ಕರಾವಳಿಯಲ್ಲಿ ಭರ್ಜರಿ ಜಿಎಸ್‌ಟಿ ಸಂಗ್ರಹ: ಗುರಿ ಮೀರಿದ ಸಾಧನೆ
ಪೆಟ್ರೋಲಿಯಂ ಉತ್ಪನ್ನಗಳದ್ದು ಸಿಂಹಪಾಲು
Team Udayavani, Dec 20, 2022, 6:40 AM IST
ಮಂಗಳೂರು: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಭರ್ಜರಿಯಾಗಿ ಏರಿಕೆ ಕಾಣುತ್ತಿದ್ದು, ಕೋವಿಡ್ ಬಳಿಕ ನಿರಂತರವಾಗಿ ಉತ್ತಮ ಪ್ರಗತಿ ದಾಖಲಿಸಿದೆ.
ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಮಂಗಳೂರು ಕೇಂದ್ರೀಯ ತೆರಿಗೆಗಳ ಆಯುಕ್ತಾಲಯದ ಮಾಹಿತಿಯ ಪ್ರಕಾರ 2021-22ನೇ ಸಾಲಿನಲ್ಲಿ ಗುರಿ ಮೀರಿದ ಸಾಧನೆಯಾಗಿದೆ. 2022-23ರಲ್ಲೂ ಎಪ್ರಿಲ್-ನವೆಂಬರ್ ಅವಧಿಯಲ್ಲಿ ಭರ್ಜರಿ ತೆರಿಗೆ ಸಂಗ್ರಹಿಸಿದೆ. 2021-22ರಲ್ಲಿ 2,629 ಕೋಟಿ ರೂ. ಗುರಿಯಿದ್ದರೆ 2,897.21 ಕೋಟಿ ರೂ. ಸಂಗ್ರಹಿಸಲಾಗಿತ್ತು. 2022-23ನೇ ಸಾಲಿಗೆ 3,539 ಕೋಟಿ ರೂ. ಗುರಿ ಇದ್ದರೆ ನವೆಂಬರ್ ಅಂತ್ಯದ ವೇಳೆಗೆ 2,326.59 ಕೋಟಿ ರೂ. ಸಂಗ್ರಹವಾಗಿದೆ.
ಎಪ್ರಿಲ್‌ನಿಂದ ನವೆಂಬರ್‌ವರೆಗೆ ಸಂಗ್ರಹವಾದ ಜಿಎಸ್‌ಟಿ ಯನ್ನೇ ವಿಶ್ಲೇಷಿಸಿದರೆ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ. ಎಪ್ರಿಲ್-ನವೆಂಬರ್ ವಿವರ ನೋಡಿದಾಗ, 2020-21ರಲ್ಲಿ 1,167.02 ಕೋಟಿ ರೂ. ಗುರಿಯಿದ್ದರೆ 1,200.35 ಕೋಟಿ ರೂ. ಸಂಗ್ರಹ ವಾಗಿತ್ತು. 2021-22ನೇ ಸಾಲಿನಲ್ಲಿ 1,596.25 ಕೋಟಿ ರೂ. ಗುರಿಯಿದ್ದು, 1,745.45 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷವೂ ನವೆಂಬರ್ ವರೆಗಿನ ಗುರಿ 1,949.99 ಕೋಟಿ ರೂ. ಇದ್ದು, ಈಗಾಗಲೇ ಸಂಗ್ರಹ 2,326.59 ಕೋಟಿ ರೂ. ಆಗಿರುವುದು ಜಿಎಸ್‌ಟಿ ಅಧಿಕಾರಿಗಳ ಖುಷಿಗೆ ಕಾರಣವಾಗಿದೆ.
ಜಿಎಸ್‌ಟಿ ಸಂಗ್ರಹದಲ್ಲಿ ಪೆಟ್ರೋಲಿಯಂ ಉತ್ಪನ್ನಗಳದ್ದೇ ಸಿಂಹ ಪಾಲು. 2021-22ರಲ್ಲಿ 696.69 ಕೋಟಿ ರೂ. ಇದ್ದ ಸಂಗ್ರ ಹವು 2022-23ನೇ ಸಾಲಿನ ಅಕ್ಟೋಬರ್ ವರೆಗಿನ ಲೆಕ್ಕಾಚಾರ ದಂತೆ 1,049.34 ಕೋಟಿ ರೂ.ನಷ್ಟು ಭರ್ಜರಿ ಏರಿಕೆ ಕಂಡಿದೆ.
ಪ್ರಮುಖ ಲೋಪಗಳೇನು ?
