ರೈ ಗೃಹ ಸಚಿವರಾದರೆ, ಕೇಂದ್ರದಲ್ಲಿ ನಳಿನ್ / ಶೋಭಾಗೆ ಮಂತ್ರಿ ಸ್ಥಾನ?
Team Udayavani, Aug 19, 2017, 10:25 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಗೃಹ ಸಚಿವರಾದರೆ ಅದಕ್ಕೆ ರಾಜಕೀಯವಾಗಿ ಸೆಡ್ಡು ಹೊಡೆಯುವುದಕ್ಕೆ ಸಿದ್ಧವಾಗಿರುವ ಬಿಜೆಪಿ, ಕರಾವಳಿ ಭಾಗದ ಸಂಸದರೊಬ್ಬರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಲೆಕ್ಕಾಚಾರ ಹಾಕಿದೆ. ಆ ಪ್ರಕಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅಥವಾ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುತ್ತಾರೆ ಎನ್ನುವ ಸುದ್ದಿ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಪಕ್ಷದ ಆಕ್ರಮಣಕಾರಿ ನಡೆಯನ್ನು ಸಮರ್ಥವಾಗಿ ಎದುರಿಸಲು ಪ್ರತಿ ತಂತ್ರಗಳನ್ನು ಸಿದ್ಧಪಡಿಸುತ್ತಿದೆ. ಇದರ ಮೊದಲ ಅಂಗವಾಗಿ ಕರಾವಳಿ ಭಾಗದ ಸಂಸದರೊಬ್ಬರಿಗೆ ಕೇಂದ್ರ ಸಚಿವ ಸ್ಥಾನ ನೀಡಿ ಕೇಂದ್ರದ ಶಕ್ತಿಕೇಂದ್ರ ಸ್ಥಾಪಿಸಲು ಮುಂದಾಗಿದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಶೋಭಾ ಅಥವಾ ನಳಿನ್ ಅರಿಗೆ ಮಂತ್ರಿ ಪದವಿ ನೀಡುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವಂತೆಯೇ ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯನ್ನು ಹಣಿಯಲು ವ್ಯೂಹಾತ್ಮಕ ಕಾರ್ಯ ತಂತ್ರ ರೂಪಿಸುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿರುವ ಕೆಲವು ಬೆಳವಣಿಗೆಗಳು ಹಾಗೂ ಸಂಘ ಪರಿವಾರದ ಕೆಲವು ಪ್ರಮುಖರ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಳ್ಳುವ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಸಂಘ ಪರಿವಾರದ ಮೇಲೆ ತೀವ್ರ ಟೀಕಾ ಪ್ರಹಾರಗಳನ್ನು ನಡೆಸುತ್ತಿರುವ ರಮಾನಾಥ ರೈ ಅವರಿಗೆ ಗೃಹಸಚಿವ ಸ್ಥಾನವನ್ನು ನೀಡುವುದು ಬಹುತೇಕ ಖಚಿತಗೊಂಡಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿಯು ಪ್ರತಿತಂತ್ರಗಳನ್ನು ಸದ್ದಿಲ್ಲದೆ ಸಿದ್ಧಪಡಿಸಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸಮಾಲೋಚನೆ
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷ ಸಂಘಟನೆ ಕುರಿತಂತೆ ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಸಂಸದರ ಜತೆ ಗಂಭೀರ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆ ವಿಚಾರವೂ ಪ್ರಸ್ತಾವನೆಗೆ ಬಂದಿದೆ. ಈ ವೇಳೆ ನಳಿನ್ ಕುಮಾರ್ ಕಟೀಲು ಅವರು