“ನಮ್ಮ ಪುಟ್ಟ ಕಂದಮ್ಮಗಳನ್ನು ಯಾರಾದರೂ ಒಮ್ಮೆ ಎಬ್ಬಿಸಿ…!’
ಪಡೀಲ್‌ನಲ್ಲಿ ಗೋಡೆ ಕುಸಿದು ಮೃತಪಟ್ಟ ಮಕ್ಕಳಿಬ್ಬರ ಅಪ್ಪ-ಅಮ್ಮನ ರೋದನ
Team Udayavani, Sep 10, 2019, 5:34 AM IST
ಮಹಾನಗರ: “ಪುಟ್ಟಾ-ಪುಟ್ಟಿ ಒಮ್ಮೆ ಎದ್ದು ಬನ್ನಿ; ಯಾರಾದರೂ ಒಮ್ಮೆ ನನ್ನ ಮಕ್ಕಳನ್ನು ಎಬ್ಬಿಸಿ’ ಎಂದು ಒಂದೆಡೆ ತಾಯಿ ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಇನ್ನೊಂದೆಡೆ, “ನನ್ನ ಮಕ್ಕಳೇ ಒಮ್ಮೆ ನನ್ನತ್ತ ನೋಡಿ’ ಎನ್ನುವ ತಂದೆಯ ರೋದನ! ಅದನ್ನು ನೋಡಿದ ಅಲ್ಲಿ ಸೇರಿದ್ದವರು ಕಣ್ಣೀರು ಒರೆಸಿಕೊಳ್ಳುತ್ತಿದ್ದರು.
ಪಡೀಲ್ ಬಳಿಯ ಕೊಡಕ್ಕಲ್‌ನ ಶಿವನಗರದಲ್ಲಿ ರವಿವಾರ ರಾತ್ರಿ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದು ರಾಮಣ್ಣ ಗೌಡ-ರಜನಿ ದಂಪತಿಯು ತಮ್ಮ ಪುಟ್ಟ ಮಕ್ಕಳಾದ ವರ್ಷಿಣಿ (9) ವೇದಾಂತ್ (7) ಅವರನ್ನು ಕಳೆದುಕೊಂಡು ಅಕ್ಷರಶಃ ತಬ್ಬಲಿಗಳಾಗಿ ಬಿಟ್ಟಿದ್ದಾರೆ. ಮನೆಯಲ್ಲಿ ಕೋಣೆಯೊಳಗೆ ಕುಳಿತು ಓದುತ್ತಿದ್ದ ಮಕ್ಕಳು ಕ್ಷಣಮಾತ್ರದಲ್ಲಿ ತಮ್ಮ ಕಣ್ಣಮುಂದೆಯೇ ಶವವಾಗಿ ಹೋಗಿರುವುದನ್ನು ಊಹಿಸಿ ಕೊಳ್ಳಲು ಆಗದಷ್ಟು ಶಾಕ್‌ನಲ್ಲಿದ್ದಾರೆ ಆ ದಂಪತಿ. “ಹುಟ್ಟುಹಬ್ಬಕ್ಕೆ ನನಗೆ ಹೊಸ ಡ್ರೆಸ್ ಬೇಕು, ನೆನಪಲ್ಲಿ ತರಬೇಕು ಎಂದು ವರ್ಷಿಣಿ ಹೇಳಿದ್ದಳು. ನನಗೆ ಇವತ್ತು ಏನಾದರೂ ಆಟದ ಸಾಮಾನು ತೆಗೆದುಕೊಡು ಅಪ್ಪಾ’ ಎಂದು ವೇದಾಂತ್ ಹೇಳಿದ್ದ. ಇದಾಗಿ ಒಂದು ಗಂಟೆಯ ಒಳಗೆ ನನ್ನೆರಡೂ ಮಕ್ಕಳನ್ನು ಕರೆದುಕೊಂಡ ದೇವರು ನಮ್ಮನ್ನು ತಬ್ಬಲಿ ಮಾಡಿದ್ದಾನೆ’ ಎಂದು ಮಕ್ಕಳಿಬ್ಬರ ಶವದ ಮುಖವನ್ನು ನೋಡಿ ತಂದೆ ರೋಧಿಸುತ್ತಿದ್ದ ಸನ್ನಿವೇಶ ನಿಜಕ್ಕೂ ಕರುಣಾಜನಕವಾದದ್ದು.
