ನಾನು ಸೈನಿಕನ ಪತ್ನಿಯೇ ಹೊರತು ಭಿಕ್ಷೆ ಬೇಡುವವಳಲ್ಲ !
Team Udayavani, Aug 21, 2017, 8:50 AM IST
ಮಂಗಳೂರು: “ನಾನು ದೇಶ ಕಾಯುವ ವೀರ ಯೋಧನ ಪತ್ನಿಯೇ ಹೊರತು ಸರಕಾರದ ನೆರವಿಗಾಗಿ ಭಿಕ್ಷೆ ಬೇಡುವವಳಲ್ಲ …!’
ಇದು ವಿಶ್ವದ ಅತೀ ಎತ್ತರದ ಯುದ್ಧಭೂಮಿ ಎಂದು ಹೆಸರಾಗಿರುವ ಸಿಯಾಚಿನ್ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವಾಗ ಹಿಮಪಾತದ ನಡುವೆ ಸಿಲುಕಿ ಬಲಿದಾನಗೈದಿದ್ದ ಧಾರವಾಡ ಮೂಲದ ಯೋಧ ಲ್ಯಾನ್ಸ್ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಯ ಆಕ್ರೋಶ ಹಾಗೂ ಅಸಹಾಯಕತೆಯ ಮಾತು.
ಕಳೆದ ಫೆಬ್ರವರಿಯಲ್ಲಿ ದೇಶಕ್ಕಾಗಿ ಮಡಿದ ಹನುಮಂತಪ್ಪ ಕೊಪ್ಪದ್ ಪತ್ನಿ ಮಹಾದೇವಿ ಎಚ್. ಕೊಪ್ಪದ್ ಅವರು ರವಿವಾರ ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಅವರು “ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದು ಹೀಗೆ.
ಸೈನಿಕರ ಕುಟುಂಬದ ಪರ ಹೋರಾಟ
“ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಹಾಗೂ ನಾನು ಈ ಹಿಂದೆ ಕೂಡ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಹಲವಾರು ಸೈನಿಕ ಕುಟುಂಬಸ್ಥರೊಂದಿಗೆ ಸುಖ-ದುಃಖ ಹಂಚಿ ಕೊಂಡಿದ್ದೇನೆ. ಅವರ ಪೈಕಿ ಬಹುತೇಕ ಮಂದಿಗೆ ಇನ್ನೂ ಸರಕಾರದ ಸವಲತ್ತುಗಳೇ ಸಿಕ್ಕಿಲ್ಲ. ಈ ರೀತಿ ಸರಕಾರದಿಂದ ಪರಿಹಾರಕ್ಕಾಗಿ ಅಂಗಲಾಚಿ ಅಧಿಕಾರಿಗಳ ಮುಂದೆ ತಲೆಬಾಗಿ ರೋಸಿ ಹೋಗಿದ್ದಾರೆ. ನನ್ನಂತೆಯೇ ವೇದನೆ ಅನುಭವಿಸುತ್ತಿರುವ ಇಂತಹ ವೀರ ಯೋಧರ ಕುಟುಂಬದವರ ಪರವಾಗಿ ದನಿ ಎತ್ತುವ ಕೆಲಸ ಮಾಡಬೇಕೆಂದುಕೊಂಡಿದ್ದೇನೆ. ಅದಕ್ಕಾಗಿ ಸೈನಿಕರ ಕುಟುಂಬದವರನ್ನು ಸಂಪರ್ಕಿಸುತ್ತೇನೆ. ಬಳಿಕ ಅವರ ಜತೆಗೂಡಿ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ನಮ್ಮ ಹಕ್ಕು ಎನ್ನುವ ರೀತಿಯಲ್ಲಿ ಕೇಳುತ್ತೇವೆ. ಸೈನಿಕರು ಹಾಗೂ ಅವರ ಕುಟುಂಬದವರ ಬಗ್ಗೆ ಸರಕಾರಕ್ಕೆ ಹಾಗೂ ಜನರಿಗೆ ಹೆಮ್ಮೆ ಇರಬೇಕು; ಇದು ನನ್ನ ಕಳಕಳಿಯ ಮನವಿ’ ಎಂದು ಮಹಾದೇವಿ ಎಚ್. ಕೊಪ್ಪದ್ ತಿಳಿಸಿದರು.
