊಂಡಿದೆ.
ನರಸಿಂಹ, ಕಾರ್ಯಪಾಲಕ ಅಭಿಯಂತ, ಮೆಸ್ಕಾಂ ಪುತ್ತೂರು ವಿಭಾಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.