ಸೋಮವಾರ ಮತ್ತೂಂದು ಪರೀಕ್ಷೆಗಾಗಿ ತಯಾರಿ ನಡೆಸಿ ಶಾಲೆಗೆ ಬರಬೇಕಿದ್ದ ವರ್ಷಿಣಿ ಜೀವಂತವಾಗಿ ಶಾಲೆಗೆ ಬರಲಿಲ್ಲ. ಬದಲಾಗಿ ಮಕ್ಕಳಿಬ್ಬರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಶಾಲೆಗೆ ತರಲಾಯಿತು. ಪರೀಕ್ಷೆ ನಡೆಯುವ ದಿನವೇ ಮಕ್ಕಳಿಬ್ಬರ ಮರಣೋತ್ತರ ಪರೀಕ್ಷೆ ನಡೆಯುವಂತಾಗಿದೆ.
ಕಲಿಯುತ್ತಿದ್ದ ಶಾಲೆಗೆ ಶವವಾಗಿ ಬಂದಾಗ!
ಮಕ್ಕಳಿಬ್ಬರ ದಾರುಣ ಸಾವಿನ ವಾರ್ತೆ ತಿಳಿದು ಕಪಿತಾನಿಯೋ ಶಾಲೆಗೆ ಸೋಮವಾರ ರಜೆ ಸಾರಲಾಗಿತ್ತು. ಮಕ್ಕಳ ಶವವನ್ನು ಶಾಲೆಗೆ ತಂದು ಅಂತಿಮ ನಮನ ಸಲ್ಲಿಸಬೇಕು ಎಂಬ ಮನವಿಯ ಮೇರೆಗೆ ಸೋಮವಾರ ಬೆಳಗ್ಗೆ 11ರ ಸುಮಾರಿಗೆ ವೆನಾಲಾಕ್‌ನಿಂದ ಶವವನ್ನು ಶಾಲೆಗೆ ತರಲಾಗಿತ್ತು. ಶಾಲೆಯ ಆಡಳಿತ ವರ್ಗ, ಶಿಕ್ಷಕರು, ಸಿಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ತನ್ನ ಕಣ್ಣೆದುರು ಆಟವಾಡುತ್ತ, ಓದುತ್ತಿದ್ದ ಇಬ್ಬರು ಕಂದಮ್ಮಗಳ ಶವವನ್ನು ಕಂಡ ಶಿಕ್ಷಕರು-ಸಿಬಂದಿ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಶವ ತರಲು ಮನೆಯೇ ಇಲ್ಲ!
ಮನೆಯಲ್ಲಿದ್ದ ಸಂದರ್ಭದಲ್ಲಿಯೇ ಮಕ್ಕಳಿಬ್ಬರ ಮೇಲೆ ಹತ್ತಿರದ ಆವರಣ ಗೋಡೆ ಕುಸಿದು ಮನೆಯ ಒಂದು ಪಾರ್ಶವೇ ನೆಲಕ್ಕೆ ಬಿದ್ದಿದೆ. ಹೀಗಾಗಿ ಮನೆಯೊಳಗೆ ಈಗ ಕಾಲಿಡಲೂ ಆಗುತ್ತಿಲ್ಲ. ಕಲ್ಲು ಮಣ್ಣು ತುಂಬಿಕೊಂಡಿದೆ. ಹೀಗಾಗಿ ಸೋಮವಾರ ಶವವನ್ನು ಮನೆಗೆ ತರಲು ಕೂಡ ಸಾಧ್ಯವಾಗಿಲ್ಲ. ಇದಕ್ಕಾಗಿ ಹತ್ತಿರದ ಮನೆಗೆ ಶವತಂದು ಅಲ್ಲಿ ಸ್ಥಳೀ ಯರು ಅಂತಿಮ ದರ್ಶನ ನಡೆಸಿ ಬಳಿಕ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ನೂಜಿಬಾಳ್ತಿಲಕ್ಕೆ ತೆಗೆದುಕೊಂಡು ಹೋಗಲಾಯಿತು.