ಮನೆಯೇ ಮೊದಲ ಸೈನಿಕ ಶಾಲೆಯಾಗಲಿ
“ಯೋಧರ ಮಕ್ಕಳು ಸೈನ್ಯಕ್ಕೆ ಸೇರಬೇಕು ಎಂಬ ನಿಯಮವಿಲ್ಲ. ಆದರೆ ಬಹುತೇಕ ಮನೆ ಗಳಲ್ಲಿ ಯೋಧರ ಮಕ್ಕಳು ಸೈನ್ಯ ಸೇರುತ್ತಾರೆ. ಮಕ್ಕಳು ದೊಡ್ಡವರಾದ ಮೇಲೆ ಅವರಿಗಿಷ್ಟವಾದ ಕ್ಷೇತ್ರದಲ್ಲಿ ಮುಂದುವರಿಯಲಿ ಎಂದು ಬಿಟ್ಟರೂ ಎಳೇ ವಯಸ್ಸಿನಿಂದಲೇ ಅವರಿಗೆ ದೇಶಪ್ರೇಮ, ಯೋಧರ ಹೋರಾಟ, ಅವರ ಸಾಹಸಗಳ ಬಗ್ಗೆ ತಿಳಿಸಿ ಕೊಡಬೇಕು. ಆಗ ಮಾತ್ರ ಮಕ್ಕಳು ಮುಂದೆ ದೇಶವನ್ನು ಕಾಯುವ ವೀರರಾಗುತ್ತಾರೆ. ಎಲ್ಲ ಮಕ್ಕಳಿಗೂ ಮನೆಯೇ ಮೊದಲ ಸೈನಿಕ ಶಾಲೆಯಾಗಬೇಕು. ಹೆತ್ತವರು ಕೂಡ ಈ ಬಗ್ಗೆ ತಮ್ಮ ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವತ್ತ ನಿಗಾ ವಹಿಸಬೇಕು.’
ಯೋಧರಿಗಾಗಿ ಪ್ರತಿದಿನ ಪ್ರಾರ್ಥಿಸಿ
“ದೇಶದ ಪ್ರತಿಯೊಬ್ಬನೂ ದೇವರಲ್ಲಿ ಅವನ ಬೇಕು-ಬೇಡ, ಕಷ್ಟ-ಸುಖಗಳ ಬಗ್ಗೆ ಪ್ರಾರ್ಥನೆ ಮಾಡುತ್ತಾನೆ. ಆ ಪ್ರಾರ್ಥನೆಯಲ್ಲಿ ಯೋಧನಿಗೂ ಒಂದು ಪಾಲಿರಲಿ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ಪ್ರಾಣ ಮುಡಿಪಾಗಿಟ್ಟ ಪ್ರತಿ ಯೊಬ್ಬ ಯೋಧನಿಗಾಗಿ ದೇಶದ ಜನರು ತಮ್ಮ ದೈನಂದಿನ ಪ್ರಾರ್ಥನೆಯಲ್ಲಿ ಪಾಲಿಡ ಬೇಕು. ಆಗ ಯೋಧನ ಆಯುಸ್ಸು ಇನ್ನಷ್ಟು ಹೆಚ್ಚಾಗುತ್ತದೆ. ನಮ್ಮ ದೇಶದ ಭದ್ರತೆಯೂ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ.’