ಜಿಎಸ್‌ಟಿಗೆ ಸಂಬಂಧಿಸಿ ನೋಂದಣಿ ದಾರರು ತೆರಿಗೆ ಪಾವತಿಸ ದಿದ್ದರೆ ಜಿಎಸ್‌ಟಿ ರಿಟರ್ನ್ ಫೈಲ್ ಮಾಡಲಾಗುವುದಿಲ್ಲ. ಉದಾ., ಸರಕಾರಿ ಗುತ್ತಿಗೆದಾರರಿಗೆ ಸರಕಾರ ದಿಂದ ಪಾವತಿ ವಿಳಂಬ ಆದರೆ ಅವರಿಗೆ ನಮುನೆ GSTR-1 ಮತ್ತು GSTR-3 ಸಲ್ಲಿಸಲಾಗುವುದಿಲ್ಲ. ಈ ರೀತಿ 6 ತಿಂಗಳು ರಿಟರ್ನ್ ಸಲ್ಲಿಕೆ ಮಾಡಲಾಗದಿದ್ದರೆ ಜಿಎಸ್‌ಟಿಐಎನ್ ರದ್ದಾಗುತ್ತದೆ.
ಜಿಎಸ್‌ಟಿ ಕಾನೂನಿನಡಿಯಲ್ಲಿ ಸರಕಾರವು ತೆರಿಗೆದಾರರಿಗೆ ಅನುಸರಿ ಸಲು ಅಸಾಧ್ಯವಾದ ಹಲವು ಷರತ್ತು ಹಾಕುವ ಮೂಲಕ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ನಿರ್ಬಂಧಿಸಿದೆ. ಈ ಮೂಲಕ ಜಿಎಸ್‌ಟಿ ಪರಿಚಯದ ಮುಖ್ಯ ಉದ್ದೇಶವಾಗಿದ್ದ ತಡೆರಹಿತ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಬುಡಮೇಲು ಮಾಡಿದಂತಾಗಿದೆ. ಇ-ವೇ ಬಿಲ್‌ನಲ್ಲಿ ಸಣ್ಣ ತಪ್ಪುಗಳು ಇದ್ದಲ್ಲಿ ಕೂಡ ಸರಕಾರವು ಶೇ. 200 ದಂಡವನ್ನು ವಿಧಿಸುತ್ತದೆ. ಜಿಎಸ್‌ಟಿ ಕುರಿತು ಅಧಿಸೂಚನೆಗಳು ಕ್ಷಿಪ್ರವಾಗಿ ಬದಲಾಗುತ್ತಿರುವುದು ಇನ್ನೊಂದು ಅಡಚಣೆ.
ಜಿಎಸ್‌ಟಿ ನೋಂದಣಿ ರದ್ದಾದಲ್ಲಿ ಕೇಂದ್ರ ಸರಕಾರದ ಜಿಎಸ್‌ಟಿ ನೋಂದಣಿದಾರರಿಗೆ ಜಿಎಸ್‌ಟಿಐಎನ್ ನೋಂದಣಿ ಸರಿಪಡಿಸಲು ಮೇಲ್ಮನವಿ ಸಲ್ಲಿಸುವುದಕ್ಕೆ ಬೆಳಗಾವಿಯ ಕಚೇರಿಗೆ ಅಲೆದಾಡಬೇಕು. ಈ ಕಚೇರಿ ಮೊದಲು ಮಂಗಳೂರಿನಲ್ಲಿಯೇ ಇತ್ತು. ಮಂಗಳೂರಿನಲ್ಲಿ ಹೆಚ್ಚಿನ ತೆರಿಗೆ ಸಂಗ್ರಹ ಆಗುವ ಕಾರಣ ನಮಗೆ ಜಿಎಸ್‌ಟಿ ಮೇಲ್ಮನವಿ ಸಲ್ಲಿಸುವ ಕಚೇರಿಯನ್ನು ಮಂಗಳೂರಿನಲ್ಲಿಯೇ ಸ್ಥಾಪಿಸಬೇಕಾಗಿದೆ.
– ಕೇಶವ ಎನ್. ಬಳ್ಳಕುರಾಯ,
ಕೆಸಿಸಿಐ ಪರೋಕ್ಷ ತೆರಿಗೆ ಸಮಿತಿ ಅಧ್ಯಕ್ಷ ಮತ್ತು ಮಂಗಳೂರು ಐಸಿಎಐ ಶಾಖೆಯ ಮಾಜಿ ಅಧ್ಯಕ್ಷ
ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ನಾಗರಿಕರಲ್ಲಿ ತೆರಿಗೆ ಶಿಸ್ತು ಉತ್ತಮವಾಗಿದೆ. ಜಿಎಸ್‌ಟಿ ಕುರಿತ ವ್ಯಾಜ್ಯ ಗಳೂ ಕನಿಷ್ಠ ಇವೆ. ಇನ್ನು ಕಸ್ಟಮ್ಸ್, ಇತರ ತೆರಿಗೆ ಎಲ್ಲವೂ ಸೇರಿದರೆ ನಮ್ಮ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸಂಗ್ರಹ 5,000 ಕೋಟಿ ರೂ. ದಾಟಿರುವುದು ಗಮನಾರ್ಹವೆನಿಸಿದೆ.
– ಇಮಾದುದ್ದೀನ್ ಅಹ್ಮದ್, ಜಿಎಸ್‌ಟಿ ಆಯುಕ್ತ, ಮಂಗಳೂರು
-ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.