ತನಗೆ ಈಗಾಗಲೇ ಪಕ್ಷದ ಜವಾಬ್ದಾರಿ ಇದೆ. ಆದುದರಿಂದ ಸಚಿವ ಸ್ಥಾನ ಬೇಡ ಎಂಬುದಾಗಿ ಅಭಿಪ್ರಾಯ ತಿಳಿಸಿದ್ದರು. ಆಗ ಅಮಿತ್ ಶಾ “ಪಕ್ಷ ಕೊಡುವ ಜವಾಬ್ದಾರಿಯನ್ನು ವಹಿಸಲು ಎಲ್ಲರೂ ಸಿದ್ದರಿರಬೇಕು’ ಎಂಬ ಖಡಕ್ ಸೂಚನೆಯನ್ನು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ನಳಿನ್ ಎರಡನೇ ಅವಧಿಗೆ ಸಂಸತ್ಸದಸ್ಯರಾಗಿದ್ದು, ಪಕ್ಷದಲ್ಲಿ ಉತ್ತಮ ಸಂಘಟಕನ ವರ್ಚಸ್ಸಿದೆ. ಕೇರಳ ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯೂ ಆಗಿರುವ ನಳಿನ್ ಕುಮಾರ್ ಅವರು ಕೆಲವು ತಿಂಗಳ ಹಿಂದೆ ಬಿಜೆಪಿ ಹೇಳಿಕೊಳ್ಳುವ ನೆಲೆ ಇಲ್ಲದಿದ್ದರೂ ಕೇರಳದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಸಮರ್ಥವಾಗಿ ಸಂಘಟಿಸಿ ಅಮಿತ್ ಶಾ ಅವರಿಂದ ಮೆಚ್ಚುಗೆ ಪಡೆದುಕೊಂಡಿದ್ದರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿಯಲ್ಲಿ ಮುಂಚೂಣಿಯಲ್ಲಿರುವ ಶೋಭಾ ಕರಂದ್ಲಾಜೆ ಅವರ ಹೆಸರು ಕೂಡ ಪ್ರಸ್ತಾವನೆಯಲ್ಲಿದೆ. ಪಕ್ಷದೊಳಗೆ ಇವರ ಬಗ್ಗೆ ರಾಜ್ಯ ಘಟಕದಲ್ಲಿ ಅಸಮಾಧಾನದ ಅಲೆಗಳಿದ್ದರೂ ಅಮಿತ್ ಶಾ ಅವರ ಮಾತೇ ಅಂತಿಮವಾಗಿರುವುದರಿಂದ ಇವುಗಳು ಪರಿಗಣನೆಗೆ ಬರುವ ಸಾಧ್ಯತೆಗಳಿಲ್ಲ.
ಅಧಿಕಾರದ ಬಲ ನೀಡುವ ಗುರಿ
ಬಿಜೆಪಿಯ ಭದ್ರ ನೆಲೆ ಎಂದು ಪರಿಗಣಿಸಲ್ಪಟ್ಟಿರುವ ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳಲ್ಲಿ 2 ಸ್ಥಾನಗಳನ್ನಷ್ಟೆ ಪಡೆಯಲು ಶಕ್ತವಾಗಿತ್ತು. 10 ಸ್ಥಾನಗಳನ್ನು ಕಾಂಗ್ರೆಸ್ ಹಾಗೂ 1 ಸ್ಥಾನ ಪಕ್ಷೇತರರ ಪಾಲಾಗಿತ್ತು. ಈ ಬಾರಿ ದ.ಕನ್ನಡ ಜಿಲ್ಲೆಯಲ್ಲಿ ಎಲ್ಲ 8 ಸ್ಥಾನಗಳನ್ನು ಗೆಲ್ಲುವ ದೃಢ ಸಂಕಲ್ಪದೊಂದಿಗೆ ಈಗಾಗಲೇ ಕಾಂಗ್ರೆಸ್ ಕಾರ್ಯೋ ನ್ಮುಖ ವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯತಂತ್ರ ಗಳನ್ನು ರೂಪಿಸತೊಡಗಿದೆ. ಇದೇ ಸಂದರ್ಭದಲ್ಲಿ ಕಾರ್ಯಕರ್ತರ ಭದ್ರಬುನಾದಿ ಹೊಂದಿರುವ ಬಿಜೆಪಿ ಕೂಡ ಉಭಯ ಜಿಲ್ಲೆಗಳಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಆದರೆ ರಾಜ್ಯ ದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಬಲವಿದ್ದು ಇದು ಆ ಪಕ್ಷಕ್ಕೆ ಅನುಕೂಲಕರವಾಗಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಯಲ್ಲಿಯೂ ಒಂದು ಅಧಿಕಾರ ಶಕ್ತಿಯನ್ನು ಸ್ಥಾಪಿ ಸುವುದು ಕರಾವಳಿ ಭಾಗಕ್ಕೆ ಕೇಂದ್ರ ಸಚಿವ ಸಂಪುಟ ಸ್ಥಾನ ನೀಡುವ ಚಿಂತನೆಯ ಹಿಂದಿರುವ ಪ್ರಮುಖ ಉದ್ದೇಶವಾಗಿದೆ ಎನ್ನಲಾಗಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.