ಗೌರವ ದುಪ್ಪಟ್ಟಾಗಿದೆ
“ಪತಿ ಹುತಾತ್ಮರಾಗುವ ಮೊದಲು ಅವರು ನನ್ನೊಂದಿಗಿನ ಸಂಭಾಷಣೆಯಲ್ಲಿ ನೀನು ಕುಟುಂಬ, ಮನೆ ನೋಡಿಕೋ. ನನ್ನ ಕುಟುಂಬದ ಬಗ್ಗೆ ನನಗೆ ಯಾವುದೇ ಚಿಂತೆ ಯಿಲ್ಲ. ನಾನು ದೇಶ ರಕ್ಷಣೆಗೆ ಹೊರಟಿದ್ದೇನೆ. ಆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದು ತಿಳಿಸಿದ್ದರು. ಅವರು ಹೋದ ಬಳಿಕ ಹಲವು ದಾನಿಗಳಿಂದ ನನಗೆ ಸಹಾಯಧನ ಬಂದಿದೆ. ಅವರ ಪ್ರೀತಿ ನೋಡಿ ನನಗೆ ನನ್ನ ಗಂಡನ ಮೇಲಿದ್ದ ಗೌರವ ದುಪ್ಪಟ್ಟಾಗಿದೆ. ಜನರ ಪ್ರೀತಿ. ಆಶೀರ್ವಾದ ಎಲ್ಲ ಸೈನಿಕರ ಮೇಲೆ ಇರಲಿ ಎಂದಷ್ಟೇ ನಾನು ಆಶಿಸುತ್ತೇನೆ’ ಎಂದು ಮಹಾದೇವಿ ಹೇಳಿದರು.
ಹುಸಿಯಾದ ಉದ್ಯೋಗ ಭರವಸೆ
“ಪತಿ ನಿಧನ ಹೊಂದಿದ ಬಳಿಕ ಸರಕಾರದಿಂದ ಸಿಗ ಬೇಕಾದ ಪರಿಹಾರ ಧನ ಸಿಕ್ಕಿದೆ. ಆದರೆ ಪರಿಹಾರದ ಜತೆಗೆ ಉದ್ಯೋಗದ ಭರವಸೆಯನ್ನೂ ಸರಕಾರ ನೀಡಿತ್ತು. ಅದರಂತೆ ಒಂದೆರಡು ಬಾರಿ ಸರಕಾರಿ ಕಚೇರಿಗೂ ಕೆಲಸ ಕೇಳಿ ಕೊಂಡು ತೆರಳಿದ್ದೆ. ಆದರೆ ಸರಕಾರದ ಕಡೆಯಿಂದ ಯಾವುದೇ ಸ್ಪಂದನೆ ದೊರೆ ಯದ ಹಿನ್ನೆಲೆಯಲ್ಲಿ ಇದೀಗ ಸುಮ್ಮ ನಾಗಿದ್ದೇನೆ. ದೇಶಕ್ಕಾಗಿ ತನ್ನ ಪ್ರಾಣವನ್ನೇ ನೀಡಿದ ವೀರ ಯೋಧನ ಪತ್ನಿ ಉದ್ಯೋಗಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆಯಬೇಕಾದ ದುಃಸ್ಥಿತಿ ಎದುರಾಗಿರುವುದು ನಿಜಕ್ಕೂ ದುರದೃಷ್ಟಕರ. ದೇಶಕ್ಕಾಗಿ ಜೀವವನ್ನೇ ನೀಡಿದ ವೀರನ ಪತ್ನಿಯಾದ ನಾನು ಕೆಲಸ ಕೊಡಿ; ಕೊಡಿ ಎಂದು ಕೇಳುವ ಭಿಕ್ಷುಕಿ ಅಲ್ಲ. ಸರಕಾರವೇ ಯೋಧನ ಕುಟುಂಬವನ್ನು ಹುಡುಕಿ ಕೊಂಡು ಬಂದು ಸಹಾಯ ಮಾಡಬೇಕು. ಅದು ಬಿಟ್ಟು, ನಾವು ಅಧಿಕಾರಿಗಳ ಮುಂದೆ ಕೈಚಾಚುವ ಸ್ಥಿತಿ ನಿರ್ಮಾಣ ವಾಗಿರುವುದು ಬೇಸರದ ಸಂಗತಿ’ ಎಂದರು.
