ಹೊಟೇಲ್ ಕ್ಲೀನಿಂಗ್ ಹುಡುಗನ ಸಾಧನೆ
ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿ
Team Udayavani, May 4, 2019, 6:00 AM IST
ಸಾಧಕ ಹುಡುಗನಿಗೆ ಹೊಟೇಲ್ ಮಾಲಕರಿಂದ ಸಮ್ಮಾನ.
ಬಂಟ್ವಾಳ: ಹೊಟೇಲ್ ಕ್ಲೀನರ್ ಯತೀಶ್ 10ನೇ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ್ದಾನೆ. ಈತನ ಸಾಧನೆಗೆ ಹೊಟೇಲ್‌ನಲ್ಲಿ ಗೌರವಿಸಲಾಗಿದೆ. ಬಿ. ಮೂಡ ಗ್ರಾಮದ ಕುಪ್ಪಿಲ ನಿವಾಸಿ ಪದ್ಮನಾಭ ಹಾಗೂ ಹೇಮಾವತಿ ದಂಪತಿ ಪುತ್ರ ಯತೀಶ್ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಿದ್ಯಾರ್ಥಿ. ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 590 ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಕನ್ನಡ 95, ಇಂಗ್ಲಿಷ್ 93, ಹಿಂದಿ 90, ವಿಜ್ಞಾನ 94, ಗಣಿತ 97, ಸಮಾಜ 96 ಅಂಕಗಳಿಸಿ ಶಾಲೆಗೂ ಪ್ರಥಮ ಸ್ಥಾನ ಪಡೆದು ಕೀರ್ತಿಗೆ ಪಾತ್ರನಾಗಿದ್ದಾನೆ.
ರಜಾ ದಿನಗಳಲ್ಲಿ ಕೆಲಸ
ಮನೆಯಲ್ಲಿ ಕಡು ಬಡತನ, ತಂದೆ- ತಾಯಿ ಕೂಲಿ ಕಾರ್ಮಿಕರು, ವಾಸಿಸುವ ಮನೆಯೂ ಗುಡಿಸಲು. ಅದಕ್ಕಾಗಿ ಶಾಲಾ ರಜಾ ದಿನಗಳಲ್ಲಿ ಹೊಟೇಲ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಮೂಲಕ ತನ್ನ ಬಟ್ಟೆ-ಪುಸ್ತಕಗಳಿಗೆ ತಾನೆ ಸಂಪಾದಿಸಿ ಕಲಿತ ವಿದ್ಯಾರ್ಥಿ ಗರಿಷ್ಠ ಅಂಕಗಳನ್ನು ಪಡೆದು ಆಸಕ್ತಿ ಇದ್ದರೆ ಶಿಕ್ಷಣಕ್ಕೆ ಯಾವುದೂ ತಡೆಯಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾನೆ.
ಹೊಟೇಲ್‌ನಲ್ಲಿ ಸಂಭ್ರಮ
ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಯತೀಶ್ ಸಾಧನೆಯನ್ನು ಗುರುತಿಸಿ ಬುಧವಾರ ಸಂಜೆ ಹೊಟೇಲ್ ಮಾಲಕ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ನಾರಾಯಣ ಪೆರ್ನೆ ಹೊಟೇಲ್‌ನಲ್ಲಿಯೇ ಸರಳ ಸಮಾರಂಭ ನಡೆಸಿ ಯತೀಶ್‌ನನ್ನು ಅಭಿನಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಟಿ. ಶೇಷಪ್ಪ ಮೂಲ್ಯ, ಪುರಸಭಾ ಸದಸ್ಯ ಹರಿಪ್ರಸಾದ್, ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್ ಹಾಗೂ ಹೊಟೇಲ್ ಸಿಬಂದಿ ಜತೆಯಾಗಿ ವಿದ್ಯಾರ್ಥಿಯ ಸಾಧನೆಗೆ ಶ್ಲಾಘನೆ ವ್ಯಕ್ತ ಮಾಡಿದ್ದಾರೆ.
ಪ್ರೋತ್ಸಾಹ ಕಾರಣ
ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶಾಲಾ ರಾಜಾ ದಿನದಲ್ಲಿ ಬಿ.ಸಿ. ರೋಡ್‌ನ ಹೊಟೇಲ್‌ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದೆ. ಈ ಹಿಂದೆಯೂ ಶಾಲಾ ರಜಾ ದಿನಗಳಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗುತ್ತಿದ್ದೆ. ಯಾವುದೇ ಟ್ಯೂಷನ್ ಪಡೆಯದೆ ಶಿಕ್ಷಕರು ಹೇಳಿಕೊಟ್ಟದಷ್ಟೇ ಕಲಿತಿದ್ದೇನೆ. ಈ ಅಂಕ ಪಡೆಯುವಲ್ಲಿ ಶಿಕ್ಷಕರ ಪ್ರೋತ್ಸಾಹವೇ ಕಾರಣ.
-ಯತೀಶ್, ಸಾಧಕ ವಿದ್ಯಾರ್ಥಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.