ಸಿಡಿಲು ಬಡಿದ ಶಬ್ದವಾಗಿತ್ತು
ಹಲವು ವರ್ಷಗಳ ಹಿಂದೆ ಜಯಶೆಟ್ಟಿ ಅವರು ಹೆಂಚಿನ ಮನೆಯಲ್ಲಿ ವಾಸಿಸುತ್ತಿದ್ದರು. ಸುಮಾರು 10 ವರ್ಷದ ಹಿಂದೆ ಹೆಂಚಿನ ಮನೆಗೆ ಹೊಂದಿಕೊಂಡು ತಾರಸಿ ಮನೆ ನಿರ್ಮಿಸಿದ್ದರು. ಹೀಗಾಗಿ ಹೆಂಚಿನ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದರು. ಮೂರು ತಿಂಗಳಿನಿಂದ ಇದು ಖಾಲಿ ಇತ್ತು. ಎರಡು ತಿಂಗಳ ಹಿಂದೆ ರಾಮಣ್ಣ ಗೌಡ ಅವರು ಬಾಡಿಗೆಗೆ ಆ ಮನೆಯನ್ನು ನೀಡುವಿರಾ? ಎಂದು ಕೇಳಿದ್ದಕ್ಕೆ ನೀಡಲಾಗಿತ್ತು. “ಸುದಿನ’ ಜತೆಗೆ ಮಾತನಾಡಿದ ಜಯಶೆಟ್ಟಿ ಅವರು, “ರವಿವಾರ ರಾತ್ರಿ ಭಾರೀ ಮಳೆಯಾಗುತ್ತಿತ್ತು. ಆಗ ಸಿಡಿಲು ಬಿದ್ದ ಶಬ್ದವಾಯಿತು. ಒಮ್ಮೆಲೆ ಹೊರಗೆ ಬಂದು ನೋಡುವಾಗ ಪಕ್ಕದ ಮನೆಯ ಎತ್ತರದ ಕಾಂಪೌಂಡ್ ಮನೆಗೆ ಬಿದ್ದು ಅದರ ಗೋಡೆಯಡಿ ಪುಟಾಣಿಗಳಿಬ್ಬರು ಸಿಲುಕಿಕೊಂಡಿದ್ದರು. ತಂದೆ- ತಾಯಿ ಕೂಡ ಮನೆಯ ಒಳಗಡೆ ಇದ್ದರೂ ಅವರಿಗೆ ಏನೂ ಆಗಿರಲಿಲ್ಲ. ಕೆಲವೇ ತಿಂಗಳಿನಲ್ಲಿ ಹೆಂಚಿನ ಛಾವಣಿ ತೆಗೆದು ಅಲ್ಲಿಗೂ ತಾರಸಿ ಹಾಕಬೇಕು ಎಂದು ಯೋಚಿಸಿದ್ದಾಗಲೇ ಹೀಗಾಯಿತು’ ಎಂದು ನೊಂದು ನುಡಿದರು.
ಪರೀಕ್ಷೆಯ ದಿನ ಮರಣೋತ್ತರ ಪರೀಕ್ಷೆ!