“ನನ್ನ ಪತಿ ಆರು ದಿನಗಳ ಕಾಲ ಹಿಮದ ಅಡಿಯಲ್ಲಿ ಸಿಲುಕಿ, ಬಳಿಕ ಕೋಮಾಕ್ಕೆ ಹೋಗಿ ಸಾವನ್ನಪ್ಪಿರುವುದರಿಂದ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಇದರಿಂದಾಗಿ ನನಗೆ ಸರಕಾರದಿಂದ ಪರಿಹಾರ ಧನ ಬೇಗನೇ ಲಭಿಸಿದೆ. ಆದರೆ ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದ ಹಲವಾರು ಯೋಧರ ಪತ್ನಿಯರಿಗೆ ಇನ್ನೂ ಪರಿಹಾರಧನ ಸಿಕ್ಕಿಲ್ಲ. ನಮ್ಮ ಪ್ರೀತಿ ಪಾತ್ರರನ್ನು ದೇಶ ಸೇವೆಗೆ ಹೆಮ್ಮೆಯಿಂದ ಕಳುಹಿಸುವ ನಾವು ಪರಿಹಾರ ಧನ, ಉದ್ಯೋಗಕ್ಕಾಗಿ ಅಧಿಕಾರಿಗಳಲ್ಲಿ ಭಿಕ್ಷೆ ಬೇಡುವುದು ನನಗೆ ಬಹುದೊಡ್ಡ ಹಿಂಸೆಯ ಕೆಲಸ’ ಎಂದು ತಿಳಿಸಿದರು.
ದೇಶ ಸೇವೆ ಕೇವಲ ಸೈನಿಕ ಕುಟುಂಬದ ಹೊಣೆಯಲ್ಲ
“ನನ್ನ ಮಗಳು ನೇತ್ರಾಗೆ ಈಗ ನಾಲ್ಕು ವರ್ಷ. ನರ್ಸರಿಯಲ್ಲಿ ಕಲಿಯುತ್ತಿದ್ದಾಳೆ. ಐದನೇ ತರಗತಿಯ ಬಳಿಕ ಅವಳನ್ನು ಕೂಡ ಸೈನಿಕ ಶಾಲೆಯಲ್ಲಿ ಹಾಕಿ ಮುಂದೆ ಸೇನೆಗೆ ಸೇರಿಸುತ್ತೇನೆ. ಅಪ್ಪನಂತೆ ಅವಳನ್ನು ದೇಶ ಕಾಯುವ ಕೆಲಸಕ್ಕೆ ಕಳುಹಿಸುತ್ತೇನೆ. ಆದರೆ ಸಾಮಾನ್ಯವಾಗಿ ಸೈನಿಕರ ಕುಟುಂಬದವರು ಮಾತ್ರ ಯಾಕೆ ಸೇನೆ ಸೇರುತ್ತಾರೆ; ಯಾಕೆ ದೇಶ ಸೇವೆಗಾಗಿ ಹಂಬಲಿಸು ತ್ತಾರೆ ಎಂಬುದು ನನಗೆ ಅರ್ಥ ವಾಗು ತ್ತಿಲ್ಲ. ಉಳಿದ ಜನರು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜಿ ನಿಯರ್ ಮಾಡಿ ಮನೆ ಯಲ್ಲಿ ಬೆಚ್ಚಗೆ ಕೂರು ತ್ತಾರೆ. ನನಗೆ ದೇಶದ ಮೇಲೆ ಇದ್ದ ಪ್ರೀತಿ ಯಿಂದಾಗಿ ನಾನು ಯೋಧನನ್ನು ಮದುವೆ ಯಾದೆ. ಮಗಳನ್ನು ಸೇನೆಗೆ ಸೇರಿಸುವ ಇಚ್ಛೆ ಹೊಂದಿದ್ದೇನೆ. ಆದರೆ ಉಳಿದ ಜನರ ಕಥೆ ಏನು? ಅವರಿಗೆ ಬೇರೆಯವರ ಮನೆಯ ಯೋಧರೇ ರಕ್ಷಣೆಗೆ ಬೇಕೆ ಹೊರತು ತಮ್ಮ ಮನೆಯ ಮಕ್ಕಳು ಸೇನೆಗೆ ಸೇರಬೇಕು ಎಂದು ಯಾಕೆ ಅನ್ನಿಸುವು ದಿಲ್ಲ. ಎಲ್ಲ ಮನೆ ಯಿಂದಲೂ ಒಬ್ಬ ಯೋಧ ದೇಶ ಸೇವೆಗೆ ಬರಬೇಕು ಎನ್ನುವುದು ನನ್ನ ಬಯಕೆ’.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.