ಇಬ್ಬರೂ ಮಕ್ಕಳು ಕಂಕನಾಡಿಯ ಕಪಿತಾನಿಯೋ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ವರ್ಷಿಣಿ 4ನೇ ತರಗತಿ, ವೇದಾಂತ್ 2ನೇ ತರಗತಿ ವಿದ್ಯಾರ್ಥಿ. ವರ್ಷಿಣಿಗೆ ಸೋಮವಾರ ಶಾಲೆಯಲ್ಲಿ ಪರೀಕ್ಷೆ ಇತ್ತು. ಸೆ. 7ರಿಂದ ಪರೀಕ್ಷೆ ಶುರುವಾಗಿತ್ತು. ಮೊನ್ನೆ ನಡೆದ ಇಂಗ್ಲಿಷ್ ಪರೀಕ್ಷೆಯಲ್ಲಿ 15ರಲ್ಲಿ 11 ಅಂಕ ವರ್ಷಿಣಿಗೆ ದೊರಕಿತ್ತು. ಸೆ. 5ರ ಶಿಕ್ಷಕರ ದಿನಾಚರಣೆಗೆ ವರ್ಷಿಣಿ ನೃತ್ಯ ಕೂಡ ಮಾಡಿದ್ದಳು.
ಚಿನ್ನ ಕಳವಾದದ್ದಕ್ಕೆ ಮನೆ ಬದಲಾಯಿತು!
ಮೂಲತಃ ಕಡಬ ತಾಲೂಕಿನ ನೂಜಿಬಾಳ್ತಿಲದ ರಾಮಣ್ಣ ಅವರು ಪಡೀಲ್‌ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ. ರಜಿನಿಗೆ ಕಂಕನಾಡಿ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ವಿಭಾಗದಲ್ಲಿ ಕೆಲಸ. ಸುಮಾರು 20 ವರ್ಷಗಳಿಂದ ಶಿವನಗರದ ಸಮೀಪ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೂರು ತಿಂಗಳ ಹಿಂದೆ ಆ ಮನೆಯಲ್ಲಿ ಕಳ್ಳತನವಾಗಿತ್ತು. ಅವರ ಕೆಲವು ಪವನ್ ಚಿನ್ನವನ್ನು ಕಳ್ಳರು ದೋಚಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ರಾಮಣ್ಣ ಅವರು ಬೇರೆ ಬಾಡಿಗೆ ಮನೆಯ ನಿರೀಕ್ಷೆಯಲ್ಲಿದ್ದರು. ಇದೇ ವೇಳೆ ಸಮೀಪದ ಜಯಶೆಟ್ಟಿ ಅವರಿಗೆ ಸೇರಿದ ಮನೆಯ ಬದಿಯ ಒಂದು ಕೋಣೆ ಬಾಡಿಗೆಗೆ ಇದೆ ಎಂದು ಗೊತ್ತಾಗಿ ಅವರು ಅಲ್ಲಿಗೆ ಬಂದಿದ್ದರು.
ಮಣ್ಣಿನಡಿ ಪುಟಾಣಿಗಳ ಸೈಕಲ್-ಪುಸ್ತಕ!
ಮನೆಯ ಮೇಲೆ ಹತ್ತಿರದ ಆವರಣ ಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಪುಟಾಣಿಗಳಿಬ್ಬರು ಆಟವಾಡುತ್ತಿದ್ದ ಸೈಕಲ್ ಮಣ್ಣಿನೊಳಗೆ ಸಿಲುಕಿದೆ. ಪುಟಾಣಿಗಳ ಕೆಲವು ಪುಸ್ತಕಗಳು, ಫ್ಯಾನ್ ಸಹಿತ ಎಲ್ಲ ವಸ್ತುಗಳು ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅವರ ಬಟ್ಟೆಗಳು ಕೂಡ ದುರಂತವನ್ನು ಸಾಕ್ಷಿಯಾಗಿಸಿದೆ. ಮನೆಯೊಳಗೆ ಕಲ್ಲುಮಣ್ಣುಗಳೇ ತುಂಬಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.